ಜಾತಿವ್ಯವಸ್ಥೆಯೇ ಮೂಲ ಕಂಟಕ ~ ಧರ್ಮೋ ರಕ್ಷತಿ ರಕ್ಷಿತಃ #1 : ಅರಳಿಮರ ಸಂವಾದ

ಅಷ್ಟಕ್ಕೂ ಧರ್ಮವು ಸಂಕಷ್ಟಕ್ಕೆ ಸಿಲುಕಿದ್ದಾದರೂ ಎಲ್ಲಿ ಎನ್ನುವುದನ್ನು ಶೋಧಿಸಹೊರಟರೆ, ಇತಿಹಾಸವನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದರೆ ಸನಾತನ ಧರ್ಮದ ಎಲ್ಲಾ ಸಂಕಷ್ಟಗಳಿಗೂ, ಸಮಸ್ಯೆಗಳಿಗೂ, ಕಂಟಕಕ್ಕೂ ಮೂಲ ಬೇರಾಗಿರುವುದು ಈ ”ಜಾತಿವ್ಯವಸ್ಥೆ/ತಾರತಮ್ಯ ವ್ಯವಸ್ಥೆ” ಎಂಬ ಸತ್ಯವು ಅರಿವಾಗುತ್ತದೆ. ಜಾತಿ ವ್ಯವಸ್ಥೆಯೇ ಸನಾತನ ಧರ್ಮದ ಎಲ್ಲಾ ಸಮಸ್ಯೆಗಳ ತಾಯಿ ಬೇರು. ಈ ಜಾತಿ ವ್ಯವಸ್ಥೆಯೆಂಬ ಸಮಸ್ಯೆಯ ಮೂಲ ಬೇರನ್ನು ಸುಡದಹೊರತು ಸನಾತನ ಧರ್ಮಕ್ಕೆ ಉಳಿಗಾಲವಿಲ್ಲ ~ ಅಪ್ರಮೇಯ

samvada
ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಗೀತೆಯ ವಾಕ್ಯ ಧರ್ಮಾಂಧರ ಕೈಸೇರಿ ಬಹಳಷ್ಟು ನಜ್ಜುಗುಜ್ಜಾಗಿದೆ. ಕೃಷ್ಣ ಧರ್ಮ ರಕ್ಷಣೆಯ ಹೆಸರಿನಲ್ಲಿ ತಮ್ಮ ತಮ್ಮಲ್ಲೇ ಹೊಡೆದಾಡಿಕೊಂಡು ಸಾಯಿರಿ ಎಂದು ಎಲ್ಲೂ ಹೇಳಿಲ್ಲ. “ಅಧರ್ಮ ಮಿತಿಮೀರಿದಾಗ ನಾನು ಅವತರಿಸುತ್ತೇನೆ” ಎಂದು ಹೇಳಿದ್ದಾನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಇದರರ್ಥ ಧರ್ಮವನ್ನು ಯಾರೂ ರಕ್ಷಣೆ ಮಾಡಬೇಕಾಗಿಲ್ಲ…ತಮ್ಮ ಪಾಡಿಗೆ ತಾವು ಧರ್ಮಾಚರಣೆ ಮಾಡಿಕೊಂಡಿದ್ದಾರೆ ಸಾಕು.
ಧರ್ಮ ರಕ್ಷಣೆ  : ”ರಕ್ಷಣೆ” ಎನ್ನುವುದರ ಅರ್ಥ = ಆಚರಣೆ.

