ಲುಖ್ಮಾನ್ ಕಂಡುಕೊಂಡ ಅದ್ವೈತ : ಒಂದು ಸೂಫಿ ಪದ್ಯ

fa
ಅತ್ತಾರ್ ನಿಶಾಪುರಿ

ಮೂಲ : ಅತ್ತಾರ್ ನಿಶಾಪುರಿ | ಅನುವಾದ : ಚೇತನಾ ತೀರ್ಥಹಳ್ಳಿ

ರ್ರಕ್ಸಿನ ಲುಖ್ಮಾನ ಬೇಡಿದ,
“ಅಲ್ಲಾಹ್! ನಿನ್ನ ನಿಷ್ಠಾವಂತ ಸೇವಕ,
ಬಡವ, ವಿಭ್ರಾಂತ, ಮುಪ್ಪಿನ ಈ ಮುದಿ ಗುಲಾಮನನ್ನು ಬಿಡುಗಡೆಗೊಳಿಸು.
ಆಯುಷ್ಮಾನವಿಡೀ ನೀಯತ್ತಿನ ವಿನಾ ಮತ್ತೇನೂ ಬದುಕಿಲ್ಲ ನಾನು!
ದುಗುಡದ ಹೊರೆ ಹೊತ್ತು ಬೆನ್ನು ಬಾಗಿಹುದು,
ಯೌವನದ ಕರಿಗೂದಲೀಗ ಹಿಮದ ಬಣ್ಣ.
ವಿಮೋಚನೆ ಕೊಡು; ನನ್ನನ್ನು ಹೋಗಲು ಬಿಡು”

ಉತ್ತರಿಸಿತು ದೇವವಾಣಿ :
“ನೀನು ಚಿಂತೆಯಲಿ ಬಂಧಿ, ಚಿತ್ತದಲಿ ಕೀಲಿ ಇದೆ.
ಬಿಡಿಸಿಕೊಂಡರೆ ನಿನ್ನ, ಬಿಡುಗಡೆ ಹೊಂದುವೆ ನೀನು;
ಕಳೆದರೆ ಚಿತ್ತ – ಚಿಂತೆ, ಮತ್ತೆ ಗುಲಾಮನಲ್ಲ ನೀನು!”

ಲುಖ್ಮಾನ, ಮುಗಿಲೆಡೆಗೆ ಕೈಚಾಚಿ ನುಡಿದ;
“ಖುದಾ! ನೀನಲ್ಲದೆ ಮತ್ತಾರು ನನಗೆ?
ಚಿತ್ತ – ಚಿಂತೆಗಳ ಹಂಗು ಇನ್ನೇಕೆ ನನಗೆ!?”

ದ್ವಂದ್ವ ತೊರೆದು ಶರಣಾದ ಮರುಕ್ಷಣ,
ಶುರುವಾಯಿತು, ಅದೋ! ಉನ್ಮತ್ತ ನರ್ತನ!!

“ಯಾರೀಗ ನಾನು? ಗುಲಾಮನೆಲ್ಲೋ ಸತ್ತ!!
ಬಿಡುಗಡೆ ಏನು? ದಾಸ್ಯವೇನು?
ಎಲ್ಲಿ ಎಲ್ಲದರ ತಾಣ?
ಸುಖ ದುಃಖಗಳು ಹಾರಿಹೋದವು;
ಸಕಲ ಗುಣಗಳೂ ಕರಗಿಹೋದವು;
ನಾನೀಗ ನಿರ್ಲಿಪ್ತ, ನಾನೀಗ ನಿರ್ಗುಣ..

ಕಣ್ ಮುಚ್ಚಿ ಕುಳಿತಿರುವೆ,
ಗುಟ್ಟು ಬಿಚ್ಚಿಕೊಳ್ಳುತ್ತಿದೆ…
ಕಾಣುತಿರುವ ನಾನು, ನೀನೇ;
ಅಥವಾ ನೀನು ನಾನೇ!?

ಕಳೆದಿರುವೆ ನಿನ್ನೊಳಗೆ, ಎರಡಳಿದು ಒಂದಾಗಿ
ಅದ್ವೈತ! ಮತ್ತಿಲ್ಲಿ, ಮತ್ತೊಬ್ಬರಿಲ್ಲ.”

~

** ಸರ್ರಕ್ಸ್ : ಇರಾನಿನ ಒಂದು ನಗರ

** ಲುಖ್ಮಾನ್ : ಒಂದು ಇರಾನಿ ಮನತೆನದ ಹೆಸರು. ‘ಲುಖ್ಮಾನ್’, ತನ್ನ ಮನತೆನದ ಗುರುತಿನಿಂದ ಕರೆಯಲ್ಪಡುತ್ತಿದ್ದ ಒಬ್ಬ ಗುಲಾಮ; ಈತನೊಬ್ಬ ಸಂತ ಕೂಡಾ

ಇರಾನಿನ ಪ್ರಮುಖ ಸೂಫಿಗಳಲ್ಲಿ ಒಬ್ಬನಾದ ಫರೀದುದ್ದೀನ್ ಅತ್ತಾರ್, ‘ಅತ್ತಾರ್ ನಿಶಾಪುರಿ’ ಎಂದೇ ಖ್ಯಾತ. ನಿಶಾಪುರಿಯ ರಚನೆಗಳಲ್ಲಿ ಅದ್ವೈತ ಪ್ರಮುಖ ವಸ್ತು 

Leave a Reply