ಒಂದಾನೊಂದು ಕಾಲದಲ್ಲಿ ಒಂದು ಪುಟ್ಟ ಹಕ್ಕಿ ಇತ್ತು. ಚಳಿಗಾಲ ಹತ್ತಿರವಾಗುತ್ತಿದ್ದಂತೆಯೇ ಆ ಹಕ್ಕಿಯ ಗೆಳಯರೆಲ್ಲ ದಕ್ಷಿಣಕ್ಕೆ ಹಾರಿ ಹೋಗುವ ತೀರ್ಮಾನ ಮಾಡಿದರು. ಗೆಳೆಯರು ಎಷ್ಟು ತಿಳಿ ಹೇಳಿದರೂ ಆ ಪುಟ್ಟ ಹಕ್ಕಿ ಅವರೊಡನೆ ದಕ್ಷಿಣಕ್ಕೆ ಹೋಗಲು ಒಪ್ಪಲಿಲ್ಲ. ಕೊನೆಗೆ ನಿರುಪಾಯರಾದ ಬೇರೆಲ್ಲ ಹಕ್ಕಿಗಳು, ಪುಟ್ಚ ಹಕ್ಕಿಯನ್ನು ಅಲ್ಲೇ ಬಿಟ್ಟು ತಮ್ಮ ಪಾಡಿಗೆ ತಾವು ದಕ್ಷಿಣ ದಿಕ್ಕಿನತ್ತ ಹೊರಟು ಹೋದರು.
ಕೆಲವೇ ದಿನಗಳಲ್ಲಿ ಚಳಗಾಲದ ಆಗಮನವಾಯಿತು. ಈ ಬಾರಿಯಂತೂ ಕೊರೆಯುವ ಚಳಿ. ಪುಟ್ಟ ಹಕ್ಕಿ, ಚಳಿಗೆ ನಡುಗತೊಡಗಿತು. ಹಕ್ಕಿಗೆ ತನ್ನ ತಪ್ಪಿನ ಅರಿವಾಗಿ ಅದು ತಾನೂ ದಕ್ಷಿಣಕ್ಕೆ ಹಾರಿ ಹೋಗಬೇಕೆಂದು ತೀರ್ಮಾನಿಸಿ ಬೆಚ್ಚಗಿನ ಜಾಗ ಹುಡುಕುತ್ತ ಹಾರತೊಡಗಿತು. ಆದರೆ ಈಗಾಗಲೇ ತುಂಬ ತಡವಾಗಿ ಹೋಗಿತ್ತು. ಹಕ್ಕಿಯ ರೆಕ್ಕೆಗಳ ಮೇಲೆ ಹಿಮ ಬೀಳತೊಡಗಿತು. ಕೊನೆಗೆ ಚಳಿ ಸಹಿಸಲಸಾಧ್ಯವಾಗಿ ಆ ಹಕ್ಕಿ ಹುಲ್ಲುಗಾವಲೊಂದರಲ್ಲಿ ಕುಸಿದು ಬಿತ್ತು. ತನ್ನ ಸಾವು ಇನ್ನು ಖಚಿತ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಹಕ್ಕಿ ಅಸಹಾಯಕವಾಗಿ ನೆಲದ ಮೇಲೇ ಬಿದ್ದು ಒದ್ದಾಡತೊಡಗಿತು.
ಹೀಗಿರುವಾಗಲೇ ಅಲ್ಲೇ ಹುಲ್ಲು ಮೇಯುತ್ತಿದ್ದ ಆಕಳೊಂದು ಹಕ್ಕಿಯ ಹತ್ತಿರ ಬಂದು ಅದರ ಮೇಲೆ ಸಗಣಿ ಹಾಕಿತು. ಮೊದಲು ಮೂಗು ಮುಚ್ಚಿಕೊಂಡ ಹಕ್ಕಿ ಆಮೇಲೆ ಸಗಣಿಯ ಶಾಖಕ್ಕೆ ಬೆಚ್ಚಗಾಗಿ ಬಿಸಿಯಾಗತೊಡಗಿತು. ಹಕ್ಕಿಗೆ ಇನ್ನು ತಾನು ಬದುಕಬಹುದು ಎಂದು ಅನಿಸತೊಡಗಿ ಅದು ಖುಶಿಯಿಂದ ಹಾಡತೊಡಗಿತು.
ಆಗ ಅಲ್ಲೇ ಹಾಯ್ದು ಹೋಗುತ್ತಿದ್ದ ಬೆಕ್ಕೊಂದು
ಹಕ್ಕಿಯ ಹಾಡಿನ ಸುಳಿವು ಹಿಡಿದು ಆ ಸಗಣಿಯ ಹತ್ತಿರ ಬಂದು, ಸೆಗಣಿ ಕೆದಕಿ ಹಕ್ಕಿಯನ್ನು ಹೊರ ತೆಗೆದು ಬಾಯಿಗೆ ಹಾಕಿಕೊಂಡು ಬಿಟ್ಟಿತು.
ಈ ಕತೆಯ ಮೂರು ನೀತಿಗಳು ಹೀಗಿವೆ.
1. ನಿಮ್ಮ ಮೇಲೆ ಸೆಗಣಿ ಹಾಕುವ ಎಲ್ಲರೂ ನಿಮ್ಮ ವೈರಿಗಳಲ್ಲ.
2. ಸೆಗಣಿಯಿಂದ ನಿಮ್ಮನ್ನು ಹೊರ ತೆಗೆಯುವ ಎಲ್ಲರೂ ನಿಮ್ಮ ಗೆಳೆಯರಾಗಿರುವುದಿಲ್ಲ.
3. ಸೆಗಣಿಯಲ್ಲಿ ನೀವು ಖುಶಿಯಾಗಿರುವಾಗ ಬಾಯಿ ಮುಚ್ಚಿಕೊಂಡಿರಿ, ಹಾಡಲು ಹೋಗಬೇಡಿ.
(ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ)