ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ : ಗುರುವಿನೊಡನೆ ದೇವರಡಿಗೆ ~ 2| ಶಿವಾನಂದರ ಉತ್ತರ

ಸ್ವಾಮಿ ಶಿವಾನಂದರಿಗೆ ಭಕ್ತರೊಬ್ಬರು ಕೇಳಿದ ಪ್ರಶ್ನೆಯನ್ನು ಹಿಂದಿನ ಸಂಚಿಕೆಯಲ್ಲಿ (ಇಲ್ಲಿ ನೋಡಿ : https://aralimara.com/2019/01/01/kuvempu-2/) ಓದಿದ್ದೀರಿ. ಅವರ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೆ? ಅದನ್ನು ಸ್ವಾಮಿ ಅಪೂರ್ವಾನಂದರು ಹೀಗೆ ದಾಖಲಿಸಿದ್ದಾರೆ | ಕನ್ನಡಕ್ಕೆ : ಕುವೆಂಪು

direct-disciples-1
ರಾಮಕೃಷ್ಣ ಪರಮಹಂಸರಿಂದ ನೇರವಾಗಿ ದೀಕ್ಷೆ ಪಡೆದ ಶಿಷ್ಯರು

ಸ್ವಾಮಿ ಶಿವಾನಂದರ ಮುಖಮಂಡಲದಪ್ರಶಾಂತಿ ಒಯ್ಯನೆ ಪರಿವರ್ತಿತವಾಯಿತು. ಒಂದು ಗುರುತರವಾದ ಗಂಭೀರಮುದ್ರೆ ಅಲ್ಲಿ ಸಿಂಹಾಸನಸ್ಥವಾದಂತೆ ತೋರಿತು. ತುಸು ಹೊತ್ತಾದ ಮೇಲೆ ಅವರ ಮೌನ ಮೊಳಗಿತಿಂತು : “ನೋಡು, ಕಾ… ಭಗವದವತಾರದ ನಡೆನುಡಿ ರೀತಿನೀತಿ ಸಾಂಆನ್ಯ ಮಾನವನ ವಿಚಾರಬುದ್ಧಿಗೆ ಮೀರಿವೆ. ನೀನಾಗಲೀ ರಾಷ್ಟ್ರವಾಗಲೀ ಆ ಭಗವತ್ ಕ್ರಿಯಾ ವಿಧಾನವನ್ನು ಹೇಗೆ ಅರಿಯಬಲ್ಲಿರಿ? ಭಗವಂತನು ಮನುಷ್ಯ ರೂಪಧಾರಣೆ ಮಾಡಿದಾಗ ಅವನು ಯಾವ ಒಂದು ರಾಷ್ಟ್ರಕ್ಕಾಗಲೀ ಜನಾಂಗಕ್ಕಾಗಲೀ ಹಾಗೆ ಮಾಡುವುದಿಲ್ಲ. ಸಮಗ್ರ ಜಗತ್ತಿನ ಕಲ್ಯಾಣಕ್ಕಾಗಿ, ಸಮಸ್ತ ಲೋಕ ಸಂಗ್ರಹಕ್ಕಾಗಿ ಅವತರಿಸುತ್ತಾನೆ. ಈ ಸಲದ ಅವತಾರವು ಭಗವಂತನ ಸರ್ವೋತ್ತಮ ಸಾತ್ವಿಕಾಂಶದ್ದಾಗಿದೆ. ಶ್ರೀ ರಾಮಕೃಷ್ಣಾವತಾರದಲ್ಲಿ ಪೂರ್ಣತ್ವವೆ ಮೂರ್ತಿಮತ್ತಾಗಿದೆ. ದಿವ್ಯವಾದ ಷಟ್ ಶಕ್ತಿಗಳಿಂದ ಸಮನ್ವಿತವಾಗಿದ್ದರೂ ಪರಮಹಂಸರು ಶುದ್ಧ ಸಾತ್ವಿಕ ಭಾವಗಳನ್ನು ಮಾತ್ರ ಪ್ರಕಾಶಪಡಿಸುವಂತೆ ದೇಹಧಾರಿಯಾಗಿದ್ದರು. ಅವರು ತಮ್ಮ ಇಡೀ ಜೀವಮಾನವನ್ನೆ ಗಂಗಾ ತೀರದಲ್ಲಿ ಒಂದು ದೇವಾಲಯದ ಅಂಗಳದಲ್ಲಿ ಕಳೆದರು ಎಂಬುದನ್ನು ಮನನ ಮಾಡು. ನಿನಗೆ ಹೇಗೆ ಗೊತ್ತಾಗುತ್ತದೆ ಹೇಳು, ಇದೆಲ್ಲದರ ಆಧ್ಯಾತ್ಮಿಕವಾದ ಇಂಗಿತಾರ್ಥ?

