ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ರಾಜನ ಅರಮನೆಯಲ್ಲಿ ಸಂಭ್ರಮದ ಔತಣ ಕೂಟ ಏರ್ಪಾಡಾಗಿತ್ತು. ಮಂತ್ರಿಗಳು, ಅಧಿಕಾರಿಗಳು ಎಲ್ಲ ಮೋಜಿನಲ್ಲಿ ಮಗ್ನರಾಗಿದ್ದರು. ಅದೇ ಸಮಯಕ್ಕೆ ಆ ಜಾಗಕ್ಕೆ ವ್ಯಕ್ತಿಯೊಬ್ಬನ ಪ್ರವೇಶವಾಯಿತು. ಅ ವ್ಯಕ್ತಿ ರಾಜನ ಮುಂದೆ ಹೋಗಿ ನಿಂತ. ಅಲ್ಲಿ ಸೇರಿದ್ದ ಎಲ್ಲರೂ ಆ ವ್ಯಕ್ತಿಯನ್ನು ಗಾಬರಿಯಿಂದ ನೋಡತೊಡಗಿದರು. ಅವನ ಕಣ್ಣಿನ ಗುಡ್ಡೆ ಹೊರ ಬಂದಿತ್ತು, ಕಣ್ಣಿಂದ ರಕ್ತ, ಧಾರಾಕಾರವಾಗಿ ಹರಿಯುತ್ತಿತ್ತು.
“ ಏನಾಯ್ತು ನಿನಗೆ?, ನಿನ್ನ ಈ ಸ್ಥಿತಿಗೆ ಯಾರು ಕಾರಣ?” ರಾಜ ಪ್ರಶ್ನೆ ಮಾಡಿದ.
“ಮಹಾರಾಜ, ವೃತ್ತಿಯಿಂದ ನಾನೊಬ್ಬ ಕಳ್ಳ, ನಿನ್ನೆ ರಾತ್ರಿ ಆಕಾಶದಲ್ಲಿ ಚಂದ್ರ ಕಾಣಿಸಲಿಲ್ಲವಾದ್ದರಿಂದ ಕಳ್ಳತನ ಮಾಡಬೇಕೆಂದು ಈ ಊರಿನಲ್ಲಿ ಲೇವಾದೇವಿ ಮಾಡುತ್ತ ಸಾಕಷ್ಟು ಹಣ ಗಳಿಸಿರುವ ಶ್ರೀಮಂತನ ಮನೆಗೆ ಹೋದೆ. ಆದರೆ ಮನೆಯ ಕಂಪೌಂಡ್ ಹಾರುವಾಗ ನನ್ನಿಂದ ಅಚಾತುರ್ಯ ಆಗಿ ನಾನು ಪಕ್ಕದ ನೇಕಾರನ ಮನೆಯೊಳಗೆ ಪ್ರವೇಶ ಮಾಡಿದೆ. ಒಳಗೆ ಕತ್ತಲಿದ್ದರಿಂದ ನೇಕಾರನ ಮಗ್ಗದ ಚೂಪು ಭಾಗವೊಂದು ನನ್ನ ಕಣ್ಣಿಗೆ ತಾಕಿ ಹೀಗಾಯಿತು. ಮಹಾರಾಜ, ನನಗೆ ನೇಕಾರನ ಮಗ್ಗದಿಂದಾದ ಈ ಅಪಘಾತಕ್ಕೆ ನ್ಯಾಯ ಕೊಡಿಸಿ.” ಕಳ್ಳ, ರಾಜನ ಮುಂದೆ ತನ್ನ ಅಹವಾಲು ಮಂಡಿಸಿದ.
ನೇಕಾರನನ್ನು ದರ್ಬಾರಿಗೆ ಕರೆ ತರಲು ಆಜ್ಞೆ ಮಾಡಿದ ರಾಜ, ಕಳ್ಳನಿಗೆ ಪರಿಹಾರವಾಗಿ, ನೇಕಾರನ ಒಂದು ಕಣ್ಣು ಕೀಳುವಂತೆ ರಾಜಾಜ್ಞೆ ಹೊರಡಿಸಿದ.
ರಾಜನ ಆಸ್ಥಾನಕ್ಕೆ ಬಂದ ನೇಕಾರ, ರಾಜ ತನಗೆ ನೀಡಿರುವ ಶಿಕ್ಷೆಯನ್ನು ಕೇಳಿ, ರಾಜನಿಂದ ದಯಾ ಭಿಕ್ಷೆ ಬೇಡಿದ. “ ಮಹಾರಾಜ ನಿಮ್ಮ ನ್ಯಾಯ ನನಗೆ ಸಮ್ಮತವೇ ಆದರೆ ಬಟ್ಚೆ ನೇಯುವಾಗ ನಾನು ಬಟ್ಟೆಯ ಎರಡೂ ಭಾಗಗಳನ್ನು ಸೂಕ್ಷ್ಮವಾಗಿ ಗಮನಿಸ ಬೇಕು. ಹೀಗಾಗಿ ನನಗೇ ಎರಡೂ ಕಣ್ಣುಗಳ ಅವಶ್ಯಕತೆಯಿದೆ. ಆದರೆ, ನನ್ನ ಮನೆಯ ಪಕ್ಕದಲ್ಲಿ ಒಬ್ಬ ಚಪ್ಪಲಿ ಹೊಲೆಯುವವನಿದ್ದಾನೆ. ಅವನಿಗೂ ಎರಡು ಕಣ್ಣುಗಳಿವೆ ಮತ್ತು ಚಪ್ಪಲಿ ಹೊಲೆಯುವ ಕೆಲಸಕ್ಕೆ ಎರಡು ಕಣ್ಣುಗಳು ಬೇಕಾಗುವುದಿಲ್ಲ.”
ರಾಜ ಚಪ್ಪಲಿ ಹೊಲೆಯುವವನನ್ನು ಆಸ್ಥಾನಕ್ಕೆ ಕರೆಸಿಕೊಂಡ. ರಾಜನ ಭಟರು ಅವನ ಎರಡು ಕಣ್ಣುಗಳಲ್ಲಿ ಒಂದು ಕಣ್ಣನ್ನು ಕಿತ್ತರು.
ಆಗ ನ್ಯಾಯಕ್ಕೆ ಸಮಾಧಾನವಾಯಿತು.