ಈ ಹೇಳಿಕೆಗೆ ಪ್ರತಿಯಾಗಿ… ಧರ್ಮವನ್ನು ಆಚರಿಸುವುದು ಹೇಗೆ ? ಆಚರಣೆಯಿಂದ ಧರ್ಮ ಉಳಿದೀತೆ ? ಮತಾಂಧರ ಹರಿತವಾದ ಖಡ್ಗದ ಮುಂದೆ ಆಚರಣೆ ಮಾಡುತ್ತಾ ಕೂರುವುದು ಮೂರ್ಖತನವಲ್ಲವೇ ? ಜಿಹಾದಿಗಳು & ಕ್ರೈಸ್ತ ಮಿಷನರಿಗಳು ಮತಾಂತರದ ದೊಡ್ಡ ಜಾಲವನ್ನೇ ಹೆಣೆದಿರುವಾಗ ಹೋರಾಟ ಮಾಡದೆ ತಮ್ಮ ಪಾಡಿಗೆ ತಾವು ಸುಮ್ಮನಿರುವುದು ಯಾವ ನ್ಯಾಯ ? ಮತಾಂಧರ ವಿರುದ್ಧ ಹೋರಾಟ ಮಾಡಬಾರದೆ ? ಸನಾತನಿಗಳಲ್ಲಿ ಜಾಗೃತಿ ಮೂಡಿಸಬಾರದೆ ? ನೂರಾರು ವರ್ಷಗಳಿಂದ ಸನಾತನಿಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ಈಗಲೂ ಮುಂದುವರೆಸಲು ಬಿಡಬೇಕೆ ? ಎಂಬಿತ್ಯಾದಿ ಅನೇಕ ಪ್ರೆಶ್ನೆಗಳು ಹುಟ್ಟಿಕೊಳ್ಳುತ್ತವೆ.
ಮೊದಲನೆಯದಾಗಿ ಈ ಹೋರಾಟ ಹಾರಾಟಗಳಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಹೋರಾಟಗಳಿಂದ, ಪ್ರತಿಭಟನೆಗಳಿಂದ ಧರ್ಮವು ರಕ್ಷಣೆಯಾಗುತ್ತದೆ ಎನ್ನುವುದು ಕನಸಿನ ಮಾತು ಯಾರೊಬ್ಬನಾದರೂ ನಾನು ಹೋರಾಟಗಳಿಂದ, ಪ್ರಚೋದನಕಾರಿ ಭಾಷಣಗಳಿಂದ ಧರ್ಮವನ್ನು ರಕ್ಷಿಸುತ್ತೇನೆ ಎನ್ನುತ್ತಿದ್ದರೆ ಖಂಡತವಾಗಿ ಅವನಂತಹ ಧರ್ಮಕಂಟಕ ಮತ್ತೊಬ್ಬನಿಲ್ಲ

ಅಷ್ಟಕ್ಕೂ ಧರ್ಮವು ಸಂಕಷ್ಟಕ್ಕೆ ಸಿಲುಕಿದ್ದಾದರೂ ಎಲ್ಲಿ ಎನ್ನುವುದನ್ನು ಶೋಧಿಸಹೊರಟರೆ, ಇತಿಹಾಸವನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದರೆ ಸನಾತನ ಧರ್ಮದ ಎಲ್ಲಾ ಸಂಕಷ್ಟಗಳಿಗೂ, ಸಮಸ್ಯೆಗಳಿಗೂ, ಕಂಟಕಕ್ಕೂ ಮೂಲ ಬೇರಾಗಿರುವುದು ಈ ”ಜಾತಿವ್ಯವಸ್ಥೆ/ತಾರತಮ್ಯ ವ್ಯವಸ್ಥೆ” ಎಂಬ ಸತ್ಯವು ಅರಿವಾಗುತ್ತದೆ.
ಜಾತಿ ವ್ಯವಸ್ಥೆಯೇ ಸನಾತನ ಧರ್ಮದ ಎಲ್ಲಾ ಸಮಸ್ಯೆಗಳ ತಾಯಿ ಬೇರು. ಈ ಜಾತಿ ವ್ಯವಸ್ಥೆಯೆಂಬ ಸಮಸ್ಯೆಯ ಮೂಲ ಬೇರನ್ನು ಸುಡದಹೊರತು ಸನಾತನ ಧರ್ಮಕ್ಕೆ ಉಳಿಗಾಲವಿಲ್ಲ.
ಈ ಜಾತಿ ವ್ಯವಸ್ಥೆ / ತಾರತಮ್ಯ ವ್ಯವಸ್ಥೆಯೇ ಸನಾತನ ಧರ್ಮ ವಿರುದ್ಧ ಹೊಸ ಹೊಸ ಸಮಸ್ಯೆಗಳನ್ನೂ,ಕಂಟಕವನ್ನೂ ಸೃಷ್ಟಿಸುತ್ತಿದೆ.. ಹೊಸ ಹೊಸ ಸಮಸ್ಯೆಗಳಿಗೆ ಹುಟ್ಟುಕೊಡುತ್ತಿದೆ, ಧರ್ಮಕ್ಕೆ ಅತ್ಯಂತ ದೊಡ್ಡ ಡ್ಯಾಮೇಜ್ ಆಗಿರುವುದು ಈ ಜಾತಿವ್ಯವಸ್ಥೆಯಿಂದಲೇ.

