ತಿಪ್ಪೆಗುಂಡಿ ಪೂಜೆ, ಜೂಜು, ಕಳವು … ಹಬ್ಬದ ಮೋಜಿಗೆ ಸಂಕೇತ ಹಲವು!

ದೀಪಾವಳಿ ಆಯಾ ಪ್ರಾಂತ್ಯ, ಜನಜೀವನಕ್ಕೆ ತಕ್ಕಂತೆ ಇದು ವೈವಿಧ್ಯಮಯವಾಗಿ ಆಚರಣೆಗೊಳ್ಳುವ ಬಹುಸಂಸ್ಕೃತಿಯ ಹಬ್ಬ. ಈ ಭಿನ್ನತೆಯ ನಡುವೆಯೂ ದೀಪಾವಳಿಯ ಮೂಲ ಕಾಳಜಿ ಎಲ್ಲ ಬಗೆಯ ಕತ್ತಲನ್ನು ಕಳಚಿ ಮುನ್ನಡೆಯುವುದೇ ಆಗಿದೆ ~ ಗಾಯತ್ರಿ

ಪ್ರೀತಿಯ ಕರೆ ಕೇಳಿ, ಆತ್ಮನ ಮೊರೆ ಕೇಳಿ, ನೀ ಬಂದು ನಿಂದಿಲ್ಲಿ ದೀಪ ಹಚ್ಚಾ… ಅನ್ನುತ್ತದೆ ಕವಿವಾಣಿ. ದೀಪಾವಳಿಯ ಆಶಯ ಅದೇ ಆಗಿದೆ. ಸ್ವಂತದ ಉದ್ಧಾರಕ್ಕೆ, ಸಹಬಾಳ್ವೆಯ ಸವಿಗೆ ದೀಪ ಹಚ್ಚಬೇಕು. ನಮ್ಮ ಬದುಕನ್ನು ಸಾಧ್ಯವಾಗಿಸಿರುವ ಭೂಮಿ, ಗೋವು, ಬಂಧು ಬಾಂಧವರನ್ನೊಳಗೊಂಡು ವರ್ಷದಲ್ಲಿ ಒಮ್ಮೆಯಾದರೂ ದೀಪೋತ್ಸವ ಆಚರಿಸಬೇಕು. ಈ ನಿಟ್ಟಿನಲ್ಲಿ ನಾಡಿನ ಬೇರೆಬೇರೆ ಕಡೆಗಳಲ್ಲಿ ಭಿನ್ನ ಆಚರಣೆಗಳು ಪರಂಪರಾನುಗತವಾಗಿ ಬಂದಿವೆ. ಇಂದಿಗೂ ಉಳಿದುಕೊಂಡಿವೆ. ಇಂಥಹ ಸಂಭ್ರಮಗಳು ನಮ್ಮ ದೇಶದ `ವಿವಿಧತೆಯಲ್ಲಿ ಏಕತೆ’ಯೆಂಬ ಹೆಮ್ಮೆಯನ್ನು ಮತ್ತೆ ಮತ್ತೆ ಸಾಬೀತುಗೊಳಿಸುತ್ತವೆ.

ದೇಶದೆಲ್ಲೆಡೆ ದೀಪಾವಳಿ ಒಟ್ಟು 5 ದಿನಗಳ ಕಾಲ ಆಚರಿಸಲ್ಪಡುತ್ತದೆ. ಅಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಿಂದ ಕಾರ್ತಿಕ ಶುದ್ಧ ತದಿಗೆಯವರಿವಿಗೂ ಇದು ನಡೆಯುತ್ತದೆ. ತ್ರಯೋದಶಿಯಂದು ನೀರು ತುಂಬುವ ಹಬ್ಬ. ಚತುರ್ದಶಿಯಂದು (ನರಕ ಚತುರ್ದಶಿ) ಅಭ್ಯಂಜನ ಸ್ನಾನ, ಅಮಾವಾಸ್ಯೆಯ ದಿನ ಧನಲಕ್ಷ್ಮಿ ಪೂಜೆ, ಪಾಡ್ಯಕ್ಕೆ ಬಲಿ ಪಾಡ್ಯಮಿ ಅಥವಾ ಗೋಪಾಡ್ಯ. ಇದು ಮೇಲ್ನೋಟಕ್ಕೆ ಕಾಣುವ ದೀಪಾವಳಿ ಸಾಲಿನ ಹಬ್ಬಗಳು. ಆದರೆ ಸ್ಥಳೀಯವಾಗಿ ಈ ಹಬ್ಬವು ತನಗೆ ವಿಶಿಷ್ಟವಾದ ಹಿನ್ನೆಲೆಗಳೊಂದಿಗೆ ಆಚರಿಸಲ್ಪಡುತ್ತದೆ.

ತಿಪ್ಪೆ ಗುಂಡಿಗೆ ಮರ್ಯಾದೆ
ಗ್ರಾಮೀಣ ಭಾಗಗಳ ದೀಪಾವಳಿ ಹೊಲಗದ್ದೆಗಳು ಮತ್ತು ಗೋವುಗಳೊಂದಿಗೆ ತಳಕು ಹಾಕಿಕೊಂಡಿದೆ. ಪಾಡ್ಯದಿಂದ ಆರಂಭಿಸಿ ಮೂರು ದಿನಗಳ ಕಾಲ ಮನೆಯ ಎಲ್ಲಾ ಬಾಗಿಲುಗಳ ಹೊಸ್ತಿಲಿನಲ್ಲಿ `ಕೆರ್ಕ’ನನ್ನು ಕೂರಿಸುವುದು ಇವರ ವಿಶಿಷ್ಟ ಪದ್ಧತಿ. ಕೆಲವು ಪ್ರದೇಶಗಳಲ್ಲಿ ಕೆರ್ಕವನ್ನು ಇಡುವುದಕ್ಕೆ `ಬಲೀಂದ್ರ’ನನ್ನು ಕೂರಿಸುವುದು ಎಂದೂ ಹೇಳುತ್ತಾರೆ. ಸೆಗಣಿಯಿಂದ ಗೋಪುರಗುಪ್ಪೆಗಳನ್ನು ಮಾಡಿ, ಅದರ ತಲೆ ಮೇಲೊಂದು ಚೆಂಡು ಹೂವನ್ನಿಟ್ಟು, ಹೊಸ್ತಿಲುಗಳ ಎರಡೂ ಬದಿ ಇರಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಹಿಂದಿನ ಮುಸ್ಸಂಜೆ ವೇಳೆ `ತಿಪ್ಪೆ ಪೂಜೆ’ ಮಾಡುತ್ತಾರೆ. ತಿಪ್ಪೆ ಅಂದರೆ ಗೊಬ್ಬರ ಗುಂಡಿಗೆ (ಇದನ್ನು ತಿಪ್ಪೇದೇವರು ಎಂದು ಕರೆದು ಗೌರವಿಸುತ್ತಾರೆ) ಹೂವು, ಮಂತ್ರಾಕ್ಷತೆಗಳನ್ನು, ವಿವಿಧ ಧಾನ್ಯಗಳ ತೆನೆಗಳನ್ನು, ಹುಚ್ಚೆಳ್ಳು ಹೂವುಗಳನ್ನು ಹಾಕಿ, ಮಂಗಳಾರತಿ ಎತ್ತಿ ಪೂಜಿಸಲಾಗುತ್ತದೆ. ಪಾಡ್ಯದ ದಿನ ಹೊಲಗದ್ದೆಗಳಲ್ಲಿ ಬಳಸುವ ಪರಿಕರಗಳನ್ನು ತೊಳೆದಿರಿಸಿ ಅವಕ್ಕೂ ಪೂಜೆ ಸಲ್ಲಿಸಲಾಗುತ್ತದೆ.

