ಶಕ್ತಿ ಸಂಚಯನ: ತಾವೋ ಧ್ಯಾನ ~ 14

ಹೇಗೆ ಎಲ್ಲ ಬದುಕು, ಅಖಂಡ ಭೌತಿಕ ಸ್ಥಿತಿ ಹಾಗು ಸೂಕ್ಷ್ಮ ಪ್ರಜ್ಞೆಯ ವಿವಿಧ ಹಂತಗಳ ನಡುವೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತದೆಯೋ ಹಾಗೆಯೇ ತಾವೋ ನಂಬಿದವರು ದೇಹದ ಎಲ್ಲ ಭಾಗಗಳನ್ನೂ, ಮನಸ್ಸು ಹಾಗು ಚೇತನವನ್ನೂ ಅಧ್ಯಾತ್ಮಿಕ ಇರುವಿಕೆಗಾಗಿ ಬಳಸುತ್ತಾರೆ ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚೆಂದಾಗಿ
ನೆಲದಿಂದ ಗಗನ ಮುಟ್ಟಿದಂತೆ ಕಾಂಬುದು
ಚೆಲುವ ಮಧ್ಯದ ಕಂಬವೋ, ಹೊಗಿಯ ಬಿಂಬವೋ

– ಶಿಶುನಾಳ ಶರೀಫ

~

ಅಧ್ಯಾತ್ಮ, ಕೇವಲ ಬುದ್ಧಿ ಮತ್ತು ಮನಸ್ಸಿನ ಕ್ರೀಯೆಯಲ್ಲ, ಅದು ಚೈತನ್ಯದ ಅಭಿವ್ಯಕ್ತಿ ಕೂಡ ಹೌದು.

ಈ ಶಕ್ತಿಯ, ಚೈತನ್ಯದ ಮೂಲ ಭೌತಿಕವಾದದ್ದು ಹಾಗು ದೇಹದ ಪ್ರಾಥಮಿಕ ಸಂರಚನೆಯಲ್ಲಿಯೇ ಇದರ ಬೇರುಗಳನ್ನು ಗುರುತಿಸಬಹುದು. ಸತತ ಅಭ್ಯಾಸ ಮತ್ತು ಸ್ವಯಂ ಪೋಷಣೆ ಈ ಶಕ್ತಿಯನ್ನು ಶುದ್ಧೀಕರಿಸಿ ಅಧ್ಯಾತ್ಮಿಕ ಸಾಧನೆಯಲ್ಲಿ ಪಾಲ್ಗೊಳ್ಳಲು ತಯಾರು ಮಾಡುತ್ತವೆ. ಅಂತೆಯೇ ಜ್ಞಾನೋದಯ, ತಾವೋ ಸಾಧಕರಿಗೆ ಮನೋ ಭೌತಿಕ ಸಾಧನೆ, ಆದ್ದರಿಂದಲೇ ತಾವೋ ಒಂದು ಇರುವಿಕೆಯ ಸ್ಥಿತಿ, ಕೇವಲ ಬೌದ್ಧಿಕ ಕಸರತ್ತು ಅಲ್ಲ.

ಧ್ಯಾನ ಹಾಗು ಕೆಲವು ವಿಶಿಷ್ಟ ಕ್ರೀಯೆಗಳಿಂದ ದೇಹದಲ್ಲಿ ಈ ಶಕ್ತಿಯನ್ನು ಜಾಗೃತಗೊಳಿಸಿ ದೇಹದ ತುತ್ತ ತುದಿಯವರೆಗೆ ಕೊಂಡೊಯ್ಯುವುದು ತಾವೋ ಸಾಧನೆಯ ಒಂದು ಭಾಗ. ಈ ಚೈತನ್ಯ ನೆಲೆಗೊಂಡಿರುವುದು ಬೆನ್ನು ಹುರಿ ಶುರುವಾಗುವಲ್ಲಿ, ಜನನಾಂಗಗಳ ಭಾಗದಲ್ಲಿ. ಬೆನ್ನು ಮೊಳೆಯ ಮೂಲಕ ಪ್ರವಹಿಸುತ್ತ, ಮೂತ್ರ ಜನಕಾಂಗ, ರಕ್ತನಾಳ ಮತ್ತು ನರ ನಾಡಿಗಳನ್ನು ಪೋಷಿಸುತ್ತ ಏರು ಮುಖವಾಗಿ ಈ ಶಕ್ತಿಯ ಪ್ರಯಾಣ. ತಲೆಯ ಕೆಳ ಭಾಗ ತಲುಪಿದಾಗ ಇಡೀ ನರ ಮಂಡಲದ, ಮೆದುಳಿನ ಕೆಳ ಭಾಗದ ಪ್ರಚೋದನೆ. ಈ ಜೀವ ನದಿ, ನೆತ್ತಿಯ ತುತ್ತ ತುದಿ ತಲುಪಿದಾಗ ಮನುಷ್ಯನ ಸುಪ್ತ ಪ್ರಜ್ಞೆಯ ಅಪಾರ ಸಾಧ್ಯತೆಗಳ ಅನಾವರಣ. ಆಮೇಲೆ ಇಳಿ ಮುಖವಾಗಿ ಹರಿಯುತ್ತ ಕಣ್ಣು, ಹೃದಯ, ಪುಪ್ಪುಸಗಳ ಪೋಷಣೆ. ಆಮೇಲೆ ನಾಭೀಯ ಮೂಲಕ ಪ್ರವಹಿಸುತ್ತ ನಮಗೆ ನಮ್ಮ ಸಹಜ ಶುದ್ಧ ಸ್ಥಿತಿಯನ್ನು ವಾಪಸ್ಸು ಮಾಡಿ ಆಮೇಲೆ ತನ್ನ ಮೂಲ ಸ್ಥಾನಕ್ಕೆ ಬಂದು ಸೇರುತ್ತದೆ, ಮತ್ತೊಂದು ಹೊಸ ಪ್ರವಾಹಕ್ಕೆ ಸಿದ್ಧವಾಗುತ್ತ.

