ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ ಬಸ್ತಾರ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ.
ಬಂಗಾಲಿಗಳ ಅತಿ ದೊಡ್ಡ ಹಬ್ಬ!
ದುರ್ಗಾ ಮಾತೆ… ಬಂಗಾಲಿಗಳ ಮಾತೃ ದೇವತೆ. ನಮ್ಮಲ್ಲಿ ಗಲ್ಲಿ-ಗಲ್ಲಿಗೆ ಸಾರ್ವಜನಿಕ ಗಣೇಶನನ್ನು ಕೂರಿಸುವ ಹಾಗೆ, ಪಶ್ಚಿಮ ಬಂಗಾಳ ಮತ್ತು ಬಂಗಾಲಿಗಳು ಇರುವಲ್ಲೆಲ್ಲ ಸಾರ್ವಜನಿಕ ದುರ್ಗಾ ವಿಗ್ರಹದ ಪೂಜೆ ನಡೆಯುತ್ತದೆ. ಇದೇ ‘ಸರ್ಬೋಜನೀನ ದುರ್ಗಾ ಪೂಜಾ.’
ಮೊದಮೊದಲು ಕೇವಲ ಜಮೀನುದಾರರು, ಶ್ರೀಮಂತರು ತಮ್ಮ ಮನೆಯಂಗಣದಲ್ಲಿ ವಿಜ್ರಂಭಣೆಯಿಂದ ದುರ್ಗಾ ಪೂಜೆ ನಡೆಸುತ್ತಿದ್ದರು. ಇಂಥಾ ಪೂಜೆಗೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ.
1606 ರಲ್ಲಿ ಒಮ್ಮೆ ಹೂಗ್ಲಿ ಜಿಲ್ಲೆಯ 12 ಜನ ಸ್ನೇಹಿತರು ಇಂಥ ಒಂದು ಪೂಜೆ ನೋಡಿಯೇತೀರುವ ಹಟದಿಂದ ಹೋದರು. ಅವಮಾನಿಸಲ್ಪಟ್ಟರು. ರೊಚ್ಚಿಗೆದ್ದ ಆ ಹನ್ನೆರಡು ಜನ ಏರ್ಪಡಿಸಿದ ಪರ್ಯಾಯ ಪೂಜೆ ‘ಬಾರೋವಾರಿ ದುರ್ಗಾ ಪೂಜಾ’ (ಸಾರ್ವಜನಿಕ ದುರ್ಗಾ ಪೂಜಾ) ಎಂದು ಕರೆಯಿಸಿಕೊಂಡಿತು (ಬಾರೋ = ಹನ್ನೆರಡು, ವಾರಿ=ಗೆಳೆಯರು). ಬರಬರುತ್ತ ಈ ಪೂಜೆ ಜನಪ್ರಿಯಗೊಂಡು ‘ಸರ್ಬೋಜನೀನ ದುರ್ಗಾ ಪೂಜಾ’ ಎಂದು ಹೆಸರು ಪಡೆಯಿತು.
1950 ರಿಂದೀಚೆಗೆ ಬಂಗಾಳದ ದುರ್ಗಾಪೂಜೆಗೆ ಜಾಗತಿಕ ಮಹತ್ವ ಬಂದಿದೆ. ಆ ಸಂದರ್ಭದಲ್ಲಿ ಎಲ್ಲವೂ ಬಂಗಾಲೀಮಯ. ಬಂಗಾಲಿ ಸಿಹಿಗಳು, ಬಂಗಾಲಿ ನಾಟಕಗಳು, ಬಂಗಾಲಿ ನೃತ್ಯ, ಬಂಗಾಲಿ ಕಾವ್ಯ ಗಾಯನ, ಸಂಗೀತ ಸಮ್ಮೇಳನಗಳು…
ಮನೆಗಳೆದುರು ‘ಅಲ್ಪನಾ’ (ರಂಗವಲ್ಲಿ) ಶೃಂಗಾರ. ಎಲ್ಲೆಲ್ಲೂ ‘ಢಾಕೀ’ಗಳ (ಡೋಲಕ್ ನುಡಿಸುವಾತ) ನಾದ ಸಮೇತ ಕುಣಿತ ; ಧೂಪ ಸಾಂಬ್ರಾಣಿಯ ಸುವಾಸಿತ ಹೊಗೆ ; ಶಂಖನಾದಗೈಯುವ ಸ್ತ್ರೀಯರು… ನೋಡಿದಲ್ಲೆಲ್ಲ ಉಮ್ಮೇದು, ಉತ್ಸಾಹ, ಸಂಭ್ರಮ, ಸಡಗರ…
ಒಟ್ಟಿನಲ್ಲಿ, ಬಂಗಾಳಿಗಳ ‘ದುರ್ಗಾ ಪೂಜನ್’ ನೋಡುವವರಿಗೂ ಒಂದು ಹಬ್ಬ!
