ಸೋಲುವುದು ಸಹಜ, ಮಗನೇ! : ಹರೆಯದ ಹುಡುಗರಿಗೊಂದು ಪತ್ರ

ಮಗನೇ, ಓಡಿಹೋಗುವುದರಿಂದ, ಕಾಲೇಜು ತೊರೆಯುವುದರಿಂದ, ಹಲ್ಲುಕಚ್ಚಿ ಸಹಿಸುವುದರಿಂದೆಲ್ಲ ಏನೂ ಸಾಧನೆಯಾಗದು. ನಿನ್ನ ಪ್ರಯಾಣವನ್ನು ನೀನು ಮಾಡಲೇಬೇಕು. ಆದರೆ, ಎಲ್ಲಿಗೆ ಹೋಗಬೇಕೆಂಬುದನ್ನೇ ಅರಿತುಕೊಳ್ಳದೆ ಪ್ರಯಾಣವನ್ನು ಹೇಗೆ ಆರಂಭಿಸುತ್ತೀಯ? ~ ಚೈತನ್ಯ

ಸೋಲುವುದು ಸಹಜ, ಮಗನೇ!

ನಿನ್ನ ವಯಸ್ಸಿನಲ್ಲಿ ನಾವೂ ಸಾಹಸಗಳನ್ನು ಮಾಡಲು ಹೋಗಿ ಸೋತಿದ್ದೆವು.  ಸುಮ್ಮನಿದ್ದೂ ಸೋತಿದ್ದೆವು. ಏಕಾಗ್ರತೆ ಸಾಧಿಸುವಲ್ಲಿ ಸೋತಿದ್ದೆವು. ಪ್ರೇಮವನ್ನು ಪಡೆಯುವಲ್ಲಿ ಸೋತಿದ್ದೆವು. ಗಮನ ಸೆಳೆಯುವಲ್ಲಿ ಸೋತಿದ್ದೆವು. ನಮಗೇನು ಬೇಕು ಅನ್ನುವ ಸ್ಪಷ್ಟತೆ ತಂದುಕೊಳ್ಳಲಿಕ್ಕೂ ಸೋತಿದ್ದೆವು. ಅಪ್ಪ – ಅಮ್ಮನನ್ನು ಖುಷಿಯಾಗಿಡಲು ಸೋತಿದ್ದೆವು. ಆಟದಲ್ಲಿ ಸೋತಿದ್ದೆವು, ಪಾಠದಲ್ಲೂ ಸೋತಿದ್ದೆವು.

ನಾವು ಹಾಗೆಲ್ಲ ಸೋತಿದ್ದೆವು ಎಂದೇ ನಿನ್ನ ಸೋಲನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ಹಾಗೊಮ್ಮೆ ನಾವು ಸೋಲದೇ ಇಷ್ಟು ವರ್ಷಗಳ ಬದುಕನ್ನು ಸವೆಸಿದ್ದೇವೆ ಎಂದೇ ಇಟ್ಟುಕೊಳ್ಳೋಣ. ಹಾಗಿರುವಾಗಲೂ ನಿನ್ನ ಸೋಲನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಕರ್ತವ್ಯವೇ ಆಗಿರುತ್ತದೆ. ನಾವು ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಹೋದರೆ, ಆಗ ಅದು ನಮ್ಮ ಸೋಲಾಗುತ್ತದೆ!