ವೇದಗಳು ಅಸಮಾನತೆಯನ್ನು ಸೃಷ್ಟಿಸುತ್ತದೆ, ಜಾತಿ ವ್ಯವಸ್ಥೆ ಗೆ ಸನಾತನ ಧರ್ಮವೇ ಮೂಲ ಕಾರಣ, ಭಗವದ್ಗೀತೆಯು ಉಚ್ಚ-ನೀಚ ಭಾವನೆಯನ್ನು ಪ್ರೋತ್ಸಾಹಿಸುತ್ತದೆ, ಭಗವದ್ಗೀತೆಯಲ್ಲಿ ಕೃಷ್ಣ ಹಾಗೆ ಹೇಳಿದ್ದಾನೆ ಹೀಗೆ ಹೇಳಿದ್ದಾನೆ ಇತ್ಯಾದಿ ಅನೇಕ ಅಪವಾದಗಳು ಸಾವಿರಾರು ವರ್ಷಗಳಿಂದಲೂ ಇವೆ. ಇಂತಹ ಕ್ಲಿಷ್ಟಕರವಾದ ಸಿಕ್ಕುಗಟ್ಟಿದ ಸಮಸ್ಯೆಗೆ ಇದೇವರೆಗೆ ಯಾವ ಭಾಷ್ಯಗಳೂ ಸಮಾಧಾನ ಪ್ರದಾನಮಾಡಿಲ್ಲ…ಆದ್ದರಿಂದ ವರ್ಣಗಳ ನಿಜ ಅರ್ಥವನ್ನು ತಿಳಿಯುವುದು ಅತ್ಯಗತ್ಯವಾಗಿದೆ…

ಗೀತೆಯಲ್ಲಿ ಕೃಷ್ಣ ”ಚಾರ್ತುವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ’’ ಎಂದು ಹೇಳಿದ್ದಾನೆ ಕೆಲವು ಪಂಡಿತರು ಇದಕ್ಕೆ ವಿಪರೀತ ಅರ್ಥವನ್ನು ಕಲ್ಪಿಸುತ್ತಾರೆ.
ಬ್ರಾಹ್ಮಣ-ಜ್ಞಾನ, ಕ್ಷತ್ರಿಯ- ಬಲ, ವೈಶ್ಯ-ವ್ಯವಹಾರ ಶೂದ್ರ- ಸೇವೆ ಇವುಗಳಲ್ಲಿ ಯಾರು ಯಾವ ಗುಣವನ್ನು ಹೆಚ್ಚು ಹೊಂದಿರುತ್ತಾರೋ ಅದರ ಆಧಾರದ ಮೇಲೆ ವರ್ಣಗಳನ್ನು ವಿಂಗಡಿಸುತ್ತಾರೆ. ಈವರೆಗಿನ ಎಲ್ಲಾ ಭಾಷ್ಯಗಳಲ್ಲಿಯೂ ಹೀಗೆಯೇ ಹೇಳಲಾಗಿದೆ.

