ವಿದಾಯ ~ ಪ್ರವಾದಿ : ಅಂತಿಮ ಅಧ್ಯಾಯ

ನಿಮ್ಮಲ್ಲಿ ಇನ್ನೂ ಕೆಲವರು
ಮಾತುಗಳಲ್ಲಿ ಅಲ್ಲದಿದ್ದರೂ
ನನ್ನನ್ನು ಹೀಗೆ ಆಡಿಕೊಳ್ಳುತ್ತೀರಿ.

“ ಅಪರಿಚಿತನೇ, ಆಗಂತುಕನೇ
ಮುಟ್ಟಲಾಗದ ಎತ್ತರಗಳನ್ನು ಪ್ರೀತಿಸುವವನೇ,
ಗರುಡ, ಗೂಡು ಕಟ್ಟುವ ಜಾಗಗಳಲ್ಲಿ
ಯಾಕೆ ನೆಲೆಸ ಬಯಸುತ್ತಿ?

“ ಅಸಾಧ್ಯದ ಬೆನ್ನ ಹಿಂದೆ ಯಾಕೆ ಬಿದ್ದಿರುವಿ ?

“ ಯಾವ ಬಿರುಗಾಳಿಗೆ ಗಾಳ ಹಾಕಿರುವಿ?

“ಆಕಾಶದಲ್ಲಿ ಯಾವ ಗಾಳಿ ಹಕ್ಕಿಯ ಬೆನ್ನಿಗೆ ಬಾಣ ಹೂಡಿರುವಿ?

“ ಬಾ ನಮ್ಮೊಳಗೆ ಒಂದಾಗು,

“ ಕೆಳಗಿಳಿದು ಬಾ,
ನಮ್ಮ ಮನೆಯ ರೊಟ್ಟಿ ತಿಂದು,
ಹಸಿವ ತೀರಿಸಿಕೋ
ನಮ್ಮ ತೋಟದ ವೈನ್ ಕುಡಿದು
ತೃಷೆಯ ಇಂಗಿಸಿಕೋ”

ಅವರ ಆತ್ಮಗಳು ಏಕಾಂತದಲ್ಲಿದ್ದಾಗ
ಅವರು ಹೀಗೆ ಮಾತನಾಡಿದ್ದಾರೆ ;

ಅವರ ಏಕಾಂತ ಆಳವಾಗಿದ್ದಲ್ಲಿ
ಅವರಿಗೆ ಗೊತ್ತಾಗುತ್ತಿತ್ತು
ನಾನು ಬಯಸಿದ್ದು
ಅವರ ನೋವು ನಲಿವುಗಳ ರಹಸ್ಯಗಳನ್ನ.

ಮತ್ತು ನಾನು ಬೆನ್ನು ಬಿದ್ದದ್ದು
ಆಕಾಶದಲ್ಲಿ ಹೆಜ್ದೆ ಹಾಕುತ್ತಿರುವ ಅವರ
ಮಹಾ ಆತ್ಮದ ಹಿಂದೆ.

ಆದರೆ ಬೇಟೆಗಾರ ಕೂಡ ಬೇಟೆಯಾಗಿದ್ದ;

ಏಕೆಂದರೆ
ನನ್ನ ಬಿಲ್ಲಿನಿಂದ ಹೊರಟ ಎಷ್ಟೋ ಬಾಣಗಳು
ನನ್ನ ಎದೆಯನ್ನೇ ಗುರಿಯಾಗಿ ಹೊಂದಿದ್ದವು.

ಮತ್ತು, ಹಾರುವವನೇ ತೆವಳುವವನೂ ಆಗಿದ್ದ ;

ಏಕೆಂದರೆ,
ಸೂರ್ಯನ ಬಿಸಿಲಲ್ಲಿ
ನನ್ನೀ ರೆಕ್ಕೆಗಳು ಚಾಚಿಕೊಂಡಾಗ
ನೆಲದ ಮೇಲೆ ಅದರ ನೆರಳು
ಆಮೆಯಂತೆ ತೆವಳುತ್ತಿತ್ತು.

ಮತ್ತು ನನ್ನಂಥ
ನಂಬಿಕೆಯಲ್ಲಿ ನಂಬಿಕೆ ಇಟ್ಟವ ಕೂಡ
ಮಹಾ ಸಂಶಯಿಯಾಗಿದ್ದ.