ಸೋಲುವುದು ಸಹಜ ಮಗನೇ. ಆದರೆ ಸೋಲನ್ನು ಚಿರಕಾಲದ ಸಂಗಾತಿಯಾಗಿ ಮಾಡಿಕೊಳ್ಳುವುದು ಮಾತ್ರ ಮೂರ್ಖತನ. ಸೋಲುವುದು ತಪ್ಪಲ್ಲ. ಆದರೆ, ಸೋಲನ್ನು ಬೇತಾಳದಂತೆ ಹೆಗಲ ಮೇಲೆ ಹೊತ್ತುಕೊಂಡು ತಲೆ ತಗ್ಗಿಸಿ ನಡೆಯುವುದು ಬಹು ದೊಡ್ಡ ತಪ್ಪು. ಅದು ನಮ್ಮ ಮೇಲೆ ನಾವೇ ಮಾಡಿಕೊಳ್ಳುವ ಅಪರಾಧ. ಆದ್ದರಿಂದ, ನಿನ್ನ ಪಾಲಿಗೆ ಸೋಲು ಕಾಲಿಟ್ಟ ಮರುಕ್ಷಣದಿಂದಲೇ ಅದನ್ನು ಹೊರಗಟ್ಟುವ ಕುರಿತು ನಿನ್ನ ಪ್ರಯತ್ನ ಶುರುವಾಗಬೇಕು. ಅದು ಯಾವ ದಾರಿಯಿಂದ ಒಳಗೆ ಬಂತೋ ಅದೇ ದಾರಿಯಲ್ಲಿ ಹಿಮ್ಮೆಟ್ಟಿಸಬೇಕು. ಹಾಗೆ ಮಾಡದೆ ಹೋದರೆ ಮಾತ್ರ, ಮಗನೇ, ನೀನು ನಿಜವಾಗಿಯೂ ಸೋಲುತ್ತೀಯ.

ಯಾಕೆಂದರೆ, ಸೋಲುವುದು ಸಹಜ. ಆದರೆ ಮತ್ತೆ ಮತ್ತೆ ಒಂದೇ ವಿಷಯದಲ್ಲಿ ಸೋತು ಕೈಚೆಲ್ಲುವುದು ಮೂರ್ಖತನದ ಲಕ್ಷಣ.

ಸೋಲಿಗೆ “ಸೈಲೆಂಟಾಗಿ ಸೈಡಲ್ಲಿರು” ಎಂದು ಆವಾಜ್ ಹಾಕಿ ಮುನ್ನಡೆಯೋದು ಎಷ್ಟು ಸುಲಭವೆಂದು ಒಮ್ಮೆ ನಿನಗೆ ಅರ್ಥವಾದರೆ ಸಾಕು, ಮುಂದಿನ ಬದುಕಿಡೀ ಗೆಲುವು ನೀನಿದ್ದಲ್ಲಿಗೇ ಬಂದು ಪಾದ ಚುಂಬಿಸತೊಡಗುತ್ತದೆ. ಯಾಕೆಂದರೆ ಸೋಲು ಒಂದು ಮಿಥ್ಯೆ. ಅದನ್ನು ಅರ್ಥ ಮಾಡಿಕೊಂಡ ಕೂಡಲೇ ಅದು ಮಾಯವಾಗಿಬಿಡುತ್ತದೆ!

ನೀನು ಹೇಳಬಹುದು, “ಸೋಲು ಮಿಥ್ಯೆ ಅಲ್ಲ, ಅದು ವಾಸ್ತವ” ಎಂದು.

