ಕಬೀರನ ಪ್ರೇಮ ಸಿದ್ಧಾಂತ

ದೇವರನ್ನು ತಲಪಲು ಏಕಮೇವ ಸಾಧನ ಈ ಪ್ರೇಮ. ಎರಡೂವರೆ ಅಕ್ಷರದ ಪ್ರೇಮ… ಇದು ಕಬೀರನ ಸಿದ್ಧಾಂತ ~ ಗೋಪಾಲ ವಾಜಪೇಯಿ

Sant Kabeer

ಪುರಾಣ ಓದಿ ಓದಿ ಸತ್ತೀತೋ ಜಗವೆಲ್ಲ, ಪಂಡಿತನಾಗಿಲ್ಲ ಯಾರೂ… 
ಪಂಡಿತನಾಗುವಿ ’ಪ್ರೇಮ’ ಎಂಬ ಎರಡೂವರೆ ಅಕ್ಷರ ಓದಿದರೂ 

ಕಬೀರ… ! 
ಸರಳ ವಿರಳ ಸಂತ! ‘ಪ್ರೇಮ’ ಮತ್ತು ‘ಸಮಾನತೆ’ಗಳ ಮೂಲಕ ಮನಸ್ಸುಗಳನ್ನು ಬೆಸೆಯುವ ಕೆಲಸದ ಜೊತೆಗೆ, ಪಾಖಂಡಿಗಳನ್ನು ಇನ್ನಿಲ್ಲದಂತೆ ಲೇವಡಿ ಮಾಡಿದ ಧೀಮಂತ….  ‘ಈ ಭೂಮಿಯ ಮೇಲೆ ಹುಟ್ಟಿದ ಎಲ್ಲ ಜೀವಿಗಳಿಗೂ ಸಮಾನವಾಗಿ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳಲು ಯತ್ನಿಸುವ ಯಾವುದೇ ಧರ್ಮ ಮತ್ತು ಧರ್ಮ ಗುರು ಹಾಗೂ ಅದರ ಅನುಯಾಯಿಗಳು ಖಂಡಿತಕ್ಕೂ ಜೀವವಿರೋಧಿಗಳು. ‘ಪರಸ್ಪರ ಪ್ರೇಮ’ವೇ ನಿಜವಾದ ಧರ್ಮ ಸಾಧನ, ಪರಮಾರ್ಥ ಸಾಧನ. ಎಲ್ಲರನ್ನೂ  ಸೋದರರೆಂದು ಒಪ್ಪಿ ಅಪ್ಪಿಕೊಳ್ಳಬೇಕು. ಅಂದಾಗಲೇ ಈ ಜಗತ್ತು ಪ್ರೇಮ ಸದನವಾಗುತ್ತದೆ’ ಎಂಬುದು ಕಬೀರನ ನಂಬಿಕೆ. 

ಚಿಗುರಲ್ಲೆ ಚಿಂತೆ 
ಹುಟ್ಟುತ್ತಲೇ ಹೆತ್ತವಳಿಂದ ತಿರಸ್ಕರಿಸಲ್ಪಟ್ಟು ತಿಪ್ಪೆಗೆಸೆಯಲ್ಪಟ್ಟ ಕೂಸು ಕಬೀರ. ಅವನನ್ನು ಎತ್ತಿಕೊಂಡು, ’ಕಬೀರ’ ಎಂದು ಹೆಸರಿಟ್ಟು ಜೋಪಾನವಾಗಿ ಬೆಳೆಸಿದವರು ಕಾಶಿಯ ನೂರಾ ಮತ್ತು ನೀಮಾ ಎಂಬ ನೇಕಾರ ದಂಪತಿ. ಅವರಿದ್ದದ್ದು ದರಿದ್ರರ ಕೇರಿಯ ಒಂದು ಮುರುಕು ಗುಡಿಸಿಲಿನಲ್ಲಿ. ಮನೆಯ ಮಗ್ಗದ ಸದ್ದು ಕೇಳುತ್ತಲೇ ಬೆಳೆದ ಕಬೀರನಿಗೆ ಅಕ್ಷರಾಭ್ಯಾಸ ಆಗಲೇ ಇಲ್ಲ. ಮಗ ಬೆಳೆಯಬೇಕು, ದುಡಿಯಬೇಕು, ಸಂಸಾರವಂದಿಗನಾಗಬೇಕು ಎಂಬುದಷ್ಟೇ ಅಪ್ಪ-ಅಮ್ಮನ ಆಸೆ.

