ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಒಂದು ದೊಡ್ಡ ಸಾಮ್ರಾಜ್ಯದ ಚಕ್ರವರ್ತಿ ತನ್ನ ರಾಜ್ಯದಲ್ಲಿ ವಾಸಿಸುತ್ತಿದ್ದ ಒಬ್ಬ ಝೆನ್ ಮಾಸ್ಟರ್ ನನ್ನು ತನ್ನ ಅರಮನೆಗೆ ಆಹ್ವಾನಿಸಿದ.
ತನ್ನ ಕೋರಿಕೆಯಂತೆ ಅರಮನೆಗೆ ಆಗಮಿಸಿದ ಮಾಸ್ಟರ್ ನನ್ನು ನೋಡಿ ರಾಜನಿಗೆ ಬಹಳ ಸಂತೋಷವಾಯಿತು. ಮಾಸ್ಟರ್ ಗೆ ಸಕಲ ಆದರೋಪಚಾರಗಳನ್ನು ಮಾಡಲು ಮುಂದಾದ. ಸರಳ ಜೀವನ ನಡೆಸುತ್ತಿದ್ದ ಮಾಸ್ಟರ್, ರಾಜನ ಸತ್ಕಾರವನ್ನು ಗೌರವದಿಂದ ನಿರಾಕರಿಸಿದ.
ಮಾಸ್ಟರ್ ನ ಈ ಸೌಜನ್ಯ, ಸರಳತೆ ಕಂಡು ರಾಜನಿಗೆ ಬಹಳ ಅಚ್ಚರಿಯಾಯಿತು.
“ ಮಾಸ್ಟರ್, ಇಷ್ಟು ಕಡಿಮೆ ವಸ್ತುಗಳಿಂದ ನೀನು ತೃಪ್ತನಾಗಿರುವೆ. ನಿನ್ನನ್ನು ಕಂಡು ನನಗೆ ಅಸೂಯೆಯಾಗುತ್ತಿದೆ. “ ಎಂದ ರಾಜ.
“ ಬದಲಾಗಿ ನಿನ್ನನ್ನು ಕಂಡರೆ ನನಗೆ ಹೊಟ್ಟೆಕಿಚ್ಚಾಗುತ್ತಿದೆ ಮಹಾರಾಜ”
ಎಂದ ಮಾಸ್ಟರ್.
“ ನೀನು ನನಗಿಂತಲೂ ಕಡಿಮೆ ವಸ್ತುಗಳಿಂದ ತೃಪ್ತನಾಗಿರುವೆ. ನನ್ನ ಮನೋರಂಜನೆಗೆ ಬ್ರಹ್ಮಾಂಡದ ದಿವ್ಯ ಸಂಗೀತ ಬೇಕೇ ಬೇಕು, ಬೆಟ್ಟ, ಗುಡ್ಡ, ನದಿ ಸಮುದ್ರ ಇಲ್ಲದೇ ಹೋದರೆ ನನಗೆ ಹೊತ್ತೇ ಹೋಗುವುದಿಲ್ಲ. ಚಂದ್ರ ಸೂರ್ಯರು ಕಣ್ಣು ಮುಂದಿರದೇ ಹೋದರೆ, ನನ್ನೊಳಗೆ ಒಂದು ತುತ್ತೂ ಇಳಿಯುವುದಿಲ್ಲ. ನೀನೇ ಅದೃಷ್ಟವಂತ ಮಹಾರಾಜ ನಿನಗೆ ನಿನ್ನ ರಾಜ್ಯ ಒಂದಾದರೆ ಸಾಕು.”