“ಸಮಸ್ತ ದೇಶ ಜೀವನವೂ ಚಳವಳಿಯ ಉಸಿರಲ್ಲಿ ಕುದ್ದು, ಬೆಂದು ತಲ್ಲಣಿಸುತ್ತಿರುವಾಗ ಶ್ರೀ ರಾಮಕೃಷ್ಣ ಸಂಸ್ಥೆ ಮಾತ್ರ ಏಕೆ ತೆಪ್ಪಗೆ ಕೂತಿದೆ? ದೇಶಕ್ಕೆ ನಿಮ್ಮ ಕಾಣಿಕೆ ಏನು? ಸ್ವಾತಂತ್ರ್ಯ ಸಂಪಾದನೆಗೆ ನೀವು ಮಾಡುವುದೇನೂ ಇಲ್ಲವೆ? ಶ್ರೀರಾಮಕೃಷ್ಣ ಸಂಸ್ಥೆಯ ಈ ವರ್ತನೆ ಅರಿಯಲಾರದೆ ದೇಶವೆಲ್ಲ ಅಚ್ಚರಿಗೊಂಡಿದೆ. ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಮಹಾಸಂಸ್ಥೆ ಮಾಡಬೇಕಾದ ಕರ್ತವ್ಯ ಯಾವುದೂ ಇಲ್ಲವೆ?” ಭಕ್ತ ,ಶಿವಾನಂದರನ್ನು ಪ್ರಶ್ನಿಸಿದ ~ ಸಂಕಲನ : ಸ್ವಾಮಿ ಅಪೂರ್ವಾನಂದ | ಕನ್ನಡಕ್ಕೆ : ಕುವೆಂಪು
ಅದು ಅಸಹಕಾರ ಚಳವಳಿಯ ಸಮಯ. ಸಮಗ್ರ ಭರತಖಂಡ ಕುದಿಯುತ್ತಿದ್ದ ಕಾಲ. ಲಕ್ಷಾಂತರ ಜನರು ದೇಶಸೇವೆಯಿಂದಾಗಿ ಸೆರೆಮನೆಗೆ ನಗುನಗುತ್ತ ನುಗ್ಗುತ್ತಿದ್ದರು. ಮಹಾತ್ಮ ಗಾಂಧೀಜಿಯ ಸಂದೇಶ ಪಾಂಚಜನ್ಯದಿಂದ ದೇಶದ ನಿದ್ರೆ ತೊಲಗಿಹೋಗಿತ್ತು. ಮಹಾತ್ಮ ಗಾಂಧೀಜಿಯ ಸಂದೇಶ ಪಾಂಚಜನ್ಯದಿಂದ ದೇಶದ ನಿದ್ರೆ ತೊಲಗಿಹೋಗಿತ್ತು, ಮಾತೃಭೂಮಿಯ ರಾಜಕೀಯ ಸ್ವಾತಂತ್ರ್ಯವೇ ಜೀವನದ ಪರಮಾದರ್ಶವೆಂದೂ ಪರಮ ಪುರುಷಾರ್ಥವೆಂದೂ ಶ್ರದ್ಧಾನ್ವಿತರಾದ ಸ್ತ್ರೀಪುರುಷರು ಸಹಸ್ರಸಹಸ್ರ ಸಂಖ್ಯೆಯಲ್ಲಿ ತಾಯಿಯ ಬಂಧನದ ವಿಮೋಚನೆಗೆ ದೀಕ್ಷಿತರಾಗಿ ತಮ್ಮ ತನುಮನಧನಪ್ರಾಣ ಸರ್ವವನ್ನೂ ಸಮರ್ಪಿಸಲು ಸಿದ್ಧರಾಗುತ್ತಿದ್ದ ನವೋದಯ ಸಮಯವದು.
ಆವೊತ್ತು ಸೋಮವಾರ (ನವೆಂಬರ್, 1922) ಬೇಲೂರು ಮಠದ ಪೂಜಾಮಂದಿರದಲ್ಲಿ ಆಗತಾನೆ ಸಂಜೆಯ ಆರಾಧನೆ ಪೂರೈಸಿತ್ತು. ಪ್ರದೇಶವೆಲ್ಲ ನಿಶ್ಶಬ್ದವಾಗಿತ್ತು. ಸಾಧುಗಳೂ ಬ್ರಹ್ಮಚಾರಿಗಳೂ ಧ್ಯಾನ – ಜಪಗಳಲ್ಲಿ ತೊಡಗಿದ್ದರು. ಸ್ವಾಮಿ ಶಿವಾನಂದರು ಧ್ಯಾನಮಗ್ನರಾಗಿ ತಮ್ಮ ಕೊಠಡಿಯಲ್ಲಿ ಮಂಚವೊಂದರ ಮೇಲೆ ಕುಳಿತಿದ್ದರು. ದೀಪದ ಮಂದಕಾಂತಿ ಅವರ ಗಂಭೀರ ಮುಖಮಂಡಲವನ್ನು ಮತ್ತಷ್ಟು ಗಂಭೀರತರವಾಗಿಯೂ ತೇಜೋಮಯವಾಗಿಯೂ ಮಾಡಿತ್ತು. ಕಾಲ ನುಣ್ಣಗೆ ಜಗುಳುತ್ತಿತ್ತು. ಕೊನೆಗೆ ಸ್ವಾಮಿಗಳು ಪುಷ್ಪದಂತ ವಿರಚಿತ ಶಿವಮಹಿಮೆ ಸ್ತೋತ್ರವನ್ನು ಹೇಳಿಕೊಳ್ಳಲು ತೊಡಗಿದರು. ಅವರ ಮನಸ್ಸು ಆನಂದಸಾಗರದಲ್ಲಿ ಸಂಗ್ನವಾದಂತೆ ತೋರುತ್ತಿತ್ತು.