“ತಮ್ಮ ತಾತ್ವಿಕಾಂಶದ ಧರ್ಮಶಕ್ತಿಯನ್ನೂ ಆಧ್ಯಾತ್ಮಿಕ ಚಿಂತನೆಗಳನ್ನೂ ಲೋಕದಲ್ಲಿ ಹರಡುವುದಕ್ಕಾಗಿಯೇ ಶ್ರೀ ರಾಮಕೃಷ್ಣರು ಸ್ವಾಮಿ ವಿವೇಕಾನಂದರಂತಹ ವಜ್ರೋಪಮ ವ್ಯಕ್ತಿಯನ್ನು ತಮ್ಮ ಜೊತೆ ಕರೆತಂದದ್ದು. ಸ್ವಾಮೀಜಿ ಹಾಗೆ ಇಷ್ಟಪಟ್ಟಿದ್ದರೆ, ಸಮಸ್ತ ರಾಷ್ಟ್ರವನ್ನೂ ರಾಜಕೀಯವಾದ ಕ್ರಾಂತಿಗೆ ಬಡಿದೆಬ್ಬಿಸಲು ಸಮರ್ಥವಾಗಿದ್ದರು. ಅವರನ್ನು ಮೀರುವ ದೇಶಭಕ್ತರಾದರೂ ಯಾರಿದ್ದಾರೆ!? ದಲಿತರಿಗಾಗಿ, ಪತಿತರಿಗಾಗಿ, ದರಿದ್ರರಿಗಾಗಿ ಅವರು ಎದೆಗರಗಿದಂತೆ ಕರಗಿದವರು ಯಾರಿದ್ದಾರೆ? ಸ್ವಾಮೀಜಿ ರಾಜಕಯ ಕ್ರಾಂತಿಯನ್ನು ಪ್ರಾರಂಭಿಸಲಿಲ್ಲ. ಹಾಗೆ ಮಾಡುವುದರಲ್ಲಿಯೆ ಭರತ ಖಂಡಕ್ಕೆ ನಿಜವಾದ ಶ್ರೇಯಸ್ಸು ಲಭಿಸುತ್ತದೆ ಎಂದು ಅವರು ಭಾವಿಸಿದ್ದರೆ, ಅವರು ರಾಜಕೀಯ ಕ್ರಾಂತಿಯ ಮಾರ್ಗವನ್ನು ಹಿಡಿಯದೆ ಬಿಡುತ್ತಿರಲಿಲ್ಲ.

“ಹೋಗಲಿ, ಸ್ವಾಮಿ ವಿವೇಕಾನಂದರ ಮಾತಿರಲಿ; ನಾವು ಕೂಡ ಗುರುಕೃಪೆಯಿಂದ ಎಂತಹ ಆತ್ಮಶಕ್ತಿಯನ್ನು ಪಡೆದಿದ್ದೇವೆ ಎಂದರೆ, ಇಚ್ಛಾಮಾತ್ರದಿಂದ ದೇಶಜೀವನವನ್ನೆ ವಿಪ್ಲವಗೊಳಿಸಲು ಸಮರ್ಥರಾಗಿದ್ದೇವೆ. ಆದರೆ ಗುರುದೇವನು ನಮ್ಮನ್ನು ಆ ಹಾದಿಗೆ ಬಿಡಲಿಲ್ಲ; ಹಾಗೆ ಮಾಡಲು ಅಪ್ಪಣೆ ಕೊಡಲಿಲ್ಲ. ಗುರುಮಹಾರಾಜ್ ನಮ್ಮನ್ನಿಲ್ಲಿಗೆ ಕರೆತಂದದ್ದು ತಮ್ಮ ಕಾರ್ಯಕ್ಕೆ ನೆರವಾಗಲೆಂದು. ಆದ್ದರಿಂದ ನಾವು ಕೈಗೊಳ್ಳುವ ಪ್ರತಿಯೊಂದು ಇತ್ಯರ್ಥದಲ್ಲಿಯೂ, ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ಅವರು ನಮ್ಮನ್ನು ಕೈ ಹಿಡಿದು ನಡೆಸುತ್ತಿದ್ದಾರೆ. ದೇಶದ ಮತ್ತು ಜನತೆಯ ಹಿತಕ್ಕಾಗಿ, ನನ್ನನ್ನು ನಂಬು; ನಮಗಿರುವುದೊಂದೇ ಆಶೆ; ಅದು ಜಗತ್ ಕಲ್ಯಾಣ. ಜನರ ಗೋಳು ಕಷ್ಟನಷ್ಟಗಳಿಗಾಗಿ ನಾವೆಷ್ಟು ಸಂಕಟಪಡುತ್ತಿದ್ದೇವೆ ಎಂಬುದನ್ನು ನಿನಗೆ ಹೇಗೆ ತಾನೆ ವಿವರಿಸಲಿ? ಸರವಹೃದಯ ನಿವಾಸಿ ಆ ಭಗವಂತನೆ ಬಲ್ಲ.

