ಬದುಕಲು ಕಲಿಯಿರಿ ~ ಅಧ್ಯಾಯ 4 : ಪ್ರೀತಿಯ ಪ್ರಚಂಡ ಶಕ್ತಿ

ಬದುಕಲು ಕಲಿಯಿರಿ’ ಕೃತಿಯ ಮೂಲಕ ಮನೆಮಾತಾಗಿದ್ದ ಪರಮ ಪೂಜ್ಯ ಸ್ವಾಮಿ ಜಗದಾತ್ಮಾನಂದ ಜೀ  15.11.2018ರಂದು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಸ್ವಾಮೀಜಿಯವರ ಈ ಕೃತಿ ಒಂದಿಡೀ ತಲೆಮಾರಿನ ಮೇಲೆ ಅದ್ಭುತ ಪರಿಣಾಮ ಬೀರಿತ್ತು. ಅವರ ಸ್ಮರಣೆಯಲ್ಲಿ, ಪುಸ್ತಕದ 7 ಅಧ್ಯಾಯಗಳಿಂದ ಪ್ರತಿದಿನವೂ ಆಯ್ದ ಒಂದು ಭಾಗವನ್ನು ಅರಳಿಮರ ಪ್ರಕಟಿಸಲಿದೆ. ಸಂಪೂರ್ಣ ಓದಿಗಾಗಿ ಮತ್ತು ಅತ್ಯಗತ್ಯವಾಗಿ ಈ ಕೃತಿಯನ್ನು ಕೊಂಡುಕೊಳ್ಳುವುದು ಉತ್ತಮ.

ಪ್ರೀತಿಯ ರೀತಿ

ಪ್ರೀತಿ ಎಂದರೆ ಕೇವಲ ಭಾವಪರವಶತೆ, ಗಂಡು ಹೆಣ್ಣುಗಳ ದೈಹಿಕ ಆಕರ್ಷಣೆ ಎಂದೇ ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಕಾಮ ಮತ್ತು ಸೌಂದರ್ಯ ಭಾವನೆಗಳ ಮಿಶ್ರಣದಿಂದ ಬಿಡಿಸಿ, ಪ್ರೀತಿಯ ಸ್ವರೂಪವನ್ನು ತಿಳಿದುಕೊಳ್ಳಲು ನಾವು ಯತ್ನಿಸಬೇಕು. ಹಾಗೆ ತಿಳಿದುಕೊಂಡರೇನೇ ಪ್ರೀತಿಯ ವ್ಯಾಪಕ ಶಕ್ತಿಯನ್ನೂ ಪ್ರಭಾವವನ್ನೂ ಅರಿತುಕೊಳ್ಳಬಹುದು.

‘ಪ್ರೀತಿ ಎಂದರೆ ನಾವು ಅರ್ಥೈಸುವ ಹಾಗೆ ಅನುರಾಗದ ಭಾವಪರವಶತೆ ಅಲ್ಲ. ಪ್ರೀತಿಪಾತ್ರ ವ್ಯಕ್ತಿಯನ್ನು ತನ್ನ ಅಧೀನದಲ್ಲಿರಿಸಿಕೊಳ್ಳುವ ಭಾವೋದ್ವೇಗವೂ ಅಲ್ಲ. ಪ್ರತಿಯೊಬ್ಬರಲ್ಲೂ ಹುದುಗಿರುವ ವೈಶಿಷ್ಟ್ಯವನ್ನು ಸರಿಯಾಗಿ ಗುರುತಿಸಿ, ಅವರ ಅಭ್ಯುದಯಕ್ಕಾಗಿ ನಿರಂತರ ಶುಭಸಂಕಲ್ಪದಿಂದ ದುಡಿಯುವ ಪ್ರವೃತ್ತಿ ಅದು’ ಎಂದು ಎಡ್ಲೆ ಸ್ಟೀವನ್’ಸನ್ ಹೇಳುತ್ತಾರೆ.

ಎರಿಕ್ ಫ್ರೋಂ ಕೂಡ ಇದೇ ಅಭಿಪ್ರಾಯ ಧ್ವನಿಸುತ್ತಾರೆ:

“ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಎಂದರೆ, ಅವರ ಬೆಳವಣಿಗೆಯ ಬಗ್ಗೆ, ಸರ್ವತೋಮುಖ ಪ್ರಗತಿಯ ಬಗ್ಗೆ, ತಾನು ಜವಾಬ್ದಾರನೆಂಬ ಭಾವನೆ ತಳೆದು ಅವರನ್ನು ಗಮನವಿತ್ತು ನೋಡಿಕೊಳ್ಳುವುದು ಎಂಬ ಅರ್ಥ ಸೂಚಿತವಾಗುವುದು”.

ಕೊಳಚೆ ಪ್ರದೇಶದ ಮಕ್ಕಳಿಗೆ ವಿದ್ಯೆ ನೀಡಿದ ಶಿಲಾ ರೂರ್ಕೆ ತೋರಿದ ಪ್ರೀತಿ ಮೇಲಿನ ರೀತಿಯದು.

