ಅಧ್ಯಾತ್ಮ ನೀವು ಆಡುವ ಚೆಂಡಿನಾಟದಂತೆ, ನೀವು ಮಾಡುವ ಕೆಲಸದಂತೆ, ನೀವು ಮಾಡಿದ ಪ್ರೇಮದಂತೆ, ಉಣ್ಣುವ ಊಟದಂತೆ ಅಷ್ಟೇ ~ ಡೆಂಗ್ ಮಿಂಗ್ ದಾವೋ | ಚಿದಂಬರ ನರೇಂದ್ರ
ಬೆಳಕು, ಬಯಲು, ಆಕಾಶ
ದಿವ್ಯಕ್ಕೆ ಭಾಷೆಯಿಲ್ಲ.
ಸಾಮಾನ್ಯದಲ್ಲಿಯೇ ಅಸಾಮಾನ್ಯದ ವಿಳಾಸ.
ಸಾಮಾನ್ಯಕ್ಕೆ ಹೋಲಿಸದೆ ಯಾರಿಗೂ ಅಧ್ಯಾತ್ಮವನ್ನು ವಿವರಿಸಲು ಆಗುವುದೇ ಇಲ್ಲ. ಒಂದು ಶಾಸ್ತ್ರ, ದಿವ್ಯವನ್ನು “ಅನುಗ್ರಹ” ಎಂದು ವರ್ಣಿಸಿದರೆ ಇನ್ನೊಂದು ಶಾಸ್ತ್ರ “ಬೆಳಕು” ಎಂದು ವ್ಯಾಖ್ಯಾನ ಮಾಡುತ್ತದೆ. ಸ್ವರ್ಗವೂ ಆಕಾಶದಲ್ಲಿಯೇ ಇದೆಯಂತೆ, ಕಾಮವನ್ನು ನಿರಾಕರಿಸುವ ಸಾಧಕರು ಕೂಡ ಜ್ಞಾನೋದಯವನ್ನು ವಿವರಿಸಲು ಕಾಮದ ರೂಪಕಗಳನ್ನೇ ಬಳಸುತ್ತಾರೆ. ಜನರೂ ಸಹ ಉಪಮೆಗಳ ಮೂಲಕವೇ ದಿವ್ಯವನ್ನು ಕುರಿತು ಮಾತನಾಡುತ್ತಾರೆ.
ಚರಾಚರವೆಂಬುದು ಕಿಂಚಿತ್
ಚತುರ್ಯುಗವೆಂಬುದು ಕಿಂಚಿತ್
ಅಪ್ಪುದೆಂಬುದೊಂದು ಕಿಂಚಿತ್
ಆಗದೆಂಬುದೊಂದು ಕಿಂಚಿತ್
ತಾನು ಶುದ್ಧವಾದ ಶರಣಂಗೆ
ಗುಹೇಶ್ವರನೆಂಬುದೊಂದು ಕಿಂಚಿತ್
~ ಅಲ್ಲಮ ಪ್ರಭು
ಅದಕ್ಕಾಗಿಯೇ ಗುಟ್ಟಿನ ಭಾಷೆಗಳನ್ನು ಕಂಡುಹಿಡಿಯಲಾಗಿದೆ ಈ ಭಾಷೆಗಳ ಮೂಲಕವೇ ಅನುಭಾವೀಕರಣದ ಪ್ರಕ್ರಿಯೆ ನಡೆಯುತ್ತದೆ. ಈ ದಾರಿಯಲ್ಲಿ ಇನ್ನೂ ಹೆಜ್ಜೆ ಇಡದವರಿಗೆ ಈ ಮಾತುಗಳು ಒಗಟು, ಆದರೆ ಹೆಜ್ಜೆ ಇಡುತ್ತ ಹೋದಂತೆ ವಿಷಯ ಸ್ಪಷ್ಟವಾಗುತ್ತ ಹೋಗುತ್ತದೆ.
