ಹಸನ್ ಬಸ್ರಿಗೆ ಪವಾಡದ ಮೋಹ ಬಿಡಿಸಿದ ರಾಬಿಯಾ : Tea time story

ಒಮ್ಮೆ ಸುಪ್ರಸಿದ್ಧ ಪೀರ ಹಸನ್ ಬಸ್ರಿ ರಾಬಿಯಾಳನ್ನು ಭೇಟಿಯಾಗಲು ಬಂದ. ಅವಳು ಆಗ ನದೀ ತಟದಲ್ಲಿ ನೆಲೆಸಿದ್ದಳು.
ಇಬ್ಬರೂ ಅಧ್ಯಾತ್ಮ ಸಂಬಂದ ವಿಷಯಗಳನ್ನು ಮಾತಾಡುತ್ತಿರುವಾಗ ನಮಾಜ್ ಸಮಯವಾಯಿತು.

ಹಸನ್ ತಮ್ಮ ಚಾಪೆಯನ್ನು ನದೀನೀರಿನ ಮೇಲೆ ಹಾಸಿಕೊಂಡು ಅದರ ಮೇಲೆ ನಮಾಜಿಗೆ ಕುಳಿತ; ಮತ್ತು, ರಾಬಿಯಾಳಿಗೆ ನಮಾಜ್ ಪಠಿಸಲು ಹೇಳಿದ.
ಆಗ ರಾಬಿಯಾ ತನ್ನ ಚಾಪೆಯನ್ನು ಮೇಲೆ ಗಾಳಿಯಲ್ಲಿ ಹಾಸುತ್ತಾ, “ನಾನು ಕೆಳಗೆ ಕುಳಿತು ನಮಾಜ್ ಪಠಿಸುವುದಿಲ್ಲ, ಮೇಲಿಂದಲೇ ಓದುತ್ತೇನೆ. ನೀನೂ ಇಲ್ಲಿಗೇ ಬಾ” ಅಂದಳು.

ಇದನ್ನು ನೋಡಿ ಹಸನನಿಗೆ ಆಶ್ಚರ್ಯವಾಯಿತು. ಅವನು ನೀರಿನ ಮೇಲೆ ಹಾಸಿದ್ದ ಚಾಪೆ ಅಲ್ಲೇ ತೇಲುತ್ತಿತ್ತು. ರಾಬಿಯಾ ಗಾಳಿಯಲ್ಲಿ ಹಾಸಿದ್ದ ಚಾಪೆ ಸ್ಥಿರವಾಗಿತ್ತು. ಹಸನನಿಗೆ ತನ್ನ ಚಾಪೆಯನ್ನು ಗಾಳಿಯಲ್ಲಿ ನಿಲ್ಲಿಸುವ ಪವಾಡ ತಿಳಿದಿರಲಿಲ್ಲ. ಇದರಿಂದ ಅವನ ಮುಖ ಸಣ್ಣಗಾಯಿತು.

ಅದನ್ನು ನೋಡಿ ರಾಬಿಯಾ ಸಮಾಧಾನ ಪಡಿಸುತ್ತಾ ಹೇಳಿದಳು, “ಹಸನ್, ನೀನು ಮಾಡಿದ ಪವಾಡವನ್ನು ಒಂದು ಮೀನು ಕೂಡ ಮಾಡಬಲ್ಲದು. ನೀರಿನಲ್ಲಿ ತೇಲಬಲ್ಲದು. ನಾನು ಮಾಡಿದ ಪವಾಡವನ್ನು ಒಂದು ಪಕ್ಷಿ ಕೂಡಾ ಮಾಡಬಲ್ಲದು. ಆಕಾಶದಲ್ಲಿ ರೆಕ್ಕೆ ಹರಡಿಕೊಂಡು ನಿಲ್ಲಬಲ್ಲದು. ನಾವು ಇದನ್ನೆಲ್ಲ ಮಾಡುವ ಅಗತ್ಯವೇ ಇಲ್ಲ. ನಾವು ಜನರ ಬಳಿ ಹೋಗಬೇಕು. ಅವರ ಜೊತೆ ಮಾತಾಡಬೇಕು. ಭಗವಂತನ ಪ್ರೇಮವನ್ನು ಹಂಚಬೇಕು. ಇದು ನಮ್ಮ ಕೆಲಸ”

ರಾಬಿಯಾಳ ಮಾತಿನಿಂದ ಹಸನ್’ಗೆ ಜ್ಞಾನೋದಯವಾಯಿತು. ಅಂದಿನಿಂದ ಅವನು ಪವಾಡಗಳ ಮೋಹ ಬಿಟ್ಟುಬಿಟ್ಟ.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Leave a Reply