ಪ್ರೇಮಿಯನ್ನು ಪ್ರೇಮಿಸಬೇಕು, ನಂಬಿಕೆಯ ಗೊಡವೆ ಏಕೆ!? : ಅರಳಿಮರ ಸಂವಾದ

ನೀವು “ಮನಶ್ಶಾಂತಿ ಕಳೆದುಹೋಗಿದೆ” ಎಂದು ಬರೆದಿದ್ದೀರಿ. ಅದನ್ನು ಹೊರಗಿನ ಯಾರೂ ನಿಮಗೆ ಮರಳಿ ಕೊಡಿಸಲು ಸಾಧ್ಯವಿಲ್ಲ. ಕೆಲವು ಧ್ಯಾನ ವಿಧಿಗಳನ್ನು ನಿಮಗೆ ಸೂಚಿಸಬಹುದು. ಆದರೆ ಅದಕ್ಕಿಂತ ಮೊದಲು ನೋವಿನಿಂದ ಹೊರಬಂದು ಸಹಜ ಬದುಕು ನಡೆಸುವ ದೃಢ ನಿರ್ಧಾರ ನೀವು ಮಾಡಬೇಕು ~ ಚಿತ್ಕಲಾ

samvada“ನಾನು ನಾಲ್ಕು ವರ್ಷಗಳಿಂದ ಅವನನ್ನು ಪ್ರೀತಿಸಿದ್ದೆ. ಈಗ ನಂಬಿಕೆಗೆ ದ್ರೋಹವೆಸಗಿದ್ದಾನೆ. ಮತ್ತೊಂದು ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾನೆ. ನೊಂದಿದ್ದೇನೆ. ನನ್ನ ಮನಶ್ಶಾಂತಿಗೆ ಏನಾದರೂ ಸೂಚಿಸಿ” ಈಗಾಗಲೇ ಪ್ರತಿ ದಿನವೂ ಒಂದಲ್ಲ ಒಂದು ಕಡೆ ಒಬ್ಬರಲ್ಲ ಒಬ್ಬರು ಕೇಳುತ್ತಲೇ ಇರುವ ಪ್ರಶ್ನೆಯನ್ನು “ಹೆಸರು ಬಹಿರಂಗಪಡಿಸಬೇಡಿ” ಎಂದು ಒಬ್ಬ ಯುವತಿ ಕೇಳಿದ್ದಾರೆ.

ಅರಳಿಮರ ಈಗಾಗಲೇ ‘ಪ್ರೇಮಿವಿಸುವುದು ಎಂದರೇನು” ಅನ್ನುವುದರ ಬಗ್ಗೆ ಕೆಲವು ಲೇಖನಗಳನ್ನು ಪ್ರಕಟಿಸಿದೆ. ಈಗ ಮತ್ತೊಮ್ಮೆ ಅದನ್ನೇ ಹೇಳಲು ಬಯಸುತ್ತೇನೆ.

ಪ್ರೇಮಿಸುವುದು ಅಂದರೆ ಪ್ರೇಮಿಸುವುದು ಮಾತ್ರ. ಪ್ರೇಮಿಸುವುದು ಅಂದರೆ ನಮ್ಮ ಲೌಕಿಕ ಅಗತ್ಯಗಳಿಗಾಗಿ ಸಂಗಾತಿಯನ್ನು ಆಶ್ರಯಿಸುವುದಲ್ಲ. ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಪ್ರೇಮ ಎನ್ನಲಾಗದು. ಪ್ರೇಮ, ಪ್ರೇಮವಷ್ಟೆ. ಅಲ್ಲಿ ನಂಬಿಕೆಯ ಗೊಡವೆ ಇಲ್ಲ. ಪ್ರೇಮದಲ್ಲಿ ಮತ್ಯಾವ ಭಾವಕ್ಕೂ ಜಾಗವೇ ಇರುವುದಿಲ್ಲ! ಅದು ಅಷ್ಟು ಪರಿಪೂರ್ಣ ಸಂಗತಿ.