ನನಗೆ ಇದು ಅಷ್ಟೊಂದು ಸಮಂಜಸವೆನಿಸುವುದಿಲ್ಲ ಏಕೆಂದರೆ ಮೇಲೆ ತಿಳಿಸಿದ ಎಲ್ಲಾ ಗುಣಗಳೂ ಎಲ್ಲರಲ್ಲಿಯೂ ಇವೆ ಮತ್ತು ಎಲ್ಲರೂ ಯಾವುದಾದರೊಂದೇ ಗುಣವನ್ನು ಎಲ್ಲಾ ಸಂಧರ್ಭಗಳಲ್ಲಿ ಹೊಂದಿರಲು ಸಾಧ್ಯವಿಲ್ಲ ಗುಣಗಳು ಅವನ ಕಾರ್ಯ, ಸಂಧರ್ಭ ಸನ್ನಿವೇಶಗಳ ಆಧಾರದ ಮೇಲೆ ಬದಲಾಗುತ್ತಿರುತ್ತವೆ

ಒಬ್ಬ ವ್ಯಕ್ತಿ ಸೇವಾಕಾರ್ಯದಲ್ಲಿ ತೊಡಗಿದಾಗ ಅಲ್ಲಿ ಅವನ ಸೇವಾಗುಣವು ವ್ಯಕ್ತವಾಗುತ್ತದೆ ಆ ಸಂಧರ್ಭದಲ್ಲಿ ಅವನು ಶೂದ್ರನಾಗುವನು ಅದೇ ವ್ಯಕ್ತಿ ಬೇರೊಬ್ಬರೊಂದಿಗೆ ವ್ಯವಹರಿಸುವಾಗ ಅಲ್ಲಿ ಅವನ ವ್ಯಾವಹಾರಿಕ ಗುಣವು ವ್ಯಕ್ತವಾಗುತ್ತದೆ ಆ ಸಂದರ್ಭದಲ್ಲಿ ಅವನು ವೈಶ್ಯನಾಗುವನು. ಅದೇ ವ್ಯಕ್ತಿ ದೇಶರಕ್ಷಣೆಯ ಕಾರ್ಯದಲ್ಲಿ ತೊಡಗಿದರೆ ಅವನು ಕ್ಷತ್ರಿಯನಾಗುವನು ಮತ್ತು ಆ ವ್ಯಕ್ತಿ ಜ್ಞಾನಾಭಿವೃದ್ಧಿಯ ಕಾರ್ಯದಲ್ಲಿ ತೊಡಗಿದಾಗ ಅವನು ಬ್ರಾಹ್ಮಣನಾಗುವನು. 
ಒಬ್ಬನೇ ವ್ಯಕ್ತಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಈ ನಾಲ್ಕು ವರ್ಣದವನೂ ಅಗಬಲ್ಲ ಅದು ಅವನ ಕಾರ್ಯ, ಸಂಧರ್ಭ, ಸನ್ನಿವೇಶಗಳ ಆಧಾರದ ಮೇಲೆ ವ್ಯಕ್ತವಾಗುತ್ತದೆ. ಇದನ್ನೇ ಕೃಷ್ಣ ಗುಣ-ಕರ್ಮ(ಕಾರ್ಯದ ಆಧಾರದ ಮೇಲೆ) ವಿಭಾಗಶಃ ಎಂದದ್ದು.
ಒಬ್ಬ ವೈಶ್ಯನಾಗಿದ್ದವನು ದೇಶರಕ್ಷಣೆಯ ಕಾರ್ಯದಲ್ಲಿ ತೊಡಗಿದಾಗ ಅಲ್ಲಿ ಅವನು ಕ್ಷತ್ರಿಯನಾಗಿಯೇ ಆ ಕಾರ್ಯವನ್ನು ನಿರ್ವಹಿಸಬೇಕು ಅಲ್ಲಿ ಅವನು ತನ್ನ ವ್ಯಾವಹಾರಿಕ ಗುಣವನ್ನು ವ್ಯಕ್ತಪಡಿಸಿದನಾದರೆ ಅವನು ದೇಶದ್ರೋಹಿಯಾಗುವನು. ಒಬ್ಬ ಬ್ರಾಹ್ಮಣ ಎನಿಸಿಕೊಂಡ ವ್ಯಕ್ತಿ ಸೇವಾಕಾರ್ಯದಲ್ಲಿ ತೊಡಗಿದ್ದರೆ ಅಲ್ಲಿ ಅವನು ಶೂದ್ರನೇ ಆಗಿರುತ್ತಾನೆ. ಇಲ್ಲಿ ಅವನು ಬ್ರಾಹ್ಮಣನಾಗಿದ್ದಾಗ ಶ್ರೇಷ್ಠ, ಶೂದ್ರನಾದಾಗ ಕನಿಷ್ಠ ಎಂಬ ವಿಂಗಡಣೆಯಿಲ್ಲ.