ಶೈವರು, ಬೌದ್ಧರು, ವೈದಿಕರು, ಅವೈದಿಕರು, ಸೂಫಿಗಳು, ವಚನಕಾರರು ಎಲ್ಲ ದೇಹದಲ್ಲಿನ ಈ ಶಕ್ತಿ ಸಂಚಯನವನ್ನು ತಮ ತಮಗೆ ಕಂಡ ಹಾಗೆ ವ್ಯಾಖ್ಯಾನ ಮಾಡಿದ್ದಾರೆ.

ದ್ವೈತಿಗಳು, ಮುಖ್ಯ ಪ್ರಾಣನ ಆರಾಧಕರು, ದಾಸ ಪರಂಪರೆಯ ಮುಖ್ಯ ಯತಿಗಳಾದ ವಿಜಯ ದಾಸರು ಇದೇ ಪ್ರಕ್ರಿಯನ್ನು ಬಣ್ಣಿಸುವ ರೀತಿ ನೋಡಿ .

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ
ಡಂಬವ ತೊಲಗಿಸಿ
ಡಿಂಭದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ||ಪಲ್ಲವಿ||

ಅಂತರಂಗದ ಉಸುರ ಹೊರಗೆ ನೂಕಿ ಅಂತರಂಗಕೆ ಸೇದುವ
ಪಂಥದಾಳು ನೀನೇ ಕಂತುಜನಕನಲ್ಲಿ ಮಂತ್ರಿಯೆನಿಸಿ
ಸರ್ವಾಂತರ್ಯಾಮಿಯಾಗಿ ನಿಂತು ನಾನಾಬಗೆ ತಂತು ನಡೆಸುವ
ಹೊಂತಕಾರಿ ಗುಣವಂತ ಬಲಾಢ್ಯ ||೧||

ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಮ ಹಂಸ ಮಂತರ
ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿ ತಪ್ಪಿಸಿ ಭವವ ಸಮೀಪದಿ ಜೀವರಿಗೆ
ಅಪ್ಪನಂದದಿ ಪುಣ್ಯ ಬಪ್ಪಂತೆ ಕರುಣಿಸು
ಕಪ್ಪುವರ್ಣನ ಕೂಡೊಪ್ಪಿಸಿ ಪಾಲಿಸು ||೨||

ಹತ್ತೇಳು ಎರಡಾಯತ ನಾಡಿಯೊಳು ಸುತ್ತಿಸುತ್ತುವ ಮಾರುತ
ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ
ನೆತ್ತಿಯ ದ್ವಾರದಿಂದ ಎತ್ತ ಪೋಗಲೀಸದೆ
ಠಕ್ಕು ಮರುಳ, ಜೀವೋತ್ತಮನೆ ಸಮಚಿತ್ತ ಎನಗೆ ಕೊಡುತ್ತ ಉದ್ಧರಿಸೊ ||೩||

ಯೋಗಾಸನದೊಳಿಪ್ಪ ಯಂತ್ರೋದ್ಧಾರಕ ಭಾಗವತ ಜನರಪ್ಪ
ಯೋಗಿಗಳಿಗೀಶ ವ್ಯಾಸ ಯೋಗಿಗೊಲಿದ ನ್ಯಾಸ
ಶ್ರೀ ತುಂಗಭದ್ರ ನಿವಾಸ ಬಾಗುವೆ ಕೊಡು ಲೇಸ
ಶ್ರೀ ಗುರು ವಿಜಯವಿಠಲನ ಪಾದಕೆ ಬಾಗಿದ ಭವದೂರ ಜಾಗರ ಮಾರುತಿ ||೪||

**

ಹೇಗೆ ಎಲ್ಲ ಬದುಕು, ಅಖಂಡ ಭೌತಿಕ ಸ್ಥಿತಿ ಹಾಗು ಸೂಕ್ಷ್ಮ ಪ್ರಜ್ಞೆಯ ವಿವಿಧ ಹಂತಗಳ ನಡುವೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತದೆಯೋ ಹಾಗೆಯೇ ತಾವೋ ನಂಬಿದವರು ದೇಹದ ಎಲ್ಲ ಭಾಗಗಳನ್ನೂ, ಮನಸ್ಸು ಹಾಗು ಚೇತನವನ್ನೂ ಅಧ್ಯಾತ್ಮಿಕ ಇರುವಿಕೆಗಾಗಿ ಬಳಸುತ್ತಾರೆ.

Leave a Reply