ಆಕೆ ಪ್ರತಿಯೊಬ್ಬ ವಿದ್ಯಾರ್ಥಿಯ ಕಡೆಗೂ ಸಾಕಷ್ಟು ಗಮನವಿತ್ತು, ಅವರ ಅಭಿರುಚಿ, ಸಂಸ್ಕಾರ, ಸಾಮರ್ಥ್ಯ, ದೌರ್ಬಲ್ಯಗಳನ್ನು ಪರಿಶೀಲಿಸಿ ಅವರ ಅಭ್ಯುದಯಕ್ಕೇನು ಮಾಡಬೇಕೆಂದು ಯೋಚಿಸುತ್ತಿದ್ದಳು. ಮಕ್ಕಳನ್ನು ಅರ್ಥ ಮಾಡಿಕೊಳ್ಳಲು ಸಮರ್ಥಳಾಗಿದ್ದಳು. ಅವರ ನೋವು, ನಲಿವುಗಳನ್ನು ತಿಳಿದುಕೊಂಡು ಅವರ ಅಭಿವೃದ್ಧಿಯ ಅವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸಿದ್ದಳು. ಮಕ್ಕಳ ಶುಭಚಿಂತನೆಯಿಂದ ಶ್ರಮವಹಿಸಿ ದುಡಿಯುತ್ತಾ ಅವರನ್ನು ತಿದ್ದಿ ಬೆಳೆಸಲು ದೀರ್ಘಕಾಲ ಪ್ರಯತ್ನಿಸಿದಳು.

ಸಂಬಳ ತೆಗೆದುಕೊಂಡಿದ್ದಕ್ಕೆ ಕನಿಷ್ಠ ಮಟ್ಟದ ಕೆಲಸ ಮಾಡಿ ಮುಗಿಸಿದ್ದರೆ ಅವಳನ್ನು ದೂರುವವರು ಯಾರೂ ಇರಲಿಲ್ಲ. ಅವಳ ಕೆಲಸ ಅರ್ಥವಾಗದವರು, “ಇವಳಿಗೆ ಸಂಸಾರ ತಾಪತ್ರಯವೇನೂ ಇಲ್ಲವೆಂದು ಖಾಣುತ್ತದೆ, ಬೇರೆ ಕೆಲಸವಿಲ್ಲದೆ ಇದನ್ನು ಮಾಡುತ್ತಿದ್ದಾಳೆ” ಎಂದೋ; “ಇವಳಿಗೇನೋ ಲಾಭವಿರಬೇಕು, ಅದಕ್ಕೇ ಮಾಡುತ್ತಿದ್ದಾಳೆ” ಎಂದೋ ಆಡಿಕೊಂಡಿರಲೂಬಹುದು!
ಆದರೆ, ಆಕೆಯ ಕೆಲಸದ ಹಿಂದೆ ಇದ್ದುದು ಪ್ರೀತಿಯ ಶಕ್ತಿ ಮಾತ್ರ.

ಹೌದು. ಪ್ರೀತಿಯ ಶಕ್ತಿ ಅಂಥದ್ದು. ಪ್ರೀತಿಸುವ ವ್ಯಕ್ತಿ, ಪ್ರೀತಿಪಾತ್ರರಿಗಾಗಿ ಮಾಡುವ ತ್ಯಾಗ ಮತ್ತು ಸೇವೆ ಇತರರಿಗೆ ಅತಿಯಾಗಿ ಕಾಣಿಸಬಹುದು. ಆದರೆ, ಪ್ರೀತಿಸುವವರಿಗೆ, ಪ್ರೀತಿಪಾತ್ರರಿಗಾಗಿ ಏನು ಮಾಡಿದರೂ ಕಡಿಮೆಯಾಗೇ ತೋರುವುದು.

ಅಧ್ಯಾಪಕಿಯಾಗಿದ್ದ ಶೀಲಾ ರೂರ್ಕೆ, ಅಂಥ ಪರಿಶುದ್ಧ ಪ್ರೀತಿಯನ್ನು ಸೌಲಭ್ಯವಂಚಿತ ಮಕ್ಕಳಿಗೆ ನೀಡಲು ಸಮರ್ಥರಾಗಿದ್ದರಿಂದಲೇ, ಆ ಮಕ್ಕಳು ಮುಂದೆ ಸಭ್ಯ – ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ಈ ಕುರಿತು ಶೀಲಾ ರೂರ್ಕೆ ಹೇಳಿದ್ದಿಷ್ಟೇ; “ನಾನು ಪ್ರತಿಯೊಂದು ವಿದ್ಯಾರ್ಥಿಯನ್ನೂ ಪ್ರೀತ್ಯಾದರದಿಂದ ನೋಡಿಕೊಂಡೆ” ಎಂದು!

ಸರಳವಾಗಿ ಕಾಣುವ ಈ ವಾಕ್ಯದ ಹಿಂದೆ ಎಷ್ಟೊಂದು ಸ್ವಾರ್ಥ ತ್ಯಾಗ ಮತ್ತು ಸೇವಾ ಮನೋಭಾವ ಅಡಗಿದೆ ಎಂಬುದು ನಿಮಗೀಗ ಸ್ಪಷ್ಟವಾಗಿರಬೇಕು. ನಿಮಗೂ ಪ್ರೀತಿಗಾಗಿ ತ್ಯಾಗ, ಸೇವೆಗಾಗಿ ಪ್ರೀತಿ ಸಾಧ್ಯವಾಗಬೇಕು.

51fefvFACuL._AC_US218_(ಆಕರ : ಬದುಕಲು ಕಲಿಯಿರಿ | ಅಧ್ಯಾಯ 1 – ಪ್ರಯತ್ನದಿಂದ ಪರಮಾತ್ಮ| ಪ್ರಕಾಶಕರು : ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು) 

ಹೆಚ್ಚಿನ ಓದಿಗೆ ಸ್ವಾಮಿ ಜಗಾದಾತ್ಮಾನಂದರ ‘ಬದುಕಲು ಕಲಿಯಿರಿ’ ಪುಸ್ತಕವನ್ನು ರಾಮಕೃಷ್ಣಾಶ್ರಮದ ಮಳಿಗೆಯಲ್ಲಿ ಕೊಳ್ಳಬಹುದು.

Leave a Reply