ಆದರೆ ಹುಡುಗನ ಯೋಚನೆಯೇ ಬೇರೆ. ಢೋರ, ಸಮಗಾರ, ನಾಪಿತ ಮುಂತಾಗಿ ತಮ್ಮ ಸ್ಥಿತಿ ಯಾಕೆ ಹೀಗೆ? ತಾವು ಯಾಕೆ ಕೇರಿಯ  ಗುಡಿಸಿಲುಗಳಲ್ಲಿ, ಅವರು ಯಾಕೆ ನಗರದ ಮಹಲುಗಳಲ್ಲಿ? ತಮ್ಮನ್ನು ಯಾಕೆ ಸಮಾಜ ಈ ಸ್ಥಿತಿಯಲ್ಲಿರಿಸಿದೆ? ದೊಡ್ಡವರು, ಸಿರಿವಂತರು, ಪರಸ್ಪರರನ್ನು  ಆಲಿಂಗಿಸಿಕೊಳ್ಳುವಂತೆ ತಮ್ಮನ್ನು ಯಾಕೆ ಅಪ್ಪಿಕೊಳ್ಳುವುದಿಲ್ಲ? ತಮ್ಮನ್ನು ಕಂಡರೆ ಯಾಕೆ ಆ ಅಸಹ್ಯಭಾವ, ಯಾಕೆ ಅಸಹನೆ ಅವರಿಗೆ? ಪರಸ್ಪರ ಪ್ರೇಮದಿಂದ ಇದ್ದರೆ ಈ ಜಗತ್ತು ಎಷ್ಟು ಸುಂದರ! ಯಾಕೆ ಈ ಜನ ಜಾತಿ-ಧರ್ಮ-ಅಂತಸ್ತು ಎಂಬ ದ್ವೇಷದ ದಳ್ಳುರಿಯನ್ನು ಹಚ್ಚುತ್ತಾರೆ? ಅದನ್ನು ನಂದಿಸುವ ಬದಲು ಅದಕ್ಕೆ ಯಾಕೆ ತುಪ್ಪ ಸುರಿಯುತ್ತಾರೆ, ಯಾಕೆ ಗಾಳಿ ಬೀಸುತ್ತಾರೆ? ಹಿಂದೂಗಳು ತಮ್ಮವರನ್ನು ಮಾತ್ರ ಮನುಷ್ಯರು ಎಂದು ಭಾವಿಸುತ್ತಾರೆ, ಮುಸ್ಲಿಮರು ತಮ್ಮ ಜನರನ್ನಷ್ಟೇ ಪ್ರೇಮದಿಂದ ಆಲಿಂಗಿಸಿಕೊಳ್ಳುತ್ತಾರೆ. ನಮ್ಮನ್ನೆಲ್ಲ ಅವರು ಯಾಕೆ ದೂರವಿಡುತ್ತಾರೆ? ಅಥವಾ, ನಾವು ಸಮೀಪ ಹೋದರೆ ಯಾಕೆ ದೂರ ಓಡಿಸುತ್ತಾರೆ? ಆ ಮೇಲ್ಜಾತಿಯವರು ಯಾಕೆ ನತ ಜನರತ್ತ ಕಣ್ಣೆತ್ತಿ ನೋಡುವುದಿಲ್ಲ? ಅವರಿಗೆ ಮಂದಿರ ಪ್ರವೇಶ ಇಲ್ಲವೇ ಮಸೀದಿ ಪ್ರವೇಶವನ್ನು ಯಾಕೆ ನಿರಾಕರಿಸುತ್ತಾರೆ? ಎಂದೆಲ್ಲ ಚಿಂತಿಸಿದ. 