ಆದ್ದರಿಂದ ನಿಮ್ಮ ಪ್ರಶ್ನೆಯನ್ನು ಹೀಗೆ ಬದಲಿಸೋಣ; “ನೀವು ಒಬ್ಬ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಿರಿ. ನಾಲ್ಕು ವರ್ಷಗಳಿಂದ ಒಡನಾಟದಲ್ಲಿದ್ದಿರಿ. ಅವರನ್ನು ಮದುವೆಯಾಗಲು ಬಯಸಿದ್ದಿರಿ. ಅವರೀಗ ಮತ್ತೊಂದು ಯುವತಿಯನ್ನು ಮದುವೆಯಾಗಲು ಹೊರಟಿದ್ದಾರೆ. ಅದರಿಂದ ನೀವು ವಿಚಲಿತರಾಗಿದ್ದೀರಿ. ನಿಮಗೆ ಶಾಂತಿ ಬೇಕು” ಅಲ್ಲವೆ?

ಮೊದಲು ಈ ಕೆಲವು ಸಂಗತಿಗಳನ್ನು ಕುರಿತು ಯೋಚಿಸಿ:

ಮುಖ್ಯವಾಗಿ, ನಾಲ್ಕು ವರ್ಷದ ಸಂಗಾತದ ನಂತರವೂ ನಿಮ್ಮ ಸಂಗಾತಿ ದೂರವಾಗಲು ಬಯಸಿದ್ದಾರೆ ಎಂದರೆ, ನಿಮ್ಮ ನಡುವೆ ದೀರ್ಘಕಾಲ ಉಳಿಯುವಂಥ ಹೊಂದಾಣಿಕೆ ಏರ್ಪಟ್ಟಿರಲೇ ಇಲ್ಲ. ಆರಂಭದಲ್ಲಿ ನಿಮ್ಮ ನಡುವೆ ಆಪ್ತತೆ, ತೀವ್ರತೆಗಳು ಇದ್ದವು, ಸಂಗಾತಿಯ ಪ್ರತಿಕ್ರಿಯೆಯೂ ಸಕಾರಾತ್ಮಕವಾಗುತ್ತು…. ಅನಂತರದಲ್ಲಿ ಅವರು ಬೇರೆ ಆಕರ್ಷಣೆಗೆ ಸಿಲುಕಿದರು. ಆಕರ್ಷಣೆಗೆ ಸಿಲುಕುವುದು ದ್ರೋಹವಲ್ಲ. ಬಹುಶಃ ಅವರಿಗೆ ಮತ್ತೊಂದು ಯುವತಿಯೊಡನೆ ಮದುವೆಯ ಹೊಂದಾಣಿಕೆ ಸಾಧ್ಯ ಅನ್ನಿಸಿರಬೇಕು.

ನನಗೆ ತಿಳಿದಿದೆ, ಈ ಉತ್ತರದಿಂದ ನಿಮಗೆ ನಿರಾಸೆಯಾಗುತ್ತದೆ. ನೀವು ಸಹಾನುಭೂತಿಯನ್ನಾದರೂ ನಿರೀಕ್ಷಿಸಿರುತ್ತೀರಿ. ಸಾಂತ್ವನದ ಮಾತುಗಳನ್ನು ಬಯಸುತ್ತೀರಿ. ಇವೆಲ್ಲವೂ ನಿಮ್ಮ ಸುಳ್ಳು ನೋವನ್ನು ಮತ್ತಷ್ಟು ಆಳವಾಗಿಸುತ್ತವೆ ಹೊರತು ಮಾಯಿಸಲಾರವು. ನೀವು ಯಾವುದನ್ನು ಪ್ರೇಮವೆಂದು ತಿಳಿದಿದ್ದಿರೋ, ಅದೇ ಸುಳ್ಳು ಅಂದಮೇಲೆ ನೋವು ಹೇಗೆ ನಿಜವಾದೀತು!? ಅದು ಪ್ರೇಮವಲ್ಲದೆ, ಸಂಗಾತಿಯ ಆಯ್ಕೆ ಆಗಿದ್ದಲ್ಲಿ, ನೀವು ಆಯ್ದುಕೊಂಡ ವಸ್ತು ಸರಿಯಿಲ್ಲವೆಂದು ಅನ್ನಿಸಿದಾಗ ಕೈಬಿಟ್ಟುಹೋಗಿದ್ದಕ್ಕೆ ಸಮಾಧಾನ ಪಡಬೇಕು ಹೊರತು, ದುಃಖವೇಕೆ!?

