ವಿನಮ್ರ ಶಿಷ್ಯ ಉದ್ಧಾಲಕ ಆರುಣಿ : ಮಕ್ಕಳ ಕಿರು ನಾಟಕ

ಹಿಂದೆಲ್ಲ ಮಕ್ಕಳು ಶಾಲೆಯಲ್ಲಿ, ಗೆಳೆಯರ ಬಳಗದಲ್ಲಿ, ಅಥವಾ ಊರು – ಕೇರಿಯ ಸಾಮೂಹಿಕ ಕಾರ್ಯಕ್ರಮಗಳಲ್ಲಿ ನಮ್ಮ ಸಂಸ್ಕೃತಿ, ಪ್ರಾಚಿನ ಕಥನಗಳನ್ನು ಬಿಂಬಿಸುವ ನಾಟಕಗಳನ್ನು ಆಡುವುದಿತ್ತು. ಈಗಲೂ ಕೆಲವು ಕಡೆ ಇದು ಚಾಲ್ತಿಯಲ್ಲಿದೆ. ಈ ಚಿಕ್ಕ ಚಿಕ್ಕ ನಾಟಕಗಳು ಮಕ್ಕಳಿಗೆ ಮನರಂಜನೆಯ ಜೊತೆ ಪ್ರಾಚೀನ ಸಾಹಿತ್ಯದ ಅರಿವನ್ನೂ ಮೂಡಿಸುತ್ತವೆ. ‘ಅರಳಿಮರ’ ಇಂತ ಕೆಲವು ನಾಟಕ / ಸ್ಕಿಟ್ ಗಳನ್ನು ಪ್ರಕಟಿಸಲಿದೆ . 

 ಪಾಂಚಾಲದ ಆರುಣಿ ಎಂಬ ಶಿಷ್ಯನು ಗುರು ಧೌಮ್ಯರ ಗುರುಕುಲದಲ್ಲಿ ವ್ಯಾಸಾಂಗ ನಡೆಸುತ್ತಿದ್ದ. ತನ್ನ ವಿನಯಶೀಲತೆ, ಗುರುಸೇವೆಗಳಿಂದಾಗಿಯೇ ಸಕಲ ಜ್ಞಾನವನ್ನೂ ಪಡೆದ. ಅವನ ನಿಷ್ಠೆಗೆ ಮೆಚ್ಚಿದ ಗುರು ಧೌಮ್ಯರು, ಆರುಣಿಗೆ ‘ಉದ್ಧಾಲಕ’ನೆಂಬ ಹೆಸರು ನೀಡಿದ ಹಿನ್ನೆಲೆ ಇಲ್ಲಿದೆ. ( ಆಕರ : ಮಹಾಭಾರತ | ಅಧ್ಯಾಯ 3 | ಆದಿಪರ್ವ) | ರಚನೆ : ಗಾಯತ್ರಿ

ಪಾತ್ರಗಳು : ಧೌಮ್ಯ, ಆರುಣಿ, ಉಪಮನ್ಯು, ಬೈದ, 3 ಇತರ ಶಿಷ್ಯರು.

udd

 ದೃಶ್ಯ 1 : ಗುರುಕುಲ

 ಧೌಮ್ಯ : ಇಂದಿನ ಅಭ್ಯಾಸ ಮುಗಿಯಿತು. ನಾವಿನ್ನು ಗದ್ದೆಯ ಬಳಿ ಹೋಗಿ ಕೃಷಿ ಕೆಲಸಗಳನ್ನು ಮಾಡೋಣ

ಉಪಮನ್ಯು : ಗುರುವರ್ಯ… ಕೃಷಿ ಮಾಡುವುದು ರೈತರ ಕೆಲಸ. ನಾವೇಕೆ ಅಲ್ಲಿಗೆ ಹೋಗಬೇಕು  ?

ಆರುಣಿ : ಇದೇನು ಪ್ರಶ್ನೆ ಉಪಮನ್ಯು!? ಗುರುಗಳು ಹೇಳುತ್ತಿದ್ದಾರೆ ಅಂದಮೇಲೆ ಮುಗಿಯಿತು. ಹೋಗಬೇಕು ಅಷ್ಟೆ. ಪ್ರಶ್ನೆ ಮಾಡುವ ಅಗತ್ಯವೇ ಇಲ್ಲ. 

