ಸಂಪೂರ್ಣ ವಂಶಾವಳಿ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #42

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 5ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM  ಹಿಂದಿನ ಭಾಗ ಇಲ್ಲಿ ಓದಿ : https://aralimara.com/2018/11/16/sanatana-3/

ಕ್ಷನಿಂದ ಅದಿತಿ. ಅದಿತಿಯಿಂದ ವಿವಸ್ವತ. ವಿವಸ್ವತನಿಂದ ಮನು. ಮನುವಿನಿಂದ ಇಲ. ಇಲನಿಂದ ಪುರೂರವ. ಪುರೂರವನಿಂದ ಆಯುಸ್. ಆಯುಸನಿಂದ ನಹುಷ. ನಹುಷನಿಂದ ಯಯಾತಿ. ಯಯಾತಿಗೆ ಈರ್ವರು ಪತ್ನಿಯರು. ಉಶನಸನ ಪುತ್ರಿ ದೇವಯಾನಿ ಮತ್ತು ವೃಷಪರ್ವನ ಮಗಳು ಶರ್ಮಿಷ್ಠೆ.

ಯದು ಮತ್ತು ತುರ್ವಸು ದೇವಯಾನಿಯಲ್ಲಿ ಮತ್ತು ದ್ರುಹ್ಯು, ಅನು ಮತ್ತು ಪುರು ವಾರ್ಷಪರ್ವಣೀ ಶರ್ಮಿಷ್ಠೆಯಲ್ಲಿ ಜನಿಸಿದರು. ಯದುವಿನಿಂದ ಯಾದವರಾದರು. ಪುರುವಿಂದ ಪೌರವರಾದರು. ಪುರುವಿನ ಪತ್ನಿ ಕೌಸಲ್ಯಾ. ಅವಳಲ್ಲಿ ಅವನು ಜನಮೇಜಯನನ್ನು ಪಡೆದನು. ಅವನು ಮೂರು ಅಶ್ವಮೇಧ ಯಜ್ಞಗಳನ್ನು ಮಾಡಿದನು. ವಿಶ್ವಜಿತ್ ಯಜ್ಞವನ್ನು ಮಾಡಿ ಅವನು ವನವನ್ನು ಪ್ರವೇಶಿಸಿದನು. ಜನಮೇಜಯನು ಮಾಧವೀ ಅನಂತಾ ಎನ್ನುವವಳನ್ನು ಮದುವೆಯಾದನು. ಅವರಲ್ಲಿ ಪ್ರಾಚಿನ್ವತನು ಜನಿಸಿದನು. ಅವನು ಸೂರ್ಯೋದಯವಾಗುವ ವರೆಗೆ ಪೂರ್ವದಿಶೆಯನ್ನು ಗೆದ್ದನು. ಆದುದರಿಂದ ಅವನ ಹೆಸರು ಪ್ರಾಚಿನ್ವತ.
ಪ್ರಾಚಿನ್ವತನು ಅಶ್ಮಕಿಯನ್ನು ವಿವಾಹವಾದನು. ಅವಳಲ್ಲಿ ಸಂಯಾತಿಯು ಜನಿಸಿದನು. ಸಂಯಾತಿಯು ದೃಶದ್ವತನ ಮಗಳು ವರಾಂಗೀ ಎನ್ನುವವಳನ್ನು ವಿವಾಹವಾದನು. ಅವರಲ್ಲಿ ಅಹಂಪತಿಯು ಜನಿಸಿದನು. ಅಹಂಪತಿಯು ಕೃತವೀರ್ಯನ ಮಗಳು ಭಾನುಮತಿಯನ್ನು ವಿವಾಹವಾದನು. ಅವಳಲ್ಲಿ ಸಾರ್ವಭೌಮನು ಜನಿಸಿದನು.

