ನಮ್ಮ ಪೂರ್ವ ಸೂರಿಗಳಿಗಿಂತ ನಮ್ಮ ಅಧ್ಯಾತ್ಮದ ಸಮಸ್ಯೆಗಳು ಬೇರೆ ಏನಲ್ಲ ಮತ್ತು ಇವತ್ತಿನ ಸತ್ಯಗಳೂ ಕೂಡ ಮತ್ತೆ ಅದೇ ಅಧ್ಯಾತ್ಮವನ್ನು ಹುಡುಕಲು ಪ್ರಯತ್ನ ಮಾಡುತ್ತಿವೆ ಯಾಕೆ? ~ ಡೆಂಗ್ ಮಿಂಗ್ ದಾವೋ | ಚಿದಂಬರ ನರೇಂದ್ರ
ತಾವೋ ಒಂದು ಬಾವಿ
ಸೇದಿದಷ್ಟೂ ತುಂಬಿಕೊಳ್ಳುವ ಬಾವಿ
ಅನಂತ ಸಾಧ್ಯತೆಗಳ
ಮಹಾ ಬಯಲು.
ಇರುವುದಂತೂ ಹೌದು,
ಆದರೆ ಯಾರಿಗೂ ಕಾಣಿಸುವುದಿಲ್ಲ
ಯಾರು ಕಟ್ಟಿಸಿದರೋ?
ದೇವರಿಗಿಂತ ಹಳೆಯದು ಮಾತ್ರ ನಿಜ.
– ಲಾವೋತ್ಸೇ
**
ಯಾಕೆ ಧರ್ಮಗಳು ಅವನತಿಯ ಹಾಗಿ ಹಿಡಿಯುತ್ತವೆ?
ಏಕೆಂದರೆ ಧರ್ಮಗಳು ಮನುಷ್ಯನ ಸೃಷ್ಟಿ. ಧರ್ಮ ಮತ್ತು ಅಧ್ಯಾತ್ಮ ಒಂದಕ್ಕೊಂದು ಸಮಾನಾರ್ಥಕ, ಅಥವಾ ಒಂದಕ್ಕೊಂದು ಪರ್ಯಾಯ ಅಲ್ಲ. ಧರ್ಮ ಹುಟ್ಟಿದ್ದು ಮನುಷ್ಯರಿಂದ ಸಂಸ್ಕೃತಿಗಳಿಂದ ಆದರೆ ಅಧ್ಯಾತ್ಮದ ಸಂಬಂಧ ನೇರವಾಗಿ ತಾವೋ ದೊಂದಿಗೆ. ಧರ್ಮಗಳು ಅವನತಿ ಹೊಂದುತ್ತ ಕೇವಲ ನಡವಳಿಕೆಗಳಾಗಿ, ಆಚರಣೆಗಳಾಗಿ ಕೊನೆಗೆ ಭ್ರಷ್ಟಾಚಾರದಲ್ಲಿ ಪರ್ಯಾವಸಾನಗೊಳ್ಳುತ್ತವೆ. ಅವುಗಳ ಬಂಧದಲ್ಲಿಯೇ ಕೊರತೆಯಿದೆ. ಅವುಗಳ ಸೃಷ್ಟಿಕರ್ತನ ಛಾಯೆ ಕಂದುತ್ತ ಹೋದಂತೆ ಅತ್ಯಂತ ಪವಿತ್ರ ಶಬ್ದಗಳೂ ಕಮ್ಮ ಸಾಮರ್ಥ್ಯ ಕಳೆದುಕೊಳ್ಳುತ್ತ ಹೋಗುತ್ತವೆ.
