ಈ 10 ತ್ಯಾಜ್ಯ ನಿರ್ವಹಣೆ ಸಮರ್ಪಕವಾಗದಿದ್ದರೆ ನಗರ ನರಕ : ವಾಸ್ತುಶಾಸ್ತ್ರ

ಈ ಹತ್ತು ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಸಾಧ್ಯವಾಗದೆ ಹೋದರೆ, ನಗರಗಳು ನರಕವಾಗುತ್ತವೆ ಎಂದು ವಾಸ್ತುಶಾಶ್ತ್ರ ಹೇಳುತ್ತದೆ.

ವಾಸ್ತುಶಾಸ್ತ್ರದಲ್ಲಿ ಹೇಳಲಾಗಿರುವ ದಶ ಶೌಚಾದಿಗಳು ಹೀಗಿವೆ :

ವಾತಜನ್ಯ : ಗಾಳಿಯಿಂದ ಹಾರಿಬಂದು ಸಂಗ್ರಹವಾಗುವ ಕಸ, ದೂಳು ಇತ್ಯಾದಿ

ಕಾಲಜನ್ಯ : ಕಾಲಕ್ರಮದಲ್ಲಿ ಕಸ, ದೂಳು, ಕೆಸರು, ತರಗೆಲೆ ಇತ್ಯಾದಿಯಾಗಿ ಪರಿವರ್ತನೆಯಾಗುವಂಥವು

ಪಕ್ಷಿಜನ್ಯ : ಆಯಾ ಪ್ರದೇಶಗಳಲ್ಲಿ ಪಕ್ಷಿಗಳು ತಂದೆಸೆಯುವ ಕಸಕಡ್ಡಿಗಳು

ಪ್ರಾಣಿಜನ್ಯ : ಆಯಾ ಪ್ರದೇಶಗಳಲ್ಲಿ ಪ್ರಾಣಿಗಳಿಂದ ಉತ್ಪನ್ನವಾಗುವ ತ್ಯಾಜ್ಯಗಳು

ಮಾನವಜನ್ಯ : ಮನುಷ್ಯರ ನಿತ್ಯ ತ್ಯಾಜ್ಯ; ಬಳಸಿ ಬಿಸಾಡುವ ವಸ್ತುಗಳು (ಈಗಿನ ಕಾಲಮಾನದಲ್ಲಿ ಕಾರ್ಖಾನೆಗಳು, ವಾಹನಗಳು, ಇ – ತ್ಯಾಜ್ಯ, ಪ್ಲಾಸ್ಟಿಕ್ ಇತ್ಯಾದಿ ಸುಲಭವಾಗಿ ಕರಗದ ವಸ್ತುಗಳೂ ಈ ಪಟ್ಟಿಗೆ ಸೇರುತ್ತವೆ, ಇವೆಲ್ಲವೂ ಮಾನವಕೃತವೇ)

ಜಲಜನ್ಯ : ಬಚ್ಚಲು, ಮೋರಿ ನೀರು ಇತ್ಯಾದಿ

ಆಹಾರ ಕಾರಣ ಜನ್ಯ : ತರಕಾರಿ, ಹಣ್ಣು ಹಂಪಲುಗಳಿಂದ ಉತ್ಪನ್ನವಾದಂಥವು

ವಿಹಾರ ಕಾರಣ ಜನ್ಯ : ಮನುಷ್ಯರು ವಿಹಾರ ಕಾಲದಲ್ಲಿ ಬಳಸಿ ಬಿಸಾಡುವ ವಸ್ತುಗಳು

ವಿನಿಮಯಜನ್ಯ : ನಿರ್ಮಾಣವೂ ಸೇರಿದಂತೆ ಪರಸ್ಪರ ವಿನಿಮಯ, ಪರಿವರ್ತನೆ ಇತ್ಯಾದಿ ನಡೆಸುವಾಗ ಉಂಟಾಗುವ ತ್ಯಾಜ್ಯ

ಮೃತಾಜನ್ಯ : ಜೀವಿಗಳು ಮೃತವಾದಾಗ ಉಂಟಾಗುವ ತ್ಯಾಜ್ಯ; ಮೃತ ದೇಹ ಇತ್ಯಾದಿ

ಹೀಗೆ ಇರುವ ಭಾಷೆಗಳಲ್ಲೆಲ್ಲ, ಇರುವ ಶಾಸ್ತ್ರಗಳಲ್ಲೆಲ್ಲ ಕಾಲಾನುಕಾಲಕ್ಕೆ ಶೌಚ, ತ್ಯಾಜ್ಯ ನಿರ್ವಹಣೆ ಬಗ್ಗೆ ಹೇಳುತ್ತ ಬಂದಿದ್ದರೂ ಮನುಷ್ಯನ ಸ್ವಾರ್ಥ ಬುದ್ಧಿ ತನಗೆ ತೋಚಿದಂತೆ ನಗರಗಳನ್ನು ನಿರ್ಮಿಸುತ್ತಾ ಬಂದಿದೆ. ಅದರ ಪರಿಣಾಮ ನಾವು ಮಾತ್ರವಲ್ಲ, ನಮ್ಮ ಸಹಜೀವಿಗಳು ಅನುಭವಿಸುವಂತಾಗಿದೆ. 

ನಮಗೆ ಆಧುನಿಕ ವಿಜ್ಞಾನದ ತಿಳಿವಳಿಕೆಯೂ ಬೇಡ, ಪ್ರಾಚೀನ ಬೋಧನೆಗಳೂ ಬೇಡ… ಹಾಗಾದರೆ ಮನುಷ್ಯ ಮಸ್ತಿಷ್ಕದಲ್ಲಿ ಇತರ ಪ್ರಾಣಿಗಳಿಗಿಂತ ಹೆಚ್ಚು ಸಮರ್ಥವಾದ ಮೆದುಳಿದ್ದು ಪ್ರಯೋಜನವೇನು!?

ಈಗಲಾದರೂ ಯೋಚಿಸಬೇಕು. ನಾವು ಪ್ರಾಣಿಗಳಲ್ಲ, ಅವುಗಳಿಗಿಂತ ಭಿನ್ನ ಮತ್ತು ಬುದ್ಧಿವಂತರು ಹೌದೇ ಆಗಿದ್ದರೆ, ‘ಮಾನವ ಜನ್ಮ ದೊಡ್ಡದು’ ಅನ್ನುವುದು ನಿಜವೇ ಆಗಿದ್ದರೆ, ಅದು ಸಾಬೀತಾಗುವಂಥ ನಡವಳಿಕೆ ಅಳವಡಿಸಿಕೊಳ್ಳಬೇಕು. 

 

Leave a Reply