ಚೀನಾದಲ್ಲಿ ಒಬ್ಬ ಯುವ ಝೆನ್ ಸನ್ಯಾಸಿಯಿದ್ದ. ಅವನು ಝೆನ್ ಅನ್ನು ಬಹಳ ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದ.
ಎಷ್ಟು ಗಂಭೀರ ಅಂದರೆ… ಅವನ ಮುಖ ಯಾವಾಗಲೂ ಬಿಗಿದುಕೊಂಡೇ ಇರುತ್ತಿತ್ತು. ಅಷ್ಟು ಗಂಭೀರ!!
ಒಮ್ಮೆ ಏನನ್ನೋ ಅಧ್ಯಯನ ಮಾಡುವಾಗ ಯಾವುದರದ್ದೋ ಅರ್ಥ ತಿಳಿಯಲಿಲ್ಲ. ಸಾಕಷ್ಟು ಪ್ರಯತ್ನ ನಡೆಸಿ, ಸೋತು, ಗುರುವಿನ ಬಳಿ ಹೋದ.
“ಮಾಸ್ಟರ್, ನನಗಿದು ಅರ್ಥವಾಗುತ್ತಿಲ್ಲ. ದಯವಿಟ್ಟು ವಿವರಿಸಿ” ಎಂದು ಗಂಭೀರ ಗಂಟು ಮುಖ ಹೊತ್ತು ನಿಂತ.
ಶಿಷ್ಯನ ಸಮಸ್ಯೆ ಕೇಳುತ್ತಲೇ ಗುರು ಜೋರಾಗಿ ನಗಲಾರಂಭಿಸಿದ. ಶಿಷ್ಯನ ಮುಖ ಮತ್ತಷ್ಟು ಬಿಗುವಾಯಿತು. ಅದನ್ನು ನೋಡಿ ಗುರು ಇನ್ನೂ ಜೋರಾಗಿ ನಗತೊಡಗಿದ. ಈಗಂತೂ ಶಿಷ್ನ ಮುಖ ಮುದುಡಿಹೋಗಿತ್ತು. ಗುರು ಅಲ್ಲಿಂದ ಹೊರಟು ಹೋದ.
ಶಿಷ್ಯನಿಗೆ ತಲೆಬಿಸಿ ಶುರುವಾಯಿತು. ಗುರುವಿನ ನಗುವಿಗೆ ಕಾರಣವೇನು ಎಂದು ಯೋಚಿಸುತ್ತ ಕುಳಿತ. ಊಟ ಸೇರಲಿಲ್ಲ. ನಿದ್ರೆ ಬರಲಿಲ್ಲ. ಅಧ್ಯಯನದಲ್ಲೂ ಮನಸ್ಸು ತೊಡಗಲಿಲ್ಲ.
ಹೀಗೇ ಮೂರು ದಿನಗಳು ಕಳೆದವು. ಕೊನೆಗೂ ಧೈರ್ಯ ಮಾಡಿ ಗುರುವಿನ ಬಳಿ ಹೋಗಿ “ಮಾಸ್ಟರ್, ಮೊನ್ನೆ ನನ್ನ ಪ್ರಶ್ನೆಗೆ ನೀವು ನಕ್ಕಿದ್ದೇಕೆ?” ಎಂದು ಕೇಳಿದ.
“ಮತ್ತಿನ್ನೇನು ಮಾಡಲಿ… ಒಬ್ಬ ಜೋಕರ್ ಗೆ ಇರುವ ಗುಣವೂ ನಿನ್ನಲ್ಲಿ ಇಲ್ಲ. ನೀನೇನು ಝೆನ್ ಕಲಿಯುತ್ತೀ?” ಅಂದುಬಿಟ್ಟ ಗುರು.
ಈಗಂತೂ ಶಿಷ್ಯನ ಎದೆ ಒಡೆಯುವುದು ಬಾಕಿ. “ಯಾಕೆ ಮಾಸ್ಟರ್!?”
“ಮತ್ತಿನ್ನೇನು? ಯಾರಾದರೂ ನಗುತ್ತಿದ್ದರೆ ನಮ್ಮ ಮುಖದಲ್ಲೂ ನಗೆ ಮೂಡಬೇಕು. ನಾವು ಅವರು ನಗುತ್ತಿದ್ದಾರೆಂದು ಖುಷಿ ಪಡಬೇಕು. ಅದರ ಬದಲು ಮುಖ ಗಂಟು ಹಾಕಿಕೊಳ್ಳುವುದೇ?” ಕೇಳಿದ ಗುರು.
ಈಗ ಶಿಷ್ಯ ನಗತೊಡಗಿದ. ಗುರು ಅವನ ಜೊತೆ ಸೇರಿ ಮತ್ತಷ್ಟು ಜೋರಾಗಿ ನಕ್ಕ. ಅವರಿಬ್ಬರ ಗು ಆಶ್ರಮದ ಹೊರಗೂ ಕೇಳಿಸತೊಡಗಿತು.