ಜೀವನ ಶೈಲಿಯನ್ನು ಉತ್ತಮಪಡಿಸಲೆಂದೇ ಹಲವು ಬಗೆಯ ಧ್ಯಾನಗಳನ್ನು ರೂಪಿಸಲಾಗಿದೆ. ಈ ಸಂಚಿಕೆಯಲ್ಲಿ, ಕಡಿಮೆ ಅವಧಿಯಲ್ಲಿ ಯಾವ ಪೂರ್ವಸಿದ್ಧತೆಯನ್ನೂ ಬಯಸದ ‘ಮಿನಿ ಧ್ಯಾನ’ ಬಗೆಗಳನ್ನು ಈ ಸರಣಿಯಲ್ಲಿ ಪರಿಚಯಿಸಲಿದ್ದೇವೆ ~ ಚಿತ್ಕಲಾ
ಧ್ಯಾನ ಮೂಲತಃ ಆಧ್ಯಾತ್ಮಿಕ ಸಂಗತಿಯಾಗಿದ್ದರೂ ಈ ದಿನಗಳಲ್ಲಿ ಜೀವನಶೈಲಿಯಾಗಿ ಚಾಲ್ತಿಯಲ್ಲಿರುವುದೇ ಹೆಚ್ಚು. ಒತ್ತಡದ ದಿನಚರಿಯನ್ನು ನಿಭಾಯಿಸಲು, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು, ವ್ಯಕ್ತಿತ್ವ ವಿಕಸನಕ್ಕಾಗಿ – ಹೀಗೆ ಹಲವು ಬಗೆಯಲ್ಲಿ ಧ್ಯಾನ ಸಹಕಾರಿ.
ವ್ಯಕ್ತಿತ್ವ ವಿಕಸನವಾಗದೆ ಆಧ್ಯಾತ್ಮಿಕ ವಿಕಸನ ಸಾಧ್ಯವಾಗದು ಅನ್ನುವುದು ‘ಅರಳಿಬಳಗ’ದ ನಿಲುವು. ಆದ್ದರಿಂದಲೇ, ಜಾಲತಾಣವು ಮೂಲಭೂತವಾಗಿ ವ್ಯಕ್ತಿತ್ವ ವಿಕಸನ ಮತ್ತು ವೈಯಕ್ತಿಕ ಚಿಂತನೆಗಳಿಗೆ ಹೆಚ್ಚು ಮಹತ್ವ ನೀಡಿದೆ. ಈ ನಿಟ್ಟಿನಲ್ಲಿ, ‘ಮಿನಿ ಧ್ಯಾನ’ ಸರಣಿಯನ್ನು ಪ್ರಕಟಿಸಲಾಗುತ್ತಿದೆ.
ಮೂವತ್ತು ಸೆಕೆಂಡುಗಳ ವಿರಾಮ
ಇದು ಕೆಲಸದ ನಡುವೆಯೇ ನಡೆಸುವ ಧ್ಯಾನ.
ಅದೇನು ಕೆಲಸ ಮಾಡುತ್ತಿದ್ದೀರೋ ಅದನ್ನು ಹಾಗೇ ನಿಲ್ಲಿಸಿ. ಒಮ್ಮೆ ನಿಮ್ಮ ಕೈ- ಕಾಲು – ದೇಹಗಳನ್ನು ನಿಡಿದಾಗಿ ಎಳೆಯಿರಿ (stretch ಮಾಡಿ). ಕಣ್ಣುಗಳನ್ನು ಲಘುವಾಗಿ ಮುಚ್ಚಿ, ದೀರ್ಘವಾಗಿ ಉಸಿರೆಳೆದುಕೊಂಡು ನಿಧಾನವಾಗಿ ಹೊರಗೆ ತಳ್ಳಿ. ಮೂವತ್ತು ಸೆಕೆಂಡಿಗೆ ಕೇವಲ ಎರಡು ಅಥವಾ ಮೂರು ಬಾರಿ ಇದು ನಡೆಸಬೇಕು.
ಕೆಲಸದ ನಡುವೆ, ಎರಡು – ಮೂರು ಗಂಟೆಗಳಿಗೊಮ್ಮೆ ಇದನ್ನು ನಡೆಸಿ. ದೇಹ – ಮನಸ್ಸುಗಳು ತೀವ್ರ ಒತ್ತಡದಲ್ಲಿರುವಾಗ ಈ ಧ್ಯಾನ ಪರಿಣಾಮಕಾರಿ.
