‘ಧರ್ಮ’ ಪದ ಬಳಕೆಗೆ ಮಿತಿ ಬೇಕೆ? ಅರ್ಥ ವಿಶಾಲವಾಗಿದೆ… : ಅರಳಿಮರ ಸಂವಾದ

ಇವುಗಳನ್ನು ‘ಮತ’ವೆಂದು ಕರೆಯಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ ‘ಮತ’ದ ಅರ್ಥ ಅಭಿಪ್ರಾಯ ಎಂದಾಗುತ್ತದೆ. ಪಂಥ ಎಂದರೆ ಬಣ. ಒಂದು ನಿರ್ದಿಷ್ಟ ಗುಂಪು. ಹಾಗೆ ಪದಶಃ ಅರ್ಥ ಸೀಳುತ್ತಾ ಹೋದರೆ ಈ ಮೇಲೆ ಹೇಳಿದ ಸಮುದಾಯಗಳನ್ನು ಯಾವ ಹೆಸರಿಂದಲೂ ನಿರ್ದೇಶಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ‘ಧರ್ಮ’ ಅನ್ನುವ ಬಹುರೂಢಿಯ ಪದವನ್ನೇ ಬಳಸಲು ಮಡಿವಂತಿಕೆ ಬೇಕಿಲ್ಲ ~ ಗಾಯತ್ರಿ

samvadaನಿರ್ದಿಷ್ಟ ದೇವರು, ಆಚಾರ – ವಿಚಾರ, ನಿರ್ದಿಷ್ಟ ಗ್ರಂಥದ ಪ್ರಕಾರ ಆಚರಣೆ ನಡೆಸಿ ಅದರ ಮೂಲಕ ಒಂದು ಪಂಥವಾಗಿ ಗುರುತಿಸಿಕೊಳ್ಳುವುದು ಇವೆಲ್ಲವೂ ಬಹು ಸಾಮಾನ್ಯವಾಗಿ ‘ಧರ್ಮ’ ಎಂದು ಕರೆಸಿಕೊಳ್ಳುತ್ತವೆ. ಆದರೆ; ಹಿಂದೂ, ಕ್ರೈಸ್ತ, ಮುಸಲ್ಮಾನ, ಬೌದ್ಧ, ಜೈನ – ಇವನ್ನೆಲ್ಲ ಧರ್ಮವೆಂದು ಕರೆಯಲಾಗದು; ಇವೆಲ್ಲವೂ ಮತಗಳು ಎಂದು ಕೆಲವರು ಆಕ್ಷೇಪಿಸುತ್ತಾರೆ. (ಕೆಲವರ ಆಕ್ಷೇಪ ಹಿಂದೂಯೇತರ ಗುರುತುಗಳಿಗೆ ಸೀಮಿತವಾಗಿದ್ದು, ಹಿಂದೂ ಮಾತ್ರವೇ ಧರ್ಮ; ಮಿಕ್ಕವು ಮತಗಳು ಎಂದು. ಈ ಮೇಲರಿಮೆಯ ಚರ್ಚೆಗೆ ‘ಅರಳಿಮರ’ ವೇದಿಕೆಯಲ್ಲ).

ಈ ಆಕ್ಷೇಪ ಸರಿಯೇ? ಹಾಗಾದರೆ ಬಹು ಬಳಕೆಯಲ್ಲಿರುವ ಇವನ್ನು ಏನೆಂದು ಕರೆಯಬೇಕು? ಇದು ಪ್ರಶ್ನೆ.

ಇವುಗಳನ್ನು ‘ಮತ’ವೆಂದು ಕರೆಯಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ ‘ಮತ’ದ ಅರ್ಥ ಅಭಿಪ್ರಾಯ ಎಂದಾಗುತ್ತದೆ. ಪಂಥ ಎಂದರೆ ಬಣ. ಒಂದು ನಿರ್ದಿಷ್ಟ ಗುಂಪು. ಹಾಗೆ ಪದಶಃ ಅರ್ಥ ಸೀಳುತ್ತಾ ಹೋದರೆ ಈ ಮೇಲೆ ಹೇಳಿದ ಸಮುದಾಯಗಳನ್ನು ಯಾವ ಹೆಸರಿಂದಲೂ ನಿರ್ದೇಶಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ‘ಧರ್ಮ’ ಅನ್ನುವ ಬಹುರೂಢಿಯ ಪದವನ್ನೇ ಬಳಸಲು ಮಡಿವಂತಿಕೆ ಬೇಕಿಲ್ಲ.

