ವರ್ಷಕ್ಕೊಮ್ಮೆ
ನಗರಕ್ಕೆ ಬಂದು ಹೋಗುತ್ತಿದ್ದ ಸನ್ಯಾಸಿಯೊಬ್ಬ
ಮುಂದೆ ಬಂದು ಸುಖದ ಬಗ್ಗೆ ಅಭಿಪ್ರಾಯ ಕೇಳಿದ.
ಅವನು ಸುಖದ ವಿಷಯ ಮಾತನಾಡತೊಡಗಿದ.
ಸುಖ, ಸ್ವಾತಂತ್ರ್ಯದ ಹಾಡು,
ಆದರೆ, ಅದೇ ಸ್ವಾತಂತ್ರ್ಯವಲ್ಲ.
ಸುಖ, ನಿಮ್ಮ ಬಯಕೆಗಳ ಅರಳುವಿಕೆ.
ಆದರೆ ಬಯಕೆಗಳ ಫಲವಲ್ಲ.
ಸುಖ, ಆಳ ಎತ್ತರವನ್ನು ಕೂಗಿ ಕರೆಯುವ ಛಂದ,
ಆದರೆ, ಅದೇ ಆಳ, ಅದೇ ಎತ್ತರವಲ್ಲ.
ಸುಖ, ರೆಕ್ಕೆ ಬಿಚ್ಚುತ್ತಿರುವ ಪಂಜರದ ಹಕ್ಕಿ,
ಆದರೆ, ಅದು ಸುತ್ತುವರೆದ ಅವಕಾಶವಲ್ಲ.
ಹೌದು. ಸುಖ, ಸ್ವಾತಂತ್ರ್ಯದ ಹಾಡು,
ಇದು ಖಡಾ ಖಂಡಿತ ಸತ್ಯ.
ಈ ಹಾಡನ್ನು ನೀವು
ಎದೆ ತುಂಬಿ ಹಾಡುವುದಾದರೆ
ನನಗೆ ಖುಶಿ ;
ಆದರೆ ಈ ಹಾಡಿನಲ್ಲೇ
ನೀವು ಕಳೆದು ಹೋಗುವುದು
ನನ್ನ ಬಯಕೆಯಲ್ಲ.
ನಿಮ್ಮಲ್ಲಿ ಕೆಲ ಹರೆಯದವರಿಗೆ
ಸುಖವೇ ಸರ್ವಸ್ವ,
ಅಂಥವರನ್ನು ಆಡಿಕೊಳ್ಳಲಾಗುತ್ತದೆ
ಟೀಕಿಸಲಾಗುತ್ತದೆ.
ನಾನು ಹಾಗೆಲ್ಲ
ಟೀಕಿಸುವುದಿಲ್ಲ, ಆಡಿಕೊಳ್ಳುವುದಿಲ್ಲ.
ಬದಲಾಗಿ ಅವರು
ಸುಖವನ್ನು ಶೋಧಿಸಬೇಕೆಂದು ಬಯಸುತ್ತೇನೆ.
ಆಗ ಅವರಿಗೆ, ಸುಖ ಸಿಗಬಹುದಾದರೂ
ಸಿಗುವುದು ಸುಖ ಒಬ್ಬಳೇ ಅಲ್ಲ;
ಜೊತೆಗೆ ಅವಳ ಸಪ್ತ ಸಹೋದರಿಯರು ಕೂಡ,
ಮತ್ತು ಆ ಕೊನೆಯ ತಂಗಿ
ಸುಖಕ್ಕಿಂತಲೂ ಸುಂದರಿ.
ಬೇರಿಗಾಗಿ ನೆಲ ಅಗೆಯುತ್ತಿದ್ದ ಮನುಷ್ಯನಿಗೆ
ನಿಧಿ ಸಿಕ್ಕ ಕಥೆಯನ್ನು ನೀವು ಕೇಳಿರಬೇಕಲ್ಲ?