ಸೋಲು, ಗೆಲುವುಗಳು ನಿರ್ಣಯವಾಗೋದು ಯಾವುದರ ಆಧಾರದ ಮೇಲೆ? ಅಂಕಗಳು, ಬಹುಮಾನ, ಸ್ಥಾನಗಳ ಮೇಲೆಯೇ? ಪ್ರತಿದಿನದ ವ್ಯವಹಾರದ ದೃಷ್ಟಿಯಿಂದ ನೋಡುವುದಾದರೆ, ನಿನ್ನ ಮಾತು ನಿಜ. ಆದರೆ, ಅಂಕಗಳು, ಬಹುಮಾನಗಳು, ಸ್ಥಾನಗಳು ನಮ್ಮನ್ನು ಬದುಕಲ್ಲಿ ಗೆಲ್ಲಿಸುವ ಅಂಶಗಳು ಎಂದಾದರೆ, ಜಗತ್ತಿನಲ್ಲಿ ಈ ಹೊತ್ತು ಎಲ್ಲ ಟಾಪರ್’ಗಳೂ ದೊಡ್ಡ ದೊಡ್ಡ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕಿತ್ತಲ್ಲ!? ಸಾಧಕರ ಟಾಪ್ ಟೆನ್’ನಲ್ಲಿ ಫಸ್ಟ್ ರ್ಯಾಂಕ್ ಸ್ಟೂಡೆಂಟ್’ಗಳು ಎಷ್ಟು ಜನರಿದ್ದಾರೆ!? ಆದ್ದರಿಂದ, ಸೋಲು – ಗೆಲುವು ಎಂಬುದದಿಲ್ಲ. ಅವೆಲ್ಲ ನಮ್ಮ ಪ್ರತಿಷ್ಠೆಗೆ ನಾವು ಇಟ್ಟುಕೊಂಡ ಮಾಪನಗಳಷ್ಟೇ. ಹಾಗಂತ, ಫಸ್ಟ್ ರ್ಯಾಂಕ್ ಬಂದವರು ನಿಜವಾಗಿಯೂ ಗೌರವಕ್ಕೆ ಪಾತ್ರರಾಗಬೇಕಾದ ಸಾಧಕರೇ. ಅವರ ಶಿಸ್ತು, ಬದ್ಧತೆ ಮತ್ತು ಏಕಾಗ್ರತೆಗಳು ನಿನಗೆ ಪಠ್ಯದಾಚೆಗೂ ಪಾಠ. ಅವನ್ನು ಕಲಿಯುವುದು ಕೂಡಾ ಮುಖ್ಯವೇ.

ನಿನಗೆ ಕಾಲೇಜಿಗೆ ಹೋಗಲು ಬೋರಾಗತೊಡಗಿದೆ. ಗೋಡೆಗಳ ನಡುವೆ ಕುಳಿತು ಗಮನವಿಟ್ಟು ಪಾಠ ಕೇಳುವುದು ಎಂದರೆ ನಿನಗೆ ಉಮ್ಮಳಿಕೆ ಬಂದಹಾಗೆ ಆಗುತ್ತದೆ ಅನ್ನುತ್ತೀಯ. ಶಿಕ್ಷಣದ ಹೊರತಾಗಿ ಯಾವುದಾದರೂ ಆಸಕ್ತಿ ಇದೆಯೇ ಎಂದು ಕೇಳಿದರೆ ನಿನಗೆ ಆ ಬಗ್ಗೆ ಸ್ಪಷ್ಟತೆಯೇ ಇಲ್ಲ. ನಿನ್ನ ಗೆಳೆಯರೆಲ್ಲ ಕಾಲೇಜಿಗೆ ಹೋಗುತ್ತಾ ತಮ್ಮ ಪಾಡಿಗೆ ತಾವಿದ್ದಾರೆ. ನಿನ್ನಿಂದ ಮಾತ್ರ ಅದು ಸಾಧ್ಯವಾಗುತ್ತಿಲ್ಲ. ಅವರೆಲ್ಲರೂ ನಿನ್ನ ಜೊತೆಗಿದ್ದವರು. ಕುಂಟುತ್ತಲೋ ಓಡುತ್ತಲೋ ಅಂತೂ ಒಂದು ವರ್ಷ ನಿನಗಿಂತ ಮುಂದೆ ಹೋಗುತ್ತಿದ್ದಾರೆ. ನಿಂತಲ್ಲೇ ನೀನು ಚಡಪಡಿಸುತ್ತಿದ್ದೀಯ. ನಿನಗೆ ಬೇಡವಾಗಿರುವುದು ಏನು ಅನ್ನೋದು ಗೊತ್ತಿದೆ. ಆದರೆ ನಿನಗೇನು ಬೇಕು ಅನ್ನುವುದೇ ಗೊತ್ತಿಲ್ಲ.