ಆದರೆ ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಬರೀ ಉಸಿರೆಳೆದುಕೊಂಡು ಹೊರಬಿಡುವ ಕ್ರಿಯೆ ವ್ಯಾಯಾನವೂ ಆಗುವಂಥದ್ದು. ಇದು ‘ಧ್ಯಾನ’ವಾಗಬೇಕಾದರೆ, ಆ ಮೂವತ್ತು ಸೆಕೆಂಡುಗಳ ಕಾಲ ನೀವು ಬೇರೆ ಯಾವ ಆಲೋಚನೆಯನ್ನೂ ಮಾಡಬಾರದು. ದೈಹಿಕವಾಗಿಯೂ ಯಾವ ಕ್ರಿಯೆಯನ್ನೂ ಮಾಡುತ್ತಿರಬಾರದು. ಸಂಪೂರ್ಣ ಖಾಲಿಯಾಗಿರಬೇಕು.
ಹತ್ತು ನಿಮಿಷದ ಶವಾಸನ
ಇದು ವಿಶೇಷವಾಗಿ ಗೃಹಿಣಿಯರಿಗೆ. ಮನೆಯಲ್ಲೇ ನಾಲ್ಕು ಗೋಡೆಗಳ ನಡುವೆ ಕೆಲಸ ಮಾಡುತ್ತಿರುವುದು ಸುಲಭದ ಮಾತಲ್ಲ. ದಿನವೊಂದರಲ್ಲಿ ಹಲವು ಬಗೆಯ ಕೆಲಸಗಳನ್ನು ಗೃಹಿಣಿಯರು ನಿಭಾಯಿಸುತ್ತಾರೆ. ಸಹಜವಾಗಿಯೇ ಇದು ಒತ್ತಡವನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಪ್ರತಿ ದಿನವೂ ಅದದೇ ಕೆಲಸ ಮಾಡುತ್ತಾ ಏಕತಾನತೆ ಕಾಡತೊಡಗುತ್ತದೆ.
ಹೀಗೆ ಮಾಡಿ. ಬೆಳಗಿನ ಕೆಲಸಗಳೆಲ್ಲ ಮುಗಿದ ಮೇಲೆ, ಮಧ್ಯಾಹ್ನದ ಉಟಕ್ಕೆ ಮೊದಲು ಹತ್ತು ನಿಮಿಷ ಶವಾಸನ ಮಾಡಿ. ಕೆಲವರು ಊಟದ ನಂತರ ದಣಿವಾರಿಸಿಕೊಳ್ಳಲು ನಿದ್ರೆ ಮಾಡಿಬಿಡುತ್ತಾರೆ. ಮಧ್ಯಾಹ್ನದ ನಿದ್ರೆ ಮೈತೂಕ ಹೆಚ್ಚಿಸುತ್ತದೆ ಮಾತ್ರವಲ್ಲ, ಒಂದು ರೀತಿಯ ಜಡ ಆವರಿಸುವಂತೆಯೂ ಮಾಡುತ್ತದೆ.
ಆದ್ದರಿಂದ, ಊಟಕ್ಕೆ ಮೊದಲು ಹತ್ತು ನಿಮಿಷ ಬಿಡುವು ಮಾಡಿಕೊಳ್ಳಿ. ಚಾಪೆಯ ಮೇಲೆ (ದಿಂಬು ಇಡದೆ) ಬೆನ್ನು ನೆಲಕ್ಕೆ ತಾಕಿಸಿ ನೇರವಾಗಿ ಮಲಗಿ. ಉಸಿರು ನಿಧಾನಗತಿಯಲ್ಲಿ ಇರಬೇಕು. ಕೈಗಳು ಅಂಗಾತ ಚಾಚಿಕೊಂಡಿರಬೇಕು. ಕಾಲುಗಳೂ ನೇರವಾಗಿರಬೇಕು. ಆದರೆ ಮೈ ಬಿಗಿಹಿಡಿದು ಮಲಗಬೇಡಿ. ಪ್ರತಿಯೊಂದು ಅಂಗಾಂಗವನ್ನೂ ಸಡಿಲ ಬಿಡಿ. ಸಹಜವಾಗಿರಿ. ಆಲೋಚನೆಗಳಿಗೆ ಗೇಟ್ ಪಾಸ್ ಕೊಟ್ಟು, ಮನಸಿನ ಕದ ಮುಚ್ಚಿ ಬೀಗ ಹಾಕಿ.
