ಬದುಕಲು ಕಲಿಯಿರಿ : ಅಧ್ಯಾಯ 2 : ನಿಮ್ಮಲ್ಲಿದೆ ಅಪಾರ ಶಕ್ತಿ!

ಸ್ವಾಮಿ ಜಗದಾತ್ಮಾನಂದರ ‘ಬದುಕಲು ಕಲಿಯಿರಿ’  ಕೃತಿ ಒಂದಿಡೀ ತಲೆಮಾರಿನ ಮೇಲೆ ಅದ್ಭುತ ಪರಿಣಾಮ ಬೀರಿತ್ತು. ಈಗಲೂ ವಿಶೇಷವಾಗಿ ಯುವಜನರು ಈ ಪುಸ್ತಕವನ್ನು ವಿಶೇಷ ಆದ್ಯತೆಯಿಂದ ಓದುತ್ತಾರೆ. ನ.15ರಂದು ಇಹಲೋಕ ಯಾತ್ರೆ ಮುಗಿಸಿದ ಸ್ವಾಮೀಜಿಯವರ ಸ್ಮರಣೆಯಲ್ಲಿ, ಪುಸ್ತಕದ 7 ಅಧ್ಯಾಯಗಳಿಂದ ಪ್ರತಿದಿನವೂ ಆಯ್ದ ಒಂದು ಭಾಗವನ್ನು ಅರಳಿಮರ ಪ್ರಕಟಿಸಲಿದೆ. ಸಂಪೂರ್ಣ ಓದಿಗಾಗಿ ಮತ್ತು ಅತ್ಯಗತ್ಯವಾಗಿ ಈ ಕೃತಿಯನ್ನು ಕೊಂಡುಕೊಳ್ಳುವುದು ಉತ್ತಮ.

ರಹಸ್ಯದ ಕೀಲಿ ಕೈ

ಬಯಸಿದ್ದನ್ನು ನೀಡುವ ಅದ್ಭುತ ರಹಸ್ಯ ಶಕ್ತಿಯನ್ನು ಎಲ್ಲಿ ಅಡಗಿಸಿಡುವುದು ಎಂಬ ವಿಚಾರವಾಗಿ ದೇವತೆಗಳಲ್ಲಿ ಒಮ್ಮೆ ಚರ್ಚೆಯಾಯಿತು. ಒಬ್ಬನು ಅದನ್ನು ಸಮುದ್ರದ ಆಳದಲ್ಲಿ ಹುದುಗಿಸೋಣ ಎಂದನಂತ. ಇನ್ನೊಬ್ಬ, ಎತ್ತರದ ಪರ್ವತ ಶಿಖರದಲ್ಲಿ ಅಡಗಿಸೋಣ ಎಂದ. ಮಗದೊಬ್ಬ ಅರಣ್ಯದ ಗುಹೆಯೇ ಅದಕ್ಕೆ ಸರಿಯಾದ ತಾಣ ಎಂದ. ದೇವತೆಗಳಲ್ಲಿ ಪ್ರಮುಖನೂ ಮೇಧಾವಿಯೂ ಆಗಿದ್ದವನೊಬ್ಬ ಹೀಗೆಂದ, “ಆ ಶಕ್ತಿಯನ್ನು ಮನುಷ್ಯನ ಮನಸ್ಸಿನ ಆಳದಲ್ಲೇ ಅಡಗಿಸಿ ಇಡೋಣ. ಅದು ಅಲ್ಲಿರಬಹುದೆಂಬ ಸಂದೇಹವೇ ಅವನಲ್ಲಿ ಉದಿಸದು. ಏಕೆಂದರೆ, ಬಾಲ್ಯದಿಂದಲೇ ಅವನ ಮನಸ್ಸು ಹೊರಗೆ ಹರಿಯುತ್ತಿರುತ್ತದೆ. ಆ ಅದ್ಭುತ ಶಕ್ತಿ ತನ್ನಲ್ಲಿ ಇರಬಹುದೆಂದು ಅವನು ಯೋಚಿಸದೆ, ಹೊರಜಗತ್ತಿನಲ್ಲೇ ಹುಡುಕುತ್ತಾ ಇರುತ್ತಾನೆ. ಆದುದರಿಂದ, ಆತನ ಮನಸ್ಸಿನ ಆಳದ ಪದರಗಳಲ್ಲೇ ಆ ‘ಚಿಂತಾಮಣಿ’ಯನ್ನು ಅಡಗಿಸಿಡೋಣ”

ಎಲ್ಲರೂ ಅವನ ಯೋಜನೆಗೆ ತಮ್ಮ ಸಮ್ಮತಿ ಸೂಚಿಸಿದರು. ಅಂತೆಯೇ ಅಲ್ಲಿ ಆ ಅದ್ಭುತ ರಹಸ್ಯ ಶಕ್ತಿಯನ್ನು ದೇವತೆಗಳು ಬಚ್ಚಿಟ್ಟರಂತೆ!