ನಿಮ್ಮಲ್ಲಿ ಆಳ ನಂಬಿಕೆ ಹೊಂದಲು
ಮತ್ತು ನಿಮ್ಮ ಅಪಾರ ಜ್ಞಾನವನ್ನು ನನ್ನದಾಗಿಸಿಕೊಳ್ಳಲು
ಎಷ್ಟೋ ಬಾರಿ ನಾನು
ನನ್ನ ಗಾಯವನ್ನೇ ಬೆರಳಿನಿಂದ ಚುಚ್ಚಿಕೊಂಡಿದ್ದೇನೆ.

ಮತ್ತು ಈ ನಂಬಿಕೆ ಹಾಗು
ಈ ತಿಳುವಳಿಕೆಯಿಂದಲೇ ಹೇಳುತ್ತಿರುವೆ,

ನೀವು ನಿಮ್ಮ ದೇಹಗಳಲ್ಲಿ ಬಂಧಿಯಾಗಿಲ್ಲ
ಹಾಗು ನಿಮ್ಮ ಹೊಲ, ಮನೆಗಳಿಗೆ ಸೀಮಿತವಾಗಿಲ್ಲ.

ಆ ನಿಮ್ಮೊಳಗಿನ ನೀವು
ಬೆಟ್ಟ ಗುಡ್ಡಗಳ ಮೇಲೆ ನೆಲೆ ಕಂಡುಕೊಂಡಿದೆ
ಮತ್ತು, ಗಾಳಿಯೊಡನೆ ಹಾಯಿ ಹಾಕುತ್ತ
ಸಂಚಾರ ಹೊರಟಿದೆ.

ಅದು, ಬೆಚ್ಚಗಾಗಲು ಬಿಸಿಲಲ್ಲಿ ತೆವಳುವ ವಸ್ತು ಅಲ್ಲ
ಸುರಕ್ಷತೆಗಾಗಿ ಕತ್ತಲಲ್ಲಿ ಬಿಲ ಕೊರೆಯುವ ವಸ್ತುವೂ ಅಲ್ಲ.

ಅದು ಮುಕ್ತ, ಸರ್ವ ಸ್ವತಂತ್ರ,
ಭೂಮಿಯನ್ನು ಒಳಗೊಂಡು ಆಕಾಶದಲ್ಲಿ
ಪ್ರಯಾಣ ಮಾಡುವ ದಿವ್ಯ ಚೇತನ.

ಈ ಮಾತುಗಳು ಅಸ್ಪಷ್ಟ ಅನಿಸಿದರೆ
ಹಾಗೇ ಇರಲಿ
ಸ್ಪಷ್ಟತೆಗಾಗಿ ಚಡಪಡಿಸಬೇಡಿ.

ಅಸ್ಪಷ್ಟತೆ, ಅನಿಶ್ಚಿತತೆಯೇ
ಎಲ್ಲದರ ಶುರುವಾತು ಆದರೆ
ಖಂಡಿತ ಮುಕ್ತಾಯವಲ್ಲ.

ನನ್ನನ್ನು ನೀವು ಆರಂಭ ಎಂದು ತಿಳಿಯುವುದಾದರೆ
ಅದೇ ನನಗೆ ಖುಶಿ.

ಬದುಕು ಮತ್ತು ಜೀವ ವೈವಿಧ್ಯ ಹುಟ್ಟುಗಟ್ಟಿದ್ದು ಮಂಜಿನಲ್ಲಿಯೇ ಹೊರತು
ಹರಳುಗಳಲ್ಲಿ ಅಲ್ಲ.

ಯಾರಿಗೆ ಗೊತ್ತು
ಆರಿ ಹೋಗುತ್ತಿರುವ ಮಂಜೇ
ಹರಳುಗಟ್ಟಿರಬಹುದು.

ನನ್ನನ್ನು ನೆನಪು ಮಾಡಿಕೊಳ್ಳುವಾಗಲೆಲ್ಲ
ನಿಮಗೆ ಇದು ನೆನಪಾಗಲಿ.

ನಿಮ್ಮಲ್ಲಿ ಅತ್ಯಂತ ದುರ್ಬಲ
ತೀರ ಗೊಂದಲ ಎಂದು ಕಾಣಬರುವುದೇ
ನಿಮ್ಮ ಶಕ್ತಿಯಾಗಿದೆ, ಧೃಢ ನಿಶ್ಚಯವಾಗಿದೆ.

ನಿಮ್ಮ ಅಸ್ಥಿ ಪಂಜರವನ್ನು
ಎತ್ತಿ ನಿಲ್ಲಿಸಿದ್ದು, ಗಟ್ಟಿ ಮಾಡಿದ್ದು
ನಿಮ್ಮ ಉಸಿರೇ ಅಲ್ಲವೆ?

ನಿಮ್ಮ ಊರನ್ನು ನೆಲೆಗೊಳಿಸಿದ್ದು
ಅದರೊಳಗಿನ ಎಲ್ಲವನ್ನೂ ವ್ಯವಸ್ಥೆಗೊಳಿಸಿದ್ದು
ನೀವು ಕನಸಿದ ಆದರೆ ನೆನಪಿನಲ್ಲಿಟ್ಟುಕೊಳ್ಳಲು
ಮರೆತು ಹೋದ ನಿಮ್ಮ ಕನಸೇ ಅಲ್ಲವೆ?

ಆ ಉಸಿರಾಟದ ಏರಿಳಿತಗಳನ್ನು
ನೀವು ಗಮನಿಬಲ್ಲಿರಾದರೆ
ಬೇರೆ ಯಾವುದನ್ನೂ ನೀವು ನೋಡಬಯಸುವುದಿಲ್ಲ.

ಕನಸಿನ ಪಿಸುಮಾತನ್ನು ಕೇಳ ಬಲ್ಲಿರಾದರೆ
ಬೇರೆ ಯಾವ ಶಬ್ದವನ್ನೂ ನೀವು ಕೇಳಬಯಸುವುದಿಲ್ಲ.

ಆದರೆ ನಿಮಗೆ ಹಾಗೆ
ಗಮನಿಸಲು ಸಾಧ್ಯವಾಗದೇ ಹೋದರೆ,
ಕೇಳಲು ಆಗದೇ ಹೋದರೆ, ಚಿಂತೆಯಿಲ್ಲ.

ನಿಮ್ಮ ದೃಷ್ಟಿಯನ್ನು
ಮರೆಮಾಚಿದ ಪರದೆಯನ್ನ
ಅದನ್ನು ನೇಯ್ದ ಕೈಗಳೇ ಕಿತ್ತಿ ಎಸೆಯುವವು.

ನಿಮ್ಮ ಕಿವಿಯಲ್ಲಿ ತುಂಬಿರುವ ಮಣ್ಣನ್ನು
ಅದನ್ನು ಅಲ್ಲಿ ತುಂಬಿದ ಕೈಗಳೇ ಸ್ವಚ್ಛ ಮಾಡುವವು.

ಆಗ ನೀವು ನೋಡುವಿರಿ
ಆಗ ನೀವು ಕೇಳುವಿರಿ

ಆದರೂ ನೀವು
ಕುರುಡರಾಗಿದ್ದಕ್ಕೆ ವಿಷಾದ ವ್ಯಕ್ತ ಮಾಡಬೇಡಿ
ಕಿವುಡರಾಗಿದ್ದಕ್ಕೆ ಪಶ್ಚಾತಾಪ ಪಡಬೇಡಿ.

ಏಕೆಂದರೆ, ಆ ದಿನಗಳಲ್ಲಿಯೇ
ನಿಮಗೆ ಗೊತ್ತಾಗುವುದು
ಎಲ್ಲ ಸಂಗತಿಗಳ ಹಿಂದಿನ ಉದ್ದೇಶ.

ಆಗಲೇ ನೀವು ಕತ್ತಲೆಯನ್ನು ಹರಸುವಿರಿ
ಬೆಳಕನ್ನು ಹರಸಿದಂತೆ.

ಇಷ್ಟು ಹೇಳಿ ಅವನು
ತನ್ನನ್ನು ತಾನು ಮತ್ತು ಇನ್ನೊಮ್ಮೆ
ಸುತ್ತಮುತ್ತಲಿನವರತ್ತ ಕಣ್ಣು ಹಾಯಿಸಿದ.
ಹಡಗಿನ ಕಪ್ತಾನ
ಚುಕ್ಕಾಣಿಯ ಬಳಿ ನಿಂತು
ಹಾಯಿಪಟವನ್ನೊಮ್ಮೆ ಮತ್ತು
ತಾನು ಕ್ರಮಿಸಬೇಕಾಗಿರುವ ದೂರವನ್ನೊಮ್ಮೆ
ಗಮನಿಸುತ್ತಿರುವುದನ್ನು ಕಂಡ.

ಮತ್ತೆ ಮಾತನಾಡಿದ,

ತಾಳ್ಮೆಯವ, ಅಪಾರ ತಾಳ್ಮೆಯವ
ನಮ್ಮ ಕಪ್ತಾನ.

ಗಾಳಿ ಬೀಸುತ್ತಿದೆ,
ಹಾಯಿಪಟ ಒಂದೇ ಸವನೆ ಚಡಪಡಿಸುತ್ತಿದೆ.

