ಸಮಸ್ಯೆಯ ಹೊರಗೆ ನಿಂತು ನೋಡಿ : ಅರಳಿಮರ ಸಂವಾದ

ನಾವು ಸಮಸ್ಯೆಯೊಳಗೆ ಇಳಿದುಬಿಟ್ಟರೆ ಅದರ ವ್ಯಾಪ್ತಿ ನಮಗೆ ತಿಳಿಯುವುದಿಲ್ಲ. ಅದನ್ನು ಹೊರಹಾಕುವ ಧಾವಂತದಲ್ಲಿ ಮತ್ತೇನನ್ನಾದರೂ ಕಳೆದುಕೊಳ್ಳುತ್ತೇವೆಯೋ ಅನ್ನುವ ಚಿಂತೆ ನಮ್ಮನ್ನು ಕಾಡತೊಡಗುತ್ತದೆ ~ ಚಿತ್ಕಲಾ

ಬೇರೆಯವರ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಹೇಳುವ ನನಗೆ, ನನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನೇ ಪರಿಹಾರ ಹೇಳುವ ಸ್ಥಾನದಲ್ಲಿ ಇರುವುದರಿಂದ, ಬೇರೆಯವರನ್ನು ಕೇಳಲು ಮನಸ್ಸು ಬರುತ್ತಿಲ್ಲ. ಏಕೆ ಹೀಗಾಗುತ್ತದೆ?

ಇದು ಹೆಸರು ಹೆಳಲು ಇಚ್ಛಿಸದ, ವೃತ್ತಿಯಿಂದ ಬ್ಯಾಂಕ್ ಉದ್ಯೋಗಿಯಾಗಿರುವ ಅರಳಿಮರ ಓದುಗರೊಬ್ಬರ ಪ್ರಶ್ನೆ.

ಸರಿಯಾಗಿ ಗಮನಿಸಿದರೆ, ಈ ಪ್ರಶ್ನೆಯಲ್ಲೇ ಉತ್ತರವಿದೆ. “ನನಗೆ ನನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲಾಗುತ್ತಿಲ್ಲ, ಬೇರೆಯವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ” – ಈ ಹೇಳಿಕೆಯಲ್ಲೇ ಉತ್ತರ ಅಡಗಿದೆ.

ಯಾರಿಗಾದರೂ ಮತ್ತೊಬ್ಬರ ಸಮಸ್ಯೆಗೆ ಉತ್ತರ ಕೊಡಲು ಸಾಧ್ಯವಾಗುವುದು, ಅದು ಬೇರೆಯವರ ಸಮಸ್ಯೆಯಾಗಿರುವುದರಿಂದ. ನಮ್ಮ ಸಮಸ್ಯೆಯನ್ನೂ ಬೇರೆಯವರ ಸಮಸ್ಯೆಯಂತೆಯೇ ನೋಡುತ್ತಾ ಆಲೋಚಿಸಿದರೆ ನಮಗೂ ಪರಿಹಾರ ಸಿಕ್ಕುಹೋಗುತ್ತದೆ! ಅಷ್ಟೇ!!

ಇದು ಹೇಗೆಂದು ವಿವರವಾಗಿ ನೋಡೋಣ.

ಮತ್ತೊಬ್ಬರ ಸಮಸ್ಯೆಗಳನ್ನು ನಾವು ಹೊರನಿಂತು ನೋಡುತ್ತಿರುತ್ತೇವೆ. ಅದರ ಪರಿಹಾರಕ್ಕೆ ಏನಾದರೂ ಬೆಲೆ ತೆರಬೇಕಾದಲ್ಲಿ ನಷ್ಟವೇನಿಲ್ಲ, ಪರಿಹಾರ ಮುಖ್ಯ ಎಂದು ತೀರ್ಮಾನ ಹೇಳುತ್ತೇವೆ. ಪರಿಹಾರ ಪಡೆಯಲು ಹೂಡಬೇಕಾದ ವ್ಯವಧಾನ, ಸಮಯ ಮತ್ತು ಪ್ರಯತ್ನಗಳ ಬಗ್ಗೆಯೂ ಹೇಳುತ್ತೇವೆ. ಏಕೆಂದರೆ ನಮಗೂ ಆ ಸಮಸ್ಯೆಗೂ ಸಂಬಂಧವಿಲ್ಲ. ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ನಮಗೆ ನಷ್ಟವೇನಿಲ್ಲ. ನಾವು ಸಲಹೆಯನ್ನಷ್ಟೆ ಕೊಡುತ್ತಿದ್ದೇವೆ. ನಮಗೆ ಖಚಿತವಾಗಿ ಗೊತ್ತಿದೆ, ಹೀಗೆ ಮಾಡಿದರೆ ಹಾಗೆ ಆಗುತ್ತದೆ ಅನ್ನುವುದು ಖಾತ್ರಿ ಇದೆ. ಅದಕ್ಕಾಗಿ ಏನನ್ನಾದರೂ ಮಾಡಲೇಬೇಕು ಅನ್ನುವುದೂ ಗೊತ್ತಿದೆ. ಆದ್ದರಿಂದ ನಮಗೆ ಮತ್ತೊಬ್ಬರ ಸಮಸ್ಯೆಗಳಿಗೆ ಪರಿಹಾರ ಹೇಳುವುದು ಸುಲಭವಾಗುತ್ತದೆ.