‘ಮನುಷ್ಯನ ಆಂತರ್ಯದ ಆಳದಲ್ಲಿ ಅಪಾರ ಶಕ್ತಿ ಇದೆ’ – ಮೇಲಿನ ಕತೆ ಹೇಳುವ ಸತ್ಯ ಇದು. ಅವನಿಗೆ ಯಾವುದು ಬೇಕೆನಿಸಿದರೂ ಅದನ್ನು ಪಡೆಯಬಲ್ಲ, ಅವನ ಪಾಲಿಗೆ ಯಾವುದೂ ಅಸಾಧ್ಯವಲ್ಲ. ಆದರೆ, ಅಯ್ಯೋ! ತನ್ನಲ್ಲಿ ಅಪಾರ ಶಕ್ತಿ ಇದೆ ಎನ್ನುವ ಸತ್ಯದಲ್ಲಿ ಅವನಿಗೇ ನಂಬಿಕೆ ಇಲ್ಲ. ತನ್ನ ಬಗೆಗೆ ತಾನೇ ಒಂದು ಪರಿಮಿತ ಹಾಗೂ ಸಂಕುಚಿತ ಭಾವನೆಯನ್ನು ಬಲವಾಗಿ ರೂಢಿಸಿಕೊಂಡು ಅದರಿಂದ ಬಂಧಿತನಾಗಿದ್ದಾನೆ ಆತ. ಕಣ್ಣಿಗೆ ಕೈಮುಚ್ಚಿಕೊಂಡು ಕತ್ತಲೆ ಎಂದು ಅಳುವಂತಿದೆ ಅವನ ಸ್ಥಿತಿ!

ಅವನ ಈ ಸ್ಥಿತಿಗೆ ಕಾರಣವಾದರೂ ಏನು? ಅಜ್ಞಾನವೇ ಕಾರಣ. ತುಣುಕು ವಸ್ತುವಿನಲ್ಲಿ ಅಪಾರ ಶಕ್ತಿ ಅಡಗಿದೆ ಎಂಬುದನ್ನು ಐನ್’ಸ್ಟೀನ್ ಹೇಳುವುದಕ್ಕೆ ಮೊದಲು ತಿಳಿಯಲಾಗಲಿಲ್ಲವೇಕೆ? ಇದಕ್ಕೂ ಕಾರಣ ಅಜ್ಞಾನವೇ! ಸಹಸ್ರಾರು ವರ್ಷಗಳಿಂದ ಜನ ಭೂಮಿಯನ್ನು ಚಪ್ಪಟೆ ಎಂದೇ ತಿಳಿದಿದ್ದರು. ಕಾರಣವೇನು? ತೋರಿಕೆಯನ್ನೆ ಸತ್ಯವೆಂದು ನಂಬಿದ್ದರಿಂದಲೇ ಅಲ್ಲವೆ?

ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಕಂಗೊಳಿಸಿದ ಮಹಾ ಅನುಭಾವಿಗಳು, ಪುರಾತನ ಭಾರತದ ಋಷಿಗಳು, ಮನುಷ್ಯನ ನೈಜ ಸ್ವರೂಪದ ಬಗೆಗೆ ತಮ್ಮ ಅಲೌಕಿಕ ಅನುಭವದ ಬಲದಿಂದ ಒಂದು ಅದ್ಭುತ ಸೂತ್ರವನ್ನು ಕಂಡುಕೊಂಡಿದ್ದರು. ಆಧುನಿಕ ವಿಜ್ಞಾನ ಕ್ರಮದಲ್ಲಿ ನಡೆದ ಅಸಂಖ್ಯ ಸಂಶೋಧನೆಗಳು ಆ ಸೂತ್ರವನ್ನು ಪುಷ್ಠೀಕರಿಸುತ್ತವೆ ಎಂಬುದು ಈ ಅಧ್ಯಾಯ ಓದುವುದರೊಳಗೆ ನಿಚ್ಚಳವಾಗುವುದು. ಅದನ್ನು ಸರಿಯಾಗಿ ತಿಳಿದುಕೊಳ್ಳುವಂತಾದರೆ ವ್ಯಕ್ತಿ ಜೀವನದಲ್ಲೂ, ಸಾಮಾಜಿಕ ಜೀವನದಲ್ಲೂ, ಆಶ್ಚರ್ಯಕರ ಹಾಗೂ ಕ್ರಾಂತಿಕಾರಿ ಬದಲಾವಣೆಗಳನ್ನುಂಟು ಮಾಡಲು ಸಾಧ್ಯ. ನಮ್ಮ ವ್ಯಕ್ತಿತ್ವದ ನಿಗೂಢ ರಹಸ್ಯಗಳನ್ನು ಬಿಡಿಸಿ, ಬದುಕಿನ ಅರ್ಥ –  ಉದ್ದೇಶಗಳನ್ನು ತಿಳಿಸಿಕೊಡುವ ಸೂತ್ರ ಅದು.

51fefvFACuL._AC_US218_

(ಆಕರ : ಬದುಕಲು ಕಲಿಯಿರಿ | ಅಧ್ಯಾಯ 1 – ಪ್ರಯತ್ನದಿಂದ ಪರಮಾತ್ಮ| ಪ್ರಕಾಶಕರು : ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು)

ಹೆಚ್ಚಿನ ಓದಿಗೆ ಸ್ವಾಮಿ ಜಗಾದಾತ್ಮಾನಂದರ ‘ಬದುಕಲು ಕಲಿಯಿರಿ’ ಪುಸ್ತಕವನ್ನು ರಾಮಕೃಷ್ಣಾಶ್ರಮದ ಮಳಿಗೆಯಲ್ಲಿ ಕೊಳ್ಳಬಹುದು.

 

2 Comments

Leave a Reply