ಯುವ ಸನ್ಯಾಸಿಗೆ ಪಾಠ ಕಲಿಸಿದ ಮಾಸ್ಟರ್ : tea time story

ಒಬ್ಬ ಯುವ ಸನ್ಯಾಸಿಗೆ ಹೂ, ಗಿಡ ಮರ ಬಳ್ಳಿಗಳ ಬಗ್ಗೆ ತೀವ್ರ ಪ್ರೀತಿ, ಆದ್ದರಿಂದ ಅವನಿಗೆ ಝೆನ್ ದೇವಸ್ಥಾನದ ಗಾರ್ಡನ್ ನ ಜವಾಬ್ದಾರಿ ವಹಿಸಲಾಗಿತ್ತು. ಈ ದೇವಸ್ಥಾನದ ಪಕ್ಕದಲ್ಲಿಯೇ ಇನ್ನೊಂದು ಪುಟ್ಟ ಝೆನ್ ಆಶ್ರಮವಿತ್ತು. ಅಲ್ಲಿ ವಯಸ್ಸಾದ ಝೆನ್ ಮಾಸ್ಟರ್ ಒಬ್ಬರು ವಾಸ ಮಾಡುತ್ತಿದ್ದರು.

ಒಂದು ದಿನ ದೇವಸ್ಥಾನಕ್ಕೆ ವಿಶೇಷ ಅತಿಥಿಗಳು ಬರುವ ಕಾರ್ಯಕ್ರಮವಿದ್ದುದರಿಂದ, ಯುವ ಸನ್ಯಾಸಿ ಗಾರ್ಡನ್ ಬಗ್ಗೆ ವಿಶೇಷ ಕಾಳಜಿ ವಹಿಸಿದ. ಗಾರ್ಡನ್ ನ ಕಸಗುಡಿಸಿ ಸ್ವಚ್ಛ ಮಾಡಿದ. ಬಾಡಿಹೋಗಿದ್ದ ಹೂಗಳನ್ನು ಕಿತ್ತಿದ. ಬಳ್ಳಿಗಳನ್ನು ಸುಂದರವಾಗಿ ಕಾಣುವಂತೆ ಟ್ರಿಮ್ ಮಾಡಿದ. ಶರತ್ಕಾಲದ ಎಲೆಗಳನ್ನು ನೆಲದ ಮೇಲೆ ನೀಟಾಗಿ ಹಾಸಿದ. ಸನ್ಯಾಸಿಯ ಈ ಕಾಳಜಿಯನ್ನು ಗೋಡೆಯಾಚೆ ನಿಂತಿದ್ದ ವೃದ್ಧ ಝೆನ್ ಮಾಸ್ಟರ್ ಗಮನಿಸುತ್ತಿದ್ದ.

ತನ್ನ ಕೆಲಸ ಮುಗಿದ ಮೇಲೆ ಸನ್ಯಾಸಿ ಒಮ್ಮೆ ಹಿಂತಿರುಗಿ ನೋಡಿ ತೃಪ್ತಿಯಿಂದ ಕಣ್ಣರಳಿಸಿದ.
“ಎಷ್ಟು ಸುಂದರವಾಗಿ ಕಾಣಸ್ತಾ ಇದೆಯಲ್ಲ ಗಾರ್ಡನ್?” ಗೋಡೆಯಾಚೆ ನಿಂತಿದ್ದ ಮಾಸ್ಟರ್ ನ ಅಭಿಪ್ರಾಯ ಕೇಳಿದ. “ಹೌದು ಬಹಳ ಚಂದ, ಆದರೆ ಏನೋ ಕೊರತೆ ಅನಿಸ್ತಾ ಇದೆ. ಗೋಡೆಯಾಚೆ ನನ್ನ ಎತ್ತಿಕೋ, ನಾನು ಸರಿ ಮಾಡ್ತೀನಿ” ಎಂದ ಮಾಸ್ಟರ್. ಸನ್ಯಾಸಿ, ಮಾಸ್ಟರ್ ನ ಎತ್ತಿ, ಗಾರ್ಡನ್ ಒಳಗೆ ಇಳಿಸಿಕೊಂಡ.

ನಿಧಾನವಾಗಿ ಗಾರ್ಡನ್ ಒಳಗೆ ಬಂದ ಮಾಸ್ಟರ್ ನೇರವಾಗಿ ಗಾರ್ಡನ್ ನ ನಟ್ಟ ನಡುವೆ ಇದ್ದ ಮರದ ಬಳಿ ಬಂದು, ಅದರ ಟೊಂಗೆಯೊಂದನ್ನು ಜಗ್ಗಿ ಹಿಡಿದು ಜೋರಾಗಿ ಅಲ್ಲಾಡಿಸಿದ. ಹಣ್ಣಾದ ಎಲೆಗಳೆಲ್ಲ ನೆಲದ ಮೇಲೆ ಬಿದ್ದವು. “ ಹಾಂ, ಈಗ ಸರಿಯಾಯಿತು” ಎನ್ನುತ್ತ ಮಾಸ್ಟರ್ ಗೋಡೆ ಜಿಗಿದು ತನ್ನ ಆಶ್ರಮಕ್ಕೆ ಹೊರಟುಬಿಟ್ಟ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply