ನಾಮ ಮತ್ತು ಪ್ರೇಮಗಳನ್ನು ಸಾರಿದ ಮಹಾಸಂತ ರೈದಾಸ

ರೈದಾಸರು ಪಾದರಕ್ಷೆ ಹೊಲಿದು ಜೀವನ ನಡೆಸುತ್ತಲೇ ಸಂತ ರಮಾನಂದರಲ್ಲಿ ಆಧ್ಯಾತ್ಮಿಕ ದೀಕ್ಷೆ ಪಡೆದರು. ಸತತ ಸಾಧನೆಯಿಂದ ಬೋಧೆಯನ್ನೂ ಪಡೆದರು. ಅವರ ನುಡಿ-ನಡೆಗಳಲ್ಲಿ ವ್ಯತ್ಯಾಸವಿರಲಿಲ್ಲ. ಅವರು ಭಿನ್ನ ಭಿನ್ನ ಮತಗಳ ತತ್ವ ಮತ್ತು ಸಂಪ್ರದಾಯಗಳನ್ನು ಒಟ್ಟುಗೂಡಿಸಿ ಧರ್ಮಪ್ರಚಾರ ಮಾಡಿದರು. ಅವರದ್ದು ವಿಶ್ವಧರ್ಮ…. ~ ಗಾಯತ್ರಿ

ಪ್ರಭೂ,
ಗಂಧ ನೀನು, ನೀರು ನಾನು, ಅಂಗ ಅಂಗದಲಿಹುದು ಪರಿಮಳ
ನೀನು ದೀಪದ ಮೊಗ್ಗು, ನಾನು ತೀರುವ ಬತ್ತಿ, ಕತ್ತಲಿಗಿಲ್ಲಿ ಕಳವಳ
ನೀನು ಮೋಡದ ತುಣುಕು, ನನಗೆ ನವಿಲಿನ ಹುರುಪು, ಮಿಲನ  ಚಕೋರ ಚಂದ್ರರಂತೆ!
ಒಡೆಯ ನೀನು, ದಾಸ ನಾನು; ಪ್ರಭೂ
ನಿನ್ನಿಂದ ರೈದಾಸ ಹರಡುತಿಹನು ಭಕ್ತಿ ರತಿ!!
~ ಇದು ಭಕ್ತ ಮಹಾಸಂತ ರೈದಾಸರ (ಅಥವಾ ರವಿದಾಸ) ಗೀತೆಯ ಒಂದು ತುಣುಕು. ಭಕ್ತಿ ಭಾವವೇ ಮೈವೆತ್ತು ಬಂದಂತೆ ಇದ್ದರು ಸಂತ ಕವಿ ರೈದಾಸರು.

raidas

ಹದಿನೈದನೇ ಶತಮಾನ ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ಬಹುಮುಖ್ಯ ಘಟ್ಟ. ಭಕ್ತಿ ಚಳವಳಿ ಉತ್ತುಂಗಕ್ಕೇರಿ ದೇಶಾದ್ಯಂತ ಪಸರಿಸಿದ್ದು, ಆ ಮೂಲಕ ಐಕ್ಯತೆಗೆ ಇಂಬು ನೀಡಿದ್ದು – ಈ ಎಲ್ಲವೂ ದೇಶ ಸಾಗುತ್ತಿದ್ದ ದಿಕ್ಕನ್ನೆ ಬದಲಿಸಿಬಿಟ್ಟವು. ವಿವೇಕಾನಂದರು ಹೇಳುವಂತೆ `ಅಡುಗೆಮನೆ ಅಧ್ಯಾತ್ಮ’ದಲ್ಲೆ ಮುಳುಗಿದ್ದು ಮಡಿಮೈಲಿಗೆಯ ಢಂಬಾಚಾರ ತೋರುತ್ತಿದ್ದ ಜನರ ನಡುವೆ ರೈದಾಸರಂಥ ಅನೇಕ ಸಂತರು ಆಗಿಹೋದರು. ವರ್ಣ ಶ್ರೇಣೀಕರಣದ ಪ್ರಕಾರ ತಳವರ್ಗದವರೆಂದು ಗುರುತಿಸಲ್ಪಟ್ಟಿದ್ದ ಈ ಮಹಾಸಂತರ ಜೀವನ – ಬೋಧನೆಗಳು ಜನರ ಕಣ್ತೆರೆಸಿದವು. ಸಮಾನತೆಯತ್ತ ಪ್ರೇರೇಪಿಸಿದವು. ಅವರು ಪುರಾತನ ಸಂಸ್ಕೃತಿಯ ನಿಜವಾದ ಸ್ವರೂಪದ ಜ್ಯೋತಿಯನ್ನು ಬೆಳಗಿಸಿದರು. ಭಕ್ತಿರಸದ ಪವಿತ್ರ ಗಂಗೆಯನ್ನೇ ಹರಿಸಿದರು. ಅಂಧವಿಶ್ವಾಸದಲ್ಲಿ ಮುಳುಗಿದ್ದ ಲಕ್ಷಾಂತರ ಜನರಿಗೆ ಜ್ಞಾನ ಜ್ಯೋತಿಯನ್ನು ಕೊಟ್ಟರು.

ರೈದಾಸರು ಪಾದರಕ್ಷೆ ಹೊಲಿದು ಜೀವನ ನಡೆಸುತ್ತಲೇ ಸಂತ ರಮಾನಂದರಲ್ಲಿ ಆಧ್ಯಾತ್ಮಿಕ ದೀಕ್ಷೆ ಪಡೆದರು. ಸತತ ಸಾಧನೆಯಿಂದ ಬೋಧೆಯನ್ನೂ ಪಡೆದರು. ಅವರ ನುಡಿ-ನಡೆಗಳಲ್ಲಿ ವ್ಯತ್ಯಾಸವಿರಲಿಲ್ಲ. ಅವರು ಭಿನ್ನ ಭಿನ್ನ ಮತಗಳ ತತ್ವ ಮತ್ತು ಸಂಪ್ರದಾಯಗಳನ್ನು ಒಟ್ಟುಗೂಡಿಸಿ ಧರ್ಮಪ್ರಚಾರ ಮಾಡಿದರು. ಅವರದ್ದು ವಿಶ್ವಧರ್ಮ. ತಮ್ಮ ಉಪದೇಶಗಳಲ್ಲಿ ಅವರು ಯಾವ ಧರ್ಮವನ್ನೂ ಖಂಡಿಸಿಲ್ಲ. ಅವರ ತತ್ವಗಳು ಯಾವ ಜಾತಿ, ವರ್ಣದ ಮೇಲೆ ಆಧಾರಿತವಾಗಿಲ್ಲ. ತಮ್ಮ ಲೋಕಕಲ್ಯಾಣ ವಿಚಾರಧಾರೆಯಿಂದಲೇ ಅವರು ಲೋಕಹಿತ ಚಿಂತಕರಾದರು, ಸಂತರಾದರು.

“ಜಗತ್ತನ್ನು ಬಿಟ್ಟು ದೂರ ಓಡಿಹೋಗಿ ತನ್ನೊಬ್ಬನ ಮುಕ್ತಿಗಾಗಿ ಏಕಾಂತಧ್ಯಾನದಲ್ಲಿ ಮುಳುಗುವುದು ನಿಜವಾದ ಭಕ್ತಿಯಲ್ಲ. ತನ್ನ ಕರ್ತವ್ಯವನ್ನು ನಿರ್ವಹಿಸಿ ಹತ್ತು ಜನರೊಡನೆ ಹಂಚಿಕೊಳ್ಳಬೇಕು, ಅವರ ಅನುಭವದಲ್ಲಿ ತಿಳಿವಳಿಕೆಯಲ್ಲಿ
ಪಾಲುಪಡೆಯಬೇಕು” ಎಂದು ಹೇಳುತ್ತಿದ್ದ ರೈದಾಸರು, ತಾವು ಜನರ ನಡುವೆಯೇ ಜೀವಿಸುತ್ತಾ ತಾವು ಪಡೆದ ತಿಳಿವನ್ನು ಹಂಚಿದರು.
ಸಂತ ರೈದಾಸರು ಸ್ವತಃ ನೀಡಿದ ಕೊಡುಗೆಯಷ್ಟೇ ತಮ್ಮ ಶಿಷ್ಯರ ಮೂಲಕ ನೀಡಿದ ಕೊಡುಗೆಗಳೂ ಮಹತ್ತರವಾದದ್ದು. ಹಾಗೆಯೇ ತಮ್ಮ ಕಾಲಘಟ್ಟದ ಶ್ರೇಷ್ಠ ಸಂತರಾದ ಕಬೀರ, ಗುರುನಾನಕ್, ಮೀರಬಾಯಿ ಮೊದಲಾದವರೊಡನೆ ನಡೆಸಿದ ಚಿಂತನ ಮಂಥನಕ್ಕೂ ಪ್ರಾಮುಖ್ಯತೆ ಉಂಟು.

ಇಂತಹಾ ಗುಣಗಣಿ ರೈದಾಸರನ್ನು ವಿರೋಧಿಸಿದವರು, ನಿಂದಿಸಿದವರು, ಅಪಮಾನ ಮಾಡಿದವರು ಎಷ್ಟೋ ಮಂದಿ. ಆದರೆ ಅವರು ಎಂದೂ ತಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳಲಿಲ್ಲ. ಕೋಪ ಮಾಡಿಕೊಳ್ಳಲಿಲ್ಲ, ದ್ವೇಷಿಸಲಿಲ್ಲ. ಸತ್ಯ, ಪ್ರೇಮ, ರಾಮನಾಮ-ಇವೇ ಅವರನ್ನು ನಡೆಸಿದವು, ಕಾಪಾಡಿದವು. ಭಗವಂತನಲ್ಲಿ ಪ್ರೀತಿ, ಮಾನವಸೇವೆ ಇವೇ ಅವರ ಬಾಳಿನ ಎರಡು ಕಣ್ಣುಗಳಾಗಿದ್ದವು. ಯಾವ ಧರ್ಮವನ್ನೂ ಅವರು ನಿಂದಿಸಲಿಲ್ಲ. ಹಾಗೆಂದೇ ಕ್ರಮೇಣ ಎಲ್ಲ ಜಾತಿ ವರ್ಗಗಳ ಜನರ ಹೃದಯದಲ್ಲಿ ಪರಮೋನ್ನತ ಸ್ಥಾನವನ್ನು ಪಡೆದರು.

ಬೋಧನೆಗಳು
ರೈದಾಸರು ದ್ವೇಷದ ಸೋಂಕಿಲ್ಲದ, ಕವಿ ಹೃದಯದ ನಿಜ ಭಕ್ತರು. ಅವರ ರಚನೆಗಳೂ ಅವರ ಹಾಗೆಯೇ ಸರಳವಾಗಿದ್ದು, ಉದಾತ್ತವಿಚಾರಗಳು ಮತ್ತು ಭಕ್ತಿಭಾವನೆಯಿಂದ ಪರಿಪೂರ್ಣವಾಗಿದೆ. ಇವರದು ಹೃದಯಂಗಮ ನಿರಾಡಂಬರ ಸಹಜ ಶೈಲಿ. ವರ ರಚನೆಗಳನ್ನು `ಸಾಖೀ’ ಎಂದು ಕರೆಯುತ್ತಾರೆ. ಈ ಸಾಖೀಗಳು ಅವರ ಉಪದೇಶಗಳ ಪ್ರತ್ಯಕ್ಷರೂಪ. ಅನುಭವಗಳ ಸಾರವಚನ ಗಳು. ಸಂತ ಕಬೀರರು ಈ ಸಾಖೀಗಳನ್ನು ಜ್ಞಾನದ ಕಣ್ಣುಗಳೆಂದು ಹೇಳಿದ್ದಾರೆ. ಈ ಸಾಖೀಗಳು ಸಂಸಾರದ ಜಂಜಾಟದಿಂದ ಮುಕ್ತಿ ಪಡೆಯುವ ಮಾರ್ಗವನ್ನು ತೋರಿಸುತ್ತವೆ ಎಂದು ಹೇಳಿದ್ದಾರೆ, ರವಿದಾಸರು ರಾಮನಾಮದ ಮಹಿಮೆಯನ್ನು ತಮ್ಮ ಸಾಖೀಗಳಲ್ಲಿ ಒತ್ತಿಹೇಳಿದ್ದಾರೆ. “ಈ ಪ್ರಪಂಚವೆಂಬ ಮಾಯೆಯಿಂದ ಪಾರಾಗಲು ರಾಮನಾಮವೊಂದೇ ಉಪಾಯ” ಎಂದು ಮೇಲಿಂದ ಮೇಲೆ ಪ್ರತಿಪಾದಿಸಿದ್ದಾರೆ ರೈದಾಸರು.