ಈ ಒಡನಾಟದಲ್ಲಿ ನೀವು ದೌರ್ಜನ್ಯಗಳಿಗೆ, ಕಿರುಕುಳಕ್ಕೆ, ಆರ್ಥಿಕ ನಷ್ಟವೇ ಮೊದಲಾದ ಸಂಗತಿಗಳಿಗೆ ಒಳಗಾಗಿದ್ದರೆ; ಅದನ್ನು ಭಾವುಕವಾಗಿ ತೆಗೆದುಕೊಳ್ಳಬೇಡಿ. ನೀವು ಒಬ್ಬ ಅನರ್ಹ ವ್ಯಕ್ತಿಯೊಡನೆ ಇದ್ದಿರಿ ಎಂಬುದು ಇದರಿಂದ ಖಾತ್ರಿಯಾಯಿತು. ನಿಮಗೆ ನ್ಯಾಯ ಬೇಕು, ಕಾನೂನಿನ ಸಹಾಯ ಪಡೆಯಿರಿ. ಅತಿಯಾದ ಭಾವುಕತೆಯಿಂದ ಯಾವ ಲಾಭವೂ ಇಲ್ಲ.

ನೀವು “ಮನಶ್ಶಾಂತಿ ಕಳೆದುಹೋಗಿದೆ” ಎಂದು ಬರೆದಿದ್ದೀರಿ. ಅದನ್ನು ಹೊರಗಿನ ಯಾರೂ ನಿಮಗೆ ಮರಳಿ ಕೊಡಿಸಲು ಸಾಧ್ಯವಿಲ್ಲ. ಕೆಲವು ಧ್ಯಾನ ವಿಧಿಗಳನ್ನು ನಿಮಗೆ ಸೂಚಿಸಬಹುದು. (ಇಲ್ಲಿ ನೋಡಿ: https://aralimara.com/2018/04/03/lovehealing/ ) ಆದರೆ ಅದಕ್ಕಿಂತ ಮೊದಲು ನೋವಿನಿಂದ ಹೊರಬಂದು ಸಹಜ ಬದುಕು ನಡೆಸುವ ದೃಢ ನಿರ್ಧಾರ ನೀವು ಮಾಡಬೇಕು. ನೀವು ಎಷ್ಟು ಜನರಲ್ಲಿ ಈ ಪ್ರಶ್ನೆ ಕೇಳಿದರೂ ಯಾರ ಉತ್ತರವೂ ನಿಮ್ಮನ್ನು ಸಮಾಧಾನ ಪಡಿಸಲಾಗದು. ಏಕೆಂದರೆ ಈ ದುಃಖಕ್ಕೆ ಗೂಟ ಹೊಡೆದು ಕಟ್ಟಿಕೊಂಡಿರುವವರು ನೀವು. ಸ್ವತಃ ನೀವೇ ಅದರಿಂದ ಹೊರಗೆ ಬರಬೇಕು.

ಕೊನೆಯದಾಗಿ, ಮತ್ತೊಂದು ವ್ಯಕ್ತಿಯೊಡನೆ ಬದುಕು ನಡೆಸುವದೇ ಜೀವನದ ಪರಮಧ್ಯೇಯವಲ್ಲ. ನಿಮ್ಮ ಅರ್ಹತೆ, ಕೌಶಲ್ಯ, ಉದ್ದೇಶಗಳು ಬೇರೆಯೂ ಇವೆ. ಅವುಗಳತ್ತ ಗಮನ ಕೊಡಿ. ನಿಮ್ಮ ಫೋಕಸ್ ಪಾಯಿಂಟ್ ಅನ್ನು ಬದಲಿಸಿಕೊಳ್ಳಿ.

ನಿಮ್ಮ ಮನಸಿನ ಕೊಳದೆದುರು ಕುಳಿತು ನೀವೇ ಕಲ್ಲುಗಳನ್ನು ಎಸೆಯುತ್ತಿದ್ದೀರಿ.
ನೀವು ಕಲ್ಲೆಸೆಯುವುದು ನಿಲ್ಲಿಸಿದ ಕ್ಷಣ ಕೊಳದ ಕಂಪನ ನಿಲ್ಲುತ್ತದೆ;
ಮನಸ್ಸು ಶಾಂತವಾಗುತ್ತದೆ.

 

Leave a Reply