ಧೌಮ್ಯ : ಆರುಣಿ! ಪ್ರಶ್ನೆ ಕೇಳಲು ಬಿಡು. ಪ್ರಶ್ನೆಯಿಂದಲೇ ಜ್ಞಾನವೃದ್ಧಿಯಾಗುವುದು ಮಗೂ.

ಉದ್ಧಾಲಕ : ಆಗಲಿ ಗುರುವರ್ಯ… (ಸಹಪಾಠಿಯ ಕಡೆ ತಿರುಗಿ) ಕ್ಷಮಿಸು ಮಿತ್ರ! ನಿನ್ನ ಪ್ರಶ್ನೆ ಕೇಳು.

ಉಪಮನ್ಯು : ಕೃಷಿ ನಮ್ಮ ಕೆಲಸ ಅಲ್ಲವೆಂದು ಯೋಚಿಸುತ್ತಿದ್ದೆ ಗುರುವರ್ಯ…! ಅದು ತಪ್ಪೇ?

ಧೌಮ್ಯ : ಮಗೂ… ನಾವು ಪ್ರತಿಯೊಂದನ್ನೂ ಕಲಿತಿರಬೇಕು. ವೃತ್ತಿ ಯಾವುದಾದರೂ ಆಯ್ಕೆ ಮಾಡಿಕೋ. ಕಲಿಯುವಾಗ ಎಲ್ಲವನ್ನೂ ಕಲಿತಿರು.

“ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು” ಅನ್ನುವ ಮಾತಿದೆ. ಕೃಷಿ ಮಾಡುವುದನ್ನು ಕಲಿತವರಿಗೆ ಇತರ ಜೀವನ ಪಾಠಗಳು ತಾನಾಗಿಯೇ ಒಲಿಯುತ್ತವೆ.

ಬೈದ : ಅದು ಹೇಗೆ ಗುರುವರ್ಯ?

ಧೌಮ್ಯ : ಹೇಳುತ್ತೇನೆ ಬೈದ… ಎಲ್ಲರೂ ಕೇಳಿಸಿಕೊಳ್ಳಿ!

ಗದ್ದೆ ಹದ ಮಾಡಿ, ಬೀಜ ಬಿತ್ತಿ, ಅದನ್ನು ಪೋಷಿಸಿ; ಹುಳು ಹುಪ್ಪಟಿಗಳು ಬರದಂತೆ, ಜಾನುವಾರುಗಳಿಗೆ ಈಡಾಗದಂತೆ ರಕ್ಷಿಸುತ್ತೇವೆ. ಕಾಲಕ್ರಮದಲ್ಲಿ ಪೈರು ತೆನೆಯಿಂದ ಕಂಗೊಳಿಸಿ ತೂಗುತ್ತದೆ. ಅನಂತರ ಅದರ ಕಟಾವು ಮಾಡಿ ನಮ್ಮ ಆಹಾರಕ್ಕೆ ಬಳಸುತ್ತೇವೆ… ಅಲ್ಲವೆ?

ಬೈದ : ಹೌದು ಗುರುವರ್ಯ…. ಆದರೆ, ಅದರಿಂದೇನು!?

ಧೌಮ್ಯ :  ನಾವು ಬೀಜ ಬಿತ್ತುವಾಗ ಜೊಳ್ಳು ಬಿತ್ತುವುದಿಲ್ಲ. ಸರಿಯಾದ, ಗುಣಮಟ್ಟದ ಬೀಜವನ್ನೇ ಆಯ್ಕೆ ಮಾಡುತ್ತೇವೆ. ಜೊಳ್ಳು ಅಥವಾ ಹುಳುಕು ಬೀಜ ಬಿತ್ತಿದರೆ, ಅದು ಮೊಳಕೆಯೊಡೆದು ಸಸಿಯಾಗುವುದೇ ಇಲ್ಲ!