ಹಾಗೆ ಚಿಂತಿಸುತ್ತಲೇ ಆತ ಗಂಗೆಯ ತಟಕ್ಕೆ ಹೋದರೆ ಮುಗಿಯಿತು, ಅಲ್ಲಿ ನಡೆಯುವ ನಾನಾ ರೀತಿಯ ಆಚರಣೆಗಳನ್ನು ಕಂಡು ಒಳಗೊಳಗೇ ನಗುತ್ತಿದ್ದ. ಒಮ್ಮೊಮ್ಮೆ ಯಾವುದೋ ಘಾಟಿನ ಮೆಟ್ಟಿಲುಗಳ ಮೇಲೆ ಕೂತಾತ ಅಲ್ಲಿಯೇ ಮಲಗಿಬಿಡುತ್ತಿದ್ದ. 

ಗುರುವಿನ ಗುಲಾಮ
ಹೀಗೆ ಇರುವಾಗಲೇ ಆತನಿಗೆ ಗುರು ರಾಮಾನಂದರ ದರ್ಶನವಾದದ್ದು. ಅವರ ಮುಖದ ಮೇಲಿನ ಶಾಂತಿ, ಕಣ್ಣೊಳಗಿನ ಕಾಂತಿ, ತುಟಿಯ ಮೇಲಿನ ಸ್ನೇಹಪರ ನಗು ಆತನನ್ನು ಸೆಳೆದುಬಿಟ್ಟಿತ್ತು. ಯಾರನ್ನಾದರೂ ಗುರು ಎಂದು ಒಪ್ಪಿಕೊಳ್ಳುವುದಾದರೆ ಅದು ರಾಮಾನಂದರನ್ನು ಮಾತ್ರ ಎಂದು ಮನದೊಳಗೆ ಅಂದುಕೊಂಡ. ಆದರೆ, ಎಂದೂ ಅವರ ಎದುರು ನಿಂತು, ‘ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ’ ಎಂದು ಕೇಳುವ ಧೈರ್ಯ ಮಾಡಲಿಲ್ಲ ಕಬೀರ. ಒಂದು ವೇಳೆ ಅವರು ತಿರಸ್ಕರಿಸಿಬಿಟ್ಟರೆ ಎಂಬ ಆತಂಕ ಆತನದು. ಬ್ರಾಹ್ಮೀ ಮುಹೂರ್ತದಲ್ಲಿ ರಾಮಾನಂದರು ಪಂಚಗಂಗಾ ಘಾಟಿನಲ್ಲಿ ಗಂಗಾಸ್ನಾನಕ್ಕೆ ಹೋಗುವುದು ರೂಢಿ. ಹಾಗೆ ಅವರು ಮೆಟ್ಟಿಲಿಳಿಯುವ ಸಂದರ್ಭದಲ್ಲಿ ಎಂದಾದರೊಂದೊಮ್ಮೆ ಅವರ ಪಾದಸ್ಪರ್ಶವಾಗಿಬಿಟ್ಟರೆ ಅದೇ ತನಗೆ ದೊರೆಯುವ ದೀಕ್ಷೆ ಎಂದಾತ ಭಾವಿಸಿದ. ಅದಕ್ಕಾಗಿ ಆತ ಮಲಗತೊಡಗಿದ್ದು ಆ ಘಾಟಿನ ಮೆಟ್ಟಿಲುಗಳ ಮೇಲೆಯೇ. ಅದೊಂದು ಬೆಳಿಗ್ಗೆ ಗುರುವಿನ ಪಾದ ಕಬೀರನ ತಲೆಗೆ ಬಡಿಯಿತು. ರೋಮಾಂಚಿತನಾದ ಆತ ಎದ್ದು ಗುರುವಿನೆಡೆ ನೋಡಿದ. ಅವರೋ ಅದಾವುದರ ಪರಿವೆಯೂ ಇಲ್ಲದೆ ಮೆಟ್ಟಿಲುಗಳನ್ನು ಇಳಿಯುತ್ತಲಿದ್ದರು.