ಅದೇ, ನಮ್ಮ ಸಮಸ್ಯೆಗಳತ್ತ ಬನ್ನಿ. ನಾವು ಅದರೊಡನೆ ನಮ್ಮನ್ನು ಗುರುತಿಸಿಕೊಂಡುಬಿಟ್ಟಿರುತ್ತೇವೆ. ನಾವು ಅದರಲ್ಲೇ ಮುಳುಗಿಬಿಟ್ಟಿರುತ್ತೇವೆ. ಆದ್ದರಿಂದ ನಮಗೆ ಹೊರಗೆ ಹೋಗುವ ದಾರಿ ಕಾಣುವುದಿಲ್ಲ. ಸಮಸ್ಯೆಯನ್ನು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ.

ಇದು ಹೇಗೆಂದರೆ, ಬೆಟ್ಟದ ಸಮೀಪ ಅಥವಾ ಬೆಟ್ಟ ಹತ್ತುತ್ತಾ ಇರುವ ಹಾಗೆ. ಸಮುದ್ರದಲ್ಲಿ ಈಜುತ್ತಾ ಇರುವ ಹಾಗೆ.

ದೂರದಿಂದ ನೋಡಿದರೆ ಸಮುದ್ರದ ವಿಸ್ತಾರ ಕಾಣುತ್ತದೆ. ದೂರದಿಂದ ನೋಡಿದರೆ ಬೆಟ್ಟದ ಗಾತ್ರ ತಿಳಿಯುತ್ತದೆ. ಹತ್ತಿರ ಹೋದಂತೆಲ್ಲ, ಅದರ ಮೇಲೇರುತ್ತ ಹೋದಂತೆಲ್ಲ, ನಾವೂ ಬೆಟ್ಟದ ಭಾಗವೇ ಆಗಿಬಿಡುತ್ತೇವೆ. ನಮಗೆ ಅದರ ಅಗಾಧ ವಿಸ್ತಾರ ಕಾಣುವುದಿಲ್ಲ. ಅದರ ಆಕಾರ ಕಾಣುವುದಿಲ್ಲ. ಅವು ಕಾಣಬೇಕು ಎಂದರೆ ಕೆಳಗಿಳಿದು, ದೂರ ನಿಂತು ಅಥವಾ ಹೊರಗೆ ನಿಂತೇ ನೋಡಬೇಕು.

ಸಮಸ್ಯೆಗಳೂ ಹಾಗೆಯೇ. ನಾವು ಅದರೊಳಗೆ ಇಳಿದುಬಿಟ್ಟರೆ ಅದರ ವ್ಯಾಪ್ತಿ ನಮಗೆ ತಿಳಿಯುವುದಿಲ್ಲ. ಅದನ್ನು ಹೊರಹಾಕುವ ಧಾವಂತದಲ್ಲಿ ಮತ್ತೇನನ್ನಾದರೂ ಕಳೆದುಕೊಳ್ಳುತ್ತೇವೆಯೋ ಅನ್ನುವ ಚಿಂತೆ ನಮ್ಮನ್ನು ಕಾಡತೊಡಗುತ್ತದೆ.

ಆದ್ದರಿಂದ, ಸಮಸ್ಯೆಯ ಹೊರಗೆ ನಿಂತು ನೋಡಿ. ನಿಮ್ಮದೇ ಸಮಸ್ಯೆಯನ್ನು ಮತ್ಯಾರದೋ ಆಗಿ ನೋಡಿ. ಅವರು ನಿಮ್ಮ ಬಳಿ ಬಂದು ಅದನ್ನು ಹೇಳಿಕೊಂಡಿದ್ದರೆ, ನೀವು ಏನು ಉತ್ತರ ಕೊಡುತ್ತಿದ್ದಿರಿ? ಯೋಚಿಸಿ… ಅದರಂತೆಯೇ ಮಾಡಿ. ಏನನ್ನಾದರು ಪಡೆಯಲು ಮಾತ್ರವಲ್ಲ, ಏನನ್ನಾದರೂ ತ್ಯಜಿಸಲು ಕೂಡಾ ನಾವು ಮತ್ತೊಂದನ್ನು ಕಳೆದುಕೊಳ್ಳಲೇಬೇಕು. ಆದ್ದರಿಂದ, ಪರಿಹಾರದತ್ತ ಗಮನವಿಟ್ಟು, ಚಿಕ್ಕಪುಟ್ಟ ನಷ್ಟಗಳನ್ನು ಕಡೆಗಣಿಸಿ, ಧೈರ್ಯದಿಂದ ಮುನ್ನಡೆಯಿರಿ.

Leave a Reply