ಪುರುಷಸೂಕ್ತವೂ ಕೂಡ ಇದೆ ವ್ಯಾಖ್ಯಾನವನ್ನು ಪುಷ್ಠಿಕರಿಸುತ್ತದೆ
ಬ್ರಹ್ಮಣೋsಸ್ಯ ಮುಖಮಾಸಿದ್ಬಾಹೂ ರಾಜನ್ಯಃ ಕೃತಃ |
ಊರೂ ತದಸ್ಯ ಯದ್ವೈಶ್ಯಃ ಪಧ್ಮ್ಯಾಂ ಶೂದ್ರೋ ಅಜಾಯತ ||

ಈ ಮಂತ್ರದಲ್ಲಿ ಹೇಳಲಾಗಿರುವ ಮುಖ, ಬಾಹು, ತೊಡೆ, ಪಾದಗಳನ್ನು ಒಂದೇ ದೇಹಕೆ ಸೂಚಿಸಿ ಹೇಳಲಾಗಿದೆಯೇ ಹೊರತು ಬೇರೆ ಬೇರೆ ವ್ಯಕ್ತಿಯನ್ನು ಸೂಚಿಸಿ ಹೇಳಿಲ್ಲ ಇದರರ್ಥ ಸ್ಪಷ್ಟ ವ್ಯಕ್ತಿಯೊಬ್ಬನಲ್ಲೇ ಎಲ್ಲಾ ವರ್ಣದ ಗುಣಗಳೂ ಅಂತರ್ಗತವಾಗಿರುತ್ತದೆ ಆಯಾ ಕರ್ಮಕ್ಕೆ ಅನುಗುಣವಾಗಿ ಅದು ವ್ಯಕ್ತವಾಗುತ್ತದೆ ಆಯಾ ಸಂಧರ್ಭಕ್ಕೆ ತಕ್ಕಂತೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರನಾಗಿ ಬದಲಾಗುತ್ತಾನೆ.
ಪರಶುರಾಮನನ್ನು ಬ್ರಹ್ಮಕ್ಷತ್ರಿಯನೆಂದೆ ಕರೆಯಲಾಗುತ್ತದೆ ಅಂದರೆ ಅವನು ಬ್ರಾಹ್ಮಣನೂ ಹೌದು, ಕ್ಷತ್ರಿಯನೂ ಹೌದು ಒಬ್ಬನೇ ವ್ಯಕ್ತಿ ನಾಲ್ಕು ವರ್ಣದವನೂ ಆಗಬಲ್ಲ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