ಚುಕ್ಕಾಣಿಯೂ ದಿಕ್ಕು ತೋರಿಸಲು ಬೇಡಿಕೊಳ್ಳುತ್ತಿದೆ.

ಆದರೂ ಕಪ್ತಾನ, ಸಮಾಧಾನದಿಂದ
ನನ್ನ ಮೌನವನ್ನು ನಿರೀಕ್ಷಿಸುತ್ತಿದ್ದಾನೆ.

ಮತ್ತು ನನ್ನ ಈ ನಾವಿಕರು
ಮಹಾಸಾಗರದ ವೃಂದ ಗಾನಕ್ಕೆ ಕಿವಿಯಾದವರು
ನನ್ನನ್ನು ಸಮಾಧಾನದಿಂದ ಕೇಳಿದ್ದಾರೆ.

ಇನ್ನು ಅವರಿಂದ ಕಾಯುವುದು ಸಾಧ್ಯವಿಲ್ಲ

ನಾನೂ ಸಿದ್ಧ

ತೊರೆ, ಸಾಗರಕ್ಕೆ ಬಂದು ಮುಟ್ಟಿದೆ
ಮತ್ತೊಮ್ಮೆ, ಮಹಾಮಾಯಿ ತನ್ನ ಕಂದನನ್ನು
ಎದೆಗೆ ಒತ್ತಿಕೊಂಡಿದ್ದಾಳೆ.

ಆರ್ಫಲೀಸ್ ನ ಮಹಾಜನರೇ
ಈ ವಿದಾಯವನ್ನು ಒಪ್ಪಿಸಿಕೊಳ್ಳಿ.

ಮುಗಿಯಿತು ಇಲ್ಲಿಗೆ ಈ ದಿನ

ತನ್ನ ನಾಳೆಗಾಗಿ
ಕಮಲದ ಹೂವು ತನ್ನ ಪಕಳೆಗಳನ್ನು ಮುಚ್ಚಿಕೊಳ್ಳುವಂತೆ
ದಿನದ ಕೊನೆ ನಮ್ಮನ್ನು ಆವರಿಸಿಕೊಳ್ಳುತ್ತಿದೆ.

ನಮಗಿಲ್ಲಿ ಕೊಡಲಾಗಿದ್ದನ್ನ
ಜೋಪಾನದಿಂದ ಇಟ್ಟುಕೊಳ್ಳೋಣ.

ನಮಗಿದು ಸಾಕಾಗದಿದ್ದಲ್ಲಿ
ಮತ್ತೆ ನಾವೆಲ್ಲ ಒಂದುಗೂಡೋಣ,
ಒಂದು ಗೂಡಿಯೇ
ಕೊಡುವವನ ಮುಂದೆ ಕೈ ಚಾಚೋಣ.

ನಾನು ಮತ್ತೆ ಬರುವೆ, ಮರೆಯಬೇಡಿ.

ಇನ್ನು ಕೆಲವೇ ಕ್ಷಣಗಳಲ್ಲಿ
ನನ್ನ ತುಡಿತ
ಇನ್ನೊಂದು ದೇಹಕ್ಕಾಗಿ
ನೊರೆ ಮತ್ತು ಧೂಳನ್ನು ಸಂಗ್ರಹಿಸಲಿದೆ.

ಇನ್ನು ಕೆಲವೇ ಕೆಲವು ಘಳಿಗೆಗಳಲ್ಲಿ
ಗಾಳಿಯಲೆಗಳ ಮೇಲಿನ
ಒಂದು ಕ್ಷಣದ ವಿಶ್ರಾಂತಿಯ ನಂತರ
ಇನ್ನೊಬ್ಬ ಹೆಣ್ಣು, ನನ್ನ ಧರಿಸುವಳು

ನಿಮಗೆ ಮತ್ತು ನಿಮ್ಮೊಂದಿಗೆ ಕಳೆದ ಹರೆಯಕ್ಕೊಂದು
ಶುಭ ವಿದಾಯ.

ಅದು ನಿನ್ನೆಯೇ ಅಲ್ಲವೆ, ನಾವು ಕನಸಿನಲ್ಲಿ ಭೇಟಿಯಾಗಿದ್ದು.
ನನ್ನ ಒಂಟಿತನದ ಎದುರು ನೀವು ಹಾಡು ಹಾಡಿದ್ದೀರಿ
ನಿಮ್ಮ ಬಯಕೆಗಳನ್ನು ಬಳಸಿ ನಾನು
ಆಕಾಶದಲ್ಲಿ ಗೋಪುರವೊಂದನ್ನು ಕಟ್ಟಿದ್ದೇನೆ.