ದೈತ್ಯರಾಜನ ಹಬ್ಬ
ದೀಪಾವಳಿ ಹೆಚ್ಚೂಕಡಿಮೆ ರಕ್ಕಸ ರಾಜರ ನೆನಪಿನ ಆಚರಣೆಗಳಂತೆ ಇದೆ. ಚತುರ್ದಶಿಯನ್ನು ನರಕ ಚತುರ್ದಶಿ ಎಂದು ಕರೆದರೆ, ಪಾಡ್ಯವನ್ನು ಬಲಿ ಪಾಡ್ಯಮಿ ಎಂದು ಕರೆಯಲಾಗುತ್ತದೆ. ಕರಾವಳಿ ಮತ್ತು ದಕ್ಷಿಣ ಕರ್ನಾಟಕದಲ್ಲಿ ಬಲೀಂದ್ರನ ಮೇಲೆ ಪ್ರೀತಿ ಹೆಚ್ಚು. ದಕ್ಷಿಣ ಕನ್ನಡದಲ್ಲಿ ಕಾರ್ತೀಕ ಪಾಡ್ಯದಂದು ಗದ್ದೆಗಳಲ್ಲಿ ದೀಪ ಹಚ್ಚಿ, ಬಲೀಂದ್ರನಿಗೆ ಪೂಜೆ ಮಾಡಿ ಕೂಗು ಹಾಕಿ, ಆತನನ್ನ ಮತ್ತೆ ಬಾ ಎಂದು ಕರೆದು, ಕಳುಹಿಸಿಕೊಡಲಾಗುತ್ತದೆ. ಪಾಡ್ಯಕ್ಕೆ ಎರಡು ಮೂರು ದಿನ ಮೊದಲೇ `ಬಲಿಯೇಂದ್ರ’ (ಅದಕ್ಕಾಗಿ ತಲೆಮಾರುಗಳಿಂದ ನಿಯೋಜಿತಗೊಂಡ ಕುಟುಂಬದ ವ್ಯಕ್ತಿ), ಏಕತಾರಿ ಹಿಡಿದು ಬಲಿಯೇಂದ್ರ ಪಾಡ್ದನ ಹೇಳುತ್ತಾ ಹಬ್ಬ ಸಾರುತ್ತಾರೆ. ಮಲೆನಾಡಿನಲ್ಲಿ ಬಲೀಂದ್ರನ್ನು ಕಳುಹಿಸಿಕೊಟ್ಟ ನಂತರ `ಹಬ್ಬ ಹಬ್ಬ ಮಲ್ಲಣ್ಣಾ/ ಹಬ್ಬಕ್ ಮೂರ್ ಹೋಳಿಗೇ/ ಹಬ್ಬ ಕಳ್ಸಿದ್ ಮರುದಿವ್ಸಾ/ ರಾಗೀ ರಬ್ಬಳಿಗೇ’ ಎಂದು ರಾಗವಾಗಿ ಹಾಡುವುದುಂಟು.

ದೀಪ್‍ದೀಪೋಳ್ಗೆ…!
ಹಬ್ಬ ಮುಗಿದರೂ ಹಬ್ಬದ ಕೊಸರು ಮುಗೀಲಿಲ್ಲ ಅನ್ನುವಂತೆ, ದೀಪಾವಳಿ ಪಾಡ್ಯದಿಂದ ತೃತೀಯದವರೆಗೆ ಮೂರು ದಿನಗಳ ಕಾಲ ಹುಡುಗರ `ಹಬ್ಬಾಡುವ’ ಸಂಭ್ರಮ. ಉತ್ತರ ಕನ್ನಡ ಮತ್ತು ಮಲೆನಾಡಿನಲ್ಲಿ ಇದರ ಸಂಪ್ರದಾಯವಿದೆ. ಇದನ್ನು `ಅಂಟಿಕೆ ಪಿಂಟಿಕೆ’ ಅಂತಲೂ ಕರೆಯುತ್ತಾರೆ. ಹಬ್ಬಾಡುವವರು ದೀಪ ಹಿಡಿದುಕೊಂಡು ಮೊದಲೆರಡು ಸಾಲಿನಂತೆ ಕೂಗುತ್ತ ಮನೆಮನೆಗೆ ಬರುತ್ತಾರೆ, ಬಂದು ಹಾಡು ಆರಂಭಿಸುತ್ತಾರೆ. ಮನೆಯವರು, ಹಬ್ಬಾಡುವವರ ದೀಪಕ್ಕೆ ಎಣ್ಣೆ ಹಾಕಿ, ಅವರ ದೀಪದಿಂದ ತಮ್ಮ ಮನೆಯ ದೇವರ ದೀಪ ಹಚ್ಚಿಕೊಳ್ಳುವುದು ಪದ್ಧತಿ. ಅಂಟಿಕೆಪಿಂಟಿಕೆ ಹುಡುಗರಿಗೆ ಹೋಳಿಗೆಯನ್ನಿತ್ತು, ಸಂಭಾವನೆ ನೀಡಲಾಗುತ್ತದೆ. ಈ ಸಂಭಾವನೆಯನ್ನು ಅವರು ಸಮುದಾಯ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ.