ಪರಮಾತ್ಮನ ದೇಹದಿಂದ ಈ ನಾಲ್ಕು ವರ್ಣದವರು ಉತ್ಪನ್ನವಾಗಿದ್ದಾರೆ ಎನ್ನುವುದು ಸುಳ್ಳು, ಇದರಲ್ಲಿ ಯಾವುದೇ ತಿರುಳಿಲ್ಲ ಏಕೆಂದರೆ ದೇವರಂತೂ ನಿರಾಕಾರ, ಅನಂತ ನಿರಾಕಾರನಾದ ಪರಮಾತ್ಮನಿಗೆ ಕೈ, ಕಾಲು, ತಲೆಗಳು ಎಲ್ಲಿಂದ ಬರಬೇಕು ? ದೇಹವಿದ್ದವನು ಎಂದೂ ಅನಂತನಾಗಲಾರ.

ಅಷ್ಟಕ್ಕೂ ಈ ಎಲ್ಲಾ ಪ್ರಮಾಣಗಳು ವರ್ಣಗಳನ್ನು ಗುಣ-ಕರ್ಮದ ಆಧಾರದ ಮೇಲೆ ದೇವರು ಸೃಷ್ಟಿಸಿದ್ದಾನೆ ಎಂದು ಹೇಳುತ್ತಿವೆಯೇ ಹೊರತೂ ವರ್ಣವ್ಯವಸ್ಥೆಯನ್ನು/ತಾರತಮ್ಯ ವ್ಯವಸ್ಥೆಯನ್ನು ನೀವೇ ಸೃಷ್ಟಿಸಿಕೊಳ್ಳಿ, ತಮ್ಮ ತಮ್ಮಲ್ಲೇ ಭೇದಗಳನ್ನು ಸೃಷ್ಟಿಸಿಕೊಳ್ಳಿ ಎಂದು ಸನಾತನದ ಯಾವ ಪ್ರಮಾಣ ಗ್ರಂಥಗಳಲ್ಲಿಯೂ ಇಲ್ಲ.

ಯಾವ ಆಧಾರದ ಮೇಲೆ ತಮ್ಮನ್ನು ತಾವು ಬ್ರಾಹ್ಮಣನೆಂದು ಅನ್ವಯಿಸಿಕೊಂಡಿರಿ ? ಯಾವ ಆಧಾರದ ಮೇಲೆ ತಾರತಮ್ಯವನ್ನು ಸೃಷ್ಟಿಯಾದವು ?

ವರ್ಣಗಳನ್ನು ಆಚರಿಸಬೇಕಾಗಿಲ್ಲ. ಅವು ಗುಣ-ಕರ್ಮಕ್ಕೆ ಅನುಗುಣವಾಗಿ ಸ್ವಭಾತಃ ವ್ಯಕ್ತವಾಗುತ್ತದೆ. ನಮ್ಮ ನಮ್ಮಲ್ಲೇ ಭೇದಗಳನ್ನು ಸೃಷ್ಟಿಸಿಕೊಳ್ಳಬೇಕಾಗಿಲ್ಲ, ಉಚ್ಚ-ನೀಚ ಎಂಬ ಸಮಸ್ಯೆಯ ಸುಳಿಗೆ ಸಿಲುಕಬೇಕಾಗಿಲ್ಲ.

ಇದನ್ನೇ ಮೈತ್ರೇಯಿ ಉಪನಿಷತ್ ನಲ್ಲಿ ಹೀಗೆ ಹೇಳಲಾಗಿದೆ:
ವರ್ಣಾಶ್ರಮಾಚಾರಯುತಾಃ ವಿಮೂಢಾಃ ಕರ್ಮಾನುಸಾರೇಣ ಫಲಮ್ ಲಭಂತೇ | ವರ್ಣಾದಿಧರ್ಮಮ್ ಹಿ ಪರಿತ್ಯಜಂತಃ ಸ್ವಾನಂದತೃಪ್ತಾಃ ಪುರುಷಾಃ ಭವಂತಿ || ೧೩ ||