ಶಿಷ್ಯ 4 : ಆದರೆ ಗುರುವರ್ಯ…. ಕೆಲವು ಮೊಳಕೆಗಳೇ ಕೊಳೆತುಹೋದ ಹಾಗಿರುತ್ತವೆ!!

ಧೌಮ್ಯ : ನಿಜ. ಬೀಜ ಚೆನ್ನಾಗಿದ್ದರೂ ಕೆಲವೊಮ್ಮೆ ಪೋಷಣೆಯ ಕೊರತೆ ಅಥವಾ ಕೀಟಗಳಿಂದ ಮೊಳಕೆ ಹಾಳಾಗುತ್ತದೆ. ಅದನ್ನು ಹಾಗೆಯೇ ಬಿಟ್ಟರೆ ಸಸಿಯೂ ಹಾಳಾಗುತ್ತದೆ.

ಶಿಷ್ಯ 5: ಬೆಳೆಯುವ ಪೈರು ಮೊಳಕೆಯಲ್ಲಿ ಎಂದು ನನ್ನ ಪಿತಾಮಹ ಹೇಳುತ್ತಿದ್ದುದನ್ನು ಕೇಳಿದ್ದೇನೆ!
ಧೌಮ್ಯ : ಬಹಳ ಒಳ್ಳೆಯ ಮಾತು ಹೇಳಿದ್ದಾರೆ ನಿನ್ನ ಪಿತಾಮಹ.

ಶಿಷ್ಯ 6 : ಮೊಳಕೆಯಲ್ಲೇ ಗಿಡದ ಯೋಗ್ಯತೆ ಗುರುತಿಸಿ ಅದನ್ನು ಪೋಷಿಸಬೇಕೋ ಕಿತ್ತುಹಾಕಬೇಕೋ ಎಂದು ನಿರ್ಧರಿಸಬೇಕು. ಅಲ್ಲವೆ ಗುರುವರ್ಯ?

ಧೌಮ್ಯ : ಚೆನ್ನಾಗಿ ಹೇಳಿದೆ ಮಗೂ! ಹೌದು… ಹಾಗೇ ಮಾಡಬೇಕು.

ಉಪಮನ್ಯು : ಈ ಪ್ರಕ್ರಿಯೆಯಿಂದ ನಾವು ಕಲಿಯುವ ಪಾಠವೇನು ಗುರುವರ್ಯ?

ಧೌಮ್ಯ : ಕೃಷಿಕನಿಗೆ ಈ ಜೊಳ್ಳು – ಗಟ್ಟಿ ಕಾಳುಗಳನ್ನು ಆಯ್ಕೆ ಮಾಡುವ ಜ್ಞಾನ ಸಿದ್ಧಿಸಿರುತ್ತದೆ. ಅವನು ಮೊಳಕೆಯಲ್ಲೇ ಅರ್ಹ – ಅನರ್ಹ ಸಸಿಗಳನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳುತ್ತಾನೆ.

ಯಾವುದು ಒಳಿತೋ ಅದನ್ನು ಪೋಷಿಸುತ್ತಾನೆ, ಕೆಡುಕನ್ನು ಕಿತ್ತು ಹಾಕುತ್ತಾನೆ. ಕೊನೆಯಲ್ಲಿ ಉತ್ತಮ ಫಸಲನ್ನು ಪಡೆಯುತ್ತಾನೆ.

ಬೈದ : ನಾವೂ ಹಾಗೆಯೇ…!! ಯಾವುದು ಒಳ್ಳೆಯದೋ, ಅದನ್ನು ಪೋಷಿಸಬೇಕು, ಕೆಟ್ಟದ್ದನ್ನು ದೂರವಿಡಬೇಕು! ಅಲ್ಲವೆ ಗುರುವರ್ಯ!?

ಧೌಮ್ಯ : ಹೌದು ಮಗು. ಈ ಪಾಠವನ್ನು ಕೃಷಿ ನಮಗೆ ಪ್ರಾಯೋಗಿಕವಾಗಿ ಕಲಿಸುತ್ತದೆ

ಆರುಣಿ : ತಿನ್ನಲು ಆಹಾರವನ್ನೂ ನೀಡಿ, ಪಾಠವನ್ನೂ ಕಲಿಸುವ ಕೃಷಿಗೆ ನಮೋನ್ನಮಃ!!