ಚಿಳ್ಳೆಗಳಿಂದ ಹಿಡಿದು ಮಧ್ಯವಯಸ್ಕರವರೆಗೆ ಊರಿನ ಯುವಕರ ಎರಡು ಗುಂಪು ತಯಾರಾಗುತ್ತದೆ. ಎರಡೂ ಗುಂಪಿಗೊಂದೊಂದು ದೀಪ. ಈ ದೀಪಗಳಿಗೆ ಕಾಮನ ದೀಪ ಮತ್ತು ಕಟ್ಟಿನ ದೀಪ ಅಂತ ಹೆಸರು. ರಾತ್ರಿಯ ಊಟ ಮುಗಿಸಿ ಈ ಎರಡೂ ಗುಂಪುಗಳೂ ನಿಶ್ಚಿತ ಪ್ರದೇಶದಿಂದ ಊರು ತಿರುಗಾಟಕ್ಕೆ ಹೊರಡುತ್ತವೆ. ಹೊರಟ ಮೇಲೆ ದೀಪ ಆರಬಾರದು ಎನ್ನುವುದು ಒಂದು ನಂಬಿಕೆಯಾದರೆ, ಮಧ್ಯ ಎಲ್ಲೂ ಈ ಎರಡು ಗುಂಪುಗಳು ಪರಸ್ಪರ ಎದುರಾಗಬಾರದು ಎನ್ನುವುದು ಮತ್ತೊಂದು ನಂಬಿಕೆ. ಹಾಗೆಲ್ಲಾದರೂ ಎದುರಾದರೆ ಊರಿಗೆ ಅಪಶಕುನ ಎನ್ನಲಾಗುತ್ತದೆ.

ಹೀಗೆ ಹೊರಟ ತಂಡಗಳು ಜಾನಪದ ಹಾಡುಗಳನ್ನು ತಮ್ಮದೇ ಧಾಟಿಯಲ್ಲಿ ಹಾಡುತ್ತ ಊರಿನ ಮನೆ ಮನೆಗಳಿಗೆ ತೆರಳುತ್ತವೆ. ಸ್ಥಳದಲ್ಲೇ ಹಾಡು ಕಟ್ಟುತ್ತ, ಆ ಹಾಡುಗಳಿಗೆ ಗುಂಪಿನೆಲ್ಲರೂ ದನಿಗೂಡಿಸುತ್ತ, ನಡೆಯುತ್ತ ಸಾಗುತ್ತಾರೆ. `ಧಿಮಿಸಾಲನ್ನಿರಣ್ಣ ಧಿಮಿಸಾಲನ್ನಿರೋ’ ಅನ್ನುವುದು ಹಾಡಿನ ಪ್ರತಿ ಚರಣದ ಕೊನೆಗೆ ಬರುವ ಪಲ್ಲವಿ. ಈ ನಡುವೆ `ದೀಪ್ ದೀಪೋಳ್ಗೆ… ದೀಪಾವಳಿ ಹೋಳ್ಗೆ’ ಎಂದು ಕೂಗು ಹಾಕುತ್ತಿರುತ್ತಾರೆ. ಬೀದಿಯಲ್ಲಿ ಕೆಳೀಬರುವ ಕೂಗು ಮನೆಮಂದಿಯನ್ನು ಎಬ್ಬಿಸಿ, ಎಣ್ಣೆ, ಸಂಭಾವನೆಗೆ ತಯಾರು ಮಾಡಿಟ್ಟಿರುತ್ತದೆ.