“ಶರೀರ ತ್ಯಾಗ ಮಾಡುವುದಕ್ಕೆ ಮೊದಲು ಶ್ರೀ ಶ್ರೀ ಗುರುಮಹಾರಾಜರು ತಮ್ಮ ಶಕ್ತಿ ಸರ್ವಸ್ವವನ್ನೂ ಮತ್ತು ಇತರೆಲ್ಲ ಹೊರೆ ಹೊಣೆಗಳನ್ನೂ ಸ್ವಾಮಿ ವಿವೇಕಾನಂದರಿಗೆ ಕೊಟ್ಟು, ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಬಿಟ್ಟುಹೋದರು. ತರುವಾಯ ಸ್ವಾಮೀಜಿ ಈ ತುದಿಯಿಂದ ಆ ತುದಿಯವರೆಗೆ ಭೂಮಂಡಲವನ್ನೆಲ್ಲ ಸುತ್ತಿ, ಸ್ವತಃ ಅದರ ಸರ್ವಸ್ವವನ್ನೂ ಕರತಲಾಮಲಕವಾಗಿ ಸಮೀಕ್ಷಿಸಿ ಸಮಸ್ತ ಪ್ರಪಂಚದ ಕಲ್ಯಾಣಾರ್ಥವಾಗಿಯೂ ಅದರಲ್ಲೂ ಭರತಖಂಡದ ಹಿತಾರ್ಥವಾಗಿಯೂ ಶ್ರೀ ಗುರುದೇವನ ನಿರ್ದೇಶನಾನುಸಾರವಾಗಿ ಈ ಶ್ರೀ ರಾಮಕೃಷ್ಣ ಸಂಘವನ್ನೂ ಮಠ ಸಂಸ್ಥೆಯನ್ನೂ ಪ್ರಾರಂಭಿಸಿದರು. ಒಬ್ಬೊಬ್ಬರನ್ನಾಗಿ ಸೆಳೆದು ನಮ್ಮನ್ನೂ ಈ ಕಾರ್ಯದಲ್ಲಿ ತೊಡಗುವಂತೆ ಮಾಡಿದರು. ನಾವು ಇಷ್ಟಟ್ಟಿದ್ದರೆ ಏಕಾಂತವನ್ನು ಕೈಗೊಂಡು ಧ್ಯಾನ ಜಪತಪಗಳಲ್ಲಿ ಉದ್ಯುಕ್ತರಾಗಿ ಕಾಡುಬೆಟ್ಟಗಳಲ್ಲಿ ಇದ್ದುಬಿಡಬಹುದಾಗಿತ್ತು. ವಾಸ್ತವವಾಗಿಯೂ ನಮ್ಮಲ್ಲಿ ಅನೇಕರು ಆಗಲೇ ಮಠದಿಂದ ಬಹುದೂರ ಪ್ರದೇಶಗಳಲ್ಲಿ ತಂಗಿ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದ್ದರು. ಸ್ವಾಮೀಜಿ ನಮ್ಮನ್ನೆಲ್ಲ ಕರೆದು ಸಂಘಬದ್ಧರನ್ನಾಗಿ ಮಾಡಿ ಸೇವಾಕಾರ್ಯದಲ್ಲಿ ತೊಡಗುವಂತೆ ಮಾಡಿದರು. ಈ ವೃದ್ಧಾಪ್ಯದಲ್ಲಿಯೂ ನಾವು ಆ ಕೆಲಸದಲ್ಲಿಯೇ ಅರ್ಪಿತಪ್ರಾಣರಾಗಿದ್ದೇವೆ.

ಸ್ವಾಮೀಜಿ ಮಾತು ನಿಲ್ಲಿಸಿದರು. ಆಗ ಭಕ್ತನಿಂದ ಮತ್ತೊಂದು ಪ್ರಶ್ನೆ ಹೊರಟಿತು.