“ವರ್ಣ ಮತ್ತು ಆಶ್ರಮಗಳ ಧರ್ಮವನ್ನು ಆಚರಿಸುವ ಅಜ್ಞಾನಿಗಳು ತಮ್ಮ ಕರ್ಮಕ್ಕೆ ಅನುಗುಣವಾಗಿ ಫಲವನ್ನು ಹೊಂದುತ್ತಾರೆ. ವರ್ಣಾಶ್ರಮ ಧರ್ಮಗಳನ್ನು ತ್ಯಾಗಮಾಡಿ, ಆತ್ಮವನ್ನು ಧ್ಯಾನಿಸುವ ಪುರುಷರು ಆತ್ಮನಲ್ಲಿಯೇ ಆನಂದವನ್ನು ಹೊಂದುತ್ತಾರೆ” 
-ಎನ್ನುತ್ತಾಳೆ ಬ್ರಹ್ಮವಾದಿನಿ ಮೈತ್ರೇಯಿ
ಮೈತ್ರೇಯಿಯಂತೂ ವರ್ಣಗಳನ್ನು ಆಚರಿಸುವವರನ್ನು ಅಜ್ಞಾನಿಗಳೆಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ.

ಸಾವಿರಾರು ವರ್ಷಗಳಿಂದ ಸಿಕ್ಕುಗಟ್ಟಿದ ಸಮಸ್ಯೆಗೆ ಈ ವ್ಯಾಖ್ಯಾನ ಮಾತ್ರವೇ ಸಮಾಧಾನಪ್ರಧಾನ ಮಾಡಬಲ್ಲದು
ವೇದವೆಂದರೆ ಎಲ್ಲಾ ಕಾಲಕ್ಕೂ ಅನ್ವಯಿಸುವಂತದ್ದು ಇದು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಬೇಕು ಆದರೆ ವರ್ಣವನ್ನು ವ್ಯಾಖ್ಯಾನಿಸಿದ ಹಳೆಯ ಎಲ್ಲಾ ಭಾಷ್ಯಗಳೂ ಇಂದಿನ ಕಾಲಕ್ಕೆ ಅಪ್ರಸ್ತುತ. ಆದ್ದರಿಂದ ವರ್ಣಗಳ ಕುರಿತಾದ ನನ್ನ ವ್ಯಾಖ್ಯಾನವು ಎಲ್ಲಾ ಕಾಲಕ್ಕೂ ಅನ್ವಯಿಸುವುದರಿಂದ ಈ ವ್ಯಾಖ್ಯಾನವೇ ಪರಮ ಸತ್ಯ ಎನ್ನುವುದು ನಿರೂಪಿತವಾಗುತ್ತದೆ.

(ಮುಂದುವರೆಯುವುದು……)

ಅಪ್ರಮೇಯ ಅವರು ಆರಂಭಿಸಿರುವ  ಈ ಚರ್ಚಾ ಸರಣಿ ಮುಗಿದ ನಂತರ ಆಸಕ್ತರು ತಮ್ಮ ವಾದ ಮುಂದಿಟ್ಟು ಸಂವಾದ ಮುಂದುವರೆಸಬಹುದು. 

ಈ ಅಂಕಣದಲ್ಲಿ ಪ್ರಕಟವಾಗುವ ಲೇಖನಗಳು ಸಂಪೂರ್ಣವಾಗಿ ಲೇಖಕರ ಅಭಿಪ್ರಾಯ ಮಾತ್ರವಾಗಿರುತ್ತದೆ. 

