ಇಂದು ತುಳಸಿ ಪೂಜೆ. ಸಾಗರ ಮಥನ ನಡೆದಾಗ ದೊರೆ ಅಮೃತ ಕಲಶವನ್ನು ಹಿಡಿದು ವಿಷ್ಣು ಆನಂದ ಬಾಷ್ಪ ಸುರಿಸಿದನಂತೆ. ಅದರ ಕೆಲವು ಹನಿ ಕಲಶದಲ್ಲಿ ಬಿದ್ದು ಹೊರಹೊಮ್ಮಿದ ‘ತುಲನೆಯಿಲ್ಲದ’ ಸಸಿಯೇ ತುಲಸಿ (ತುಳಸಿ) ಎನ್ನುತ್ತವೆ ಪುರಾಣಗಳು. ಈ ವಿಶೇಷ ದಿನದಂದು ತುಳಸಿಯ ಮಹತ್ತನ್ನು ಸಾರುವ ಕಥೆ ಇಲ್ಲಿದೆ…
ಕೃಷ್ಣನ ಅಷ್ಟಮಹಿಷಿಯರಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆಯರ ಮಹತ್ವ ಹೆಚ್ಚು. ಅವರ ಕಥನಗಳು ಭಾಗವತ, ಪುರಾಣಗಳಲ್ಲೂ ಪ್ರಕ್ಷೇಪಗಳಲ್ಲೂ ಸಾಕಷ್ಟು ಕಾಣಿಸಿಕೊಂಡಿವೆ. ಸದಾ ರುಕ್ಮಿಣಿಯ ಜೊತೆ ಪೈಪೋಟಿಗೆ ಇಳಿಯುವುದು ಸತ್ಯಭಾಮೆಗೊಂದು ರೂಢಿ. ಏನಾದರೂ ಕಾರಣ ಸೃಷ್ಟಿಸಿ ರುಕ್ಮಿಣಿಯ ಜೊತೆ ಸ್ಪರ್ಧೆ ಶುರು ಮಾಡುವಳು. ತಾನು ಸುಂದರಿ ಮತ್ತು ಶ್ರೀಮಂತ ಸತ್ರಾಜಿತನ ಮಗಳು ಅನ್ನುವುದು ಅವಳ ಜಂಭಕ್ಕೆ ಕಾರಣ.
ಒಮ್ಮೆ ಹೀಗಾಯ್ತು. ನಾರದರು ದ್ವಾರಕೆಗೆ ಬಂದರು. ಅವರನ್ನು ಮೊದಲು ಎದುರುಗೊಂಡವಳು ಸತ್ಯಭಾಮೆ. ಆದರೆ ಕೃಷ್ಣ ರುಕ್ಮಿಣಿಯ ಮನೆಯಲ್ಲಿದ್ದ. ನಾರದ “ಇಷ್ಟು ರೂಪವತಿಯಾದ, ತರುಣಿಯಾದ ನಿನ್ನ ಮೇಲೆ ಹೆಚ್ಚು ಗಮನ ಕೊಡುವ ಬದಲು ಕೃಷ್ಣ ಅಲ್ಲೇಕೆ ಇದ್ದಾನೆ?” ಎಂದು ಕಿಚ್ಚಿಗೆ ತುಪ್ಪ ಸುರಿದರು. ಪರಿಣಾಮ, ಸತ್ಯಭಾಮೆ ಅಸಹಾಯಕತೆ ಮತ್ತು ಮಾತ್ಸರ್ಯದ ಕಣ್ಣೀರು ಸುರಿಸಿದಳು.
ನಾರದರ ಬಳಿ ಅದಕ್ಕೊಂದು ಪರಿಹಾರ ಇದ್ದೇ ಇತ್ತು. “ನೋಡು! ನಾನು ನಿನಗೊಂದು ಉಪಾಯ ಹೇಳುತ್ತೇನೆ. ಹಾಗೆ ಮಾಡು. ಆಮೇಲೆ ಕೃಷ್ಣ ನಿನ್ನನ್ನು ಬಿಟ್ಟು ಯಾರ ಬಳಿಯೂ ಹೋಗುವುದೇ ಇಲ್ಲ” ಅಂದರು.
ಸತ್ಯಭಾಮೆ ತಲೆಯಾಡಿಸಿದಳು. ಕೂಡಲೇ, ತಡ ಮಾಡದೆ ಕೃಷ್ಣನ ಬಳಿ ಧಾವಿಸಿ, “ಎಚ್ಚರದಪ್ಪಿ ನಾರದರು ಕೇಳಿದ್ದನ್ನು ಕೊಡುತ್ತೇನೆ ಅಂದುಬಿಟ್ಟೆ. ಅವರು ನಿಮ್ಮನ್ನು ತಮ್ಮ ಜೊತೆ ಆಳಾಗಿ ಕಳಿಸಲು ಕೇಳುತ್ತಿದ್ದಾರೆ” ಎಂದು ದುಃಖ ನಟಿಸಿದಳು. ನಾರಾದರು ಪೂರ್ವನಿಯೋಜಿತ ಯೋಚನೆಯಂತೆ, “ನೀನು ಕೃಷ್ಣನ ತೂಕಕ್ಕೆ ಸರಿದೂಗುವಷ್ಟು ಸಂಪತ್ತು ನೀಡಿದರೆ ಕೃಷ್ಣನನ್ನು ನಿನಗೆ ಬಿಟ್ಟುಕೊಡುತ್ತೇನೆ” ಅಂದರು.
