ಸಾವನ್ನು ಎದುರು ನೋಡ್ತಾ ಇರೋ ಝೆನ್ ಮಾಸ್ಟರ್, ತನ್ನ ಶಿಷ್ಯರನ್ನು ಎದುರು ಕೂರಿಸಿಕೊಂಡು ಒಂದು ಕೊನೆಯ ಮಾತು ಹೇಳೋದು ಝೆನ್’ಲ್ಲಿ ಒಂದು ಬಹು ಮುಖ್ಯ ಸಂಪ್ರದಾಯ. ಹೀಗೆ ಝೆನ್ ಮಾಸ್ಟರ್’ಗಳು ಹೇಳಿದ ಕೊನೆಯ ಮಾತುಗಳನ್ನ, ಪದ್ಯಗಳನ್ನ, ಝೆನ್ ವಿದ್ಯಾರ್ಥಿಗಳು ತುಂಬ ಆಸಕ್ತಿಯಿಂದ ಅಧ್ಯಯನ ಮಾಡುತ್ತಾರೆ.
ಝೆನ್ ಮಾಸ್ಟರ್ ಬಾಂಕಿ ಸಾವಿನ ಹಾಸಿಗೆಯಲ್ಲಿದ್ದ. ಅವನ ಶಿಷ್ಯರೆಲ್ಲ ಬಾಂಕಿಯ ಸುತ್ತ ನೆರೆದಿದ್ದರು. ಸಾವಿಗೂ ಮೊದಲು ಕೊನೆಯದಾಗಿ ಒಂದು ಜ್ಞಾನದ ಮಾತು ಹೇಳುವಂತೆ ಹಿರಿಯ ಶಿಷ್ಯ, ಮಾಸ್ಟರ್ ಬಾಂಕಿಯನ್ನು ಕೇಳಿಕೊಂಡ.
ಒಂದು ನಿಮಿಷ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಿದ ಬಾಂಕಿ ಕೊನೆಯದಾಗಿ ಮಾತನಾಡಿದ,
“ ಸಾಯಲು ನನಗೆ ಭಯವಾಗುತ್ತಿದೆ”
ಈ ಮಾತು ಹೇಳಿತ್ತಿದ್ದಂತೆಯೇ ಬಾಂಕಿ, ಕೊನೆಯ ಉಸಿರೆಳೆದ.
ಈ ಮಾತು ಕೇಳುತ್ತಿದ್ದಂತೆಯೇ ಸುತ್ತ ಸೇರಿದ್ದ ಶಿಷ್ಯರಿಗೆಲ್ಲ ಆಶ್ಚರ್ಯ, ಆಘಾತ ಆಯಿತು. ಆಗ ಅಲ್ಲಿಗೆ ಬಂದ ಇನ್ನೊಬ್ಬ ಝೆನ್ ಮಾಸ್ಟರ್ ಗೆ, ಶಿಷ್ಯರು ಪ್ರಶ್ನೆ ಮಾಡಿದರು.
“ಮಾಸ್ಟರ್ ಬಾಂಕಿಗೆ ಜ್ಞಾನೋದಯವಾಗಿದ್ದರೆ, ಅವನು ಈ ಥರ ಉತ್ತರ ಕೊಡುತ್ತಿರಲಿಲ್ಲ ಅಲ್ಲವೆ?”
ಮಾಸ್ಟರ್ ಗದ್ಗತಿತನಾಗಿ ಉತ್ತರ ಕೊಟ್ಟ.
“ಬಾಂಕಿಯ ಉತ್ತರ ಕೇಳಿದ ಮೇಲೆ ನನಗಂತೂ ಒಂದು ವಿಷಯ ಸ್ಪಷ್ಚವಾಯಿತು, ಬಾಂಕಿಗೆ ನಿಜವಾಗಿಯೂ ಜ್ಞಾನೋದಯವಾಗಿತ್ತು. ಏಕೆಂದರೆ ಝೆನ್’ಲ್ಲಿ ಎಲ್ಲಕ್ಕಿಂತಲೂ ಶ್ರೇಷ್ಠ ಜ್ಞಾನವೆಂದರೆ ಅದು ಪ್ರಾಮಾಣಿಕತೆ”
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)