ಅಷ್ಟು ಹೊತ್ತಿಗೆ ಕಲ್ಕತ್ತೆಯಿಂದ ಬಂದಿದ್ದ ಭಕ್ತರೊಬ್ಬರು ಪೂಜಾ ಮಂದಿರದಲ್ಲಿ ತಮ್ಮ ಭಕ್ತಿಯನ್ನು ನಿವೇದಿಸಿ, ಸ್ವಾಮಿಗಳ ಬಳಿ ಬಂದು ಪ್ರಣಾಮ ಮಾಡಿದರು. ಅನಂತರ, ನೆಲದ ಮೇಲೆ ಸುಮ್ಮನೆ ಕುಳಿತುಕೊಂಡರು. ಸ್ವಲ್ಪ ಹೊತ್ತಾದ ಮೇಲೆ ಮಹಾಪುರುಷ ಜಿ, “ಯಾರದು? ಕಾ… ಏನು? ಯಾವಾಗ ಬಂದೆ?” ಎಂದು ವಿಶ್ವಾಸದಿಂದ ಸ್ವಾಗತಿಸಿದರು.
ಆ ಭಕ್ತರು ಗೌರವಪೂರ್ವಕವಾಗಿ “ಹೌದು ಮಹಾರಾಜ್. ಸಾಯಂಪೂಜೆಯ ಹೊತ್ತಿಗೇ ಬಂದಿದ್ದೆ”
ಸ್ವಾಮೀಜಿ : ಪೂಜಾಮಂದಿರದಲ್ಲಿಯೇ ಇದುವರೆವಿಗೂ ಇದ್ದಿರಬೇಕಲ್ಲವೆ?
ಭಕ್ತ : ಹೌದು ಮಹಾರಾಜ್
ಸ್ವಾಮೀಜಿ : ಏಕೆ ಬಹಳ ಖಿನ್ನನಾಗಿರುವಂತಿದೆ? ಏನು… ಮನಸ್ಸು ಸರಿಯಾಗಿಲ್ಲವೆ? ಮನೆಯಲ್ಲೆಲ್ಲ ಕ್ಷೇಮ ತಾನೆ?
ಭಕ್ತ : ಹೌದು ಮಹಾರಾಜ್. ನಿಮ್ಮ ಕೃಪೆಯಿಮದ ಎಲ್ಲರೂ ಕ್ಷೇಮವಾಗಿದ್ದಾರೆ. ಆದರೂ ಮನಸ್ಸೇಕೋ ನೆಮ್ಮದಿಯಾಗಿಲ್ಲ. ಈಚೀಚೆಗೆ ಒಂದು ಪ್ರಶ್ನೆ ಎದ್ದು ನನ್ನನ್ನು ತುಂಬಾ ಕಾಡುತ್ತಿದೆ. ಅದರ ದೆಸೆಯಿಂದ ನಾನು ತುಂಬಾ ಅಸುಖಿ. ಇವತ್ತು ಇಲ್ಲಿಗೆ ಬಂದದ್ದು ಅದಕ್ಕಾಗಿಯೇ. ನಿಮ್ಮ ಮುಂದ ನನ್ನ ಆ ಹೃದಯದ ಹೊರೆಯನ್ನೆಲ್ಲ ಇಳಿಸಿಬಿಡಬೇಕೆಂದು. ಅಪ್ಪಣೆಯಾದರೆ ಹೇಳುತ್ತೇನೆ.
ಸ್ವಾಮೀಜಿ : ಒಳ್ಳೆಯದು. ಹೇಳು.
