ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ ~ 3| ಗಾಂಧೀಜಿಯ ದೇಶ ಸೇವೆ ಮತ್ತು ಪರಮಹಂಸ ಪರಂಪರೆಯ ಚಿಂತನೆ

“ಮಹಾತ್ಮಾ ಗಾಂಧಿ ಮತ್ತು ಇತರ ದೇಶಭಕ್ತರಾದ ಮುಂದಾಳುಗಳು ನಿಜವಾದ ಸೇವಾಕಾರ್ಯದಲ್ಲಿ ತೊಡಗುತ್ತಿಲ್ಲ ಎನ್ನುತ್ತೀರಾ?” ಎಂದು ಭಕ್ತ ಕೇಳಿದ ಪ್ರಶ್ನೆಗೆ ಸ್ವಾಮಿ ಶಿವಾನಂದರು ಉತ್ತರಿಸತೊಡಗಿದರು…  ಹಿಂದಿನ ಲೇಖನವನ್ನು ಇಲ್ಲಿ ಓದಿ : https://aralimara.com/2019/01/02/kuvempu-3/

“ಛೆ ಎಲ್ಲಾದರೂ ಉಂಟೆ? ಅದಲ್ಲ ನನ್ನ ಮಾತಿನ ಅರ್ಥ” ಅಂದರು ಸ್ವಾಮೀಜಿ. “ಅವರ ತ್ಯಾಗ, ಅವರ ಮನೋದಾರ್ಢ್ಯ, ಅವರ ರಾಷ್ಟ್ರಸೇವೆ ಎಲ್ಲವೂ ಸ್ತುತ್ಯರ್ಹವೇ. ಅವರ ಜೀವನ ನಿಜವಾಗಿಯೂ ಮಹಿಮಾಮಯವಾದದ್ದೇ; ಅನುಸರಣೀಯವಾದದ್ದೇ; ಭರತ ಖಂಡಕ್ಕೆ ಯಾವುದು ಶ್ರೇಯಸ್ಕರ ಎಂದು ಅವರು ಭಾವಿಸಿದ್ದಾರೋ ಅದಕ್ಕಾಗಿ ಅವರು ಮನಃಪೂರ್ವಕವಾಗಿ ಸೇವೆ ಸಲ್ಲಿಸಿ ದೇಶಕ್ಕೆ ತುಂಬಾ ಉಪಕಾರ ಮಾಡಿದ್ದಾರೆ, ನಿಜ. ಆದರೆ ನಮ್ಮ ಸೇವೆಯ ರೀತಿಯೇ ಬೇರೆ. ನಮ್ಮ ರಾಷ್ಟ್ರೀಯ ಮುಖಂಡರ ವಿಚಾರದಲ್ಲಿ ನಮ್ಮ ಭಾವನೆ ನಿನಗೇನು ಗೊತ್ತು!? ಶ್ರೀ ರಾಮಕೃಷ್ಣರ ಮತ್ತು ಸ್ವಾಮಿ ವಿವೇಕಾನಂದರ ಕೆಲವು ಭಾವ ಪ್ರಕಾರಗಳಿಂದ ಸ್ಫೂರ್ತಿಗೊಂಡು ಸೇವಾಕಾರ್ಯದಲ್ಲಿ ನಿರತರಾಗಿದ್ದಾರೆ ಎನ್ನುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಆದಿಶಕ್ತಿ ಜಗನ್ಮಾತೆಯ ಒಂದು ವಿಭೂತಿ ಅವರಲ್ಲಿ ಪ್ರಕಟವಾಗಿದೆ ಎನ್ನುವುದೂ ಸತ್ಯ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳಿದ್ದಾನೆ;

ಯದ್ ಯದ್ ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ | ತತ್ತದೇವಾಗಚ್ಛತ್ತ್ವಂ ಮಮ ತೇಜೋ ಅಂಶ ಸಂಭವಂ ||

“ಯಾವ ಯಾವ ವಸ್ತುಗಳಲ್ಲಿ ವಿಭುತಿಮತ್ತಾದ ಸತ್ತ್ವವೂ ಶ್ರೀಮತ್ತಾದ ಊರ್ಜಿತವೂ ಪ್ರಕಾಶಿಸುತ್ತವೆಯೋ ಅವೆಲ್ಲವೂ ನನ್ನ ತೇಜಸ್ಸಿನ ಅಂಶದಿಂದಲೆ ಉದ್ಭವಿಸಿದವುಗಳೆಂದು ತಿಳಿ”

ಯಾರಲ್ಲಿ ವಿಶೇಷ ಶಕ್ತಿ ಪ್ರಕಾಶವಾಗುತ್ತದೆಯೋ, ಯಾರು ಬಹು ಜನರ ಗೌರವಕ್ಕೆ ಪಾತ್ರವಾಗುತ್ತಾರೋ, ಅವರಲ್ಲಿ ನಿಜವಾಗಿಯೂ ಭಗವತ್ ವಿಭೂತಿ ಮೈದೋರಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಶ್ರೀರಾಮಕೃಷ್ಣರಿಂದ ಲೋಕಕಲ್ಯಾಣಾರ್ಥವಾಗಿ ಎಚ್ಚರಗೊಳಿಸಲ್ಪಟ್ಟ ಬ್ರಹ್ಮಕುಂಡಲಿನಿ ಶ್ರೀ ಜಗನ್ಮಾತೆ ಈಗ ಅನೇಕ ಪಾತ್ರಗಳ ಮೂಲಕ ಕೆಲಸ ಮಾಡುತ್ತಿದ್ದಾಳೆ ಎಂಬುದು ನಿರ್ವಿವಾದ. ಒಂದಲ್ಲ, ಅನೇಕ ಸಾರಿ ಸ್ವಾಮಿ ವಿವೇಕಾನಂದರು ತಮ್ಮ ಉಪನ್ಯಾಸಗಳಲ್ಲಿ ಭರತ ಖಂಡದ ಶ್ರೇಯಸ್ಸು ಯಾವುದರಲ್ಲಿದೆ ಎಂಬುದನ್ನು ಘೋಷಿಸಿದ್ದಾರೆ. ಭರತ ಖಂಡದ ಪುನರುಜ್ಜೀವನವನ್ನು ಹೇಗೆ ಸಾಧಿಸಬೇಕು ಎಂಬ ವಿಚಾರದಲ್ಲಿ ಅವರು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆಯೇ ಕೊಟ್ಟಿದ್ದ ಸಲಹೆ ಸೂಚನೆ ಮತ್ತು ಆದೇಶಗಳನ್ನೇ ಅಸ್ಪೃಶ್ಯತಾ ನಿವಾರಣೆ, ದಲಿತ ವರ್ಗದ ಉದ್ಧಾರ, ಸಾಮಾನ್ಯ ಜನತೆಯಲ್ಲಿ ವಿದ್ಯಾಪ್ರಚಾರ, ಇತ್ಯಾದಿ ಇಂದು ಮಹಾತ್ಮಾ ಗಾಂಧಿ ಬೋಧಿಸುತ್ತಿದ್ದಾರೆ.

“ನಮ್ಮ ಭಾವನೆ, ಅಭಿಪ್ರಾಯ, ಆಲೋಚನೆಗಳನ್ನು ಪತ್ರಿಕೆಗಳ ಮೂಲಕ ನಾವು ಡಂಗುರ ಹೊಡೆಯದಿದ್ದರೂ ಅವುಗಳ ಸಾಧನೆಯಲ್ಲಿ ಸದಾ ನಿರತರಾಗಿದ್ದೇವೆ. ರಾಜಕೀಯ ವಿಧಾನದಿಂದಲ್ಲ, ನಿಜ; ಆದರೆ ನಮ್ಮದೇ ಆದ ಬೇರೆ ರೀತಿಯಿಂದ. ಮಹಾತ್ಮಾ ಜಿ ಆ ಕಾರ್ಯಗಳನ್ನೇ ರಾಜಕೀಯ ರೀತಿಯಿಂದ ಸಾಧಿಸುತ್ತಿದ್ದಾರೆ. ಭರತ ಖಂಡದ ಹಿತದಲ್ಲಿ ಆಸಕ್ತರಾಗಿ ಇಲ್ಲಿ ಸ್ವದೇಶದಲ್ಲಿ ಹೇಗೆ ಕಾರ್ಯನಿರತರಾಗಿದ್ದೇವೋ ಹಾಗೆಯೇ ವಿದೇಶಗಳಲ್ಲಿಯೂ ಕೆಲಸ ಮಾಡುತ್ತಿದ್ದೇವೆ. ಏಕೆಂದರೆ, ನಾವು ಭರತ ಖಂಡದ ಶ್ರೇಯಸ್ಸಿನಲ್ಲಿ ಎಷ್ಟು ಆಸಕ್ತರೋ ಅಷ್ಟೇ ಇತರ ದೇಶಗಳ ಶ್ರೇಯಸ್ಸಿನಲ್ಲೂ ಆಸಕ್ತರಾಗಿದ್ದೇವೆ. ಆದರೆ ಒಂದು ವಿಷಯ : ಎಲ್ಲ ದೇಶಗಳಲ್ಲಿಯೂ ಒಂದೇ ರೀತಿಯ ಕೆಲಸ ಮಾಡುವುದಿಲ್ಲ. ಆಯಾ ದೇಶಗಳ ಸ್ಥಿತಿಗತಿಗಳಿಗೆ ತಕ್ಕ ಹಾಗೆ ಅಲ್ಲಿಗಲ್ಲಿಗೆ ಹೊಂದುವ ಕೆಲಸಗಳನ್ನು ಹೊಂದುವ ಕೆಲಸಗಳನ್ನು ಕೈಗೊಳ್ಳುತ್ತೇವೆ. ಸ್ವಾಮಿ ವಿವೇಕಾನಂದರಿಂದ ಸಂಸ್ಥಾಪಿತವಾದ ಈ ಶ್ರೀ ರಾಮಕೃಷ್ಣ ಸಂಘ ಮತ್ತು ಮಠಕ್ಕೆ ಸೇರಿದ ಪ್ರತಿಯೊಬ್ಬ ಸಾಧುವೂ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬಮಹಾವಾಕ್ಯದಲ್ಲಿ ದೀಕ್ಷಿತನಾಗಿ, ಲೋಕಹಿತಕ್ಕಾಗಿಯೂ ತನ್ನ ಮೋಕ್ಷಕ್ಕಾಗಿಯೂ ಶ್ರೀ ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಆಜ್ಞೆಯಂತೆ ಸೇವೆಯಲ್ಲಿ ತೊಡಗುತ್ತಾನೆ.”