ಅದನ್ನು ನೋಡುತ್ತಿದ್ದ ಹಾಗೆಯೇ, ಕಬೀರನ ಬಾಯಿಂದ : 
ತೇಜೋಮಯನಾ / ತೇಜವೇ ತೇಜವು, ನೋಡಿದಷ್ಟು ತೇಜ // ಓಜನ ತೇಜವ ನೋಡಲು ಹೋದವ / ತೇಜದಲೊಂದಾದೆನು ಸಹಜ…
-ಎಂಬ ನುಡಿ ತಂತಾನೇ ಹೊರಹೊಮ್ಮಿತು. ಅಷ್ಟೇ. ಆ ತೇಜಮೂರ್ತಿಯನ್ನೇ ತನ್ನ ಗುರುವನ್ನಾಗಿ ಆರಾಧಿಸತೊಡಗಿದ ಕಬೀರ. ಅವರ ಹೆಸರು ರಾಮಾನಂದ… ರಾಮ+ಆನಂದ. ರಾಮನೆಂದರೇ ಆನಂದ…  ಕಬೀರ ಆ ‘ಆನಂದರಾಮ’ನನ್ನು ತನ್ನೊಳಗೆ ಪ್ರತಿಷ್ಠಾಪಿಸಿಕೊಂಡುಬಿಟ್ಟ.  ಆ ರಾಮನೇ ಆತ್ಮಾರಾಮ. ಆತನಿಗೆ ಇಂಥದೇ ಎಂಬ ಒಂದು ರೂಪವಿಲ್ಲ. ಆತ ತ್ರಿಗುಣಾತೀತ. ಆತ ಹರಿ, ಹರ; ಆತನೇ ರಾಮ, ರಹೀಮ, ಕರೀಮ… ಆತನೇ ಕೇಶವ, ವಿಶ್ವಂಭರನು…  

ಬದುಕಿನ ಬೋಧೆ
ಆನಂದೋನ್ಮತ್ತನಾಗಿ ಹಾಡುತ್ತ ಪೇಟೆ ಪೇಟೆ ಸುತ್ತುತ್ತಿದ್ದ ಕಬೀರ ಮನೆಯಲ್ಲಿರುತ್ತಿದ್ದುದೇ ಕಡಿಮೆ. ಅಪ್ಪ ನೇದ ಬಟ್ಟೆಯ ಥಾನು ಕೊಟ್ಟು ಮಾರಿಕೊಂಡು ಬಾ ಎಂದು ಕಳಿಸಿದರೆ, ಈತ ಅದೆಲ್ಲೋ ಅದಾವುದೋ ಧ್ಯಾನದಲ್ಲಿ ಮೈಮರೆತು ನಿಂತುಬಿಡುತ್ತಿದ್ದ. ಇಲ್ಲವೇ ಯಾವನೋ ಪಂಡಿತ ಅಥವಾ ಮುಲ್ಲಾನೊಂದಿಗೆ ವಾದಕ್ಕೆ ತೊಡಗುತ್ತಿದ್ದ. ಮನೆಯಲ್ಲಿದ್ದರೂ ನೇಯುತ್ತ ನೇಯುತ್ತ ಮಗ್ಗ ಹೊರಡಿಸುವ ತಾಳಕ್ಕೆ ಸರಿಯಾಗಿ ದೋಹೆಯೊಂದನ್ನು ರಚಿಸಿಬಿಡುತ್ತಿದ್ದ.                       

