ಕನ್ನಡಿ ದಿನಕ್ಕೆ ಅದೆಷ್ಟು ನೂರು, ಸಾವಿರ ವಸ್ತು/ವ್ಯಕ್ತಿಗಳನ್ನು ಪ್ರತಿಬಿಂಬಿಸಿದರೂ ಯಾವ ಬಿಂಬವನ್ನೂ ತನ್ನ ಚೌಕಟ್ಟಿಗೆ ತೂಗು ಹಾಕಿಕೊಂಡು ಚಿತ್ರವಾಗಿ ಉಳಿಸಿಕೊಳ್ಳುವುದಿಲ್ಲ. ಯಾವುದು ಎಷ್ಟು ಹೊತ್ತು ಎದುರಿಗೆ ಇರುತ್ತಾರೋ, ಅಷ್ಟು ಹೊತ್ತೂ ಅವರು ಇರುವಂತೆಯೇ ಗ್ರಹಿಸುವುದು – ತೋರುವುದು. ಅಷ್ಟೇ ಅದರ ಕೆಲಸ ~ ಗಾಯತ್ರಿ
ಈ ದಿನದ Morning Mantra ನಮಗೆ ಸಮಾಜದೊಡನೆ ಬೆರೆಯಲು ಅತ್ಯಂತ ಉಪಯುಕ್ತವಾಗಿರುವಂತದ್ದು. ಆದರೆ, ಅಷ್ಟೇ ಸರಳವೂ ಆಗಿರುವಂಥದ್ದು : “ಕನ್ನಡಿಯಂತೆ ಪ್ರತಿಬಿಂಬಿಸು, ಚೌಕಟ್ಟಿನೊಳಗಿನ ಚಿತ್ರವಾಗಿಸಬೇಡ”!
ಎದ್ದು, ಮುಖ ತೊಳೆದು ಕನ್ನಡಿ ಮುಂದೆ ಅರೆ ಕ್ಷಣವಾದರೂ ನಿಲ್ಲುತ್ತೇವೆ. ಇಲ್ಲವಾದರೆ, ನಿಲ್ಲಿ. ನಿಂತು, ಈ ಮೇಲಿನ ಮಾತನ್ನು ನೆನಪಿಸಿಕೊಳ್ಳಿ.
ಕನ್ನಡಿ ಪ್ರತಿಬಿಂಬಿಸುತ್ತದೆ. ಪ್ರತಿ ಬಿಂಬ ತೋರಲೆಂದೇ ಅದನ್ನು ನಿರ್ಮಿಸಲಾಗಿದೆ. ಗಾಜಿಗೆ ಪಾದರಸದ ಲೇಪ ಹಾಕುವುದರಿಂದ ಅದು ಕನ್ನಡಿಯಾಗುತ್ತದೆ. ನಾವು ಕೂಡಾ ವಿವೇಚನೆಯ ಲೇಪವಿರುವ ಕನ್ನಡಿಯಾಗಿ, ನಾವು ಭೇಟಿಯಾಗುವ ಜನರನ್ನು ಅವರು ಇರುವಂತೆಯೇ ಗ್ರಹಿಸಲು ಪ್ರಯತ್ನಿಸಬೇಕು. ಇಲ್ಲವಾದರೆ, ನಾವು ಕೇವಲ ಗಾಜಾಗಿ ಉಳಿಯುತ್ತೇವೆ, ನಮಗೆ ಎದುರಾಗುವ ವ್ಯಕ್ತಿಗಳನ್ನು ಗ್ರಹಿಸಲಾಗದೆ ಹೋಗುತ್ತೇವೆ. ನಮ್ಮ ಉದ್ಯೋಗ ಸ್ಥಳದಲ್ಲಿ, ಉದ್ಯಮದಲ್ಲಿ ಅಥವಾ ಸಂಬಂಧಗಳಲ್ಲಿ, ನಾವು ಯಾರೊಡನೆ ವ್ಯವಹರಿಸುತ್ತೇವೋ ಅವರನ್ನು ಅವರು ಇರುವಂತೆ ಗ್ರಹಿಸುವುದು ಅತ್ಯವಶ್ಯಕ. ಇಲ್ಲವಾದರೆ ನಮ್ಮ ಕೆಲಸಗಳಾಗಲೀ, ಉದ್ದಿಮೆಯಾಗಲೀ ಸುಸೂತ್ರ ನಡೆಯುವುದಿಲ್ಲ. ಸಂಬಂಧಗಳಲ್ಲಿಯಂತೂ ನಾವು ಬಂಧುಗಳನ್ನು ನಮ್ಮ ವಿವೇಚನೆಯ ಲೇಪದ ಪರದೆಯಲ್ಲಿ ಗ್ರಹಿಸದೆ ಹೋದರೆ, ಸಂಬಂಧವೇ ಕಡಿದುಬೀಳುವ ಸಾಧ್ಯತೆಯೂ ಇರುತ್ತದೆ.