ಇಷ್ಟಕ್ಕೂ ‘ಧರ್ಮ’ ಅಂದರೆ ‘ಯಾವುದು ಧರಿಸಲ್ಪಡುತ್ತದೆಯೋ (ಆಚರಿಸಲ್ಪಡುತ್ತದೆಯೋ) ಅದು’. “ಧಾರಯತಿ ಇತಿ ಧರ್ಮಃ” ಅನ್ನುವುದು ಅದರ ವ್ಯಾಕರಣ.

ನಮ್ಮಲ್ಲಿ ‘ಗುಣ ಧರ್ಮ’ ಅನ್ನುವ ಮಾತಿದೆ. ಆಯಾ ಜಡ – ಚೇತನಗಳು ಸ್ವಭಾವತಃ ಏನಿವೆಯೋ ಅದು ಅವುಗಳ ಗುಣ ಧರ್ಮ. ಮನುಷ್ಯನ ಗುಣ ಧರ್ಮ, ನಾಯಿಯ ಗುಣ ಧರ್ಮ, ಸಸ್ಯದ ಗುಣ ಧರ್ಮ – ಹೀಗೆ. ‘ಧರ್ಮ ಅಂದರೆ ಧಾರಣೆ’ ಅನ್ನುವ ವಿವರಣೆ ಈ ನಿಟ್ಟಿನಲ್ಲಿ ಅರ್ಥೈಸಿಕೊಂಡರೆ, ನಮ್ಮ ಈ ಹಿಂದೂ – ಕ್ರೈಸ್ತ – ಮುಸಲ್ಮಾನ ಇತ್ಯಾದಿಗಳು ಧರ್ಮವಾಗಲಾರವು.

ಆದರೆ ‘ಯಾವುದು ಆಚರಿಸಲ್ಪಡುತ್ತದೆಯೋ ಅದು ಧರ್ಮ’ ಅನ್ನುವ ಅರ್ಥದಿಂದ ನೋಡಿದರೆ; ನಿರ್ದಿಷ್ಟ ರೂಪರೇಷೆ, ನಿರ್ದಿಷ್ಟ ನಿಯಮ, ನಿರ್ದಿಷ್ಟ ಸೂಚಿಗಳ ಪ್ರಕಾರ ಆಚರಿಸಲ್ಪಡುವವು ‘ಧರ್ಮ’ವಾಗುತ್ತವೆ. ಈ ನಿಟ್ಟಿನಲ್ಲಿ ಈಗ ಚಾಲ್ತಿಯಲ್ಲಿರುವ ಅರ್ಥದಂತೆ ‘ಧರ್ಮ’ ಪದಪ್ರಯೋಗ ಪ್ರಮಾದವೇನಾಗುವುದಿಲ್ಲ.

ಈ ತರ್ಕಗಳಾಚೆ; ಧರ್ಮವು ಸ್ವಭಾವ ಮತ್ತು ಕರ್ಮದೊಡನೆ ಬೆಸೆದುಕೊಂಡ ಪದ. ಭಗವದ್ಗೀತೆಯಲ್ಲಿ ಕೃಷ್ಣ ‘ಕ್ಷತ್ರಿಯನಾಗಿ ನಿನ್ನ ಧರ್ಮವನ್ನು ನಡೆಸು’ ಎಂದು ಅರ್ಜುನನಿಗೆ ಹೇಳುವಾಗ ಅಲ್ಲಿ ಹಿಂದೂ ಧರ್ಮವನ್ನು ನಡೆಸು ಎಂದರ್ಥವಲ್ಲ. ‘ಕ್ಷತ್ರಿಯ ಧರ್ಮವನ್ನು ನಡೆಸು’ ಎಂದರ್ಥ. ಆದರೆ ನಮ್ಮ ಪಾಲಿಗೆ ಕ್ಷತ್ರಿಯ ಒಂದು ಜಾತಿ. ಅದೊಂದು ‘ವರ್ಣ’ ಅಲ್ಲವೆ?

