ವನಾನಿ ದಹತೋ ವಹ್ನೇ ಸಖಾ ಭವತಿ ಮಾರುತಃ
ಸ ಏವ ದೀಪ ನಾಶಾಯ ಕೃಶೇ ಕಸ್ಯಸ್ತಿ ಸಹೃದಮ್!? || ಸುಭಾಷಿತ ಮಂಜರಿ ||
ಅರ್ಥ : ಕಾಡ್ಗಿಚ್ಚಿನ ಬೆಂಕಿಗೆ ಮತ್ತಷ್ಟು ಬಲ ತುಂಬುವ ಗಾಳಿಯೇ ಹಣತೆಯ ಕಿರು ದೀಪವನ್ನು ಆರಿಸಿಬಿಡುತ್ತದೆ. ದುರ್ಬಲರಿಗೆ ಗೆಳೆಯರಾದರೂ ಯಾರಿದ್ದಾರು!?
ತಾತ್ಪರ್ಯ : ಕಾಡ್ಗಿಚ್ಚು ಗಾಳಿ ಬೀಸಿದಂತೆಲ್ಲ ಧಗಧಗಿಸಿ ಉರಿಯುತ್ತದೆ. ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಾಗ ಗಾಳಿ ಅದನ್ನು ಇತರೆಡೆಗೂ ಹರಡಲು ಸಹಕರಿಸುತ್ತದೆ. ಆದರೆ, ಚಿಕ್ಕದೊಂದು ಹಣತೆಯಲ್ಲಿ ದೀಪ ಹಚ್ಚಿಟ್ಟಾಗ ಬೀಸುವ ಗಾಳಿಯು ಅದು ನಂದಿಹೋಗುವಂತೆ ಮಾಡಿಬಿಡುತ್ತದೆ. ಕಾಡ್ಗಿಚ್ಚು ಉರಿಯಲು ಸಹಾಯ ಮಾಡುವ ಗಾಳಿಯೇ ದೀಪದ ಬೆಳಕು ಆರಲು ಕಾರಣವಾಗುತ್ತದೆ.
ಎರಡೂ ಕಡೆ ಇರುವುದೂ ಬೆಂಕಿಯೇ. ಆದರೆ ಕಾಡ್ಗಿಚ್ಚಿನ ರೂಪದಲ್ಲಿರುವ ಬೆಂಕಿ ದಷ್ಟಪುಷ್ಟವಾಗಿದೆ. ಬೃಹತ್ತಾಗಿದೆ. ದೀಪದಲ್ಲಿ ಮೊಗ್ಗಿನಂತೆ ಬಳಕುವ ಬೆಂಕಿ ದುರ್ಬಲವಾಗಿದೆ. ಕೃಶವಾಗಿದೆ. ಬಲಶಾಲಿಗೆ ಎಲ್ಲರೂ ಗೆಳೆಯರೇ. ದುರ್ಬಲರನ್ನು ಕಂಡರೆ ಎಲ್ಲರಿಗೂ ತಾತ್ಸಾರ. ಆದ್ದರಿಂದ, “ಬಲಶಾಲಿಯಾಗಿ” ಅನ್ನುತ್ತದೆ ಈ ಸುಭಾಷಿತ.
ಬಲ ಎಂದರೆ ಕೇವಲ ದೇಹ ಬಲವೆಂದು ಭಾವಿಸಬೇಕಿಲ್ಲ. ಬುದ್ಧಿಬಲವೂ ಬಲವೇ. ವಾಸ್ತವದಲ್ಲಿ ಅದು ದೇಹಬಲಕ್ಕಿಂತ ಹೆಚ್ಚಿನದು. ಆದ್ದರಿಂದ, ಎಲ್ಲ ಬಗೆಯ ಬಲವನ್ನೂ; ಅದರಲ್ಲೂ ಬುದ್ಧಿ ಬಲವನ್ನು ನಮ್ಮದಾಗಿಸಿಕೊಳ್ಳೋಣ.