ಸಾರ್ವಭೌಮನು ಕೈಕೇಯೀ ಸುನಂದಾ ಎನ್ನುವವಳನ್ನು ಗೆದ್ದು ಅಪಹರಿಸಿ ಮದುವೆಯಾದನು. ಅವರಲ್ಲಿ ಜಯತ್ಸೇನನು ಜನಿಸಿದನು. ಜಯತ್ಸೇನನು ವಿದರ್ಭದ ಸುಶ್ರವಳನ್ನು ವಿವಾಹವಾದನು. ಅವಳಲ್ಲಿ ಅರ್ಚಿನನು ಜನಿಸಿದನು. ಅರ್ಚಿನನು ವಿದರ್ಭದ ಇನ್ನೊಬ್ಬ ಸ್ತ್ರೀ ಮರ್ಯಾದಳನ್ನು ವಿವಾಹವಾದನು. ಅವರಲ್ಲಿ ಮಹಾಭೌಮನು ಜನಿಸಿದನು. ಮಹಾಭೌಮನು ಪ್ರಸೇನಜಿತನ ಮಗಳು ಸುಜ್ಞಳನ್ನು ಮದುವೆಯಾದನು. ಅವಳಲ್ಲಿ ಅಯುತನಾಯಿಯು ಜನಿಸಿದನು. ಅವನು ಅಯುತ ಮನುಷ್ಯಮೇಧ ಯಾಗವನ್ನು ನಡೆಸಿದನು. ಆದುದರಿಂದ ಅವನ ಹೆಸರು ಅಯುತನಾಯಿಯೆಂದಾಯಿತು.

ಅಯುತನಾಯಿಯು ಪೃತುಶ್ರವನ ಮಗಳು ಭಾಸಳನ್ನು ವಿವಾಹವಾದನು. ಅವಳಲ್ಲಿ ಅಕ್ರೋಧನನು ಜನಿಸಿದನು. ಅಕ್ರೋಧನನು ಕಳಿಂಗದ ಕರಂದುವನ್ನು ಮದುವೆಯಾಗಿ ಅವಳಲ್ಲಿ ದೇವತಿಥಿಯನ್ನು ಪಡೆದನು. ದೇವತಿಥಿಯು ವಿದೇಹದ ಮರ್ಯಾದಳನ್ನು ಮದುವೆಯಾದನು, ಮತ್ತು ಅವಳಲ್ಲಿ ಋಚನು ಜನಿಸಿದನು. ಋಚನು ಅಂಗದೇಶದ ಸುದೇವಳನ್ನು ವಿವಾಹವಾದನು. ಅವಳಲ್ಲಿ ಋಕ್ಷನು ಜನಿಸಿದನು. ಋಕ್ಷನು ತಕ್ಷಕನ ಮಗಳು ಜ್ವಾಲಾಳನ್ನು ಮದುವೆಯಾಗಿ, ಅವಳಲ್ಲಿ ಮತಿನಾರ ಎನ್ನುವವನ ತಂದೆಯಾದನು. ಸರಸ್ವತೀ ತೀರದಲ್ಲಿ ಮತಿನಾರನು ಹನ್ನೆರಡು ವರ್ಷಗಳ ದೀರ್ಘ ಸತ್ರವನ್ನು ನಡೆಸಿದನು. ಸತ್ರವು ಮುಗಿದಾಗ, ಸರಸ್ವತಿಯು ಬಂದು ಅವನನ್ನು ತನ್ನ ಪತಿಯನ್ನಾಗಿ ವರಿಸಿದಳು. ಅವಳಲ್ಲಿ ತಂಸುವು ಜನಿಸಿದನು.

ಇಲ್ಲಿ ಮತ್ತೆ ಅನುವಂಶವಾಯಿತು. ಮತಿನಾರನಿಂದ ಸರಸ್ವತಿಯಲ್ಲಿ ತಂಸುವು ಜನಿಸಿದನು. ತಂಸುವು ಕಾಲಿಂದಿಯಲ್ಲಿ ಇಲಿನನೆನ್ನುವ ಪುತ್ರನನ್ನು ಪಡೆದನು. ಇಲಿನನು ರಥಂತರಿಯಲ್ಲಿ ದುಃಷಂತನೇ ಮೊದಲಾದ ಐವರು ಪುತ್ರರನ್ನು ಪಡೆದನು. ದುಃಷಂತನು ವಿಶ್ವಾಮಿತ್ರನ ಮಗಳು ಶಕುಂತಲೆಯನ್ನು ವಿವಾಹವಾದನು. ಅವರಲ್ಲಿ ಭರತನು ಹುಟ್ಟಿದನು. ಭರತನು ಕಾಶಿಯ ಸಾರ್ವಸೇನನ ಮಗಳು ಸುನಂದಳನ್ನು ವಿವಾಹವಾದನು. ಅವಳಲ್ಲಿ ಭುಮನ್ಯುವು ಜನಿಸಿದನು. ಭುಮನ್ಯುವು ದಾಶಾರ್ಹರ ಜಯಾ ಎನ್ನುವವಳನ್ನು ಮದುವೆಯಾದನು. ಅವಳಲ್ಲಿ ಸುಹೋತ್ರನು ಜನಿಸಿದನು. ಸುಹೋತ್ರನು ಇಕ್ಷ್ವಾಕುವಂಶದ ಸುವರ್ಣಾ ಎನ್ನುವವಳನ್ನು ವಿವಾಹವಾದನು. ಅವಳಲ್ಲಿ ಹಸ್ತಿಯು ಜನಿಸಿದನು. ಅವನೇ ಹಸ್ತಿನಾಪುರವನ್ನು ಕಟ್ಟಿದವನು.