ಕೃಷ್ಣ “ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ” ಅನ್ನುವಾಗ ಅವು ಹುಟ್ಟಿನಿಂದ ಗುರುತಿಸಲ್ಪಡುವ ಜಾತಿ ಸೂಚಕವಲ್ಲ. ಕರ್ಮಾಧಾರಿತವಾಗಿ ತಾನು ನಿಗದಿಪಡಿಸಿದ ನಾಲ್ಕು ವರ್ಣಗಳು ಎಂದು. ಆ ಕರ್ಮಾಧಾರಿತ ವರ್ಣಗಳಲ್ಲಿ ‘ಕ್ಷತ್ರಿಯ’ವೂ ಒಂದು. ಕೃಷ್ಣ ಅರ್ಜುನನಿಗೆ “ನಿನ್ನ ಕರ್ಮವನ್ನು ನೀನು ನಡೆಸು, ಅದನ್ನು ನಡೆಸುವುದೇ ನಿನ್ನ ಧರ್ಮ” ಅನ್ನುತ್ತಾನೆ. ಅಲ್ಲಿಗೆ, ನಮ್ಮನಮ್ಮ ನಿರ್ದೇಶಿತ ಕರ್ಮಗಳನ್ನು ನಡೆಸುವುದೇ ನಮ್ಮ ಪಾಲಿನ ಧರ್ಮ ಎಂದಾಯಿತು.

ಈ ಕಾರಣದಿಂದಲೇ ರಾಜ ಧರ್ಮ, ವೈಶ್ಯ ಧರ್ಮ, ಪರಿವ್ರಾಜಕ ಧರ್ಮ – ಇತ್ಯಾದಿ ಪದಗಳು ಬಳಕೆಯಲ್ಲಿರುವುದು.

ನಮ್ಮ ಸನಾತನವು ‘ಧರ್ಮಾರ್ಥಕಾಮಮೋಕ್ಷ’ಗಳೆಂದು ನಾಲ್ಕು ಪುರುಷಾರ್ಥಗಳನ್ನು ಹೇಳುತ್ತವೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಸಾಧನೆಯೇ ಪುರುಷಾರ್ಥ. ಧರ್ಮವನ್ನು ಸಾಧಿಸುವುದು ಅಂದರೇನು? ಸತ್ಕರ್ಮಗಳನ್ನು ಮಾಡುವುದು, ನಿರ್ದೇಶಿತ ಕರ್ಮಗಳನ್ನು ನಡೆಸುವುದೇ ಅಲ್ಲವೆ?

ಆದ್ದರಿಂದ, ಒಂದು ಪದಕ್ಕೆ ನಾನಾ ಅರ್ಥ. ಕಾಲಕ್ರಮದ ಅರ್ಥೈಸುವಿಕೆಗೆ ತಕ್ಕಂತೆ ಅದರ ಬಳಕೆ. ಆದ್ದರಿಂದ, ಬಹಳ ಬಾರಿ ಪದಗಳ ಅರ್ಥ ಸೀಳುತ್ತ ಕೂರದೆ ಉದ್ದೇಶಕ್ಕೆ ಹೆಚ್ಚು ಗಮನ ನೀಡುವುದು ಒಳ್ಳೆಯದು.

(ಆಸಕ್ತರು ಈ ಚರ್ಚೆಯನ್ನು ಮುಂದುವರಿಸಬಹುದು)

14 Comments

  1. ಧರ್ಮವು ಎಂದೂ ಸಂಕುಚಿತ ವಿಕೃತಿಯನ್ನು ಹೇರಿಕೊಳ್ಳುವುದಿಲ್ಲ, ಆಗೊಮ್ಮೆ ಹೇರಿಕೊಂಡಿದ್ದಾರೆ ಅದು ಧರ್ಮವಾಗೇ ಉಳಿಯುವುದಿಲ್ಲ ಸೆಮೆಟಿಕ್ ಮತಗಳಲ್ಲಿ ಧರ್ಮದ ಲವಲೇಶ ಗುಣಗಳೂ ಇಲ್ಲ ಅಜ್ಞಾನಕ್ಕೆ ಇನ್ನೊಂದು ಹೆಸರೇ ಸೆಮೆಟಿಕ್ ಮತಗಳೆನ್ನ ಬಹುದು.