ಆತ ಕಂದಾಚಾರವನ್ನು, ಆಡಂಬರವನ್ನು, ಮೇಲು-ಕೀಳು ತಾರತಮ್ಯವನ್ನು ಟೀಕಿಸಿದ, ವಿರೋಧಿಸಿದ. ಆತನ ಟೀಕೆಗೆ ಅತ್ತ ಮುಸಲ್ಮಾನರೂ ಇತ್ತ ಹಿಂದುಗಳೂ ಕೆರಳಿದರು. ಆತನ ಮೇಲೆ ಸಾಕಷ್ಟು ಹಲ್ಲೆಗಳಾದವು. ಆತನ ಗುಡಿಸಿಲು ಅಗ್ನಿಗಾಹುತಿಯಾಯಿತು. ಆದರೂ, ಆತ ತನ್ನ ನಿಲುವಿನಿಂದ ವಿಚಲಿತನಾಗಲಿಲ್ಲ. ಹಿಂಸೆಗೆ ಹಿಂಸೆಯೇ ಉತ್ತರವಲ್ಲ. ಶಾಂತಿಯಿಂದ ಇಂಥದನ್ನೆಲ್ಲ ಎದುರಿಸುತ್ತ ಹೋದರೆ ಎದುರಾಳಿ ಒಂದಿಲ್ಲೊಂದು ದಿನ ಶಕ್ತಿಹೀನನಾಗುತ್ತಾನೆ. ಆದ್ದರಿಂದ ‘ಸಹನೆಯೇ ಸದಾಚಾರ, ಅಸಹನೆಯೇ ದುರಾಚಾರ,’ ಎಂಬ ನಿಲುವು ತಾಳಿ, ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡು ನಿಂತ. ‘ಧರ್ಮವೆಂದರೆ ಬೇರೆ ಏನೂ ಅಲ್ಲ ; ಸದಾಚಾರ,’ ಎಂದು ಮುಂದುವರಿದವ ಕಬೀರ. ಧಾರ್ಮಿಕರೆಂದುಕೊಳ್ಳುತ್ತಿದ್ದವರು ನಡೆಸುತ್ತಿದ್ದ ಅತ್ಯಾಚಾರದ ವಿರುದ್ಧ ಆತ ದನಿ ಎತ್ತಿದ್ದು ಈ ಸದಾಚಾರದ ಬಲದಿಂದಲೇ. ‘ಪ್ರೇಮ’ ಈ ಸದಾಚಾರದ ಮತ್ತೊಂದು ರೂಪ. ಎಲ್ಲ ಕ್ಷೇಮಗಳ ಮೂಲ ಈ ಪ್ರೇಮ. ಸಕಲ ಜೀವರೂ ತನ್ನಂತೆಯೇ ಎಂಬ ನಿಲುವು ತಳೆದಾಗ ಈ ಪ್ರೇಮ ವಿರಾಟ್ ಸ್ವರೂಪವನ್ನು ತಾಳುತ್ತದೆ. 

ಹೀಗೆ, ಧಾರ್ಮಿಕ ಕಾರಣಕ್ಕಾಗಿ ಭರ್ತ್ಸನೆಗೊಳಗಾಗಿ ನೋವು ಅನುಭವಿಸುವವರ ಕಣ್ಣೀರೊರೆಸಿ, ಅವರಲ್ಲಿ ಮನಃಸ್ಥೈರ್ಯ ತುಂಬಲು ಕಬೀರ ಅನುಸರಿಸಿದ್ದು ಪ್ರೇಮಮಾರ್ಗವನ್ನೇ. ಮಂದಿರ-ಮಸೀದಿಗಳ ಗಲಾಟೆಯಲ್ಲಿ, ಮುಲ್ಲಾ-ಪಂಡಿತರ ಭರಾಟೆಯಲ್ಲಿ ದಿಗ್ಭ್ರಾಂತರಂತೆ ಕೂತಿದ್ದ ಕೆಳಸ್ತರದ ಜನರಲ್ಲಿ ಪ್ರೇಮಜ್ಯೋತಿಯನ್ನು ಹೊತ್ತಿಸಿದ. ಪ್ರೇಮ ಗೆಲ್ಲುತ್ತದೆ, ದ್ವೇಷ ಸೋಲುತ್ತದೆ ಎಂಬುದು ಕಬೀರ ಕಂಡುಕೊಂಡ ಸತ್ಯ.

