ಭಕ್ತಿ, ನಿಷ್ಠೆ : ತಾವೋ ಧ್ಯಾನ ~ 5

ದಾರಿ ಸ್ಪಷ್ಟವಿದ್ದಾಗ, ವ್ಯಕ್ತಿತ್ವಗಳು ಒಂದಾದಾಗ ಒಳ ಜಗತ್ತು ಮತ್ತು ಹೊರ ಜಗತ್ತುಗಳ ನಡುವೆ ಯಾವುದೇ ಅಂತರವಿಲ್ಲ. ಆಗ ಯಾವದೂ ದೂರವಲ್ಲ, ಯಾವ ಬಾಗಿಲೂ ನಮಗಾಗಿ ತೆರೆದುಕೊಳ್ಳಲು ನಿರಾಕರಿಸುವುದಿಲ್ಲ  ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao5

ಬಾಗಿರುವುದ ನೇರ ಮಾಡು
ನೇರವಾಗಿರುವುದ ಹರಿಯಗೊಡು
ನೀರು, ಬೆಂಕಿ, ಬೆಳಕು ಕಲೆಹಾಕಿ
ಜಗವನ್ನು ಬಿಂದುವಿನಲಿ ನಿಲಿಸು

ಅಧ್ಯಾತ್ಮದ ದಾರಿಯ ಬಗ್ಗೆ ಭಕ್ತಿ, ನಿಷ್ಠೆ, ಶೃದ್ಧೆ ಮತ್ತು ಬದ್ಧತೆ, ನಿಜವಾಗಿಯೂ ನಮ್ಮೊಳಗೆ ಮನೆ ಮಾಡಿದ್ದೇ ಆದಲ್ಲಿ ನಮ್ಮ ಧೃಢತೆ ಸಹಜವಾಗಿ ಚಲನಶೀಲವಾಗುವುದು. ಕನಿಷ್ಠ ಅಡತಡೆಗಳು ಎದುರಾಗುವವು. ಅಂಕುಡೊಂಕಾದ ದಾರಿ ನೇರವಾಗುವುದು. ಉದ್ದೇಶಕ್ಕೆ ಯಾವ ಆತಂಕ ಎದುರಾದರೂ ನಿಶ್ಚಯ, ದಾರಿ ತಪ್ಪಲಾರದು.

ಸುದೀರ್ಘ ಅಭ್ಯಾಸವಷ್ಟೇ ನಿಷ್ಠೆಯ ಗುರುತಲ್ಲ ಸೈರಣೆಯೂ ಒಂದು ಮಹತ್ವದ ಗುಣಲಕ್ಷಣ. ದೇಹ, ಹೃದಯ ಮತ್ತು ಚೇತನಗಳ ನಡುವೆ ಸಾಮರಸ್ಯ ಸಾಧ್ಯವಾದಾಗಲೇ ಭಕ್ತಿ, ಅನುರಕ್ತಿ.

ದಾರಿ ಸ್ಪಷ್ಟವಿದ್ದಾಗ, ವ್ಯಕ್ತಿತ್ವಗಳು ಒಂದಾದಾಗ ಒಳ ಜಗತ್ತು ಮತ್ತು ಹೊರ ಜಗತ್ತುಗಳ ನಡುವೆ ಯಾವುದೇ ಅಂತರವಿಲ್ಲ. ಆಗ ಯಾವದೂ ದೂರವಲ್ಲ, ಯಾವ ಬಾಗಿಲೂ ನಮಗಾಗಿ ತೆರೆದುಕೊಳ್ಳಲು ನಿರಾಕರಿಸುವುದಿಲ್ಲ. ಜಗತ್ತು ಬಿಂದುವಿನಲ್ಲಿ ಒಂದಾಗಿದೆ ಎನ್ನುವುದು ಈ ಕಾರಣಕ್ಕಾಗಿಯೇ : ಭಕ್ತಿ, ಎಷ್ಟು ಗಟ್ಟಿಯಾಗಿದೆಯೆಂದರೆ ಅದರ ಭಾಗವಾಗಿ ಇರದಿರುವುದು ಯಾವದೂ ಇಲ್ಲ.

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ.

ಭಕ್ತಿ, ನಿಷ್ಠೆ ಎಂದರೆ ಕುರುಡಾಗಿ ದೈವವನ್ನು ಅಪ್ಪಿಕೊಳ್ಳುವುದಲ್ಲ, ದೇಹ, ಹೃದಯ ಮತ್ತು ಚೇತನಗಳನ್ನು ಒಂದಾಗಿಸಿ ಅಪರಿಮಿತ ಚೈತನ್ಯವನ್ನು ಸಾಕ್ಷಾತ್ಕಾರಿಸಿಕೊಳ್ಳುವುದು ಎನ್ನುವ ಮಾತನ್ನೇ ಪುಷ್ಟೀಕರಿಸುತ್ತಿದ್ದಾಳೆ ಅಲ್ಲವೆ ಅಕ್ಕ!?

Leave a Reply