ಮಾಯುವಿಕೆ : ತಾವೋ ಧ್ಯಾನ ~ 10

ಅಸಮತೋಲನವೇ ಬದಲಾವಣೆಗೆ ಮತ್ತು ಬದುಕಿನ ಮುಂದುವರೆಯುವಿಕೆಗೆ ಕಾರಣವಾಗುವ ಮೂಲ ದ್ರವ್ಯ. ಅಂತೆಯೇ ಬದುಕು ನಿರಂತರ ವಿನಾಶ ಮತ್ತು ಸತತ ಮಾಯುವಿಕೆಗಳ ರಿಲೇ ಓಟ  ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao 10

ಬೆಂಕಿ ತಣ್ಣಗಾಗುತ್ತದೆ
ನೀರು, ತನ್ನ ಸಹಜ ಮಟ್ಟಕ್ಕೆ ಹಾತೊರೆಯುತ್ತದೆ.

~
ಪರಿಸ್ಥಿತಿ ಎಷ್ಚೇ ಕಠಿಣವಾಗಿದ್ದರೂ ಚಿಂತೆ ಬೇಡ, ಬದಲಾವಣೆ ಜಗದ ನಿಯಮ. ಆದ್ದರಿಂದಲೇ, ಎಂಥ ಭೀಕರ ಕಾಡಿನ ಬೆಂಕಿಯೂ ಕೊನೆಗೊಮ್ಮೆ ತಣ್ಣಗಾಗುತ್ತದೆ, ಉನ್ಮತ್ತ ಸಮುದ್ರ ಶಾಂತವಾಗುತ್ತದೆ. ಎಲ್ಲ ಪ್ರಾಕೃತಿಕ ಘಟನೆಗಳೂ ಪರಸ್ಪರ ವಿರೋಧೀ ಸ್ವಭಾವಗಳೊಡನೆ ಸಂಧಾನಕ್ಕೆ ಮುಂದಾಗಿ ಕೊನೆಗೊಮ್ಮೆ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ, ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವ ಈ ಪ್ರಕ್ರಿಯೆಯೇ ಎಲ್ಲ ಚಿಕಿತ್ಸೆಗಳ ಮೂಲ ಮಂತ್ರ.

ಹೌದು, ಸಮತೋಲವನ್ನು ಸಾಧಿಸಲು ಸಮಯ ಬೇಕು. ಸಾಮಾನ್ಯ ಘಟನೆಯಾದರೆ ಸಮತೋಲನವೂ ಸುಲಭ, ತ್ವರಿತ ಆದರೆ ಘಟನೆ ಪ್ರಚಂಡವಾಗಿದ್ದರೆ, ಬದುಕು ಮತ್ತೆ ಹಳಿ ಮೇಲೆ ಚಲಿಸುವಂತಾಗಲು, ದಿನಗಳು, ವರ್ಷಗಳು ಕೆಲವೊಮ್ಮೆ ಇಡೀ ಜೀವಮಾನವೇ ಬೇಕಾಗಬಹುದು. ಹಾಗೆ ನೋಡಿದರೆ ಈ ಕೊಂಚ ಅಸಮತೋಲನವಿಲ್ಲದೇ ಹೋದರೆ ಬದುಕಿಗೆ ಚಲನೆಯಾದರೂ ಹೇಗೆ ಸಾಧ್ಯ? ಈ ಅಸಮತೋಲನವೇ ಬದಲಾವಣೆಗೆ ಮತ್ತು ಬದುಕಿನ ಮುಂದುವರೆಯುವಿಕೆಗೆ ಕಾರಣವಾಗುವ ಮೂಲ ದ್ರವ್ಯ. ಅಂತೆಯೇ ಬದುಕು ನಿರಂತರ ವಿನಾಶ ಮತ್ತು ಸತತ ಮಾಯುವಿಕೆಗಳ ರಿಲೇ ಓಟ.

ಸುಖ ಮತ್ತು ದುಃಖ ಎರಡೂ ಒಬ್ಬರಾದ ಮೇಲೊಬ್ಬರು ಪರಸ್ಪರರ ಬೆನ್ನು ಹತ್ತಿ ಕೂಸುಮರಿ ಆಡುವ ಹುಂಬ ಮಕ್ಕಳಂತೆ. ನೀನು ಸುಖದ ಜೊತೆ ಅಡುಗೆ ಮನೆಯಲ್ಲಿ ರುಚಿಯಾದ ಊಟ ಮಾಡುತ್ತಿರುವಾಗಲೇ ಅಂಗಳದಲ್ಲಿ ದುಃಖ ನಿನ್ನೊಂದಿಗೆ ಹರಟೆ ಹೊಡೆಯಲು ಕಾಯ್ದುಕೊಂಡು ಕೂತಿರುತ್ತದೆ (ಗಿಬ್ರಾನ್)

ಜಗತ್ತಿನ ಎಲ್ಲವೂ
ಬದಲಾಗುತ್ತಲೇ ಇರುತ್ತವೆ
ಎನ್ನುವುದು ಮನವರಿಕೆಯಾದಾಗ
ಯಾರೂ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ.

ಸಾವಿನ ಭಯ ಇಲ್ಲದೇ ಹೋದಾಗ
ಯಾವುದೂ ಅಸಾಧ್ಯ ಅನಿಸುವುದಿಲ್ಲ.

ಮುಂದಿನ ಆಗು ಹೋಗುಗಳನ್ನು
ಅಂಕೆಯಲ್ಲಿಡಲು ಹವಣಿಸುವುದು
ಪ್ರಧಾನ ಬಡಗಿಯ ಸ್ಥಾನದ ಮೇಲೆ ಕಣ್ಣು ಹಾಕಿದಂತೆ.
ನೆನಪಿರಲಿ, ಅವನ ಉಳಿಯ ಮುಟ್ಟಿದವರೆಲ್ಲ
ಬೆರಳು ಕತ್ತರಿಸಿಕೊಂಡಿದ್ದಾರೆ.
~ ಎನ್ನುತ್ತಾನೆ ಲಾವೋತ್ಸೇ.

ಆದ್ದರಿಂದಲೇ ಎಂಥ ತೀವ್ರ ಪರಿಸ್ಥಿತಿಗಳ ನಡುವೆಯೂ ಜ್ಞಾನಿಗಳು ಸಮಾಧಾನಚಿತ್ತರಾಗಿರುತ್ತಾರೆ. ಕಾಯಿಲೆ, ವಿಪತ್ತು, ಕ್ಷೋಭೆ, ಸಾಧನೆ, ಜ್ಞಾನೋದಯ ಏನೇ ಇರಲಿ ಇವುಗಳ ಹಿಂದೆಯೇ ಇವನ್ನೆಲ್ಲ ಸಂತೈಸುವ ಚಿಕಿತ್ಸೆಯೂ ಪ್ರಯಾಣ ಮಾಡುತ್ತಿರುತ್ತದೆ ಎನ್ನುವುದನ್ನ ಕಂಡುಕೊಂಡಿರುತ್ತಾರೆ.

Leave a Reply