ಕಳವು, ಜೂಜು
ದೀಪಾವಳಿ ಸಂಪೂರ್ಣವಾಗಿ ಮನರಂಜನೆಯ ಹಬ್ಬ. ಸಿಹಿ ತಿನಿಸುಗಳು, ಪಟಾಕಿ, ಹೆಚ್ಚು ಮಡಿಮೈಲಿಗೆ ಬೇಡದ ಆಚರಣೆಗಳು ಇವುಗಳೊಟ್ಟಿಗೆ ಕದಿಯಲಿಕ್ಕೆ, ಜೂಜಾಡಲಿಕ್ಕೆ ಮುಕ್ತ ಅವಕಾಶ! ಹೌದು. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನರಕ ಚತುರ್ದಶಿಯಂದು ಕಳವು ಮಾಡಿದವರಿಗೆ ಮಾಫಿ ಇರುತ್ತದೆ. ಏಕೆಂದರೆ ಇದು ಹಬ್ಬದ ಆಚರಣೆಯ ಒಂದು ಭಾಗ. ಇದನ್ನು ಬೂರೆಕಳವು ಅಥವಾ ಬೂರ್‍ಗಳವು ಎಂದೂ ಬೂರೆ ಹಾಯುವುದು ಎಂದೂ ಕರೆಯುತ್ತಾರೆ. ಇದೊಂದು ಮೋಜಿನ ಕದಿಯುವಾಟ. ಕೆಲವು ಮನೆಗಳಲ್ಲಿ ಈ ದಿನ ಕದ್ದುಹೋಗಲೆಂದೇ ಏನಾದರೊಂದು ವಸ್ತುವನ್ನು ಸಿಗುವಂತೆ ಇಟ್ಟು, ಬೆಲೆಯುಳ್ಳದ್ದನ್ನು ರಕ್ಷಿಸಿಕೊಳ್ಳುತ್ತಾರೆ.

ಕರ್ನಾಟಕದ ಉತ್ತರ ಭಾಗದಲ್ಲಿ ಹಬ್ಬದ ಪ್ರಯುಕ್ತ ಜೂಜಿನ ಸಂಭ್ರಮ ಇರುತ್ತದೆ. ಆಶ್ವಯುಜ ಅಮಾವಾಸ್ಯೆಯ ಸಂಜೆ ಶಿವನು ಪಾರ್ವತಿಯೊಡನೆ ಪಗಡೆಯಾಡಿದ್ದನಂತೆ. ಅಂದು ಜಯ ಹೊಂದಿದವರು ವರ್ಷಪೂರ್ತಿ ಜಯ ಹೊಂದುವರು ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ, ಅಮಾವಾಸ್ಯೆ ಮತ್ತು ಪಾಡ್ಯದ ಸಂಜೆಗಳಲ್ಲಿ ಜೂಜಾಡುವುದು ರೂಢಿ. ಮೊದಲೆಲ್ಲಾ ಹಬ್ಬದ ಜೂಜಾಟ ಪಗಡೆಗೆ ಸೀಮಿತವಾಗಿತ್ತು. ಈಗ ಇದು ಇಸ್ಪೀಟನ್ನೂ ಒಳಗೊಂಡಿದೆ.

ಈ ಭಾಗದ ಜಿಲ್ಲೆಗಳಲ್ಲಿ ದೀಪಾವಳಿಯ ದಿನಗಳಲ್ಲಿ ಸಗಣಿಯಿಂದ ಪಾಂಡವರ ಬೊಂಬೆಗಳನ್ನು ಮಾಡಿ ಪೂಜಿಸುವ ವಿಶಿಷ್ಟ ಸಂಪ್ರದಾಯವಿದೆ.

Leave a Reply