ಸತ್ಯಭಾಮೆ ಕೂಡಲೇ ತುಲಾಭಾರದ ಏರ್ಪಾಟು ಮಾಡಿದಳು. ತನ್ನೆಲ್ಲ ಸಂಪತ್ತನ್ನು ತೂಗಿ, ದಾನ ಕೊಟ್ಟು, ಕೃಷ್ಣನನ್ನು ಒಲಿಸಿಕೊಳ್ಳುವ ನಾರದರ ಉಪಾಯ ಅದಾಗಿತ್ತು.
ಅದರಂತೆ ಸತ್ಯಭಾಮೆ ತನ್ನೆಲ್ಲ ಆಭರಣ ತೂಗಿದಳು. ಕೃಷ್ಣ ಕುಳಿತಿದ್ದ ತಕ್ಕಡಿ ತಟ್ಟೆ ಒಂದಿಂಚೂ ಮೇಲೇಳಲಿಲ್ಲ. ತವರಿನಿಂದ ಸಂಪತ್ತಿನ ಮೂಟೆಗಳು ಬಂದವು. ತಕ್ಕಡಿ ಅಲ್ಲಾಡಲಿಲ್ಲ.
ಸತ್ಯಭಾಮೆ ರುಕ್ಮಿಣಿಯ ಹೊರತಾಗಿ ಮಿಕ್ಕೆಲ್ಲ ಸವತಿಯರ ಸಹಾಯ ಕೇಳಿದಳು. ಅವರೆಲ್ಲರೂ ತಮ್ಮತಮ್ಮ ಆಭರಣಗಳನ್ನು ತೆಗೆದು ಕೊಟ್ಟರು. ಭಂಡಾರ ಬರಿದು ಮಾಡಿದರು. ಉಹು…. ಏನು ಮಾಡಿದರೂ ತಕ್ಕಡಿ ಜಪ್ಪಯ್ಯ ಅನ್ನಲಿಲ್ಲ.
ಕೃಷ್ಣ ನೋಡುವಷ್ಟು ನೋಡಿದ. “ನೋಡು… ರುಕ್ಮಿಣಿಯನ್ನೊಮ್ಮೆ ಕೇಳಿ ನೋಡು. ಇಲ್ಲವಾದರೆ ಈ ಅಲೆಮಾರಿ ಬ್ರಹ್ಮಚಾರಿಯ ಆಳಾಗಿ ನಾನೂ ಲೋಕಾಂತರ ಹೋಗಬೇಕಾಗುತ್ತದೆ” ಅಂದ.
ಸತ್ಯಭಾಮೆ ರುಕ್ಮಿಣಿಯನ್ನು ಕರೆಸಿಕೊಂಡಳು. ವಿಷಯ ತಿಳಿಸಿ ಸಹಾಯ ಕೇಳಿದಳು. ರುಕ್ಮಿಣಿ ‘ಅಷ್ಟೇ ತಾನೆ?” ಎಂದು ಮುಗುಳ್ನಕ್ಕಳು.
ಅಲ್ಲೇ ಕಟ್ಟೆಯಲ್ಲಿದ್ದ ತುಳಸಿಗೆ ಕೈಮುಗಿದು, ಹಗುರವಾಗಿ ಒಂದು ಎಲೆ ತೆಗೆದುಕೊಂಡಳು. ಖಾಲಿಯಿದ್ದ ತಕ್ಕಡಿ ತಟ್ಟೆಯಲ್ಲಿ ಅದನ್ನು ಇಡುತ್ತಲೇ ಕೃಷ್ಣ ಕುಳಿತಿದ್ದ ತಕ್ಕಡಿ ತಟ್ಟೆ ಮೇಲೆದ್ದಿತು. ತುಳಸಿಯ ತೂಕಕ್ಕೆ ಸಮನಾಯಿತು.
ಕೃಷ್ಣ – ರುಕ್ಮಿಣಿಯರ ಮೇಲೆ ಪುಷ್ಪವೃಷ್ಟಿಯಾಯಿತು. ಎಲ್ಲರೂ ರುಕ್ಮಿಣಿಯ ಕೃಷ್ಣಪ್ರೇಮವನ್ನು ಕೊಂಡಾಡಿದರು.
ರುಕ್ಮಿಣಿ ಕೈಮುಗಿದು, “ಇದು ನನ್ನ ಹೆಚ್ಚುಗಾರಿಕೆಯಲ್ಲ…. ತುಳಸಿಯ ಗರಿಮೆ. ಒಂದು ದಳ ಶ್ರೀ ತುಳಸಿ ಕೃಷ್ಣನ ಮಹತ್ತಿಗೆ ಸಮನಾದುದು” ಎಂದು ವಿನಮ್ರಳಾಗಿ ನುಡಿದಳು.
ಇಸರಿಂದ ಸತ್ಯಭಾಮೆ ಮತ್ತೊಮ್ಮೆ ಪಾಠ ಕಲಿತಳು. ಕೃಷ್ಣನಿಗೆ ರುಕ್ಮಿಣಿಯ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಯಿತು. ತುಳಸಿಯ ಪ್ರಾಮುಖ್ಯತೆ, ಹಿರಿಮೆ ಗರಿಮೆಗಳು ಲೋಕಕ್ಕೆ ತಿಳಿದವು.
ಇಂದು ತುಳಸಿ ಪೂಜೆ. ಈ ದಿನ ಈ ಕಥನವನ್ನು ನೆನೆಯುವುದು ತುಳಸಿಗೆ ನೀಡುವ ಗೌರವ.