ಆದರೆ ಈಗ ನಮ್ಮ ನಿದಿರೆ ಮುಗಿದಿದೆ
ಕನಸು ಹರಿದಿದೆ
ಬೆಳಗೂ ಕೂಡ ದಾಟಿ ಮುಂದೆ ಹೋಗಿದೆ.
ನಟ್ಟ ನಡು ಹಗಲು, ನೆತ್ತಿಯ ಮೇಲಿದೆ
ನಮ್ಮ ಅರೆ ಎಚ್ಚರ, ಪೂರ್ಣ ದಿನದ ರೂಪ ತಾಳಿದೆ
ನಾವೀಗ ವಿದಾಯಕ್ಕೆ ಸಿದ್ಧರಾಗಲೇಬೇಕು.
ನೆನಪಿನ ಮುಸ್ಸಂಜೆಯಲ್ಲಿ
ನಾವು ಇನ್ನೊಮ್ಮೆ ಭೇಟಿಯಾಗುವುದೇ ಆದರೆ ಕುಳಿತು ಮಾತನಾಡೋಣ
ನನಗಾಗಿ ನೀವು ಮತ್ತೊಮ್ಮೆ ಆರ್ತರಾಗಿ ಹಾಡಿ.
ಕನಸುಗಳಲ್ಲಿ ನಮ್ಮ ಕೈಗಳು
ಮತ್ತೊಮ್ಮೆ ಬೆಸೆದುಕೊಳ್ಳುವುದೇ ಆದಲ್ಲಿ
ಆಕಾಶದಲ್ಲಿ ಇನ್ನೊಂದು ಗೋಪುರವನ್ನು ಕಟ್ಟೋಣ.

ಹೀಗೆ ನುಡಿಯುತ್ತಲೇ ಅವನು
ನಾವಿಕರಿಗೆ ಸನ್ನೆ ಮಾಡಿದ,
ನಾವಿಕರು ಲಂಗರು ಎತ್ತಿದರು
ಹಡಗನ್ನು ತೀರಕ್ಕೆ ಕಟ್ಟಿಹಾಕಿದ್ದ ಹಗ್ಗಗಳಿಂದ
ಮುಕ್ತಗೊಳಿಸಿದರು.
ಹಡಗು, ಪೂರ್ವಾಭಿಮುಖವಾಗಿ ಮುನ್ನಡೆಯಿತು.

ಆಗಲೇ, ಜನರ ನಡುವಿನಿಂದ
ಆಕ್ರಂದನವೊಂದು ಹೊಮ್ಮಿತು
ಒಂದೆ ಹೃದಯದಿಂದ ಎಂಬಂತೆ.
ಆ ಅಳು ಮುಸ್ಸಂಜೆಯೊಂದಿಗೆ
ದೀರ್ಘವಾಗುತ್ತ ಸಾಗರದ ಅಲೆಗಳ ಮೇಲೆ
ಕಹಳೆಯ ಸದ್ದಿನಂತೆ ಭೋರಿಡುತ್ತ ಪಸರಿಸತೊಡಗಿತು.

ಅಲ್’ಮಿತ್ರ ಒಬ್ಬಳೇ ಮೌನವಾಗಿ
ಹಡಗನ್ನು ದಿಟ್ಟಿಸುತ್ತಿದ್ದಳು
ಅದು ಮಂಜಿನೊಳಗೆ ಒಂದಾಗಿ
ಕಣ್ಮರೆಯಾಗುವ ತನಕ.

ಸೇರಿದ ಎಲ್ಲ ಜನ ಚದುರಿ ಹೋದರೂ
ಅವಳು ಸುಮ್ಮನೇ ಸಮುದ್ರದ ಕಟ್ಟೆಯ ಮೇಲೆ ನಿಂತಿದ್ದಳು
ತನ್ನ ಹೃದಯದಲ್ಲಿ, ಅವನ ಮಾತುಗಳನ್ನ ಮೆಲಕು ಹಾಕುತ್ತ :
“ಇನ್ನು ಕೆಲವೇ ಕೆಲವು ಘಳಿಗೆಗಳಲ್ಲಿ
ಗಾಳಿಯಲೆಗಳ ಮೇಲಿನ
ಒಂದು ಕ್ಷಣದ ವಿಶ್ರಾಂತಿಯ ನಂತರ
ಇನ್ನೊಬ್ಬ ಹೆಣ್ಣು, ನನ್ನ ಧರಿಸುವಳು”

ಮುಗಿಯಿತು.

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.  

ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ.  ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.