ಬದುಕಲು ಕಲಿಯಿರಿ ~ ಅಧ್ಯಾಯ 3 : ಚಿಂತೆಯ ಚಿತೆಯಿಂದ ಪಾರಾಗಿ

ಬದುಕಲು ಕಲಿಯಿರಿ’ ಕೃತಿಯ ಮೂಲಕ ಮನೆಮಾತಾಗಿದ್ದ ಪರಮ ಪೂಜ್ಯ ಸ್ವಾಮಿ ಜಗದಾತ್ಮಾನಂದ ಜೀ ನೆನ್ನೆ (15.11.2018) ಇಹಲೋಕ ಯಾತ್ರೆ ಮುಗಿಸಿದ್ದಾರೆ. ಸ್ವಾಮೀಜಿಯವರ ಈ ಕೃತಿ ಒಂದಿಡೀ ತಲೆಮಾರಿನ ಮೇಲೆ ಅದ್ಭುತ ಪರಿಣಾಮ ಬೀರಿತ್ತು. ಅವರ ಸ್ಮರಣೆಯಲ್ಲಿ, ಪುಸ್ತಕದ 7 ಅಧ್ಯಾಯಗಳಿಂದ ಪ್ರತಿದಿನವೂ ಆಯ್ದ ಒಂದು ಭಾಗವನ್ನು ಅರಳಿಮರ ಪ್ರಕಟಿಸಲಿದೆ. ಸಂಪೂರ್ಣ ಓದಿಗಾಗಿ ಮತ್ತು ಅತ್ಯಗತ್ಯವಾಗಿ ಈ ಕೃತಿಯನ್ನು ಕೊಂಡುಕೊಳ್ಳುವುದು ಉತ್ತಮ.

ಚಿಂತೆಯ ಪಾಶ

ಆತ್ಮೀಯನೊಬ್ಬ ತನ್ನ ಬದುಕಿನಲ್ಲಿ ಅನುಭವಿಸಿದ್ದ ವಿಚಿತ್ರ ಬೇನೆಯ ಬಗ್ಗೆ ಒಮ್ಮೆ ವಿವರಿಸಿದ್ದೆ.

ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಆತನಿಗೆ ತಲೆ ತಿರುಗು, ವಾಂತಿ ಪ್ರಾರಂಭವಾಯಿತು. ಎದ್ದು ನಿಂತಕೂಡಲೇ ತಲೆ ಸುತ್ತತೊಡಗಿ ವಾಂತಿಯಾಗುತ್ತಿತ್ತು. ಚಿಕಿತ್ಸೆ ನಡೆಯಿತಾದರೂ ಬೇನೆ ವಾಸಿಯಾಗಲಿಲ್ಲ. ಆದರೆ, ಮುಂದೊಂದು ದಿನ ವೈದ್ಯರಿಗೆ ಸವಾಲಾಗಿದ್ದ ಆ ಕಾಯಿಲೆ ತನ್ನಿಂತಾನೆ ದೂರವಾಯಿತೆಂದರೆ ಆಶ್ಚರ್ಯವೆನಿಸದೆ?

ಹೌದು. ಅದು ಚಿಂಕ್ರೋಭದ ಪೀಡೆ. ಆತನ ಗೆಳೆಯ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ ಸುದ್ದಿ ಕೇಳುತ್ತಲೇ ಆ ಬೇನೆ ಕಾಣಿಸಿಕೊಂಡಿತ್ತು. ಆತ ಪ್ರಾಣಾಪಾಯದಿಂದ ಪಾರಾದನೆಂದು ತಿಳಿದ ಕೂಡಲೆ ಅದು ನಿವಾರಣೆಯಾಯಿತು. ಅಂದರೆ, ಈ ಸ್ನೇಹಿತರಲ್ಲಿ ಅಷ್ಟೊಂದು ಅನ್ಯೋನ್ಯ ಸಂಬಂಧವಿತ್ತೆಂದು ಅರ್ಥವೆ? ಅಲ್ಲ… ಆ ಸ್ನೇಹಿತನ ಒತ್ತಾಯಲ್ಲೆ ಕಟ್ಟುಬಿದ್ದು ಆತ ಬ್ಯಾಂಕಿನಿಂದ ತೆಗೆದ ಭಾರೀ ಸಾಲಕ್ಕೆ ಈತ ಜಾಮೀನು ಹಾಕಿದ್ದ. ಆತ ಸಾವನ್ನಪ್ಪಿದರೆ ತನ್ನ ಗತಿ ಏನೆಂಬ ಆಘಾತವೇ ಅವನನ್ನು ಆ ಅವಸ್ಥೆಗೆ ನೂಕಿತ್ತು. ಸ್ನೇಹಿತನ ಚೇತರಿಕೆ ಇವನನ್ನೂ ಚೇತರಿಸಿಕೊಳ್ಳುವಂತೆ ಮಾಡಿತು. ಅಷ್ಟೇ!

ಚಿಂತೆಯ ಪಾಶದ ವೈಖರಿ ಎಷ್ಟೆಂದು ನೋಡಿದಿರಲ್ಲ!?

ಆದಿಕವಿ ವಾಲ್ಮೀಕಿ ಹೇಳುವಂತೆ, “ಕೆರಳಿದ ಸರ್ಪವು ಬಾಲಕನನ್ನು ಕಚ್ಚಿ ಕೊಲ್ಲುವಂತೆ ಚಿಂತೆಯು ಮನಸ್ಸನ್ನು ಮುತ್ತಿ, ಮನುಷ್ಯನನ್ನೇ ನಾಶ ಮಾಡುತ್ತದೆ. ಯಾರು ಶೋಕಾಕುಲನೂ, ಚಿಂತಾಕ್ರಾಂತನೂ, ನಿರುತ್ಸಾಹಿಯೂ ಆಗಿರುವನೋ ಅವನ ಎಲ್ಲ ಕಾರ್ಯಗಳೂ ಹಾಳಾಗುತ್ತವೆ. ಅವನು ಬಹಳವಾಗಿ ನರಳಬೇಕಾಗುತ್ತದೆ.

(ಆಕರ : ಬದುಕಲು ಕಲಿಯಿರಿ | ಪ್ರಕಾಶಕರು : ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು)
ಹೆಚ್ಚಿನ ಓದಿಗೆ ಸ್ವಾಮಿ ಜಗಾದಾತ್ಮಾನಂದರ ‘ಬದುಕಲು ಕಲಿಯಿರಿ’ ಪುಸ್ತಕವನ್ನು ರಾಮಕೃಷ್ಣಾಶ್ರಮದ ಮಳಿಗೆಯಲ್ಲಿ ಕೊಳ್ಳಬಹುದು.

Leave a Reply