ಸಾವಿನ ಆಚೆಗೆ ಏನು ? ~ ಅದ್ಭುತ ಘಟನೆಗಳು ಸಾರುವ ಸತ್ಯ : ಬದುಕಲು ಕಲಿಯಿರಿ #ಅಧ್ಯಾಯ 5

ಬದುಕಲು ಕಲಿಯಿರಿ’ ಕೃತಿಯ ಮೂಲಕ ಮನೆಮಾತಾಗಿದ್ದ ಪರಮ ಪೂಜ್ಯ ಸ್ವಾಮಿ ಜಗದಾತ್ಮಾನಂದ ಜೀ  15.11.2018ರಂದು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಸ್ವಾಮೀಜಿಯವರ ಈ ಕೃತಿ ಒಂದಿಡೀ ತಲೆಮಾರಿನ ಮೇಲೆ ಅದ್ಭುತ ಪರಿಣಾಮ ಬೀರಿತ್ತು. ಅವರ ಸ್ಮರಣೆಯಲ್ಲಿ, ಪುಸ್ತಕದ 7 ಅಧ್ಯಾಯಗಳಿಂದ ಪ್ರತಿದಿನವೂ ಆಯ್ದ ಒಂದು ಭಾಗವನ್ನು ಅರಳಿಮರ ಪ್ರಕಟಿಸಲಿದೆ. ಸಂಪೂರ್ಣ ಓದಿಗಾಗಿ ಮತ್ತು ಅತ್ಯಗತ್ಯವಾಗಿ ಈ ಕೃತಿಯನ್ನು ಕೊಂಡುಕೊಳ್ಳುವುದು ಉತ್ತಮ.

ಅತ್ಯಂತ ಪ್ರಾಚೀನ ಕಾಲದಿಂದಲೂ ಸಾವು ಸಾಧಾರಣ ಮನುಷ್ಯರನ್ನು ಚಿಂತೆಗೀಡು ಮಾಡಿದಂತೆ, ಚಿಂತನಶೀಲರನ್ನಾಗಿಯೂ ಮಾಡಿದೆ. ಹುಟ್ಟು ಸಾವುಗಳ ರಹಸ್ಯ ತಿಳಿಯುವ ಯತ್ನ ಅನಾದಿ ಕಾಲದಿಂದಲೂ ಇದೆ. ಸಾಯುವ ಕಾಲದ ಅನುಭವಗಳೇನಿರಬಹುದು? ಪ್ರತಿಯೊಬ್ಬರ ಪಾಲಿಗೂ ಸಾವು ಅಪಾರ ದುಃಖ, ಸಂಕಟಗಳನ್ನು ತರುವುದೇ? ‘ದೇಹಧಾರಿಯಾದ ವ್ಯಕ್ತಿ’ ಎನ್ನುವ ಭಾರತೀಯರ ಮಾತಿನಲ್ಲಿ ದೇಹವನ್ನು ಧರಿಸಿದ, ದೇಹಕ್ಕೆ ಅತೀತವಾದ ಅಥವಾ ಬೇರೆಯದೇ ಆದ, ಸಾವಿಲ್ಲದ ಚೈತನ್ಯ , ಶಕ್ತಿ ಎನ್ನಿಸಿದ ಜೀವಾತ್ಮ ಎಂಬ ಅರಿವು ನಮಗಾಗುವುದು. ಇದು ನಿಜವೆ? ‘ಸತ್ತುಹೋದ’ ಎನ್ನುವ ಮಾತಿನಲ್ಲಿ ‘ಎಲ್ಲಿಗೆ ಹೋದ?’ ಎನ್ನುವ ಪ್ರಶ್ನೆಯೂ ಅಡಕವಾಗಿದೆ.

‘ಅವನ ಪ್ರಾಣಪಕ್ಷಿಯು ದೇಹ ಪಂಜರದಿಂದ ಬಿಡುಗಡೆ ಹೊಂದಿತು’ ಎನ್ನುವಂಥ ಮಾತುಗಳೆಲ್ಲ ನಮಗೂ ದೇಹಕ್ಕೂ ಇರುವ ಸಂಬಂಧವು, ನಾವು ವಾಸಿಸುವ ಮನೆಗೂ ಅಥವಾ ಧರಿಸುವ ಬಟ್ಟೆಗೂ ಇರುವ ಸಂಬಂಧದಂತೆ ಎನ್ನುವುದನ್ನು ಸೂಚಿಸುತ್ತದೆಯಲ್ಲವೆ? ಅದನ್ನೇ ಶ್ರೀ ರಾಮಕೃಷ್ಣರು ಹೇಳಿದ್ದು, “ಸಾವೆಂದರೆ ಒರೆಯಿಂದ ಖಡ್ಗ ತೆಗೆದಂತೆ. ಹೊರಗಿನ ಚೀಲವನ್ನು ಬಿಟ್ಟು ಒಳಗಿನ ಜೀವಾತ್ಮ ಹೊರಟುಹೋಗುವುದೇ ಆಗಿದೆ” ಹಾಗೆ ಹೊರಟುಹೋದ ಮೇಲೆ ಏನಾಗುತ್ತದೆ?