ಹಸ್ತಿಯು ತ್ರಿಗರ್ತೀ ಯಶೋಧರೆಯನ್ನು ವಿವಾಹವಾದನು. ಅವಳಲ್ಲಿ ವಿಕುಂಠನನು ಜನಿಸಿದನು. ವಿಕುಂಠನನು ದಾಶಾರ್ಹಿ ಸುದೇವಳನ್ನು ಮದುವೆಯಾದನು. ಅವಳಲ್ಲಿ ಅಜಮೀಢನು ಜನಿಸಿದನು. ಅಜಮೀಢನು ೨೪ ಸಾವಿರ ಪುತ್ರರನ್ನು ಕೈಕೇಯಿ, ನಾಗ, ಗಂಧರ್ವಿ, ವಿಮಲಾ ಮತ್ತು ಋಕ್ಷರಿಂದ ಪಡೆದನು. ಅವರಲ್ಲಿ ಪ್ರತಿಯೊಬ್ಬರೂ ರಾಜರಾದರು. ಅವರಲ್ಲಿ ಸಂವರಣನು ವಂಶವನ್ನು ಮುಂದುವರೆಸಿದನು.

ಸಂವರಣನು ವಿವಸ್ವತನ ಮಗಳು ತಪತಿಯನ್ನು ವಿವಾಹವಾದನು. ಅವಳಲ್ಲಿ ಕುರುವು ಜನಿಸಿದನು. ಕುರುವು ದಾಶಾರ್ಹಿ ಶುಭಾಂಗಿಯನ್ನು ಮದುವೆಯಾದನು. ಅವಳಲ್ಲಿ ವಿದುರಥನನ್ನು ಪಡೆದನು. ವಿದುರಥನು ಮಾಧವಿ ಸಂಪ್ರಿಯಳನ್ನು ಮದುವೆಯಾಗಿ ಅವಳಲ್ಲಿ ಅರುಗ್ವತನನ್ನು ಪಡೆದನು. ಅರುಗ್ವತನು ಮಗಧ ದೇಶದ ಅಮೃತಾಳನ್ನು ವಿವಾಹವಾದನು. ಅವಳಲ್ಲಿ ಭೀಮಸೇನನು ಜನಿಸಿದನು. ಭೀಮಸೇನನು ಕೇಕಯದ ಸುಕುಮಾರಿಯನ್ನು ಮದುವೆಯಾಗಿ ಅವಳಲ್ಲಿ ಪರ್ಯಶ್ರವಸನನ್ನು ಪಡೆದನು. ಅವನನ್ನು ಪ್ರತೀಪ ಎಂದೂ ಕರೆಯುತ್ತಾರೆ. ಪ್ರತೀಪನು ಶಿಬಿ ದೇಶದ ಸುನಂದಳನ್ನು ವಿವಾಹವಾದನು. ಅವಳಲ್ಲಿ ದೇವಾಪಿ, ಶಂತನು ಮತ್ತು ಬಾಹ್ಲೀಕರನ್ನು ಪಡೆದನು. ದೇವಾಪಿಯು ಬಾಲ್ಯದಲ್ಲಿಯೇ ಅರಣ್ಯವನ್ನು ಸೇರಿದನು. ಶಂತನುವು ರಾಜನಾದನು.

(ಮಹಾಭಾರತ ವಂಶಾವಳಿ ಮುಂದಿನ ಸಂಚಿಕೆಯಲ್ಲಿ)

1 Comment

Leave a Reply