ಯೋಚಿಸಿದ್ದೆಲ್ಲ ಕರುಣಿಸುವ ಮರ ಮತ್ತು ದಾರಿಹೋಕ : ಝೆನ್ ಕಥೆ

taoಒಬ್ಬ ಮನುಷ್ಯ ಕಾಡಿನ ಮೂಲಕ ಹಾಯ್ದು ಬೇರೆ ಊರಿಗೆ ಹೋಗುತ್ತಿದ್ದ. ತುಂಬ ಹೊತ್ತು ಪ್ರವಾಸ ಮಾಡಿದ್ದರಿಂದ ಬಹಳ ದಣಿದಿದ್ದ. ಅವನ ಹೊಟ್ಟೆ ಚುರುಗುಡುತ್ತಿತ್ತು. ದಣಿವಾರಿಸಿಕೊಳ್ಳಲು ಅವ ಒಂದು ದೊಡ್ಡ ಮರದ ಕೆಳಗೆ ಹೋಗಿ ಕುಳಿತುಕೊಂಡ. ಆ ಮರ ಜನರಿಗೆ ಕೇಳಿಕೊಂಡಿದ್ದನ್ನು ಕೊಡುವ ಅಪರೂಪದ ಮರ. ಅವನಿಗೆ ಮರದ ಈ ಅದ್ಭುತ ಶಕ್ತಿಯ ಬಗ್ಗೆ ತಿಳಿದಿರಲಿಲ್ಲ. ಆ ಮನುಷ್ಯ ಸ್ವಲ್ಪ ಹೊತ್ತು ಅಲ್ಲಿ ಕುಳಿತು ದಣಿವಾರಿಸಿಕೊಂಡ. “ ಇಲ್ಲೇ ಎಲ್ಲಾದರೂ ಒಂದಿಷ್ಟು ಊಟ ಸಿಕ್ಕಿದ್ದರೆ ಚೆನ್ನಾಗಿತ್ತು” ಎಂದು ಮನಸ್ಸಿನಲ್ಲೇ ಅಂದುಕೊಂಡ. ಅವನು ಹಾಗೆ ಅಂದು ಕೊಳ್ಳುವುದೇ ತಡ ಒಬ್ಬ ಸುಂದರ ಸ್ತ್ರೀ ಊಟದೊಂದಿಗೆ ಅವನ ಮುಂದೆ ಪ್ರತ್ಯಕ್ಷಳಾದಳು. ಆ ಮನುಷ್ಯನಿಗೆ ಎಷ್ಟು ಹಸಿವಾಗಿತ್ತೆಂದರೆ ಆ ಊಟ ಎಲ್ಲಿಂದ ಬಂತು ಎನ್ನುವುದನ್ನ ವಿಚಾರ ಮಾಡದೇ ಹೊಟ್ಟೆ ತುಂಬ ಊಟ ಮಾಡಿದ.

ಊಟ ಮುಗಿದ ಮೇಲೆ ಅವನಿಗೆ, ಒಂದು ಗಂಟೆ ನಿದ್ದೆ ಮಾಡಿದರೆ ಚೆನ್ನ ಅನಿಸಿತು. ಆದರೆ ಅಲ್ಲಿ ತುಂಬ ಕಲ್ಲು ಮುಳ್ಳುಗಳಿದ್ದವು. ಮಲಗಿಕೊಳ್ಳಲು ಒಂದು ಹಾಸಿಗೆ ಇರಬೇಕಾಗಿತ್ತು ಎಂದುಕೊಂಡ. ಕೂಡಲೇ ಒಬ್ಬ ಸ್ತ್ರೀ ಒಂದು ಭವ್ಯ ಹಾಸಿಗೆಯೊಂದಿಗೆ ಪ್ರತ್ಯಕ್ಷವಾದಳು. ಅವನಿಗೆ ನಿದ್ದೆ ಎಷ್ಟು ತೀವ್ರವಾಗಿತ್ತೆಂದರೆ ಯಾವ ಆಲೋಚನೆಯನ್ನೂ ಮಾಡದೆ ಆ ಹಾಸಿಗೆಯ ಮೇಲೆ ಮಲಗಿಕೊಂಡು ಬಿಟ್ಟ.

ನಿದ್ದೆ ಮಾಡಿ ಎದ್ದ ಮೇಲೆ ಅವನು ಯೋಚನೆ ಮಾಡಲು ಶುರು ಮಾಡಿದ. ಈ ಕಾಡಿನಲ್ಲಿ ನನ್ನ ಬಿಟ್ಟು ಬೇರೆ ಯಾರೂ ಕಾಣುತ್ತಿಲ್ಲ. ಹಾಗೆಂದ ಮೇಲೆ ಈ ಊಟ ಮತ್ತು ಹಾಸಿಗೆ ತಂದು ಕೊಟ್ಟವರು ಯಾರು? ಇದು ಯಾವುದೂ ದೆವ್ವಗಳ ಕೆಲಸವೇ ಎಂದು ಎಂದುಕೊಂಡ. ಅವನು ಹಾಗೆ ಎಂದುಕೊಳ್ಳುವುದೇ ತಡ ದೆವ್ವಗಳು ಅವನ ಮುಂದೆ ಹಾಜರಾದವು.

ದೆವ್ವಗಳನ್ನು ನೋಡುತ್ತಿದ್ದಂತೆಯೇ ಆ ಮನುಷ್ಯ ಗಾಬರಿಯಾದ. ಅಯ್ಯೋ ದೇವರೇ ಈ ದೆವ್ವಗಳು ನನ್ನ ಬಿಡುವುದಿಲ್ಲ ಕೊಂದು ಬಿಡುತ್ತವೆ ಎಂದುಕೊಂಡ. ಅವನು ಹಾಗೆ ಅಂದು ಕೊಳ್ಳುವುದೇ ತಡ ದೆವ್ವಗಳು ಅವನನ್ನು ಕೊಂದು ಹಾಕಿಬಿಟ್ಟವು.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply