ಮೂರ್ತಿಯಂತೆ ಮೌನವಾಗುವುದು ಎಂದರೆ ಕೇವಲ ಸಾಕ್ಷಿಯಾಗಿರುವುದು ಎಂದು. ಇದು ಕ್ರಿಯೆಯಲ್ಲ ಪ್ರತಿಕ್ರಿಯೆಯೂ ಅಲ್ಲ ನಿರ್ಲಿಪ್ತ ಅಥವಾ ಕೇವಲ ಅಸ್ತಿತ್ವದಲ್ಲಿರುವುದು. ಈ ಸಾಕ್ಷೀಭಾವವೇ ಪರಮ ಅಸ್ತಿತ್ವ. ಇದುವೇ ಭಗವಂತ. ~ ಅಪ್ರಮೇಯ
ದೇವರ ಮೂರ್ತಿಗಳ ಮೂಲ ಆಶಯವೇ ‘ಮೌನದ ಅನುಸಂಧಾನ’. ಮೌನಕ್ಕೆ ಇನ್ನೊಂದು ಹೆಸರೇ ಮೂರ್ತಿ. ದೇವರ ಮೂರ್ತಿಯ ಮುಂದೆ ಕುಳಿತು ಏನನ್ನೂ ಬೇಡಿಕೊಳ್ಳಬೇಕಾಗಿಲ್ಲ ಸುಮ್ಮನೆ ಕುಳಿತುಕೊಂಡರೆ ಸಾಕು.
ಹೀಗೆ ಮೂರ್ತಿಯೊಂದಿಗಿನ ಮೌನದ ಅನುಸಂಧಾನದಿಂದ ಚಿತ್ತವು ಶುದ್ಧವಾಗಿ ತಾನಾಗೇ ಧ್ಯಾನಾವಸ್ಥೆಗೆ ಕರೆದೊಯ್ಯುತ್ತದೆ. ಇದನ್ನು ಎಂದಾದರೂ ಗಮನಿಸಿದ್ದಿರಾ ? ಬಹುತೇಕವಾಗಿ ಇಲ್ಲ, ಅಲ್ಲವೆ? ಏಕೆಂದರೆ ನಾವು ದೇವರ ಮೂರ್ತಿಯೆದುರು ಕುಳಿತಾಕ್ಷಣ ವಿವಿಧ ಬೇಡಿಕೆಗಳನ್ನು ಮುಂದಿಡುವುದರಲ್ಲೇ ಮಗ್ನರಾಗಿರುತ್ತೇವೆ. ಹಾಗಿಲ್ಲದೆ, ಮೂರ್ತಿಯಲ್ಲೇ ಮನಸ್ಸು ನೆಟ್ಟು ಕುಳಿತುಕೊಳ್ಳಿ. ಮೌನದ ಅನುಸಂಧಾನ ತಾನೇ ತಾನಾಗಿ ನಡೆಯುವುದನ್ನು ನೋಡುವಿರಿ.
ನ ತತ್ರ ಚಕ್ಷುರ್ಗಚ್ಛತಿ ನ ವಾಗ್ಗಚ್ಛತಿ ನೋ ಮನಃ |
ನ ವಿದ್ಮೋ ವಿಜಾನೀಮೋ ಯಥೈತದನುಶಿಷ್ಯಾತ್ ||
(ಕೇನೋಪನಿಷತ್ 1.1.3)
“ಅಲ್ಲಿಗೆ [ಬ್ರಹ್ಮತತ್ವಕ್ಕೆ] ಕಣ್ಣು, ಕಿವಿ, ಮಾತು, ಮನಸ್ಸು ಇವ್ಯಾವುದೂ ತಲುಪಲು ಸಾಧ್ಯವಿಲ್ಲ” ಅನ್ನುತ್ತದೆ ಕೇನೋಪನಿಷತ್ತು. ಅಂದಮೇಲೆ ನಮ್ಮ ಅಗಣಿತ ಬೇಡಿಕೆಗಳೆಲ್ಲಿ ತಲುಪಿಯಾವು ? ಅದೆಂದಿಗೂ ಸಾಧ್ಯವಾಗದು. ದೇವರು ಕಷ್ಟಗಳನ್ನು ಪರಿಹರಿಸುವುದಿಲ್ಲ, ಸುಖವನ್ನೂ ದಯಾಪಾಲಿಸುವುದಿಲ್ಲ. ಕಷ್ಟ-ನಷ್ಟ, ಸುಖ-ದುಃಖ ಇವೆಲ್ಲವುದಕ್ಕೂ ನಮ್ಮ ಕರ್ಮಫಲವೆ ಕಾರಣವಾಗಿರುತ್ತದೆ ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.
ಅಲಂಕಾರ, ಧೂಪ, ದೀಪ, ಹೂಮಾಲೆ ಇವೆಲ್ಲವೂ ಮೂರ್ತಿಯನ್ನು ದರ್ಶಿಸಿದ ಭಕ್ತರ ಮನದಲ್ಲಿ ದೈವತ್ವ ಭಾವವನ್ನು ಮೂಡಿಸುವುದಕ್ಕಾಗಿ ಇವೆ. ಅಹಂಕಾರವನ್ನು ಕೊಲ್ಲುವುದಕ್ಕಾಗಿ ಇವೆ; ಮೌನವೇ ದೈವ ಎಂದು ಸಾರುವುದಕ್ಕಾಗಿ ಇವೆ ಅಷ್ಟೇ.