ಇಲ್ಲಿ ಇನ್ನೊಂದು ವಿಷಯವಿದೆ.
ನಾವು ಪ್ರತಿಯೊಬ್ಬರನ್ನೂ, ಪ್ರತಿಯೊಂದನ್ನೂ ಅವರು/ ಅದು ಇರುವಂತೆಯೇ ಗ್ರಹಿಸಬೇಕು. ಹೇಗೆ ಕನ್ನಡಿ ಎಲ್ಲವನ್ನೂ ಅವು ಇರುವಂತೆಯೇ ಪ್ರತಿಬಿಂಬಿಸುತ್ತದೆಯೋ, ಹಾಗೆ.
ಆದರೆ ಕನ್ನಡಿ ದಿನಕ್ಕೆ ಅದೆಷ್ಟು ನೂರು, ಸಾವಿರ ವಸ್ತು/ವ್ಯಕ್ತಿಗಳನ್ನು ಪ್ರತಿಬಿಂಬಿಸಿದರೂ ಯಾವ ಬಿಂಬವನ್ನೂ ತನ್ನ ಚೌಕಟ್ಟಿಗೆ ತೂಗು ಹಾಕಿಕೊಂಡು ಚಿತ್ರವಾಗಿ ಉಳಿಸಿಕೊಳ್ಳುವುದಿಲ್ಲ. ಯಾವುದು ಎಷ್ಟು ಹೊತ್ತು ಎದುರಿಗೆ ಇರುತ್ತಾರೋ, ಅಷ್ಟು ಹೊತ್ತೂ ಅವರು ಇರುವಂತೆಯೇ ಗ್ರಹಿಸುವುದು – ತೋರುವುದು. ಅಷ್ಟೇ ಅದರ ಕೆಲಸ.
ನಾವು ಕೂಡಾ ಅದನ್ನು ಪಾಲಿಸಬೇಕು. ನಮ್ ಸಂಬಂಧಗಳು, ನಮ್ಮ ವಸ್ತುಗಳು ಎಲ್ಲವೂ ನಾವು ಇರುವಷ್ಟು ಹೊತ್ತು ಮಾತ್ರ ಜೊತೆಗಿರುವಂಥವು. ನಾವು ಹೋದಕೂಡಲೇ ಯಾವುವೂ ನಮ್ಮವಾಗಿ ಉಳಿಯುವುದಿಲ್ಲ. ಆದ್ದರಿಂದ ಯಾವುದರ ಮೇಲೂ ಒಡೆತನ ಸಾಧಿಸಬಾರದು. ಯಾರ ಮೇಲೂ ಮೋಹಗೊಳ್ಳಬಾರದು. ಅವರೆಲ್ಲರನ್ನೂ/ಅವೆಲ್ಲವನ್ನೂ ಬಿಂಬಗಳಂತೆ ಸ್ವೀಕರಿಸಬೇಕೇ ಹೊರತು, ಚೌಕಟ್ಟು ತೊಡಿಸಿ ಚಿತ್ರವಾಗಿಸಿಕೊಳ್ಳಬಾರದು. ಕನ್ನಡಿಯಂತೆ ನಿರ್ಲಿಪ್ತವಾಗಿ, ಎದುರು ಬಂದಿದ್ದೆಲ್ಲವನ್ನೂ ಪ್ರೀತಿಯಿಂದ ಪ್ರತಿಫಲಿಸುತ್ತಾ ಬೀಳ್ಕೊಡಬೇಕು.
ಇದರಿಂದ ಕೆಲಸವೂ ಸಲೀಸು, ಮನಸಿಗೂ ನಿರಾಳ. ಈ ‘ಕನ್ನಡಿ’ ಮಂತ್ರವನ್ನೊಮ್ಮೆ ಒಲಿಸಿಕೊಂಡು ನೋಡಿ, ಮತ್ತೆ ಹೇಳಿ!