4 Comments

  1. ಬಹಳ ದುಃಖಕರ ಸಂಗತಿ ಏನೆಂದರೆ ಸಂವಿಧಾನವೇ ಮತ್ತು ಆಡಳಿತ ವ್ಯವಸ್ಥೆಯೇ ಮೀಸಲಾತಿ ಎಂಬ ಪದ್ಧತಿಯನ್ನು ಆಚರಿಸಿಕೊಂಡು ಬಂದು ಜಾತಿ ವ್ಯವಸ್ಥೆಯನ್ನು ಪರೋಕ್ಷವಾಗಿ ಉಳಿಸಿಕೊಂಡು ಬರಲು ಕಾರಣವಾಗಿದೆ., ಎಂದು ಆಡಳಿತ ವ್ಯವಸ್ಥೆಯಲ್ಲಿ ಮೀಸಲಾತಿ ಎಂಬ ಪದವು ಅಳಿದು ಹೋಗುತ್ತದೋ.. ಅಂದೇ ಈ ಜಾತಿ ವ್ಯವಸ್ಥೆ ಅಳಿದು ಹೋಗಲು ಪ್ರಾರಂಭಿಸುತ್ತದೆ

    1. ಮೀಸಲಾತಿಗೂ ಅಂದು ಇಂದು ಎಂದೆಂದೂ ತಾಂಡವವಾಡುತ್ತಿರುವ ಜಾತಿವ್ಯವಸ್ಥೆಗೂ ಯಾವುದೆ ಸಂಬಂಧವಿಲ್ಲ. ಸಂವಿಧಾನ ಬರುವ ಮುಂಚೆಯೇ ಸಾವಿರಾರು ವರ್ಷಗಳಿಂದ ಜಾತಿವ್ಯವಸ್ಥೆ ಬೆಳೆದು ಬಂದಿದೆ. ಜಾತಿ ಎನ್ನುವುದು ಅಕ್ಷರಗಳಲ್ಲಿಲ್ಲ ಅಳಿಸಿಹಾಕಲು. ಅದು ಮನುಷ್ಯನ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿದೆ. ಮೊದಲು ನಮ್ಮೊಳಗಿರುವ ಆ ಬೇರನ್ನು ಕತ್ತರಿಸಬೇಕು. ಆದರೆ ದುರಂತ ಎಂದರೆ ಜಾತಿ ವ್ಯವಸ್ಥೆಯನ್ನು ಬೆಂಬಲಿಸುವ ಎಲ್ಲರೂ ಸಂವಿಧಾನ ಬದಲಿಸುವ ಮಾತನ್ನಾಡುತ್ತಾರೆ.

  2. ಉತ್ತಮ ಬರಹ , ಪಾರಂಪರಿಕ ಭಿನ್ನತೆ ಇರುತ್ತದೆ , ಜಾತಿ > ಹುಟ್ಟುತ್ತಲೇ ಬಂದಿರುವುದು ಎಂದು ಮಹಾಭಾರತದಲ್ಲಿ ಭೀಷ್ಮಾಚಾರ್ಯರೇ ಹೇಳುತ್ತಾರೆ. ಜಾತಿ ಮತ್ತು ವರ್ಣ ಇವೆರಡು ಬೇರೆ ಬೇರೆ. ಕುಲಾಚಾರ , ಶಿವಾಚಾರ ಎಂದು ಶೈವ ಮತದಲ್ಲಿ ಬರುತ್ತದೆ. ಶಿವಾಚಾರದ ಪ್ರಕಾರ ಎಲ್ಲವೂ ಶಿವನೇ ಅಂದರೂ ಕುಲಾಚಾರದ ಪ್ರಕಾರ ಮದುವೆ ಸಂಬಂಧಕ್ಕೆ ಕುಲವನ್ನು ಅರಸುತ್ತಾರೆ. ಪ್ರಾಚೀನರಂತೆ ಕುಲಾಚಾರ , ವರ್ಣವ್ಯವಸ್ಥೆ ಕೌಟುಂಬಿಕವಾಗದೆ ಗುಣ , ಕೆಲಸದ ಮೆಲೆ ಆಧಾರಿತವಾಗುವ ವಿಶಾಲತೆ ಬಂದರೆ ಜಾತಿಯ ಸಮಸ್ಯೆಗೆ ಪರಿಹಾರ ದೊರಕಬಹುದು

Leave a Reply