ಇದು ಅಪರೂಪದ ಮನಸ್ಥಿತಿಯೇನಲ್ಲ. ಬಹಳಷ್ಟು ಹದಿಹರೆಯದ ಮಕ್ಕಳು ಇದನ್ನು ಅನುಭವಿಸುತ್ತಾರೆ. ಕೆಲವರಲ್ಲಿ ‘ಓಡಿಹೋಗುವ’ ತುಡಿತ ಹುಟ್ಟಿಕೊಂಡರೆ, ಮತ್ತೆ ಕೆಲವರಲ್ಲಿ ಎಲ್ಲದರಿಂದಲೂ ದೂರವಾಗುತ್ತ ತನ್ನನ್ನು ತಾನು ಒಳಗೆಳೆದುಕೊಳ್ಳುವ ಚಡಪಡಿಕೆ. ಕೆಲವರ ಮನೆಯಲ್ಲಿ ತಾಯ್ತಂದೆಯರು ತೀರಾ ಕಠಿಣವಾಗಿರುತ್ತಾರೆ. ಅಂಥ ಸಂದರ್ಭದಲ್ಲಿ ಮಕ್ಕಳಿಗೆ ಕಾಲೇಜು ತೊರೆಯಬೇಕು ಅನ್ನಿಸಿದರೂ ಭಯದಿಂದ ಹಲ್ಲುಕಚ್ಚಿಕೊಂಡು ವಿದ್ಯಾಭ್ಯಾಸ ಮುಂದುವರೆಸುತ್ತಾರೆ. ಆದರೆ ಅವರು ಏನಾದರೊಂದು ಸಾಧನೆ ಮಾಡುವುದು ಬಹಳ ಕಷ್ಟ. ಇನ್ನು ಕೆಲವರು ಈ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುವುದೂ ಇದೆ!  ನೀನು ಇವಿಷ್ಟರಲ್ಲಿ ಯಾವುದಾದರೂ ಒಂದು ಮನಸ್ಥಿತಿಯಲ್ಲಿ ಇದ್ದೀಯ. ಆದ್ದರಿಂದಲೇ ಸೋಲು ನಿನ್ನ ಹೆಗಲೇರಿದೆ.

ಮಗನೇ, ಓಡಿಹೋಗುವುದರಿಂದ, ಕಾಲೇಜು ತೊರೆಯುವುದರಿಂದ, ಹಲ್ಲುಕಚ್ಚಿ ಸಹಿಸುವುದರಿಂದೆಲ್ಲ ಏನೂ ಸಾಧನೆಯಾಗದು. ನಿನ್ನ ಪ್ರಯಾಣವನ್ನು ನೀನು ಮಾಡಲೇಬೇಕು. ಆದರೆ, ಎಲ್ಲಿಗೆ ಹೋಗಬೇಕೆಂಬುದನ್ನೇ ಅರಿತುಕೊಳ್ಳದೆ ಪ್ರಯಾಣವನ್ನು ಹೇಗೆ ಆರಂಭಿಸುತ್ತೀಯ?

ಆದ್ದರಿಂದ ಮಗನೇ, ಮೊದಲು ನಿನಗೇನು ಬೇಕು, ನೀನು ಏನಾಗಲು ಬಯಸುತ್ತಿದ್ದೀಯ, ನಿನ್ನ ಆಸಕ್ತಿ ಯಾವುದರಲ್ಲಿದೆ ಅನ್ನುವುದನ್ನು ಮೊದಲು ಕಂಡುಕೊಳ್ಳಲು ಪ್ರಯತ್ನಿಸು. ಒಂದು ಸಲ ಪ್ರಯತ್ನ ಮಾಡಿ ನೋಡುವುದರಿಂದ ಕಳೆದುಕೊಳ್ಳುವಂತದ್ದು ಏನೂ ಇಲ್ಲ. ನೀನು ಈಗ ಸೋತಿರಬಹುದು. ಮುಂದೆ ಗೆಲ್ಲಲೊಂದು ಜಗತ್ತೇ ಇದೆ ಅನ್ನುವುದನ್ನು ನೆನಪಿಟ್ಟುಕೋ.

ಪ್ರೀತಿಯಿಂದ,

ಎಲ್ಲ ಮಕ್ಕಳ, ಎಲ್ಲ ಪೋಷಕರು!

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.