    ಸೆಮೆಟಿಕ್ ಮತಗಳಲ್ಲಿ ಧರ್ಮದ ಗುಣವಿದ್ದರೆ
    ನಹೀ ಜ್ಞಾನೇನ ಸದೃಶ ಎಂಬ ಗೀತೆಯ ವಾಕ್ಯಕ್ಕೆ ಸಮಾನ ಅರ್ಥ ಕೊಡುವ ಒಂದೇ ಒಂದು ಸೂಕ್ತವನ್ನು ತೋರಿಸಿ

  2. ಹೌದೌದು…. ಸೆಮೆಟಿಕ್ ಮತಗಳ ನಿಯಮದಿಂದ ಕೋಪರ್ನಿಕಸ್,ಗೇಲಿಲಿಯೋ ದಂತಹ ಅನೇಕ ವಿಜ್ಞಾನಿಗಳು ಎಂತಹ ಘೋರ ಶಿಕ್ಷೆಯನ್ನು ಅನುಭವಿಸಬೇಕಾಯಿತು..
    ಅದೆಷ್ಟೋ ವಿಶ್ವವಿದ್ಯಾಲಯಗಳು, ಅನಂತ ಜ್ಞಾನ ಭಂಡಾರವು ಸುಟ್ಟು ಭಸ್ಮವಾಯಿತು ಎನ್ನುವುದು ಇತಿಹಾಸದಲ್ಲಿ ದಾಖಲಾದ ವಿಷಯ ಬಿಡಿ

    1. ಹೌದು. ಎಲ್ಲ ಧರ್ಮಗಳೂ ಈ ಸಂಕುಚಿತ ವಿಕೃತಿ ಹೇರಿಕೊಂಡು ಧರ್ಮ ಅನ್ನುವ ಪದವನ್ನೆ ಕೇಡಿಗವಾಗಿಸ್ತಿವೆ. ಸೆಮೆಟಿಕ್, ಹಿಂದೂ, ಬೌದ್ಧ, ಎಲ್ಲವೂ. ವೈಜ್ಞಾನಿಕ ಸಂಶೋಧನೆ ಬಿಡಿ, ಒಂದು ವಿಮರ್ಶೆಯನ್ನೂ ಸಹಿಸದೆ ಕೊಲೆ ಬೆದರಿಕೆ ಒಡ್ಡುವ ಸೆಥಿತಿ ಬಂದುಬಿಟ್ಟಿದೆ.

  3. ನಿಮ್ಮ ವೈಯಕ್ತಿಕ ವ್ಯಾಖ್ಯಾವಲ್ಲದಿದ್ದರೆ ಆ ಮತಗ್ರಂಥಗಳಿಂದ ಪ್ರಮಾಣ ಕೊಡಿ.

  4. ಇಸ್ಲಾಮ್ & ಕ್ರೈಸ್ತ ಎಂಬುದು ಧರ್ಮ ಸೂಚಕ ಪದಗಳೇ ?