ನಿಧಾನವಾಗಿ ಉಸಿರಾಡಿ. ಕಣ್ಣುಗಳು ಲಘುವಾಗಿ ಮುಚ್ಚಿರಲಿ. ಕೆಲವೊಮ್ಮೆ ನಿದ್ರೆಗೆ ಜಾರಿಬಿಡುತ್ತೀರಿ. ಅಡ್ಡಿ ಇಲ್ಲ. ಹತ್ತು ನಿಮಿಷ ಕಳೆದು ಏಳುತ್ತೇನೆ ಎಂಬ ದೃಢ ನಿರ್ಧಾರದೊಡನೆ ಶವಾಸನ ಆರಂಭ ಮಾಡಿ. ಆಗ, ದೇಹದ ಜೈವಿಕ ಗಡಿಯಾರ ನೀವಾಗಿಯೇ ಹತ್ತು ನಿಮಿಷ ಕಳೆದು ಏಳುವಂತೆ ಮಾಡುತ್ತದೆ.
ಈ ಹತ್ತು ನಿಮಿಷಗಳ ಶವಾಸನ ನಿಮ್ಮ ದಣಿವು ಕಳೆದು ಹುರುಪು ನೀಡುತ್ತದೆ. ಮಾತ್ರವಲ್ಲ, ಊಟದ ನಂತರ ನಿದ್ದೆ ಮಾಡುವುದನ್ನೂ ತಪ್ಪಿಸುತ್ತದೆ.
ಹೊರಗೆ ನಿಲ್ಲಿ
ಇದು ಯಾರು ಬೇಕಾದರೂ ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಮಾಡಬಹುದಾದ ಧ್ಯಾನ: ಹೊರಗೆ ನಿಲ್ಲುವುದು!
ಇಲ್ಲಿ ಹೊರಗೆ ನಿಲ್ಲುವುದು ಅಂದರೆ ಅಕ್ಷರಶಃ ಕಟ್ಟಡದಿಂದ ಹೊರಗೆ ಹೋಗಿ ನಿಲ್ಲುವುದಲ್ಲ. ನಿಮ್ಮಿಂದ ನೀವು ಹೊರಗೆ ನಿಲ್ಲುವುದು. ನಿಮ್ಮ ಮನಸ್ಸಿನಿಂದ ಹೊರಗೆ ನಿಂತು, ಒಳಗೇನು ನಡೆಯುತ್ತಿದೆ ನೋಡುವುದು. ಮತ್ತೇನೂ ಮಾಡಬೇಕಿಲ್ಲ… ಸುಮ್ಮನೆ ನೋಡುವುದು, ಅಷ್ಟೇ.
ಮನಸಿನಲ್ಲಿ ಹಲವು ಯೋಚನೆಗಳು ಒಟ್ಟಿಗೇ ನುಗ್ಗಿದಾಗ, ಆಯ್ಕೆಯ ಗೊಂದಲ ಕಾಡುವಾಗ, ಸಮಸ್ಯೆಯೇ ಅರ್ಥವಾಗದೆ ಹೋದಾಗ ನೀವು ಮಾಡಬೇಕಾದುದಿಷ್ಟೇ…. ಒಳಗೆ ಯಾವುದೆಲ್ಲ ಯೋಚನೆಗಳು ದಾಳಿ ಇಟ್ಟಿವೆ ಎಂದು ಹೊರಗೆ ನಿಂತು ನೋಡುವುದು…. ವಿಂಡೋ ಶಾಪಿಂಗ್ ಮಾಡುವಂತೆ ಸುಮ್ಮನೆ ನೋಡುವುದು. ಹೀಗೆ ಐದು ನಿಮಿಷ ನೀವು ನಿಮ್ಮೊಳಗಿನಿಂದ ಸಂಪೂರ್ಣ ಡಿಸ್’ಕನೆಕ್ಟ್ ಆಗಿ ನಿಮ್ಮನ್ನು ನೋಡಿಕೊಳ್ಳಿ. ಅದರೊಡನೆ ಗುರುತಿಸಿಕೊಳ್ಳದೆ ಕೇವಲ ‘ಸಾಕ್ಷಿ’ಯಾಗಿ ನೋಡುತ್ತಿರಿ. ಈ ಸಾಕ್ಷೀಭಾವದಲ್ಲಿ ‘ಧ್ಯಾನ’ ಘಟಿಸುತ್ತಾ ಇರುತ್ತದೆ. ನಿಮಗೆ ಪರಿಹಾರ ದೊರೆಯುವುದೋ ಇಲ್ಲವೋ… ಮನಸಂತೂ ನಿರಾಳವಾಗುತ್ತದೆ.
Wounderfull message,