ಸಮಾಜಕ್ಕೆ ರವಿದಾಸರ ಅತಿ ಮುಖ್ಯವಾದ ಕೊಡುಗೆ ಸರ್ವ ಸಮಾನತೆ. ಇದು ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಸಂಬಂಧಿಸಿದ್ದು. ಪರಮಾತ್ಮ ಎಲ್ಲರಲ್ಲೂ ಮತ್ತು ಎಲ್ಲದರಲ್ಲೂ ಇದ್ದಾನೆ. ಜೀವ ಜೀವಗಳ ನಡುವೆ ಭೇದಮಾಡುವುದು ಮೂರ್ಖತನ ಎಂದವರು ಕಟ್ಟುನಿಟ್ಟಾಗಿ ಹೇಳುತ್ತಿದ್ದರು.
ನೀತಿ ಮತ್ತು ಸದಾಚಾರಗಳನ್ನೂ ರೈದಾದಸರು ಹೆಚ್ಚಿನ ಆದ್ಯತೆಯಿಂದ ಬೋಧಿಸಿದರು.  `ಸುಖದಲ್ಲಿರುವ ಮನುಷ್ಯನಿಗೆ ಸುಖಗಳಲ್ಲೇ ಗಮನ ಹೆಚ್ಚಾಗಿರುತ್ತದೆ. ಇದರಿಂದ ಅವನಿಗೆ ಸುಖಗಳ ಆಸೆಯೂ ಹೆಚ್ಚಾಗುತ್ತದೆ. ಸುಖವನ್ನು ಪಡೆಯುವುದರಲ್ಲಿ ಏನಾದರೂ ತೊಂದರೆ ಉಂಟಾದರೆ ಕೋಪ ಬರುತ್ತದೆ. ಕೋಪದಿಂದ ವಿವೇಕ ಹೋಗುತ್ತದೆ. ವಿವೇಕಹೀನವಾಗುವುದರಿಂದ ಮನುಷ್ಯನ ಬುದ್ಧಿಯು ಮಂದವಾಗುತ್ತದೆ. ಜ್ಞಾನ ಶಕ್ತಿಯು ಹೋಗುತ್ತದೆ. ಬುದ್ದಿಯು ನಾಶವಾಗುವುದರಿಂದ ಮನುಷ್ಯನ ಧ್ಯೇಯವೇ ನಾಶವಾಗುತ್ತದೆ’ ಎನ್ನುವುದು ಅವರ ಪ್ರಮುಖ ಉಪದೇಶಗಳಲ್ಲಿ ಒಂದಾಗಿತ್ತು.

