ಒಂದೂರಿನಲ್ಲಿ ಒಬ್ಬ ಹೆಂಗಸಿದ್ದಳು. ಅವಳಿಗೆ ಸ್ವರ್ಗದ ಹಣ್ಣಿನ ಬಗ್ಗೆ ತೀರದ ಕುತೂಹಲ. ಅದನ್ನು ತಿಂದರೆ ಏನೆಲ್ಲ ಪರಿಣಾಮಗಳಾಗ್ತವೆ? ಎಂದು ಯಾವಾಗಲೂ ಯೋಚಿಸುತ್ತ ಕೂರುವಳು.
ಒಮ್ಮೆ ಅವಳೂರಿಗೆ ದರ್ವೇಶಿಯೊಬ್ಬ ಬಂದ. ಆ ಹೆಂಗಸು ಅವನನ್ನು ಭೇಟಿಯಾಗಿ ಕೇಳಿದಳು, “ಸ್ವರ್ಗದ ಹಣ್ಣು ಎಲ್ಲಿ ಸಿಗುತ್ತದೆ? ಅದನ್ನು ತಿಂದರೆ ನಾನು ಆ ಕ್ಷಣವೇ ಜ್ಞಾನೋದಯ ಹೊಂದಬಹುದೆ?”
“ಈ ಪ್ರಶ್ನೆಗೆ ಉತ್ತರ ಬೇಕೆಂದರೆ ನನ್ನ ಜೊತೆ ಇದ್ದು ಅಭ್ಯಾಸ ನಡೆಸಬೇಕು. ನಾನು ಹೇಳಿದಷ್ಟು ವರ್ಷ ಕಾಯಬೇಕು” ದರ್ವೇಶಿ ಉತ್ತರಿಸಿದ. “ಹಾಗೆ ಮಾಡದೆ ಹೋದರೆ ನಿನಗೆ ಉತ್ತರ ಸಿಗುವುದು ಕಷ್ಟ. ಜೀವಮಾನ ಪೂರ್ತಿ ಚಡಪಡಿಸುತ್ತಾ ಉತ್ತರ ಹುಡುಕಿಕೊಂಡು ಅಲೆಯುತ್ತಾ ಇರಬೇಕಾಗುತ್ತದೆ”
ಅವಳಿಗೆ ದರ್ವೇಶಿಯ ಸಲಹೆ ರುಚಿಸಲಿಲ್ಲ. ಅವನನ್ನು ಬಿಟ್ಟು ಆರಿಫ್ ಎಂಬ ಪಂಡಿತನ ಬಳಿ ಹೋದಳು. ಅವನಲ್ಲಿಯೂ ಅದೇ ಪ್ರಶ್ನೆ ಕೇಳಿದಳು. ಅಲ್ಲಿಯೂ ಅವಳಿಗೆ ಉತ್ತರ ಸಿಗಲಿಲ್ಲ. ಆಮೇಲೆ ಅವಳು ಒಬ್ಬ ಹಕೀಮನನ್ನು, ಉನ್ಮತ್ತ ಫಕೀರ ಮಜ್ಝಾಪನನ್ನು, ವಿಜ್ಞಾನಿ ಅಲೀಮನನ್ನು ಕಂಡು ಸ್ವರ್ಗದ ಹಣ್ಣಿನ ಬಗ್ಗೆ ವಿಚಾರಿಸಿದಳು. ಯಾರ ಬಳಿಯೂ ಅವಳಿಗೆ ಉತ್ತರ ಸಿಗಲಿಲ್ಲ.
ಆಮೇಲೆ ಆ ಹೆಂಗಸು ಕಂಡಕಂಡವರನ್ನು ಭೇಟಿಯಾಗುತ್ತಾ, ಪ್ರಶ್ನೆಗೆ ಉತ್ತರ ಹುಡುಕುತ್ತಾ ಅಲೆದು ದಣಿದಳು. ಹೀಗೆ ಉರುಳಿದ್ದು ಪೂರಾ 30 ವರ್ಷಗಳು!
ಕೊನೆಗೊಂದು ದಿನ ಆ ಹೆಂಗಸು ಒಂದು ತೋಟಕ್ಕೆ ಬಂದಳು. ಅಲ್ಲಿ ಸ್ವರ್ಗದ ಮರವಿತ್ತು. ಅದರ ಕೊಂಬೆಯೊಂದರಲ್ಲಿ ಸ್ವರ್ಗದ ಹಣ್ಣು ಬೆಳಕು ಚೆಲ್ಲುತ್ತ ತೂಗುತ್ತಿತ್ತು. ಅದರ ಬುಡದಲ್ಲಿ ಮೊಟ್ಟ ಮೊದಲು ಸಿಕ್ಕಿದ್ದ ದರ್ವೇಶಿ ಕಣ್ಣು ಮುಚ್ಚಿ ಕುಳಿತಿದ್ದ.
ಅವಳು ಅವನ ಬಳಿ ಸಾರಿ, “ಸ್ವರ್ಗದ ಹಣ್ಣಿನ ಉಸ್ತುವಾರಿ ನಿನ್ನದೇ ಎಂದು ಮೊದಲೇ ಯಾಕೆ ಹೇಳಲಿಲ್ಲ?” ಎಂದು ಕೇಳಿದಳು.
“ಆಗ ನಾನು ಹೇಳಿದ್ದರೆ ನೀನು ನಂಬುತ್ತಿರಲಿಲ್ಲ. ಈ ಹಣ್ಣು ಮೂವತ್ತು ವರ್ಷ ಮೂವತ್ತು ದಿನಗಳಿಗೊಮ್ಮೆ ಬಿಡುತ್ತದೆ. ವರ್ಷಗಟ್ಟಲೆ ಕಾಯಬೇಕೆಂದು ನಾನು ಹೇಳಿದ್ದು ಅದೇ ಕಾರಣಕ್ಕೆ” ದರ್ವೇಶಿ ಉತ್ತರಿಸಿದ.
ಅಂದ ಹಾಗೆ, ಆ ದರ್ವೇಶಿಯ ಹೆಸರು ‘ಸಬರ್’ (ಸಬ್ರ್). ಮತ್ತು ಸಬರ್ ಅಂದರೆ ಸಹನೆ.
(ಸಂಗ್ರಹ ಮತ್ತು ಅನುವಾದ : ಅಲಾವಿಕಾ)