ನಮ್ಮ ಪೂರ್ವ ಸೂರಿಗಳಿಗಿಂತ ನಮ್ಮ ಅಧ್ಯಾತ್ಮದ ಸಮಸ್ಯೆಗಳು ಬೇರೆ ಏನಲ್ಲ ಮತ್ತು ಇವತ್ತಿನ ಸತ್ಯಗಳೂ ಕೂಡ ಮತ್ತೆ ಅದೇ ಅಧ್ಯಾತ್ಮವನ್ನು ಹುಡುಕಲು ಪ್ರಯತ್ನ ಮಾಡುತ್ತಿವೆ ಯಾಕೆ? ಏಕೆಂದರೆ ಎಲ್ಲ ಸತ್ಯಗಳು ತಾವೋದಲ್ಲಿ ಒಂದಾಗಿವೆ ಮತ್ತು ತಾವೋ ಸದಾ ಅಸ್ತಿತ್ವದಲ್ಲಿತ್ತು ಸುಪ್ತವಾಗಿ, ಇಡಿಯಾಗಿ, ಸನಾತನವಾಗಿ. ಧರ್ಮಗಳ ಪರೀಧಿಯಲ್ಲಿಯೇ ನಾವು ಅಧ್ಯಾತ್ಮದ ಬಗೆಗಿನ ನಮ್ಮ ಜಿಜ್ಞಾಸೆಯನ್ನು ಆರಂಭಿಸಬಹುದಾದರೂ ಒಮ್ಮೆ ನಮ್ಮ ಪ್ರಜ್ಞೆಯ ವಿರೂಪಗಳು ಮತ್ತು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ಅದರ ಸ್ವಭಾವ ನಿಚ್ಚಳವಾಗುತ್ತಿದ್ದಂತೆಯೇ ನಾವು ತಾವೋ ವಲಯವನ್ನು ಪ್ರವೇಶಿಸುತ್ತೇವೆ. ಆಮೇಲೆ ಯಾವ ಧರ್ಮದ ಅವಶ್ಯಕತೆಯೂ ಇರುವುದಿಲ್ಲ.
ತಾವೋ ಶಾಶ್ವತ, ಅನಂತ.
ಯಾಕೆ ಶಾಶ್ವತ ?
ಅದು ಹುಟ್ಟೇ ಇಲ್ಲ ಎಂದಮೇಲೆ
ಸಾಯುವ ಮಾತೆಲ್ಲಿಂದ ಬಂತು.
ಯಾಕೆ ಅನಂತ ?
ಸ್ವಂತದ್ದು ಏನೂ ಇಲ್ಲ ಎಂದಮೇಲೆ
ಎಲ್ಲಕ್ಕೂ ಒದಗಬಲ್ಲದು ಎಂದೇ ಅರ್ಥ.
ಸಂತ ಹಿಂದಿದ್ದಾನೆ
ಹಾಗೆಂದೇ ತಾವೋ ಮುಂದಿದೆ.
ಯಾವುದಕ್ಕೂ ಅಂಟಿಕೊಂಡಿಲ್ಲ ಎಂದೇ
ಎಲ್ಲದರಲ್ಲೂ ಒಂದಾಗಿದೆ.
ತನ್ನಿಂದ ತನ್ನನ್ನು ಕಳೆದುಕೊಂಡಿದ್ದರಿಂದಲೇ
ಪರಿಪೂರ್ಣವಾಗಿ ಮೈದುಂಬಿಕೊಂಡಿದೆ.
– ಲಾವೋತ್ಸೆ
ನಮಗೆ ಅಪ್ಪಟ ಅಧ್ಯಾತ್ಮಿಕ ಅನುಭವದ ಅವಶ್ಯಕತೆ ಇದ್ದಲ್ಲಿ, ಧಾರ್ಮಿಕ ಜನರಾಗುವ ಅಥವಾ ಅವರ ಹಿಂಬಾಲಕರಾಗುವ ಹಂಬಲ ಹುಚ್ಚುತನದ್ದು. ಆಗ ನಾವು ನಮ್ಮ ಹಿಂದಿನ ಸಾಧಕರು ಮಾಡಿದ ತಪ್ಪನ್ನೇ ಮಾಡುತ್ತೇವೆ. ಸುಮ್ಮನೇ ಹೆಸರಿಲ್ಲದ ತಾವೋ* ಅಪ್ಪಿಕೊಂಡರೆ ಸಾಕು ಆಗ ನಾವು ಸಾಮಾಜಿಕ ಜವಾಬ್ದಾರಿಗಳ ದ್ವಂದ್ವದಿಂದ ಪಾರಾಗುತ್ತೇವೆ.
(* ತಾವೋ ಎಂದರೆ ದಾರಿ. ಹೆಸರಿಲ್ಲದ ದಾರಿ… ನಾವೇ ರೂಪಿಸಿಕೊಳ್ಳುವ ಚಲನೆಯ ಮಾರ್ಗ)