ನೀವು ಯಾವದೊಂದು ಹೊಸ ಉಪಕರಣ ಕೊಂಡರೂ ಅದರ ಜೊತೆ ಆ ಉಪಕರಣವನ್ನು ಹೇಗೆ ಜೋಡಿಸಬೇಕು ಹೇಗೆ ಬಳಸಬೇಕು ಎನ್ನುವ ವಿವರಗಳನ್ನು ನೀಡಲಾಗುತ್ತದೆ. ನೀವು ಆ ವಿವರಗಳನ್ನು ಶ್ರದ್ಧೆಯಿಂದ ಪಾಲಿಸುತ್ತೀರಿಯೇ ಹೊರತು ಅದನ್ನೇ ಪೂಜಿಸುತ್ತ, ಆರಾಧಿಸುತ್ತ ಕುಳಿತುಬಿಡುವುದಿಲ್ಲ. ಅಧ್ಯಾತ್ಮದ ಅವಸ್ಥೆಯೂ ಹೀಗೆಯೇ, ಬೇರೇನಲ್ಲ. ಒಮ್ಮೆ ಹಿಡಿತಕ್ಕೆ ಸಿಕ್ಕ ಮೇಲೆ, ಈ ದಾರಿಯ ವಿಳಾಸ, ನಕ್ಷೆ ಯಾವ ಪ್ರಯೋಜನಕ್ಕೂ ಬಾರದು.
ತಾವೋ ಮಾತಿಗೆ ನಿಲುಕುವುದಿಲ್ಲ
ಮಾತಿಗೆ ನಿಲುಕುವುದು ತಾವೋ ಅಲ್ಲ.
ಆದ್ದರಿಂದ ಸಂತನಿಗೆ,
ಮಾತಿನ ಹುಕಿಯಿಲ್ಲ,, ಮುಟ್ಟುವ ಬಯಕೆಯಿಲ್ಲ,
ಅಲೆಯುವ ಮನಸ್ಸಿಲ್ಲ, ಇರಿಯುವ ಛಲವಿಲ್ಲ.
ಅವನಿಗೆ
ಸಿಕ್ಕು ಬಿಡಿಸುವುದು ಇಷ್ಟ,
ಮೈ ಮನಸ್ಸು ಹದಗೊಳಿಸುವುದರಲ್ಲಿ ಆಸಕ್ತಿ,
ಧೂಳು ನೆಲೆಗೊಳಿಸುವಲ್ಲಿ ತನ್ಮಯತೆ
ಇದು ಸಹಜ ಸ್ಥಿತಿ.
ಆಗ
ಪ್ರೇಮ, ತಿರಸ್ಕಾರ ಕಾಡುವುದಿಲ್ಲ
ಲಾಭ, ನಷ್ಟ ಬಾಧಿಸುವುದಿಲ್ಲ
ಮಾನ, ಅಪಮಾನ ಆಟ ಆಡಿಸುವುದಿಲ್ಲ.
ಸತತವಾಗಿ ತನ್ನನ್ನು ತಾನು ಹಂಚಿಕೊಳ್ಳುವುದರಿಂದ
ತಾವೋ, ಸದಾ ಹೊಚ್ಚ ಹೊಸತು.
~ ಲಾವೋತ್ಸೇ
ಅಧ್ಯಾತ್ಮ ನೀವು ಆಡುವ ಚೆಂಡಿನಾಟದಂತೆ, ನೀವು ಮಾಡುವ ಕೆಲಸದಂತೆ, ನೀವು ಮಾಡಿದ ಪ್ರೇಮದಂತೆ, ಉಣ್ಣುವ ಊಟದಂತೆ ಅಷ್ಟೇ. ತಾವೋ ವನ್ನು ಸತತವಾಗಿ ಅಸಾಮಾನ್ಯ ಎಂದು ನೀವು ಪರಿಗಣಿಸಿದ್ದೇ ಆದಲ್ಲಿ, ಅದು ನಿಮಗೆ ಅಪರಿಚಿತವಾಗಿ, ನಿಮ್ಮಿಂದ ಹೊರಗಾಗಿ, ಒಂದು ಮಿಥ್ಯೆಯಾಗಿ, ಕೇವಲ ಒಂದು ಕಲ್ಪನೆಯಾಗಿ ಮಾತ್ರ ನಿಮ್ಮೊಳಗೆ ಉಳಿಯುತ್ತದೆ. ಆದರೆ ಒಮ್ಮೆ ಗೆಳೆತನ ಸಾಧ್ಯವಾಗಿಬಿಟ್ಟರೆ ಬದುಕಿನ ಭಾಗವಾಗುತ್ತದೆ, ಊಟ, ನಿದ್ದೆ, ಉಸಿರಿನಷ್ಟೇ ಸಹಜ, ಸರಾಗವಾಗುತ್ತದೆ.
ಆಧ್ಯಾತ್ಮಿಕ ಬರಹಗಳು ಜೀವನ ಅನುಭವಗಳು ಸಂತರ ಆದರ್ಶ ನಡೆಗಳು ಮುಖ್ಯವಾಗಿ ಜ್ಞಾನಿಗಳ ಅಮೃತ ವಾಣಿ… ಇತ್ಯಾದಿ