ಸತತ ಪ್ರಯತ್ನ : ತಾವೋ ಧ್ಯಾನ ~ 15

ಕೆಲವೊಮ್ಮೆ ಕೆಲಸ ಕಠಿಣವಾಗಿರಬಹುದು, ನಿತ್ಯದ ಕೆಲಸಗಳು ಮಾಮೂಲು ಅನಿಸತೊಡಗಬಹುದು, ಗುರಿಗಳು ತುಂಬ ದೂರ ಕಾಣಿಸತೊಡಗಬಹುದು ಆದರೂ ನಾವು ನಮ್ಮ ಸಿದ್ಧತೆಯನ್ನು ನಿಲ್ಲಿಸುವ ಹಾಗಿಲ್ಲ. ಆಗ ಮಾತ್ರ ಧೃಢವಾಗಿ, ಸ್ಥಿರವಾಗಿ ಗುರಿಯತ್ತ ನಮ್ಮ ಪ್ರಯಾಣ ಮತ್ತು ಎಂಥ ಆತಂಕಕಾರಿ ಪರಿಸ್ಥಿತಿಯಲ್ಲೂ ನಂಬಿಕೆ ಅಲುಗಾಡದಂತೆ ನಾವು ಗಟ್ಟಿಯಾಗಿ ನೆಲೆ ನಿಲ್ಲಬಹುದು ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao 15

ಬೀಜ ಬಿತ್ತಿ, ಪಾತಿ ಮಾಡಿ
ನೀರು ಹಾಕಿ ಸುಮ್ಮನಾಗುವುದು,
ಹೆಸರಾಗಿಯೂ ಹೆಸರ ಉಸಿರದಿರುವುದು,
ಜಗ್ಗದೆಯೇ ಎಳೆಯುವುದು,
ಸಚ್ಚಾರಿತ್ರದ ಮೂಲ ಬೇರುಗಳು.

~ ಲಾವೋತ್ಸೇ

ಮೀನುಗಾರನ ಹತ್ತಿರ ಸರಿಯಾಗಿ ಹೆಣೆದ ಬಲೆ ಇರದೇ ಹೋದರೆ ಅವನ ಪ್ರಯತ್ನ ವ್ಯರ್ಥ. ಪೂರ್ವ ಸಿದ್ಧತೆ ಅವನ ಪ್ರಯತ್ನದ ಬಹು ಮುಖ್ಯ ಭಾಗ. ಮೀನುಗಾರ ತನ್ನ ಬಲೆಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಾಗ, ತನ್ನ ದೋಣಿಯನ್ನು ಕೆಡದಂತೆ ನೋಡಿಕೊಂಡಾಗ, ಮೀನು ಮತ್ತು ನೀರಿನ ಸ್ಥಿತಿಯನ್ನ, ಸ್ವಭಾವವನ್ನ ಸತತವಾಗಿ ಅಭ್ಯಾಸ ಮಾಡಿದಾಗ ಮೀನು ಹಿಡಿಯಲು ಹೋಗುವುದು ಅವನಿಗೆ ಕೇವಲ ಔಪಚಾರಿಕತೆ ಅಷ್ಟೇ. ಆಗ ಮೀನುಗಳು, ಕಾಣದ ಕೈಯೊಂದು ನೂಕಿದಂತೆ ತಾವೇ ತಾವಾಗಿ ಬಂದು ಬಲೆಗೆ ಬೀಳುತ್ತವೆ.

ಯಾವಾಗ ನಮಗೆ ಯಾವೂದೂ ಸಹಕರಿಸುತ್ತಿಲ್ಲ ಅನಿಸಲು ಶುರುವಾಗುತ್ತದೆಯೋ ಆಗ ಮೀನುಗಾರನ ಆ ಸತತ ಪ್ರಯತ್ನ ನಮಗೆ ನೆನಪಾಗಬೇಕು. ಕೆಲವೊಮ್ಮೆ ಕೆಲಸ ಕಠಿಣವಾಗಿರಬಹುದು, ನಿತ್ಯದ ಕೆಲಸಗಳು ಮಾಮೂಲು ಅನಿಸತೊಡಗಬಹುದು, ಗುರಿಗಳು ತುಂಬ ದೂರ ಕಾಣಿಸತೊಡಗಬಹುದು ಆದರೂ ನಾವು ನಮ್ಮ ಸಿದ್ಧತೆಯನ್ನು ನಿಲ್ಲಿಸುವ ಹಾಗಿಲ್ಲ. ಆಗ ಮಾತ್ರ ಧೃಢವಾಗಿ, ಸ್ಥಿರವಾಗಿ ಗುರಿಯತ್ತ ನಮ್ಮ ಪ್ರಯಾಣ ಮತ್ತು ಎಂಥ ಆತಂಕಕಾರಿ ಪರಿಸ್ಥಿತಿಯಲ್ಲೂ ನಂಬಿಕೆ ಅಲುಗಾಡದಂತೆ ನಾವು ಗಟ್ಟಿಯಾಗಿ ನೆಲೆ ನಿಲ್ಲಬಹುದು.