  5. ಸೆಮೆಟಿಕ್ ಮತಗಳಲ್ಲಿ ಧರ್ಮದ ವ್ಯಾಖ್ಯಾನಕ್ಕೆ ಪ್ರಮಾಣವನ್ನು ಕೇಳಿದ್ದೆ ಆದರೆ ನೀವು ನಿಮ್ಮ ವ್ಯಾಖ್ಯಾನವನ್ನು ಆ ಮತಗಳ ಮೇಲೆ ಆರೋಪಿಸಿ ಸಮರ್ಥಿಸುವ ಪ್ರಯತ್ನ ಮಾಡುತ್ತಿದ್ದೀರಿ ?
    ಪೈಗಂಬರ್ & ಏಸು ಕ್ರಿಸ್ತನ ಮೊದಲು ಧರ್ಮವಿರಲಿಲ್ಲವೇ ಎಂಬ ನನ್ನ ಪ್ರೆಶ್ನೆಗೆ ನಿನ್ನೂ ಉತ್ತರ ದೊರೆತಿಲ್ಲ
    ಸರಿ, ನಿಮ್ಮ ದಾರಿಯಲ್ಲೇ ಬರುತ್ತೇನೆ
    ಸೆಮೆಟಿಕ್ ಮತಗಳಲ್ಲಿ ಧರ್ಮವು ನಿಯಮದ ರೂಪದಲ್ಲಿ ಹೇಳಲಾಗಿದೆ ಎನ್ನುವುದಕ್ಕೆ ಆ ಗ್ರಂಥಗಳಿಂದಲೇ ಪ್ರಮಾಣ ಕೊಡಿ ?
    ಇಸ್ಲಾಮ್ & ಕ್ರೈಸ್ತ ಮತಗಳಲ್ಲಿ ವಿಧಿಸಿದ ಕಡ್ಡಾಯ ನಿಯಮಗಳು ಪಾಲಿಸದಿದ್ದರೂ ಅವು ಅಸ್ತಿತ್ವದಲ್ಲಿರಬಲ್ಲವೇ ?
    (ಸನಾತನ ಧರ್ಮದ ಯಾವ ನಿಯಮವನ್ನು ಪಾಲಿಸದಿದ್ದರೂ ಅದು ಅಸ್ತಿತ್ವದಲ್ಲಿರುತ್ತದೆ ಎನ್ನುವುದನ್ನು ನಿರೂಪಿಸಬಲ್ಲೆ.)
    ನಿಯಮ & ಧಾರಣೆ ಬೇರೆ ಬೇರೆ ಅರ್ಥವನ್ನು ಕೊಡುತ್ತವೆ.
    ಇವುಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಒಂದನ್ನು ಒಪ್ಪಿದರೆ ಮತ್ತೊಂದನ್ನು ಅಲ್ಲಗೆಳೆಯಬೇಕಾಗುತ್ತದೆ. ಈ ದ್ವಂದ್ವ ಏತಕ್ಕೆ ?

  6. ಇಸ್ಲಾಮ್ & ಕ್ರೈಸ್ತ ಮತಗಳನ್ನು ಆಚರಣೆಯ ಪದಸೂಚಿ ಬಳಸಿ ಧರ್ಮವೆನ್ನುವುದು ಯುಕ್ತಿಶೂನ್ಯವಾದವಾಗುತ್ತದೆ.
    ಧರ್ಮವನ್ನು ಯಾರೂ ಸ್ಥಾಪಿಸಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಒಪ್ಪುವ ಯಾರೊಬ್ಬರೂ ಸೆಮೆಟಿಕ್ ಮತಗಳನ್ನು ಧರ್ಮವೆಂದು ಸಂಭೋದಿಸುವುದಿಲ್ಲ.

    ಹಾಗಾದರೆ ಪೈಗಂಬರ್ & ಏಸು ಕ್ರಿಸ್ತ ಹುಟ್ಟುವ ಮೊದಲು ಧರ್ಮ ವಿರಲಿಲ್ಲವೇ ?
    ಧರ್ಮವಿಲ್ಲದೆ ಈ ಜಗತ್ತು ಸೃಷ್ಟಿಯಾಯಿತೆ ?
    ಸೆಮೆಟಿಕ್ ಮತದ ಗ್ರಂಥಗಳಲ್ಲಿ ಧರ್ಮದ ವ್ಯಾಖ್ಯಾನ ವಿದೆಯೇ ?
    ಇದ್ದರೆ ಪ್ರಮಾಣ ಕೊಡಿ.