ಶಿಷ್ಯರು : ನಮೋನ್ನಮಃ…. ನಮೋನ್ನಮಃ….

(ಧೌಮ್ಯ ಶಿಷ್ಯರನ್ನು ನೋಡಿ ನಗುವರು. )

ಧೌಮ್ಯ : ಸರಿ ಹಾಗಾದರೆ…. ಭತ್ತದ ಗದ್ದೆಯ ಬಳಿ ಹೋಗೋಣವೆ?

ಶಿಷ್ಯರು : ಹೋಗೋಣ ಗುರುವರ್ಯ…

 

 ದೃಶ್ಯ 2 : ಭತ್ತದ ಗದ್ದೆ 

ಎಲ್ಲರೂ ಭತ್ತದ ಗದ್ದೆಯ ಬಳಿ ಬರುತ್ತಾರೆ. ಹುಡುಗರು ಬಯಲಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ. ಬುಟ್ಟಿ ಎತ್ತಿಡುವುದು, ಮಣ್ಣು ಅಗೆಯುವುದೇ ಮೊದಲಾದ ಕೆಲಸ ಮಾಡುತ್ತಿದ್ದಾರೆ

ಧೌಮ್ಯ : (ಸ್ವಗತ) : ಗದ್ದೆಯ ಬದು ಒಡೆದುಹೋಗಿರುವಂತಿದೆ! ಇಷ್ಟೊಂದು ನೀರು ಹರಿದರೆ….

(ಚಿಂತಾಕ್ರಾಂತರಾಗಿ ಅತ್ತ ಇತ್ತ ನೋಡುತ್ತಾರೆ…)

ಯಾರಿಗೆ ಹೇಳಲಿ…

(ಆರುಣಿಯನ್ನು ನೋಡುತ್ತಾರೆ)

ಓ! ಆರುಣಿ!! ಇವನಿಗಿಂತ ಉತ್ತಮನಾದ ಶಿಷ್ಯನಿಲ್ಲ. ಹೇಳಿದ ಎಲ್ಲ ಕೆಲಸವನ್ನೂ ಸಮರ್ಪಕವಾಗಿ ಮಾಡುತ್ತಾನೆ. ಇವನಿಗೇ ಹೇಳುತ್ತೇನೆ.

(ಜೋರಾಗಿ ಕರೆಯುತ್ತಾನೆ)

ಆರುಣಿ….! ಪಾಂಚಾಲ ಆರುಣಿ…!!

ಆರುಣಿ : (ಬುಟ್ಟಿಯನ್ನು ಕೆಳಗಿಡುತ್ತಾ) ಬಂದೆ ಗುರವರ್ಯ….

(ಕೈಯೊರೆಸಿಕೊಳ್ತಾ ನಿಲ್ಲುತ್ತಾನೆ) ಆದೇಶ ನೀಡಿ ಗುರುವರ್ಯ….

ಧೌಮ್ಯ : ಮಗೂ, ಆರುಣಿ! ಗದ್ದೆಯಲ್ಲಿ ಬದು ಒಡೆದು ನೀರು ಹರಿದುಹೋಗುತ್ತಿದೆ. ಮಣ್ಣಿನಿಂದ ಆ ಬದುವನ್ನು ಕಟ್ಟಿ, ಗದ್ದೆಯಿಂದ ನೀರು ಹೊರಹೋಗದಂತೆ ಮಾಡಿ ಬಾ

ಆರುಣಿ : ಹಾಗೇ ಆಗಲಿ ಗುರುವರ್ಯ…

(ಕಾಲಿಗೆ ನಮಸ್ಕರಿಸಿ ಹೊರಡುತ್ತಾನೆ)

 

ದೃಶ್ಯ 3 : ಗದ್ದೆ ಬದು

 (ಬದುವನ್ನು ಮಣ್ಣಿನಿಂದ ಮುಚ್ಚಲು ಪ್ರಯತ್ನಿಸುತ್ತಿದ್ದಾನೆ. ನೀರಿನ ರಭಸಕ್ಕೆ ಅದು ಕುಸಿದು ಬೀಳುತ್ತಲೇ ಇದೆ. ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ…. ಮತ್ತೆ ಮತ್ತೆ ಕುಸಿದುಬೀಳುತ್ತದೆ)

 ಆರುಣಿ : (ಸ್ವಗತ) ಎಷ್ಟು ಗಟ್ಟಿಯಾಗಿ ಮಣ್ಣು ಕಲೆಸಿ ಕಟ್ಟಿದರೂ ಇದು ನಿಲ್ಲುತ್ತಿಲ್ಲ… ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದೆ….