ಬಸ್ತರ್ ಜನಾಂಗದ ‘ದಸ್ಸೇಹ್ರಾ’
ಛತ್ತೀಸಗಢದ ಬಸ್ತರ್ ಆದಿವಾಸಿ ಇಲಾಖೆಯ ದಸರೆಯ ವೈಶಿಷ್ಟ್ಯಗಳು ಒಂದೆರಡಲ್ಲ. ಇದು ಶ್ರಾವಣದ ಅಮಾವಾಸ್ಯೆಯಿಂದ ಆರಂಭವಾಗಿ, 75 ದಿನಗಳ ಕಾಲ ಮುಂದುವರಿಯುವ ಪರ್ವ. ನಮ್ಮ ದಸರೆ ಮುಗಿದು ಮೂರು ದಿನಗಳ ನಂತರ ಇವರ ದಸರೆ ಮುಕ್ತಾಯ ಕಾಣುತ್ತದೆ.
ಈಗಿನ ಬಸ್ತರ್ ಅನ್ನು ಆದಿವಾಸಿ ಇಲಾಖೆ ರಾಮಾಯಣ ಕಾಲದ ‘ದಂಡಕಾರಣ್ಯ’ ಪ್ರದೇಶವೆಂದು ಗುರುತಿಸಿದೆ. ಆದರೂ, ಈ ಹಬ್ಬ ಇಲ್ಲಿಯವರಿಗೆ ಇದು ರಾವಣನನ್ನು ಸಂಹಾರಗೈದು ಶ್ರೀ ರಾಮ ಅಯೋಧ್ಯೆಗೆ ಮರಳಿದ ಸಂದರ್ಭ ಅಲ್ಲವೇ ಅಲ್ಲ. ಬಸ್ತರ್ ಪ್ರದೇಶದ ದೇವಿ ಮವೋಲಿ ಮಾತೆ ಆ ಭಾಗದಲ್ಲಿಯ ತನ್ನ ಉಳಿದ ಸೋದರಿಯರನ್ನು ಭೇಟಿ ಮಾಡುವಳೆಂಬ ನಂಬಿಕೆ ಇಲ್ಲಿಯವರದು. ಈ ಹಿನ್ನೆಲೆಯಲ್ಲಿ ಹಬ್ಬದ ಆಚರಣೆ.
ಮವೋಲಿ ದೇವಿ ದಂತೇಶ್ವರಿಯ ‘ಹಿರಿಯಕ್ಕ’ನಂತೆ. ಎಲ್ಲ ಗ್ರಾಮಗಳ ದೇವತೆಗಳನ್ನು, ಅಲ್ಲಲ್ಲಿಯ ಪೂಜಾರಿಗಳು ಮತ್ತು ಭಕ್ತರು, ಹೂವಿನಿಂದ ಅಲಂಕರಿಸಿದ ಪಾಲಕಿಗಳಲ್ಲಿ ಇಟ್ಟುಕೊಂಡು, ಬಾಜಾ ಬಜಂತ್ರಿಯೊಂದಿಗೆ ಜಿಲ್ಲಾ ಕೇಂದ್ರವಾದ ಜಗದಾಳಪುರದ ದಂತೇಶ್ವರಿ ದೇವಿ ಮಂದಿರದ ತನಕ ತರುತ್ತಾರೆ. ಅಲ್ಲಿ ಈ ‘ಅಕ್ಕ-ತಂಗಿಯರ’ ಭೇಟಿಯೇ ಈ ಹಬ್ಬ.
ತಾಯಿ ದಂತೇಶ್ವರಿ ದೇವಿಗೆ ಪೂಜೆ, ಹರಕೆ ಒಪ್ಪಿಸುವಿಕೆ, ಎಡೆ ಇಡುವುದು ಇತ್ಯಾದಿಗಳೇ ಹಬ್ಬದ ಸಾಲಿನ ಮುಖ್ಯ ಕಲಾಪ. ಈ ಉತ್ಸವಕ್ಕಾಗಿ ಇಲ್ಲಿ ಎಲ್ಲ ಆದಿವಾಸಿ ಪಂಗಡಗಳೂ ಒಟ್ಟುಗೂಡುತ್ತವೆ. ಅಂದಮೇಲೆ ಈ ಸಂದರ್ಭ ಅತ್ಯಂತ ವರ್ಣರಂಜಿತ ಎಂದು ಬೇರೆ ಹೇಳಬೇಕಿಲ್ಲ.