ಕಬೀರನ ದೋಹೆಗಳು, ಹಾಡುಗಳು, ಭಜನೆಗಳು ಜನರ ಬಾಯಲ್ಲಿ ನಲಿಯತೊಡಗಿದವು, ಕಾಶಿಯ ಬೀದಿಯಲ್ಲಿ ಅನುರಣಿಸತೊಡಗಿದವು. ಅವುಗಳ ಗೂಢಾರ್ಥ, ಅವುಗಳಲ್ಲಿ ಅಡಗಿರುವ ವ್ಯಂಗ್ಯ ತಲಪಬೇಕಾದವರನ್ನು ತಲಪಿ, ಅವರಿಗೆ ಸಾಕಷ್ಟು ಇರಿಸುಮುರಿಸನ್ನುಂಟು ಮಾಡುತ್ತಿತ್ತು. ಮೇಲು-ಕೀಳೆಂಬ ಭೇದಭಾವ ತೋರುತ್ತ, ಅದನ್ನು ಬಲವಾಗಿ ಪ್ರತಿಪಾದಿಸುವುದೇ ಧರ್ಮಾಚರಣೆ ; ಅದರಿಂದಲೇ ಧರ್ಮರಕ್ಷಣೆ ಎಂಬಂತೆ ವರ್ತಿಸುವವರ ವಿರುದ್ಧ ಕಬೀರ ಸೆಟೆದು ನಿಂತ.

ಹೀಗಾಗಿ, ಹಿಂದೂ-ಮುಸ್ಲಿಮ್ ಧರ್ಮಗಳಲ್ಲಿ ಕೀಳು ಎಂದೇ ಭಾವಿಸಲ್ಪಟ್ಟ ಜನರಿಗೆ ಸಹಜವಾಗಿಯೇ ಕಬೀರ ಆಶಾಕಿರಣವಾಗಿ ಕಂಡ. ಆತನಾದರೂ ಅಷ್ಟೇ : ಅವರೆಲ್ಲರನ್ನೂ ಆಲಿಂಗಿಸಿಕೊಂಡ. ಅವರೊಂದಿಗೆ ಸಮ ಹೆಜ್ಜೆ ಹಾಕತೊಡಗಿದನೇ ಹೊರತು ಎಂದೂ ಅವರ ಮುಂದಾಳುವಿನಂತೆ ವರ್ತಿಸಲಿಲ್ಲ. ಅವರೆಲ್ಲರೊಡನೆ ಸೇರಿ ಕಾಶಿಯ ಬೀದಿಗಳಲ್ಲಿ ಸತ್ಸಂಗ ನಡೆಸತೊಡಗಿದ.

ದಿನೇ ದಿನೇ ಸತ್ಸಂಗಕ್ಕೆ ಸೇರುವವರ ಸಂಖ್ಯೆ ಹೆಚ್ಚತೊಡಗಿತು. ಸಂತ ರವಿದಾಸರೇ (ಇವರನ್ನು ರೈದಾಸ, ರೋಹಿದಾಸ, ರುಹಿದಾಸ ಎಂದೂ ಕರೆಯಲಾಗುತ್ತದೆ. ಹದಿನೈದನೆಯ ಶತಮಾನದಲ್ಲಿ ಆರಂಭವಾದ ಭಕ್ತಿ ಪಂಥದ ಸಂತರಲ್ಲಿ ರೈದಾಸರದು ಪ್ರಮುಖ ಹೆಸರು.) ಮೊದಲಾಗಿ ಅವರೆಲ್ಲ ವಿವಿಧ ಜಾತಿ ಮತ್ತು ವೃತ್ತಿಗೆ ಸೇರಿದ ಜನ. ತಮ್ಮ ತಮ್ಮ ವೃತ್ತಿಯನ್ನು ಮಾಡುತ್ತಲೇ ಅವರು ಸತ್ಸಂಗವನ್ನು ಮುಂದುವರಿಸಿದರು. ಭಜನೆಗಳನ್ನು ಹಾಡುವುದು ಮತ್ತು ವಿಚಾರ ವಿನಿಮಯ ಸತ್ಸಂಗದ ಮುಖ್ಯ ಚಟುವಟಿಕೆಗಳಾದವು. ಇವು ಉಂಟು ಮಾಡಿದ ಸಾಮಾಜಿಕ ಕ್ರಾಂತಿ ಬಹಳ ಮಹತ್ವದ್ದು. 

