ದುರಂತ : ತಾವೋ ಧ್ಯಾನ ~ 13

ದುರಂತ ಸ್ವಾಭಾವಿಕ. ಭಗವಂತನ ಶಾಪವಲ್ಲ, ಶಿಕ್ಷೆಯಲ್ಲ. ಒಳಗಿನ ಒತ್ತಡಗಳ ಪರಸ್ಪರ ತಾಕಲಾಟದಲ್ಲಿ ದುರಂತಗಳ ಹುಟ್ಟು ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao

ಮೂಕ ಕತ್ತಲ ರಾತ್ರಿ,
ಹಟಾತ್ ಬೆಂಕಿ.
ವಿನಾಶ ವಿನಾಶ ವಿನಾಶ.

~

ದುರಂತ ಹೇಳಿ ಕೇಳಿ ಬರುವಂಥದ್ದಲ್ಲ. ಅದು ಎಷ್ಟು ಭಯಂಕರವಾಗಿ ಅಪ್ಪಳಿಸುತ್ತದೆಯೆಂದರೆ, ನಮಗೆ ಅದನ್ನು ಸ್ವೀಕರಿಸುವುದನ್ನು ಬಿಟ್ಟರೆ ಬೇರೆ ಯಾವ ಆಯ್ಕೆಯೂ ಇರುವುದಿಲ್ಲ. ನಮ್ಮ ಬದುಕಿನ ಗತಿಯನ್ನೇ ಬದಲಾಯಿಸುವಷ್ಟು ಕೆಲವು ದುರಂತಗಳು ಸಶಕ್ತವಾಗಿರುತ್ತವೆ. ದುರಂತದ ವಿರುದ್ಧ ಬಂಡಾಯವೇಳುವ ಬಯಕೆ ನಮ್ಮೊಳಗೆ ಹುಟ್ಟುತ್ತದೆಯಾದರೂ ಅದರಿಂದ ಯಾವ ಪ್ರಯೋಜನವೂ ಇಲ್ಲ. ದುರಂತ ಎಷ್ಟು ಭಯಂಕರವಾದರೂ ಅದಕ್ಕೆ ನಮ್ಮ ಬಗ್ಗೆ ದ್ವೇಷ, ಮತ್ಸರ ಇದೆಯೆಂದೂ, ನಮ್ಮ ಯೋಜನೆಗಳಿಗೆ ತಡೆಯೊಡ್ಡಿತೆಂದೂ ಹೇಳುವುದು ಸಾಧುವಲ್ಲ. ಒಂದೇ ಹೊಡೆತದಲ್ಲಿ ನಮ್ಮ ಬದುಕಿನ ಮೂಲ ಉದ್ದೇಶವನ್ನೇ ಅಲ್ಲಾಡಿಸಿಬಿಡುತ್ತದೆ ದುರಂತ.

ದುರಂತ ಸ್ವಾಭಾವಿಕ. ಭಗವಂತನ ಶಾಪವಲ್ಲ, ಶಿಕ್ಷೆಯಲ್ಲ. ಒಳಗಿನ ಒತ್ತಡಗಳ ಪರಸ್ಪರ ತಾಕಲಾಟದಲ್ಲಿ ದುರಂತಗಳ ಹುಟ್ಟು : ಭೂಮಿಯೊಳಗಿನ ಒತ್ತಡಗಳಿಂದ ಭೂಕಂಪ, ಗಾಳಿ ಮತ್ತು ಮಳೆಯ ತಿಕ್ಕಾಟದಿಂದ ಚಂಡಮಾರುತ, ಒಂದೇ ಒಂದು ಕಿಡಿಯಿಂದ ಆಕಸ್ಮಿಕ ಬೆಂಕಿ ದುರಂತ. ದುರಂತಗಳಾದಾಗಲೆಲ್ಲ ಹುಟ್ಟುವ ಪ್ರಶ್ನೆ “ ನಾವೇ ಯಾಕೆ? “ ಆದರೆ ಮುಕ್ತ ಸ್ವೀಕಾರದ ಮೇಲೆ ನಮ್ಮ ನಂಬಿಕೆಗಳನ್ನು ಯುದ್ಧಕ್ಕೆ ಬಿಡಬಾರದು.

ನೀವು ದುಃಖದಿಂದ ಬಳಲುತ್ತಿರುವಿರಾದರೆ, ನೀವು ಭೂತ ಕಾಲದಲ್ಲಿ ಬದುಕುತ್ತಿದ್ದೀರಿ. ನಿಮ್ಮನ್ನು ಆತಂಕ ಕಾಡುತ್ತಿದೆಯೆಂದಾದರೆ ನೀವು ಭವಿಷ್ಯದಲ್ಲಿ ಮನಸ್ಸನ್ನು ನೆಟ್ಟಿರುವಿರಿ. ನೀವು ವರ್ತಮಾನದಲ್ಲಿ, ಈ ಕ್ಷಣದಲ್ಲಿ ಬದುಕುವುದನ್ನು ರೂಢಿಸಿಕೊಂಡಾಗ ಮಾತ್ರ ಶಾಂತಿ, ಸಮಾಧಾನ ಒದಗಿ ಬರುತ್ತವೆ (ಲಾವೋತ್ಸೇ). ಹಾಗಾಗಿ ದುರಂತಗಳೆಂದರೆ ಬರೀ ಕೆಟ್ಟ ನೆನಪುಗಳೇ ಆಗಬೇಕಿಲ್ಲ, ವಿನಾಶವನ್ನು ಎದುರು ನೋಡುವುದೂ ಆಗಬೇಕಿಲ್ಲ. ಸವಿ ನೆನಪುಗಳು, ಸುಂದರ ಕಲ್ಪನೆಗಳು ಕೂಡ ನಮ್ಮ ದುಃಖಕ್ಕೆ, ಆತಂಕಕ್ಕೆ ಕಾರಣವಾಗಿರುತ್ತವೆ. ಆದ್ದರಿಂದಲೇ ಈ ಕ್ಷಣದಲ್ಲಿ ಬದುಕು ಎನ್ನುತ್ತದೆ ತಾವೋ.

ದುರಂತ ನಮ್ಮ ಬದುಕಿನ ದಾರಿಯನ್ನು ಬದಲಿಸಿದರೂ ನೆನಪಿನಲ್ಲಿರಲಿ ಇದು ಬಂದು ಹೋಗುವ ಅತಿಥಿ. ನಮ್ಮ ಗುರಿಗಳ ಮೇಲಿನ ನಮ್ಮ ನಂಬಿಕೆ ಧೃಡವಾಗಿರಲಿ, ಆಳವಾಗಿರಲಿ. ಬೂದಿಯಾಗುವುದು ಅಥವಾ ಫಿನಿಕ್ಸ್ ಹಕ್ಕಿಯಂತೆ ಮತ್ತೇ ಮೇಲೇಳುವುದು ಎರಡೂ ನಮಗೆ ಬಿಟ್ಟ ವಿಷಯಗಳೇ.

Leave a Reply