ಈಗೇನು ಮಾಡಲಿ!?

(ಯೋಚಿಸುತ್ತಿದ್ದಾನೆ)

ಗುರುಗಳು ಹೇಳಿದ ಕೆಲಸವನ್ನು ಹೇಗಾದರೂ ನಡೆಸಲೇಬೇಕು. ಹಿಂಜರಿಯುವ ಮಾತೇ ಇಲ್ಲ!

ಆದರೆ…. ಈ ನೀರಿನ ಹರಿವನ್ನು ಹೇಗೆ ನಿಲ್ಲಿಸಲಿ?

(ಯೋಚಿಸುತ್ತಿದ್ದಾನೆ… ಉಪಾಯ ಹೊಳೆಯುತ್ತದೆ)

ಹಾ! ಹೀಗೆ ಮಾಡುತ್ತೇನೆ! ಬದು ಕಟ್ಟಲಾಗದೆ ಹೋದರೆ ಏನಂತೆ… ನೀರು ಹರಿಯದಂತೆ ನಾನೇ ಅಡ್ಡ ಮಲಗಿಬಿಡುತ್ತೇನೆ!!

(ಅಡ್ಡ ಮಲಗುತ್ತಾನೆ)

ಗುರುಗಳ ಆದೇಶ ಪಾಲನೆಗಿಂತ ಮುಖ್ಯ ಯಾವುದೂ ಇಲ್ಲ. ನಾನಿಂದು ಕೃತಾರ್ಥನಾದೆ…

 

ದೃಶ್ಯ 4 : ಭತ್ತದ ಗದ್ದೆ

(ಮಳೆ ಶುರುವಾಗುತ್ತದೆ. ಇತ್ತ ಧೌಮ್ಯ ಮತ್ತು ಶಿಷ್ಯರು ಗದ್ದೆಯಿಂದ ಹೊರಡುವ ತಯಾರಿಯಲ್ಲಿದ್ದಾರೆ)

 ಧೌಮ್ಯ : ಉಪಮನ್ಯು! ಮಳೆಯ ರಭಸ ಹೆಚ್ಚುವ ಮೊದಲು ಆಶ್ರಮ ಸೇರಿಕೊಳ್ಳಬೇಕು. ಎಲ್ಲರನ್ನೂ ಹೊರಡಿಸು…

 ಉಪಮನ್ಯು : ಆಗಲಿ ಗುರುವರ್ಯ…

(ಉಪಮನ್ಯು, ಬೈದ, ಇತರ ಶಿಷ್ಯರು ಕೆಲಸವೆಲ್ಲ ಹಾಗೇ ನಿಲ್ಲಿಸಿ, ಪರಿಕರ ಬದಿಗಿಟ್ಟು ಹೊರಡುತ್ತಾರೆ)

 

ದೃಶ್ಯ 5 : ಗುರುಕುಲ

(ಧೌಮ್ಯರು ತಾಳೆಗರಿ ಹಿಡಿದುಕೊಂಡು ಕುಳಿತುಕೊಂಡಿದ್ದಾರೆ. ಬೈದ, ಉಪಮನ್ಯು ಅಲ್ಲಿಗೆ ಬರುತ್ತಾರೆ)

ಬೈದ : ಗುರುವರ್ಯ… ಆರುಣಿ ಇನ್ನೂ ಮರಳಿ ಬಂದಿಲ್ಲ

ಉಪಮನ್ಯು : ಹೌದು ಗುರುವರ್ಯ. ಬದುವಿಗೆ ಒಡ್ಡು ಕಟ್ಟುವೆನೆಂದು ಹೇಳಿ ಹೋಗಿದ್ದ

ಧೌಮ್ಯ : ಹೌದು! ನಾನೇ ಅವನಿಗೆ ಆ ಕೆಲಸ ಹೇಳಿದ್ದು. ಆದರೆ… ಇಷ್ಟು ಹೊತ್ತು ಎಲ್ಲಿಗೆ ಹೋದ?