ಮತ್ತು ನಿಮ್ಮ ಕೆಲ ಹಿರಿಯರು,
ಸುಖಗಳನ್ನು
ಕುಡಿತದ ಅಮಲಿನಲ್ಲಿ ಮಾಡಿದ ತಪ್ಪುಗಳಂತೆ
ವಿಷಾದದಿಂದ ನೆನಪು ಮಾಡಿಕೊಳ್ಳುತ್ತಾರೆ.
ಆದರೆ ಈ ವಿಷಾದ
ಮನಸ್ಸನ್ನು ಆವರಿಸೊಂಡಿರುವ ಮಬ್ಬು,
ತಪ್ಪಿಗೆ ತಕ್ಕ ಶಿಕ್ಷೆಯಲ್ಲ.
ಆದರೆ ಅವರು ಸುಖಗಳನ್ನು ,
ಬೇಸಿಗೆಯ ಸುಗ್ಗಿಯನ್ನು ನೆನಪುಮಾಡಿಕೊಂಡಂತೆ
ಕೃತಜ್ಞತೆಯಿಂದ ಸ್ಮರಿಸಬೇಕು.
ಆದರೂ ಅವರಿಗೆ
ವಿಷಾದವೇ ಹಿತವೆನಿಸುವುದಾದಲ್ಲಿ
ಆ ಹಿತ ಅವರದಾಗಲಿ.
ನಿಮ್ಮಲ್ಲಿ ಕೆಲವರು
ಸುಖ ಹುಡುಕಿಕೊಂಡು ಹೋಗುವಷ್ಟು ಹರೆಯದವರಲ್ಲ,
ನೆನಪು ಮಾಡಿಕೊಳ್ಳುತ್ತ ಕುಳಿತು ಬಿಡುವಷ್ಟು
ವಯಸ್ಸಾದವರೂ ಅಲ್ಲ ;
ಅವರು,
ಹುಡುಕುವ ಮತ್ತು ನೆನಪಿನ ಭಯದಲ್ಲಿ,
ತಮ್ಮ ಚೇತನವನ್ನು ನಿರ್ಲಕ್ಷಿಸಬೇಕಾದ
ಅಥವಾ ಅದರ ವಿರುದ್ಧ ಬಂಡೇಳಬೇಕಾದ
ಇಕ್ಕಟ್ಟಿಗೆ ಸಿಲುಕಲಾರದೇ
ಎಲ್ಲ ಸುಖಗಳಿಗೂ ಬೆನ್ನು ಮಾಡಿಬಿಡುತ್ತಾರೆ.
ಆದರೆ ಹೀಗೆ ಸುಖಗಳಿಗೆ ಬೆನ್ನು ಮಾಡುವುದರಲ್ಲೂ
ಅವರಿಗೊಂದು ಸುಖವಿದೆ.
ಅವರು ನಡುಗುವ ಕೈಗಳಿಂದ
ಬೇರು ಹುಡುಕುತ್ತ, ನೆಲ ಅಗೆಯುತ್ತಿರುವಾಗಲೂ
ನಿಧಿಯನ್ನೇ ಕಾಣುತ್ತಾರೆ.
ಆದರೆ ಹೇಳಿ, ಯಾರವರು
ತನ್ನ ಚೇತನದ ವಿರುದ್ಧವೇ ಬಂಡೇಳುವಂಥವರು?
ಕೋಗಿಲೆಯ ಹಾಡು
ರಾತ್ರಿಯ ಪ್ರಶಾಂತತೆಯನ್ನೂ ಹಾಳು ಮಾಡುವುದುಂಟೆ?
ಮಿಂಚು ಹುಳು, ನಕ್ಷತ್ರಗಳನ್ನೂ ಅಣಕಿಸುವುದು ಸಾಧ್ಯವೆ?
ಹಾಗೆಯೇ ನಿಮ್ಮ ಜ್ವಾಲೆ, ನಿಮ್ಮ ಹೊಗೆ
ಗಾಳಿಗೆ ಭಾರವಾಗಬಲ್ಲವೆ?
ಚೇತನವೊಂದು ಸುಶಾಂತ ಸರೋವರ,
ಕೋಲೊಂದರಿಂದ
ಆ ಪ್ರಶಾಂತತೆಯನ್ನು ಹಾಳು ಮಾಡಬಹುದೆಂದು
ನಿಮಗೆ ಅನಿಸುತ್ತದೆಯೆ?