ಹಾಗೆಂದು ಸಾಧನೆಗೆ ಹೆಚ್ಚು ಪ್ರಯತ್ನಗಳನ್ನು ಮಾಡಬೇಕಾಗಿಲ್ಲ, ಮನೆ ಸಂಸಾರವನ್ನು ತೊರೆದು ಕಾಡಿಗೆ ಹೋಗಬೇಕಾಗಿಲ್ಲ. ಇರುವಲ್ಲೇ ಸರಳವಾಗಿ, ಪ್ರೇಮದಿಂದ ಬದುಕಿದರಾಯ್ತು ಅನ್ನುತ್ತಿದ್ದರು ರೈದಾಸರು. `ದೇವರು ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಮನುಷ್ಯ ಪ್ರೇಮದಲ್ಲಿ ಪ್ರಭು ವಾಸವಾಗಿದ್ದಾನೆ’ ಎನ್ನುವುದು ರೈದಾಸರ ಸುಪ್ರಸಿದ್ಧ ಮಾತು. ಅವರು ಮಾನವ ಸೇವೆಯೇ ಒಂದು ತಪಸ್ಸು ಎಂದು ಹೇಳುತ್ತಿದ್ದರು.
`ಬಡವರ ಮತ್ತು ದೀನದಲಿತರ ಸೇವೆಯೇ ಒಂದು ತಪಸ್ಸು. ಆ ತಪಸ್ಸಿನಿಂದಲೇ ದೇವರು ಸುಪ್ರೀತನಾಗಿ ಒಲಿಯುತ್ತಾನೆ’ ಎಂದವರು ಬೋಧಿಸುತ್ತಿದ್ದರು. ರವಿದಾಸರ ಭಕ್ತಿವಿಧಾನದಲ್ಲಿ ಯಾವ ವಿಧವಾದ ಆಡಂಬರವೂ ಇರಲಿಲ್ಲ. ಅವರದು ಸರಳಭಕ್ತಿ. ಅದನ್ನು ಅನುಸರಿಸುವಲ್ಲಿ ಯಾವ ವಿಧವಾದ ಕಷ್ಟಗಳೂ ಇಲ್ಲ. ಆದ್ದರಿಂದಲೇ ದೊಡ್ಡದೊಂದು ಶಿಷ್ಯ ಪರಂಪರೆ ಅವರ ಹಿಂದೆ ರೂಪುಗೊಂಡಿತ್ತು.

“ಮನಸನ್ನು ಯಾವಾಗಲೂ ಸಂತೋಷದಿಂದಿಡಬೇಕು. ಎಲ್ಲಿ ನಿಜವಾದ ಸಂತೋಷವಿರುತ್ತದೆಯೋ ಅಲ್ಲಿ ದೋಷಗಳು ಇರುವುದಿಲ್ಲ. ಮನಸ್ಸು ನಿರ್ಮಲವಾಗಿದ್ದರೆ ಸಂತೋಷವಿರುತ್ತದೆ. ಮನಸ್ಸು ಕೆಟ್ಟ ಯೋಚನೆಗಳಿಂದ ಕೊಳಕಾಗಿದ್ದರೆ ಸಂತೋಷವು ಒಂದು ಗಳಿಗೆಯೂ ಇರುವುದಿಲ್ಲ. ಸಂತೋಷದಿಂದಿರಲು ಸದಾಚಾರ ಜೀವನವೇ ಆಧಾರ” ಎಂದು ಹೇಳುತ್ತಿದ್ದ ರೈದಾಸರು ಸ್ವತಃ ಇರುತ್ತಿದ್ದುದೂ ಹಾಗೆಯೇ.

ವಚನಪಾಲನೆಗೆ ರೈದಾಸರು ಬಹಳ ಮಹತ್ವ ಕೊಡುತ್ತಿದ್ದರು. “ತಲೆ ಕೊಟ್ಟರೂ ಚಿಂತೆಯಿಲ್ಲ. ಕೊಟ್ಟ ವಚನವನ್ನು
ಪರಿಪಾಲಿಸಬೇಕು ಎಂಬುದೇ ರವಿದಾಸರ ತತ್ತ್ವ. ಕೊಟ್ಟ ವಚನವನ್ನು ಪಾಲಿಸದೇ ಇರುವವನು ಜೀವನದಲ್ಲಿ
ಏನನ್ನೂ ಸಾಧಿಸಲಾರ” ಎಂಬುದು ಅವರ ವಿಚಾರ ಬದ್ಧತೆಯಾಗಿತ್ತು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.