(ಹೊರಗೆ ಕಣ್ಣಾಡಿಸುತ್ತಾರೆ)

ಹೊರಗೆ ಗಾಢಾಂಧಕಾರವಿದೆ. ಮಳೆ ಬೇರೆ ಜೋರಾಗಿ ಬರುತ್ತಿದೆ. ಆರುಣಿ ಎಲ್ಲಿ ಹೋದ!?

(ಬೈದನ ಕಡೆ ತಿರುಗಿ)

ಬೈದ! ಹೋಗು… ಪಂಜು ತೆಗೆದುಕೊಂಡು ಬಾ. ಮಳೆ ತಗ್ಗಿದ ಮೇಲೆ ಆರುಣಿಯನ್ನು ಹುಡುಕಲು ಹೋಗೋಣ.

 

ದೃಶ್ಯ 6 : ಗದ್ದೆ ಬದು

 (ಗುರು ಶಿಷ್ಯರು ಪಂಜು ಹಿಡಿದು ಭತ್ತದ ಗದ್ದೆಗೆ ಬಂದಿದ್ದಾರೆ)

ಉಪಮನ್ಯು, ಬೈದ : ಆರುಣಿ… ಮಿತ್ರ ಆರುಣಿ….. ಎಲ್ಲಿದ್ದೀಯ!?

ಶಿಷ್ಯರು : ಆರುಣಿ….. ಆರುಣೀ…. ಎಲ್ಲಿದ್ದೀಯ…!?

ಧೌಮ್ಯ : ನಿಲ್ಲಿ. ನಾವು ಬದುವಿನ ಕಡೆ ಹೋಗೋಣ. ಅವನು ಅಲ್ಲಿರಬಹುದು.

(ಎಲ್ಲರೂ ಅಲ್ಲಿಗೆ ಹೋಗುತ್ತಾರೆ)

ಧೌಮ್ಯ : ಆರುಣಿ…. ಮಗೂ ಆರುಣಿ….

(ಆರುಣಿಯ ದನಿ ಕ್ಷೀಣವಾಗಿ ಕೇಳುತ್ತದೆ)

 ಆರುಣಿ : ಗುರುವರ್ಯ!

ಇಲ್ಲಿದ್ದೇನೆ ಗುರುವರ್ಯ…!!

(ಬಂದು ನಿಲ್ಲುತ್ತಾನೆ. ಮೈಕೈ ಪೂರ್ತಿ ಕೆಸರಾಗಿದೆ. ತೊಯ್ದು ಹೋಗಿದ್ದಾನೆ)

(ಪಾದಕ್ಕೆರಗಿ, ಕೈಮುಗಿದು ಕೇಳುತ್ತಾನೆ)

ಆರುಣಿ : ಆದೇಶ ನೀಡಿ ಗುರುವರ್ಯ!!

ಧೌಮ್ಯ : ಇದೇನು ಅವಸ್ಥೆ ಮಗು!? ಇದು ಹೇಗಾಯಿತು !? ಮಣ್ಣಿನಲ್ಲಿ ಹೊರಳಾಡಿ ಬಂದಂತೆ ಕಾಣುತ್ತಿರುವೆ!!

ಆರುಣಿ : ಗುರುವರ್ಯ…. ಗದ್ದೆಯ ಬದು ಒಡೆದು ನೀರು ಕೊಚ್ಚಿಹೋಗುತ್ತಿತ್ತು. ನಿಮ್ಮ ಆದೇಶದಂತೆ ಅದನ್ನು ಕಟ್ಟಲು ಪ್ರಯತ್ನಿಸಿದೆ. ಆದರೆ ಅದು ಪದೇಪದೇ ಕೊಚ್ಚಿಹೋಗುತ್ತಿತ್ತು. ಕೊನೆಗೆ ನಾನೇ ಅಡ್ಡವಾಗಿ ಮಲಗಿಬಿಟ್ಟೆ

ಧೌಮ್ಯ : ಹೀಗೇಕೆ ಮಾಡಿದೆ ಮಗು!? ನನ್ನ ಬಳಿ ಬಂದು ಹೇಳಬಹುದಿತ್ತಲ್ಲವೆ?

