ಮಾಸ್ಟರ್ ಬಾಂಕಿಯ ಬೆಕ್ಕು ಮತ್ತು ಇಲಿ : ಝೆನ್ ಕಥೆ

zen cat

ಝೆನ್ ಗುರು ಬಾಂಕಿ ಒಂದು ಬೆಕ್ಕು ಸಾಕಿದ್ದ.
ಒಮ್ಮೆ ಆಶ್ರಮದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೆಕ್ಕಿಗೆ ಸಿಕ್ಕಾಪಟ್ಟೆ ಹಸಿವಾಯ್ತು. ಮನೆ ಎಲ್ಲ ಹುಡುಕಾಡಿದ ಬೆಕ್ಕಿನ ಕಣ್ಣಿಗೆ ಅಂಗಳದಲ್ಲಿ ಓಡಾಡುತ್ತಿದ್ದ ಇಲಿ ಕಾಣಿಸಿಕೊಂಡಿತು. ಕೂಡಲೆ ಇಲಿಯ ಮೇಲೆ ದಾಳಿ ಮಾಡಿದ ಬೆಕ್ಕು ಅದನ್ನು ಅಟ್ಟಿಸಿಕೊಂಡು ಹೋಯಿತು.

ಬೆಕ್ಕು ಎಷ್ಟು ಜೋರಾಗಿ ಓಡಿದರೂ ಇಲಿ ಸಿಗಲೆ ಇಲ್ಲ. ಸುಮಾರು ಗಂಟೆಗಳ ಪ್ರಯತ್ನದ ನಂತರ ಬೆಕ್ಕು ಕೈಚೆಲ್ಲಿತು.
ಸಂಜೆ ಗುರು ಬಾಂಕಿ ವಾಪಸ್ ಆಶ್ರಮಕ್ಕೆ ಬಂದಾಗ, ಬೆಕ್ಕು ಬಾಂಕಿಯ ಹತ್ತಿರ ಹೋಗಿ ತನ್ನ ಅಸಮಾಧಾನವನ್ನ ತೋಡಿಕೊಂಡಿತು.

“ಮಾಸ್ಟರ್ ನಾನು ಇಷ್ಟು ದೊಡ್ಡ ಪ್ರಾಣಿ, ನನ್ನ ಸ್ನಾಯುಗಳು ಇಲಿಗಿಂತ ಬಲಿಷ್ಟವಾಗಿವೆ, ಆದರೂ ಇಲಿ ನನ್ನ ಕೈಗೆ ಸಿಗಲಿಲ್ಲ, ನನಗಿಂತ ವೇಗವಾಗಿ ಓಡಿ ಹೋಯಿತು. ಏನಿದರ ರಹಸ್ಯ?”

ಮಾಸ್ಟರ್ ಬಾಂಕಿ ಉತ್ತರಿಸಿದ, “ಹೌದು ಎಲ್ಲ ರೀತಿಯಿಂದಲೂ ನೀನು ಇಲಿಗಿಂತ ಶಕ್ತಿಶಾಲಿ ಪ್ರಾಣಿ, ಆದರೆ ನೀನು ಒಂದು ಸಂಗತಿ ಮರೆಯುತ್ತಿದ್ದೀಯ, ನೀನು ನಿನ್ನ ಒಂದು ದಿನದ ಊಟಕ್ಕಾಗಿ ಓಡುತ್ತಿದ್ದೆ, ಆ ಇಲಿ ತನ್ನ ಜೀವ ಉಳಿಸಿಕೊಳ್ಳಲು ಓಡುತ್ತಿತ್ತು.”

: ಸಂಗ್ರಹ ಮತ್ತು ಅನುವಾದ | ಚಿದಂಬರ ನರೇಂದ್ರ

Leave a Reply