    1. ಸೆಮೆಟಿಕ್ ಮತಗಳಲ್ಲಿ ಧರ್ಮ ಅನ್ನುವುದು ನಿಯಮದ ರೂಪದಲ್ಲಿದೆ. ಯಹೂದ್ಯರ, ಕ್ರೈಸ್ತರ ಒಡಂಬಡಿಕೆಗಳು, ಅವುಗಳ ಆಚರಣೆ ಕ್ರಿಶ್ಚಿಯನ್ನರ ‘ಧರ್ಮ’ ವ್ಯಾಖ್ಯಾನ. ಧರ್ಮವನ್ನು ‘ನಿಯಮ’ದ ವ್ಯಾಖ್ಯಾನದಲ್ಲಿ ನೋಡುವ ಕುರಿತು ಹಿಂದಿನ ಪ್ರತಿಕ್ರಿಯೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ದೇವರನ್ನು ಪೂಜಿಸಲು, ದೇವರನ್ನು ಹೊಂದಲು ಸಾಗಬೇಕಾದ ಮಾರ್ಗವೇ ಸೆಮೆಟಿಕ್ ಮತಗಳ ಪಾಲಿನ ‘ಧರ್ಮ’. ಹಿಂದೂ ಜನರು ಕೂಡಾ ಮೋಕ್ಷವನ್ನು ಹೊಂದಲು ಕೆಲವು ‘ನಿಯಮ’, ‘ಆಚರಣೆ’ಗಳನ್ನು ರೂಪಿಸಿದ್ದಾರೆ. ಹಿಂದೂ ಜನರಲ್ಲಿ ಪಂಗಡ – ವೈವಿಧ್ಯತೆ ಮತ್ತು ಆಚರಣೆಗಳು ವಿಶಾಲವೂ ಅಗಾಧವೂ ಆಗಿದೆ. ಈ ಎಲ್ಲವೂ ಒಟ್ಟುಗೂಡಿ ಹಿಂದೂ ಧರ್ಮವಾಗಿದೆ. ಸನಾತನ ಈ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಇತ್ಯಾದಿಗಳಂತಲ್ಲ. ಸನಾತನದ ಜೊತೆ ಬೆಸೆದುಕೊಂಡಿರುವ ಧರ್ಮ ‘ನಿಯಮ’ವನ್ನು ವ್ಯಾಖ್ಯಾನಿಸುವ ಧರ್ಮವಲ್ಲ. ಅದು ‘ಪುರಾತನವೂ ಶಾಶ್ವತವೂ ಆದ ಗುಣ’. ಸನಾತನವೂ ಧರ್ಮವೇ. ಹಿಂದೂ – ಕ್ರೈಸ್ತ – ಮುಸಲ್ಮಾನ ಇತ್ಯಾದಿಗಳೂ ಧರ್ಮವೇ. ಆದರೆ, ಅವುಗಳ ಅರ್ಥವ್ಯಾಪ್ತಿ ಬೇರೆ. ಹಿಂದೂ ಧರ್ಮಕ್ಕೆ ಒಬ್ಬ ಸ್ಥಾಪಕರಿಲ್ಲ. ಅದು ಮತ್ತೆ ಮತ್ತೆ ಹಲವರಿಂದ ಕಾಯಕಲ್ಪ ಹೊಂದುತ್ತ, ಪಂಥಗಳನ್ನು ಸ್ಥಾಪಿಸುತ್ತ ನಿರಂತರತೆ ಕಾಯ್ದುಕೊಂಡಿದೆ. ಅದಾಗಲೇ ಇದ್ದ ಅದ್ವೈತ – ದ್ವೈತ ಇತ್ಯಾದಿ ಚಿಂತನೆಗಳ ಪ್ರವರ್ತಕರು ಹಿಂದು ಧರ್ಮದ ಒಳಗಿನ ಪಂಗಡಗಳನ್ನು ಸ್ಥಾಪಿಸಿದರು. ಹೀಗೆ ಸ್ಥಾಪನೆಗೊಂಡ ಹಲವು ಪಂಗಡಗಳ ಮೊತ್ತ ಹಿಂದೂ ಧರ್ಮ.

  7. ಧರ್ಮವನ್ನು ಯಾರೂ ಸ್ಥಾಪಿಸಲು ಸಾಧ್ಯವಿಲ್ಲ. ಆದ್ದರಿಂದ ಸನಾತನ ಒಂದೇ ಧರ್ಮ,ಇಸ್ಲಾಮ್, ಕ್ರೈಸ್ತ,ಇವೆಲ್ಲವೂ ಒಬ್ಬ ವ್ಯಕ್ತಿಯಿಂದ ಸ್ಥಾಪಿತವಾದ ಮತಗಳು.