ಆರುಣಿ : ಗುರುವಿನ ಆದೇಶ ನೆರವೇರಿಸಲು ಸಂಪೂರ್ಣ ಪ್ರಯತ್ನ ಹಾಕಬೇಕು. ಜೀವವನ್ನು ಪಣಕ್ಕಿಟ್ಟಾದರೂ ಸರಿ, ಅದನ್ನು ನಡೆಸಬೇಕು ಎಂದು ನೀವೇ ಹೇಳಿದ್ದಿರಲ್ಲವೆ ಗುರುವರ್ಯ!

(ಸಹಪಾಠಿಗಳು ಅವನಿಗೆ ವಸ್ತ್ರ ತಂದುಕೊಟ್ಟು ಮೈಯೊರೆಸಿ ಸಹಾಯ ಮಾಡುತ್ತಿದ್ದಾರೆ)

ಧೌಮ್ಯ : (ಅವನನ್ನು ಅಪ್ಪಿಕೊಂಡು) ಧನ್ಯ ಮಗು… ಧನ್ಯ! ನಿನ್ನ ಗುರುಭಕ್ತಿಯನ್ನು ಮೆಚ್ಚಿದೆ.  

ಗದ್ದೆಯನ್ನು ಸೀಳಿಕೊಂಡು ಮೇಲೆ ಬಂದಿರುವ ನೀನು ಉದ್ಧಾಲಕ ಎಂದೇ ಪ್ರಸಿದ್ಧನಾಗುವೆ. ನಿನ್ನ ಗುರುನಿಷ್ಠೆ, ನಿನ್ನ ಹೆಸರಿನಿಂದಲೇ ಪ್ರಸಿದ್ಧವಾಗುವುದು. ಸಮಸ್ತ ವೇದ – ಶಾಸ್ತ್ರಗಳು ನಿನಗೆ ಒಲಿಯಲಿ

(ಆರುಣಿ ಧೌಮ್ಯರ ಕಾಲಿಗೆ ನಮಸ್ಕರಿಸುತ್ತಾನೆ)

ಆರುಣಿ : ಕೃತಾರ್ಥನಾದೆ ಗುರುದೇವ… ! ಗುರುಸೇವೆಗಿಂತ, ಗುರುವರ್ಯರ ಆದೇಶ ಪಾಲನೆಗಿಂತ ಹೆಚ್ಚಿನದು ನನ್ನ ಪಾಲಿಗೆ ಮತ್ತೊಂದಿಲ್ಲ. ಅದರಿಂದಲೇ ನಾನಿಂದು ಸಕಲ ಜ್ಞಾನವನ್ನೂ ಪಡೆದೆ… ಧನ್ಯನಾದೆ ಗುರುದೇವ… ಧನ್ಯನಾದೆ….

ಉಪಮನ್ಯ : ಗುರು ಧೌಮ್ಯರಿಗೆ…!
ಶಿಷ್ಯರು : ಜಯವಾಗಲಿ….

ಬೈದ : ಉದ್ಧಾಲಕನೆಂಬ ಆರುಣಿಗೆ…

ಶಿಷ್ಯರು : ಜಯವಾಗಲಿ…!!

ಉಪಮನ್ಯ : ಗುರು ಧೌಮ್ಯರಿಗೆ…!
ಶಿಷ್ಯರು : ಜಯವಾಗಲಿ….

ಬೈದ : ಉದ್ಧಾಲಕನೆಂಬ ಆರುಣಿಗೆ…

ಶಿಷ್ಯರು : ಜಯವಾಗಲಿ…!!

(ಎಲ್ಲರೂ ಅಲ್ಲಿಂದ ಹೊರಡುತ್ತಾರೆ….) 

Leave a Reply