ಹೀಗೆ ಬಹುತೇಕ ನೀವು
ಸುಖಗಳನ್ನು ನಿರಾಕರಿಸುವ ಸಮಯದಲ್ಲೇ
ನಿಮ್ಮ ಅಸ್ತಿತ್ವದ ಬಿರುಕುಗಳಲ್ಲಿ
ಬಯಕೆಗಳನ್ನು ಕೊಡಿಡುತ್ತೀರಿ.
ಇಂದು ನಿರಾಕರಿಸುತ್ತಿರುವುದೇ
ನಾಳೆ ನಮಗಾಗಿ ಕಾಯುತ್ತಿರಬಹುದು,
ಯಾರಿಗೆ ಗೊತ್ತು.
ನಿಮ್ಮ ದೇಹಕ್ಕೆ, ಅದರ ಪರಂಪರೆ ಮತ್ತು
ಅಗತ್ಯದ ಅವಶ್ಯಕತೆಗಳ ಬಗ್ಗೆ ಚೆನ್ನಾಗಿ ಗೊತ್ತು,
ಹಾಗೆಲ್ಲ ಸುಮ್ಮನೇ ಮೋಸ ಮಾಡಲಿಕ್ಕಾಗುವುದಿಲ್ಲ.
ನಿಮ್ಮ ದೇಹ, ನಿಮ್ಮ ಆತ್ಮದ ತಂತಿವಾದ್ಯ,
ಆ ವಾದ್ಯದಿಂದ ಮಧುರ ಧ್ವನಿ ಹೊರಡಿಸುವುದೂ
ಗೊಂದಲದ ಸ್ವರಗಳನ್ನು ಹೊಮ್ಮಿಸುವುದೂ
ಎರಡೂ ನಿಮ್ಮ ಕೈಯಲ್ಲೇ ಇದೆ.
ಈಗ ನಿಮ್ಮ ಹೃದಯದಲ್ಲೇ ಕೇಳಿಕೊಳ್ಳಿ
“ ಒಳ್ಳೆಯ ಸುಖ, ಒಳ್ಳೆಯದಲ್ಲದ ಸುಖಗಳನ್ನು
ಬೇರೆ ಮಾಡುವುದು ಹೇಗೆ ? “
ನಿಮ್ಮ ಹೊಲಗಳಿಗೆ, ತೋಟಗಳಿಗೆ ಹೋಗಿ ನೋಡಿ
ನಿಮಗೇ ಅರಿವಾಗುತ್ತದೆ
ದುಂಬಿಗೆ ಹೂವಿನಿಂದ ಜೇನು ಹೀರುವುದೇ ಸುಖ
ಹೂವಿಗೆ, ದುಂಬಿಗಾಗಿ ಜೇನು ತುಂಬಿಕೊಳ್ಳುವುದೇ ಸುಖ.
ದುಂಬಿಗೆ ಹೂವು, ಬದುಕಿನ ಕಾರಂಜಿ
ಹೂವಿಗೆ ದುಂಬಿ, ಪ್ರೇಮದ ಹರಿಕಾರ.
ಹೂವು, ದುಂಬಿ ಎರಡಕ್ಕೂ
ಕೊಡುವುದು ಮತ್ತು ಪಡೆದುಕೊಳ್ಳುವುದು ಎರಡೂ ಪರಮ ಅವಶ್ಯಕತೆ ಮತ್ತು
ಭಾವ ಪರವಶತೆಯ ವಿಷಯಗಳು.
ಆರ್ಫಲೀಸ್’ನ ಮಹಾಜನಗಳೇ,
ಹೂವಿನಂತೆ, ದುಂಬಿಯಂತೆ ಸುಖಗಳನ್ನು ಕಂಡುಕೊಳ್ಳಿ.
ಮುಂದುವರೆಯುತ್ತದೆ……….
ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.
ಅನುವಾದಕರ ಕುರಿತು: ಚಿದಂಬರ ನರೇಂದ್ರಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.