“ಮಹಾರಾಜ್, ಮಹಾತ್ಮಾ ಗಾಂಧಿ ಮತ್ತು ಇತರ ದೇಶಭಕ್ತರಾದ ಮುಂದಾಳುಗಳು ನಿಜವಾದ ಸೇವಾಕಾರ್ಯದಲ್ಲಿ ತೊಡಗುತ್ತಿಲ್ಲ ಎನ್ನುತ್ತೀರಾ? ಎಂತಹ ಅಪೂರ್ವವಾದ ಸೇವಾನಿಷ್ಠೆ, ಎಂತಹ ಅನ್ಯಾದೃಶವಾದ ದಾರ್ಢ್ಯ! ಎಂತಹ ಮಹತ್ತಾದ ತ್ಯಾಗಶೀಲತೆ! ಇವುಗಳನ್ನೆಲ್ಲ ಅಲ್ಲಗಳೆಯಲಾಗುತ್ತದೆಯೆ? ದೇಶಕ್ಕಾಗಿ ಎಷ್ಟು ಹಿಂಸೆ, ಅನ್ಯಾಯಗಳನ್ನೆಲ್ಲ ಸಹಿಸುತ್ತಿದ್ದಾರೆ ಅವರು….”

ಭಕ್ತರ ಈ ಅನುಮಾನಕ್ಕೆ ಸ್ವಾಮಿ ಶಿವಾನಂದರು ನೀಡಿದ ಪರಿಹಾರ ಮುಂದಿನ ಸಂಚಿಕೆಯಲ್ಲಿ…

shivanandaಆಕರ : ಗುರುವಿನೊಡನೆ ದೇವರಡಿಗೆ  | ಕನ್ನಡಕ್ಕೆ : ಕುವೆಂಪು

ಸ್ವಾಮಿ ಶಿವಾನಂದರು ರಾಮಕೃಷ್ಣ ಮಹಾಸಂಘದ ಅಧ್ಯಕ್ಷರಲ್ಲಿ ಒಬ್ಬರಾಗಿದ್ದರು. ಅವರ ಶಿಷ್ಯರಾದ ಸ್ವಾಮಿ ಅಪೂರ್ವಾನಂದರು ತಮ್ಮ ಗುರುಸೇವಾ ಸಮಯದಲ್ಲಿ ಬರೆದಿಟ್ಟುಕೊಂಡ ಸಂವಾದಗಳನ್ನು ಬಂಗಾಳಿ ಭಾಷೆಯಲ್ಲಿ ‘ಶಿವಾನಂದ ವಾಣಿ’ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಅದರ ಇಂಗ್ಲಿಶ್ ಅನುವಾದ For Seekers of God ಎಂಬ ಹೆಸರಿನಲ್ಲಿ ಹೊರಬಂತು. ಸ್ವತಃ ಸ್ವಾಮಿ ಶಿವಾನಂದರಿಂದಲೇ ಮಂತ್ರ ದೀಕ್ಷೆ ಪಡೆದಿದ್ದ ರಾಷ್ಟ್ರಕವಿ ಕುವೆಂಪು, ತಮ್ಮ ಗುರುಕಾಣಿಕೆಯಾಗಿ ಮೂಲ ಬಂಗಾಳಿ ಮತ್ತು ಇಂಗ್ಲಿಶ್ ಅನುವಾದಗಳನ್ನು ಆಧರಿಸಿ ‘ಗುರುವಿನೊಡನೆ ದೇವರಡಿಗೆ’  ಎಂಬ ಹೆಸರಿನಿಂದ ಕನ್ನಡಕ್ಕೆ ತಂದರು.

ಇದು ಅಧ್ಯಾತ್ಮದ ಆಸಕ್ತರು ಮಾತ್ರವಲ್ಲ, ಎಲ್ಲ ಸಹೃದರೂ ಓದಲೇಬೇಕಾದ ಕೃತಿಗಳಲ್ಲೊಂದು. ಈ ಕೃತಿಯ ಆಯ್ದ ಭಾಗಗಳನ್ನು ‘ಅರಳಿಮರ’ ಪ್ರಕಟಿಸುವ ಇಚ್ಛೆ ಹೊಂದಿದೆ. ಈ ಕೃತಿಯನ್ನು ರಾಮಕೃಷ್ಣ ಆಶ್ರಮದ ಪುಸ್ತಕ ಮಳಿಗೆಯಲ್ಲಿ ಕೊಳ್ಳಬಹುದು.

ಪ್ರಕಾಶಕರು : ಅಧ್ಯಕ್ಷರು. ರಾಮಕೃಷ್ಣ ಆಶ್ರಮ, ಮೈಸೂರು. ಬೆಲೆ : ಕೇವಲ 110 ರೂ. (ಕೆಲವೆಡೆ ರಿಯಾಯಿತಿ ಇದೆ) Online ಖರೀದಿಗೂ ಲಭ್ಯವಿದೆ.

 

1 Comment

Leave a Reply