ಮರಣಾನಂತರದ ಜೀವನ, ಜನ್ಮಾಂತರ ಮತ್ತು ಕರ್ಮವಾದ – ಇವುಗಳ ಅಡಿಪಾಯದ ಮೇಲೆ ಹಿಂದೂ, ಬೌದ್ಧ ಹಾಗೂ ಜೈನ ಧರ್ಮಗಳು ತಮ್ಮ ಸೌಧಗಳನ್ನು ಕಟ್ಟಿವೆ. ಪಶ್ಚಿಮ ದೇಶದ ಧರ್ಮಗಳಲ್ಲಿ ಕರ್ಮ, ಜನ್ಮಾಂತರ ವಾದಗಳನ್ನು ಒಪ್ಪದೆ ಹೋದರೂ; ಮರಣಾನಂತರ ಜೀವಾತ್ಮನು  ಸ್ವರ್ಗ ಅಥವಾ ನರಕದಲ್ಲಿ ವಾಸ ಮಾಡುತ್ತಾನೆ ಎಂಬ ಕಲ್ಪನೆಗಳಿವೆ.

ಭಾರತೀಯ ತತ್ವಶಾಸ್ತ್ರದ ಆಧಾರ ಸ್ತಂಭಗಳಾದ ಕರ್ಮವಾದ ಮತ್ತು ಜನ್ಮಾಂತರ ಸಿದ್ಧಾಂತಗಳ ಬುಡ ನಿಜವಾಗಿಯೂ ಭದ್ರವಾಗಿವೆಯೇ? ಅದು ಒಂದು ಪುರಾತನ ನಂಬಿಕೆ ಮಾತ್ರವೇ? ಅದು ಸಾರ್ವತ್ರಿಕ ಹಾಗೂ ಸಾರ್ವಕಾಲಿಕವಾದ ಒಂದು ಸೂಕ್ಷ್ಮ ನಿಯಮ ಎಂಬ ಅರಿವು, ಯಥಾರ್ಥ ಆಧುನಿಕ ಅನ್ವೇಷಣೆಗಳಿಂದ ಸಾಬೀತಾಗಬಹುದೆ? ಹಾಗೆಂದಾದರೆ, ಗುರುತ್ವಾಕರ್ಷಣ ನಿಯಮವು ಸರ್ವಜನಗ್ರಾಹಿಯಾದಂತೆ, ಸಕಲ ಧರ್ಮಗಳಲ್ಲೂ ಮೂಲಭೂತ ಸಾಮರ್ಥ್ಯವು ಕಂಡು ಬಂದು, ಒಂದು ನಿಜವಾದ ಸೌಹಾರ್ದ ಭಾವನೆ ಮೂಡುವ ಸಂಭವವಿದೆಯೆ? ಈ ಪ್ರಶ್ನೆಗಳಿಗೆ ಉತ್ತರವನ್ನು ಈ ಅಧ್ಯಾಯದಲ್ಲಿ ನೋಡಬಹುದು.

(ಹೆಚ್ಚಿನ ಓದಿಗೆ ‘ಬದುಕಲು ಕಲಿಯಿರಿ’ ಪುಸ್ತಕವನ್ನು ಗಮನಿಸಿ)

51fefvFACuL._AC_US218_(ಆಕರ : ಬದುಕಲು ಕಲಿಯಿರಿ | ಅಧ್ಯಾಯ 5 – ಅದ್ಭುತ (ಘಟನೆ)ಗಳು ಸಾರುವ ಸತ್ಯ | ಪ್ರಕಾಶಕರು : ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು)

ಸ್ವಾಮಿ ಜಗಾದಾತ್ಮಾನಂದರ ‘ಬದುಕಲು ಕಲಿಯಿರಿ’ ಪುಸ್ತಕವನ್ನು ರಾಮಕೃಷ್ಣಾಶ್ರಮದ ಮಳಿಗೆಯಲ್ಲಿ ಕೊಳ್ಳಬಹುದು.

Leave a Reply