ಫಕೀರನೇ ಪ್ರಭಾವಿ
ಕಬೀರನ ಕಾಲದ ದಿಲ್ಲಿ ದೊರೆ ಸಿಕಂದರ್ ಲೋಧಿಗೆ ಕಬೀರನ ಮೇಲೊಂದು ಕಣ್ಣಿತ್ತು. ಒಮ್ಮೆ ಅವನ ಭೇಟಿಯನ್ನು ಏರ್ಪಡಿಸಿಕೊಂಡು ಸುದೀರ್ಘ ಧರ್ಮ ಜಿಜ್ಞಾಸೆ ನಡೆಸುತ್ತಾನೆ. ಆ ಸಂದರ್ಭದಲ್ಲಿ ಆತ, ‘ಇಷ್ಟೆಲ್ಲ ಸಾಧನೆಗೈದ ನಿಮ್ಮಂಥ ಶ್ರೇಷ್ಠ ವ್ಯಕ್ತಿ ಹೀಗೆ ಒಬ್ಬ ಸೀದಾ ಸಾದಾ ಫಕೀರನಂತೆ ಬೀದಿ ಬದಿಯಲ್ಲಿ ದರಿದ್ರರೊಡನೆ ವ್ಯವಹರಿಸುವುದು ಸರಿಯಲ್ಲ, ದಿಲ್ಲಿಗೆ ಬಂದು ಬಿಡಿ. ನಿಮ್ಮ ನಸೀಬ ಖುಲಾಯಿಸುತ್ತದೆ’ ಎನ್ನುತ್ತಾನೆ.

ಕಬೀರನಿಗೆ ನಗೆ ಬರುತ್ತದೆ, ‘ನಮಗೆ ಈ ಚಿಂದಿಯೇ ನಸೀಬು. ನಿಮಗೆ ಈ ಮುತ್ತಿನ ಹಾರವೇ ನಸೀಬು’ ಎನ್ನುತ್ತಾನೆ. ‘ಬಡವರ ಕಣ್ಣೀರು ಮುತ್ತಾಗಿ ಬಾದಶಹಾರ ಕೊರಳಲ್ಲಿ ಮುತ್ತಾಗಿ ಮಿನುಗುತ್ತದೆ…’ ಅಂತ ಅಮೀರ್ ಖುಸ್ರೋ ಸಾಹೇಬರು ಹೇಳುತ್ತಾರೆ.

ನಕ್ಕ ಕಬೀರ, ‘ನೀವು ಅಲ್ಲೇ ಇರಿ ದಿಲ್ಲಿಯಲ್ಲಿ, ನಾವು ಇಲ್ಲೇ ಇರ್ತೀವಿ ಕಾಶಿಯಲ್ಲಿ’ ಅಂತ ಎದ್ದು ಹೋಗಿಬಿಡುತ್ತಾನೆ. ಇದರಿಂದ ಕೋಪಗೊಂಡ ಲೋಧಿ ಕಬೀರನನ್ನು ಬಂಧನದಲ್ಲಿಡುವ ಆಜ್ಞೆ ಹೊರಡಿಸಿ ದಿಲ್ಲಿಯತ್ತ ಪ್ರಯಾಣ ಬೆಳೆಸುತ್ತಾನೆ. ಏನೇ ಮಾಡಿದರೂ ಕಬೀರನ ದನಿ ಮಾತ್ರ ಅವನನ್ನು ಕಾಡುತ್ತಲೇ ಇರುತ್ತದೆ. 

ಶತಮಾನಗಳು ಉರುಳಿದವು. ಸಾಮ್ರಾಜ್ಯಗಳು ನೆಲ ಕಚ್ಚಿದವು. ದರ್ಪ ಅಟ್ಟಹಾಸಗಳು ಅಡಗಿ ಹೋದವು. ಕಬೀರನ ನುಡಿಗಳು, ದೋಹೆಗಳು, ಗೀತೆಗಳು, ಭಜನೆಗಳು ಜನರಿಂದ ಜನರಿಗೆ ಪ್ರಚಾರವಾಗಿ ಭರತಖಂಡವನ್ನು ದಾಟಿ, ವಿಶ್ವವ್ಯಾಪಿಯಾದವು.

(ದಿವಂಗತ ಗೋಪಾಲ ವಾಜಪೇಯಿಯವರು ಕಳುಹಿಸಿದ್ದ ವೈಯಕ್ತಿಕ ಇ ಮೇಲ್’ನಿಂದ….)

Leave a Reply