ಮೂರ್ತಿಗಳಿಗೆ ಮನುಷ್ಯರ ರೂಪ ಕೊಟ್ಟದ್ದು ಮನುಷ್ಯರಲ್ಲಿರುವ ಆತ್ಮವೇ ದೇವರು ಎನ್ನುವ ಕಾರಣಕ್ಕಾಗಿಯೇ ಹೊರತು ಮತ್ತಿನ್ಯಾವುದಕ್ಕೂ ಅಲ್ಲ. ಮನುಷ್ಯ ತನ್ನ ಆತ್ಮದ/ಮೌನದ ಅನುಸಂಧಾನ ಮಾಡಿಬೇಕೆನ್ನುವುದು ಅದರಲ್ಲಡಗಿರುವ ಗುಟ್ಟು. ಉದಾಹರಣೆಗೆ, ಸಾತಂತ್ರ್ಯಕ್ಕಾಗಿ ಹೋರಾಡಿ ಸತ್ತ ಸ್ವಾತಂತ್ರ್ಯ ಹೋರಾಟಗಾರನ ಮೂರ್ತಿಯೊಂದರ ಮುಂದೆ ನಿಂತಾಗ ನಮಗರಿವಿಲ್ಲದಂತೆಯೇ ರಾಷ್ಟ್ರಾಭಿಮಾನ ಉಕ್ಕುತ್ತದೆ ಏಕೆಂದರೆ ಆ ಮೂರ್ತಿಯಲ್ಲಿ ರಾಷ್ಟ್ರಾಭಿಮಾನದ ಭಾವ ತುಂಬಿದೆ ಅದು ನಮ್ಮಲ್ಲಿರುವ ರಾಷ್ಟ್ರಾ ಭಿಮಾನವನ್ನು ಪ್ರಚೋಧಿಸುತ್ತದೆ. ಹಾಗೆಯೇ ದೇವಾಲಯಗಳಲ್ಲಿ ದೇವರ ಮೂರ್ತಿಗೆ ದೈವತ್ವದ ಭಾವವನ್ನು ತುಂಬಲಾಗುತ್ತದೆ.
ಮನುಷ್ಯ ಯಾವುದೇ ಮನಸ್ಥಿತಿಯಲ್ಲಿರಲಿ, ದೇವರ ಮೂರ್ತಿಯ ಎದುರು ನಿಂತಾಗ ಅವನ ಅಹಂಕಾರ ಇಳಿದುಹೋಗುತ್ತದೆ.
ಮನುಷ್ಯ ಮೂರ್ತಿಯಂತೆ ಏಂದು ಮೌನವಾಗಿಬಿಡುತ್ತಾನೋ ಅಂದು ಅವನು ದೇವರೇ ಆಗಿಬಿಟ್ಟಿರುತ್ತಾನೆ.
ಈ ಮಾತು ಕೆಲವರಲ್ಲಿ ಕಸಿವಿಸಿಯನ್ನುಂಟುಮಾಡುತ್ತದೆ ಅವರು ಕೇಳುತ್ತಾರೆ ಮೂರ್ತಿಯಂತೆ ಮೌನವಾಗುವುದು ಎಂದರೆ ಜಡವಾಗುವುದಾ ? ಎಂದು
ಅದು ಹಾಗಲ್ಲ. ಕ್ರಿಯೆ-ಪ್ರತಿಕ್ರಿಯೆ ಇಲ್ಲದ್ದನ್ನ ನಾವು ಜಡವೆಂದು ಘೋಷಿಸುತ್ತೇವೆ ಅಸಲಿಗೆ ಅದು ಜಡವಲ್ಲ ಅದು ಪೂರ್ಣವಾಗಿಯೇ ಇದೆ. ಜಡವಾಗಿರುವುದು ನಮ್ಮ ದೃಷ್ಟಿಕೋನ…. ಜಡದೃಷ್ಟಿಕೋನ. ಮೊದಲು, ಎಲ್ಲಾ ವಸ್ತುಗಳ ಮೂಲ ಚೇತನವೇ ಆಗಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮೂರ್ತಿಯಂತೆ ಮೌನವಾಗುವುದು ಎಂದರೆ ಕೇವಲ ಸಾಕ್ಷಿಯಾಗಿರುವುದು ಎಂದು. ಇದು ಕ್ರಿಯೆಯಲ್ಲ ಪ್ರತಿಕ್ರಿಯೆಯೂ ಅಲ್ಲ ನಿರ್ಲಿಪ್ತ ಅಥವಾ ಕೇವಲ ಅಸ್ತಿತ್ವದಲ್ಲಿರುವುದು. ಈ ಸಾಕ್ಷೀಭಾವವೇ ಪರಮ ಅಸ್ತಿತ್ವ. ಇದುವೇ ಭಗವಂತ.