    1. ಸನಾತನ ಎಂಬುದು ಒಂದು ನಾಮ ನಿರ್ದೇಶಕ ಪದ. ಅದನ್ನು ಧರ್ಮವೆಂದು ವ್ಯಾಖ್ಯಾನಿಸಲು ಬರುವುದಿಲ್ಲ. ಅದು ಧರಿಸಲ್ಪಡುವಂಥದ್ದನ್ನು, ಆಚರಿಸಲ್ಪಡುವಂಥದ್ದನ್ನು ಬೋಧಿಸುತ್ತದೆ; ಆದ್ದರಿಂದ ಅದು ಧರ್ಮ ಎನ್ನುವುದಾದರೆ, ಇಸ್ಲಾಂ, ಕ್ರಿಶ್ಚಿಯಾನಿಟಿ ಇತ್ಯಾದಿಗಳು ಕೂಡ ಧರಿಸುವಂಥದ್ದನ್ನು, ಆಚರಿಸುವಂಥದ್ದನ್ನು ಬೋಧಿಸುತ್ತವೆ. ಈ ನಿಟ್ಟಿನಲ್ಲಿ ಅವೂ ಧರ್ಮವಾಗುತ್ತವೆ. ಹೌದಾದರೆ ಎಲ್ಲವೂ ಹೌದು. ಅಲ್ಲವಾದರೆ ಯಾವುದೂ ಅಲ್ಲ.

  8. ಸನಾತನ ಧರ್ಮ ಗ್ರಂಥಗಳಲ್ಲಿ ಎರಡು ರೀತಿಯಾದ ಧರ್ಮಗಳನ್ನು ಹೇಳಲಾಗಿದೆ
    ಒಂದು ಸಹಜ ಧರ್ಮ ಅಥವಾ ಸ್ವಧರ್ಮ ಮತ್ತೊಂದು ಸನಾತನ ಧರ್ಮ.
    ಪ್ರಾಕಾಶಿಸುವು ಸೂರ್ಯನ ಧರ್ಮ, ಅರಳುವುದು ಹೂವಿನ ಧರ್ಮ, ಬಿಸುವುದು ಗಾಳಿಯ ಧರ್ಮ, ಸುಡುವುದು ಬೆಂಕಿಯ ಧರ್ಮ ಹೀಗೆ ಇವೆಲ್ಲವೂ ಪ್ರಕೃತಿಯ ಸಹಜ ಧರ್ಮ.
    ಸಹಜ ಧರ್ಮವು ಜೀವಿಗಳು ಹುಟ್ಟುತ್ತಲೇ ಅವುಗಳೊಂದಿಗೆ ಸ್ವಾಭಾವಿಕವಾಗಿ ಬಂದು ಬಿಟ್ಟಿರುತ್ತದೆ. ಇದೆ ಸಹಜ ಧರ್ಮ.
    ಮನುಷ್ಯ ಜೀವಿಯು ಪ್ರಥಮವಾಗಿ ಪಶುವಾಗಿಯೇ ಹುಟ್ಟುತ್ತಾನೆ. ಅವನನ್ನು ಪಶುತ್ವದಿಂದ ಮನುಷ್ಯತ್ವಕ್ಕೇರಿಸುವುದು ಮನುಷ್ಯತ್ವದಿಂದ ಮುಮುಕ್ಷತ್ವಕ್ಕೆ , ಮುಮುಕ್ಷತ್ವದಿಂದ ದೈವತ್ವಕ್ಕೇ ಹೀಗೆ ಹಂತ ಹಂತವಾಗಿ ಮನುಷ್ಯನನ್ನು ಉನ್ನತಿಗೆ ಕೊಂಡೊವೈಯುವುದು ಸನಾತನ ಧರ್ಮ.
    ಧರ್ಮ ಎಂಬ ಶಬ್ದವು ‘ಧೃಞ್’ ಎಂಬ ಧಾತುವಿನಿಂದ ಉತ್ಪನ್ನವಾಗಿವೆ ಇದರರ್ಥ ಧರಿಸು.
    ಯಾವುದನ್ನು ಧರಿಸಬೇಕು ?
    ಅನಾಗರಿಕತೆಯನ್ನು ಕಳಚಿ ನಾಗರಿಕತೆಯನ್ನು ಧಾರಣೆ ಮಾಡಬೇಕು
    ಪಶುತ್ವವನ್ನು ಕಳಚಿ, ಮನುಷ್ಯತ್ವದ ಧಾರಣೆ ಮಾಡಬೇಕು
    ಅಜ್ಞಾನವನ್ನು ಕಳಚಿ ಜ್ಞಾನಧಾರಣೆ ಮಾಡಬೇಕು/ವಿಚಾರಶೀಲತೆ.
    ವಿಕೃತವನ್ನು ಕಳಚಿ ಸುಕೃತವನ್ನು ಧಾರಣೆ ಮಾಡಬೇಕು.
    ಧಾರಣಾತ್ ಶ್ರೇಯ ಆದಧಾತಿ ಇತಿ ಧರ್ಮಃ |
    ಎಂದು ಋಗ್ವೇದದ ಅಶ್ವಲಾಯನ ಗೃಹ್ಯ ಸೂತ್ರದಲ್ಲಿ ಹೇಳಲಾಗಿದೆ
    ಅಂದರೆ ಯಾವುದರ ಧಾರಣೆಯಿಂದ ಯಶ,ಉನ್ನತಿ, ಆತ್ಮಸಾಕ್ಷಾತ್ಕಾರ, ಮೋಕ್ಷಗಳು ಲಭಿಸುತ್ತವೆಯೋ ಅದೇ ಧರ್ಮ.
    ಸನಾತನ ಎಂದರೆ ಎಂದೂ ಬದಲಾಗದ್ದು ಶಾಶ್ವತವಾದದ್ದು ಎಂಬ ಅರ್ಥವಿದೆ.
    ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ ಧರ್ಮೇ ನಷ್ಟೇ ಕುಲಂ ಕೃತ್ಸ್ನಂ ಅಧರ್ಮಃ ಅಭಿಭವತಿ ಉತ ||
    [ ಭಗವದ್ಗೀತೆ 1.39 ]
    ರಿಲಿಜನ್ ಎಂದರೆ ಮತ ಎಂಬ ಅಭಿಪ್ರಾಯ ಎಂಬ ಅರ್ಥವಿದೆ.
    ಮತ ಎಂದರೆ ಮತಿಯಿಂದ ಬಂದದ್ದು ಅಥವಾ ಒಬ್ಬ ಮನುಷ್ಯನ ಮೆದುಳಿನಿಂದ ಬಂದದ್ದು ಎಂಬ ಅರ್ಥ. ಇಸ್ಲಾಮ್, ಕ್ರೈಸ್ತ, ಸಿಖ್, ಜೈನ, ಭೌದ್ಧ ಇವೆಲ್ಲವೂ ಮತಗಳು ಎಂದರೆ ಇವೆಲ್ಲವೂ ಒಬ್ಬ ವ್ಯಕ್ತಿ ಅಭಿಪ್ರಾಯ ಮೇಲೆ ನಿಂತಿವೆ. ಇವು ಧರ್ಮವಾಗಲು ಸಾಧ್ಯವಿಲ್ಲ.

    1. ಒಂದು ಪದಕ್ಕೆ ಹಲವು ಅರ್ಥಗಳು. ಧರ್ಮವನ್ನು ಸತ್ಯ, ಶಾಶ್ವತ ಎಂದು ಅರ್ಥೈಸಿದರೆ ಸನಾತನ ಧರ್ಮವಾಗುತ್ತವೆ. ಧರಿಸುವ / ಆಚರಣೆಗಳ ನಿಯಮಸೂಚಿ ಎನ್ನುವ ಅರ್ಥದಲ್ಲಿ ಹಿಂದೂ, ಇಸ್ಲಾಂ, ಕ್ರೈಸ್ತ ಇತ್ಯಾದಿಗಳೂ ಧರ್ಮವಾಗುತ್ತವೆ

Leave a Reply to ಅಪ್ರಮೇಯCancel reply