ಶಿವಾನಂದರು ಮಾತು ಮುಗಿಸಿದರು. ಆದರೆ ಭಕ್ತನ ಆಕ್ಷೇಪ ಬಗೆಹರಿದಿರಲಿಲ್ಲ. ಆತ ಮತ್ತೂ ಒಂದು ಪ್ರಶ್ನೆಗೆ ಸಿದ್ಧನಾಗಿದ್ದ. ಆ ಪ್ರಶ್ನೆ ಮತ್ತು ಅದಕ್ಕೆ ಸ್ವಾಮೀಜಿ ನೀಡಿದ ಉತ್ತರವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ

shivanandaಆಕರ : ಗುರುವಿನೊಡನೆ ದೇವರಡಿಗೆ  | ಕನ್ನಡಕ್ಕೆ : ಕುವೆಂಪು

ಸ್ವಾಮಿ ಶಿವಾನಂದರು ರಾಮಕೃಷ್ಣ ಮಹಾಸಂಘದ ಅಧ್ಯಕ್ಷರಲ್ಲಿ ಒಬ್ಬರಾಗಿದ್ದರು. ಅವರ ಶಿಷ್ಯರಾದ ಸ್ವಾಮಿ ಅಪೂರ್ವಾನಂದರು ತಮ್ಮ ಗುರುಸೇವಾ ಸಮಯದಲ್ಲಿ ಬರೆದಿಟ್ಟುಕೊಂಡ ಸಂವಾದಗಳನ್ನು ಬಂಗಾಳಿ ಭಾಷೆಯಲ್ಲಿ ‘ಶಿವಾನಂದ ವಾಣಿ’ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಅದರ ಇಂಗ್ಲಿಶ್ ಅನುವಾದ For Seekers of God ಎಂಬ ಹೆಸರಿನಲ್ಲಿ ಹೊರಬಂತು. ಸ್ವತಃ ಸ್ವಾಮಿ ಶಿವಾನಂದರಿಂದಲೇ ಮಂತ್ರ ದೀಕ್ಷೆ ಪಡೆದಿದ್ದ ರಾಷ್ಟ್ರಕವಿ ಕುವೆಂಪು, ತಮ್ಮ ಗುರುಕಾಣಿಕೆಯಾಗಿ ಮೂಲ ಬಂಗಾಳಿ ಮತ್ತು ಇಂಗ್ಲಿಶ್ ಅನುವಾದಗಳನ್ನು ಆಧರಿಸಿ ‘ಗುರುವಿನೊಡನೆ ದೇವರಡಿಗೆ’  ಎಂಬ ಹೆಸರಿನಿಂದ ಕನ್ನಡಕ್ಕೆ ತಂದರು.

ಇದು ಅಧ್ಯಾತ್ಮದ ಆಸಕ್ತರು ಮಾತ್ರವಲ್ಲ, ಎಲ್ಲ ಸಹೃದರೂ ಓದಲೇಬೇಕಾದ ಕೃತಿಗಳಲ್ಲೊಂದು. ಈ ಕೃತಿಯ ಆಯ್ದ ಭಾಗಗಳನ್ನು ‘ಅರಳಿಮರ’ ಪ್ರಕಟಿಸುವ ಇಚ್ಛೆ ಹೊಂದಿದೆ. ಈ ಕೃತಿಯನ್ನು ರಾಮಕೃಷ್ಣ ಆಶ್ರಮದ ಪುಸ್ತಕ ಮಳಿಗೆಯಲ್ಲಿ ಕೊಳ್ಳಬಹುದು.

ಪ್ರಕಾಶಕರು : ಅಧ್ಯಕ್ಷರು. ರಾಮಕೃಷ್ಣ ಆಶ್ರಮ, ಮೈಸೂರು. ಬೆಲೆ : ಕೇವಲ 110 ರೂ. (ಕೆಲವೆಡೆ ರಿಯಾಯಿತಿ ಇದೆ) Online ಖರೀದಿಗೂ ಲಭ್ಯವಿದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.