ಒಂದು ಝೆನ್ ಕಥೆ ನೆನಪಾಗುತ್ತಿದೆ. ಒಮ್ಮೆ ಒಬ್ಬ ಹೆಣ್ಣು ಮಗಳು ಕಾಡಿನ ದಾರಿಯ ಮೂಲಕ ಹಾಯ್ದು ಮನೆಗೆ ವಾಪಸ್ಸಾಗುತ್ತಿದ್ದಳು. ದಾರಿಯಲ್ಲಿ ಅವಳಿಗೆ ಭಾರಿ ಮರವೊಂದನ್ನು ಗರಗಸದಿಂದ ಕತ್ತರಿಸುತ್ತಿದ್ದ ಒಬ್ಬ ಯುವಕ ಕಾಣಿಸಿದ. ಅವನ ಮೈಯಿಂದ ಬೆವರು ಧಾರಾಕಾರವಾಗಿ ಹರಿಯುತ್ತಿತ್ತು, ಅವ ತುಂಬ ಬಳಲಿದವನಂತೆ ಕಾಣಿಸುತ್ತಿದ್ದ.

“ಹುಡುಗಾ, ನೀನು ತುಂಬ ಅವಸರದಲ್ಲಿರುವಂತೆ, ತುಂಬ ಕಷ್ಟದಲ್ಲಿರುವಂತೆ ಕಾಣುತ್ತದೆ. ಬಹುಶಃ ನಿನ್ನ ಗರಗಸ ಮೊಂಡಾಗಿರಬಹುದು, ಯಾಕೆ ನೀನು ಮೊದಲು ಗರಗಸ ಹರಿತ ಮಾಡಿಕೊಳ್ಳಬಾರದು? “ ಹೆಣ್ಣು ಮಗಳು ಯುವಕನನ್ನು ಮಾತಾಡಿಸಿದಳು.

ಅವಳತ್ತ ತಿರುಗಿಯೂ ನೋಡದೆ ಆ ಯುವಕ ಉತ್ತರಿಸಿದ.

“ ಮೊದಲು ನಾನು ಈ ಮರ ಕತ್ತರಿಸಬೇಕು, ಆಮೇಲೆ ಇನ್ನೂ ಎರಡು ಮರ ಕತ್ತರಿಸುವುದಿದೆ. ಗರಗಸ ಹರಿತ ಮಾಡುತ್ತ ಕುಳಿತುಕೊಳ್ಳುವಷ್ಟು ಸಮಯ ನನ್ನ ಬಳಿ ಇಲ್ಲ.

ಆದ್ದರಿಂದ, ಪರಿಶ್ರಮದ ಫಲ ಉಣ್ಣಲು ಅನುಭವದ ಜೊತೆ ಪ್ರೌಢತೆಯೂ ಅವಶ್ಯಕ. ಸಂಯಮ, ಪೂರ್ವ ಸಿದ್ಧತೆ ಮತ್ತು ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸುವ ಚಾಣಾಕ್ಷತೆ ಎಲ್ಲ ಬೇಕಾಗುತ್ತವೆ. ಪರಿಸ್ಥಿತಿ ನಮಗೆ ವ್ಯತಿರಿಕ್ತವಾಗಿರುವಾಗಲೂ ಸಂಪನ್ಮೂಲಗಳನ್ನು ಒಟ್ಟುಮಾಡುವುದನ್ನ ನಿಲ್ಲಿಸಬಾರದು. ನಮ್ಮ ಯೋಜನೆಗಳನ್ನು ಇದು ಒಳ್ಳೆಯ ಸಮಯ, ಇದು ಕೆಟ್ಟ ಸಮಯ ಎಂದು ವಿಂಗಡಿಸದೇ ಸತತವಾಗಿ ಪೋಷಿಸಿದಾಗ ತಾನೇ ತಾನಾಗಿ ಬಲೆಗೆ ಬಂದು ಬಿದ್ದ ಮೀನಿನಂತೆ ನಮ್ಮ ಉದ್ದೇಶಗಳು ಸಾಕಾರವಾಗುವವು.

Leave a Reply