ಆ ಭಕ್ತರ ಹೃದಯ ತುಂಬಿ ಬಂದು ಮಾತು ಉಕ್ಕಿ ಹರಿಯುವಂತೆ ತೋರುತ್ತಿತ್ತು. ಅವರು ಹೇಳಿದರು : “ಮಹಾರಾಜ್, ಈಗ ಮಹಾತ್ಮಾ ಗಾಂಧೀಜಿಯ ಅಸಹಕಾರ ಚಳವಳಿಯಿಂದ ದೇಶದ ಪ್ರಾಣಸಮುದ್ರ ಬುಡಮಟ್ಟ ಕಲಕಿಹೋಗಿ ಅಲ್ಲೋಲಕಲ್ಲೋಲವಾಗುತ್ತಿದೆ. ಮಕ್ಕಳೂ ಸೇರಿದಂತೆ ಅಸಂಖ್ಯಾತ ಜನ ಸೆರೆಮನೆಗಳಲ್ಲಿ ಕೊಳೆಯುತ್ತಿದ್ದಾರೆ. ಅನೇಕರು ಆಗಲೇ ತಮ್ಮ ಪ್ರಾಣ ಸಮರ್ಪಣೆ ಮಾಡಿದ್ದಾರೆ. ಸ್ವಯಂ ಮಹಾತ್ಮಾಜಿಯವರೆ ಪ್ರವಾಹದ ಅತ್ಯಂತ ಅಪಾಯಕರವಾದ ಆವರ್ತಗರ್ತಕ್ಕೆ ಧುಮುಕಿದ್ದಾರೆ. ಸಮಸ್ತ ದೇಶ ಜೀವನವೂ ಚಳವಳಿಯ ಉಸಿರಲ್ಲಿ ಕುದ್ದು, ಬೆಂದು ತಲ್ಲಣಿಸುತ್ತಿರುವಾಗ ಶ್ರೀ ರಾಮಕೃಷ್ಣ ಸಂಸ್ಥೆ ಮಾತ್ರ ಏಕೆ ತೆಪ್ಪಗೆ ಕೂತಿದೆ? ದೇಶಕ್ಕೆ ನಿಮ್ಮ ಕಾಣಿಕೆ ಏನು? ಸ್ವಾತಂತ್ರ್ಯ ಸಂಪಾದನೆಗೆ ನೀವು ಮಾಡುವುದೇನೂ ಇಲ್ಲವೆ? ಶ್ರೀರಾಮಕೃಷ್ಣ ಸಂಸ್ಥೆಯ ಈ ವರ್ತನೆ ಅರಿಯಲಾರದೆ ದೇಶವೆಲ್ಲ ಅಚ್ಚರಿಗೊಂಡಿದೆ. ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಮಹಾಸಂಸ್ಥೆ ಮಾಡಬೇಕಾದ ಕರ್ತವ್ಯ ಯಾವುದೂ ಇಲ್ಲವೆ?”
ಅವರು ಸ್ವಲ್ಪ ತಡೆದು, ಅತ್ಯಂತ ದುಃಖಪೂರಿತ ಧ್ವನಿಯಲ್ಲಿ ಮುಂದುವರಿದು ಹೀಗೆಂದರು: “ನಿಮಗೆ ದೇಶದ ಗೋಳನ್ನು ನೋಡಿ ಮರುಕ ಹುಟ್ಟದೇ? ನಿಮಗೆ ಹೃದಯವಿಲ್ಲವೆ? ಅಥವಾ ಯಾವ ವಿಧವಾದ ನೆರವನ್ನೂ ನೀಡಲು ನಿಮಗೆ ಸಾಮರ್ಥ್ಯವೇ ಇಲ್ಲವೆ?”
(ಭಕ್ತರ ಪ್ರಶ್ನೆಗೆ ಸ್ವಾಮಿ ಶಿವಾನಂದರು ಕೊಟ್ಟ ಉತ್ತರ ಅತ್ಯಂತ ಗಂಭೀರವಾಗಿತ್ತು. ಆಧ್ಯಾತ್ಮಿಕ ಘನತೆಯಿಂದ ಕೂಡಿದ್ದು, ರಾಮಕೃಷ್ಣ ಚಿಂತನೆಯ ಸಾರಭೂತವಾಗಿತ್ತು. ಅದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ)
ಆಕರ : ಗುರುವಿನೊಡನೆ ದೇವರಡಿಗೆ | ಕನ್ನಡಕ್ಕೆ : ಕುವೆಂಪು
ಸ್ವಾಮಿ ಶಿವಾನಂದರು ರಾಮಕೃಷ್ಣ ಮಹಾಸಂಘದ ಅಧ್ಯಕ್ಷರಲ್ಲಿ ಒಬ್ಬರಾಗಿದ್ದರು. ಅವರ ಶಿಷ್ಯರಾದ ಸ್ವಾಮಿ ಅಪೂರ್ವಾನಂದರು ತಮ್ಮ ಗುರುಸೇವಾ ಸಮಯದಲ್ಲಿ ಬರೆದಿಟ್ಟುಕೊಂಡ ಸಂವಾದಗಳನ್ನು ಬಂಗಾಳಿ ಭಾಷೆಯಲ್ಲಿ ‘ಶಿವಾನಂದ ವಾಣಿ’ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಅದರ ಇಂಗ್ಲಿಶ್ ಅನುವಾದ For Seekers of God ಎಂಬ ಹೆಸರಿನಲ್ಲಿ ಹೊರಬಂತು. ಸ್ವತಃ ಸ್ವಾಮಿ ಶಿವಾನಂದರಿಂದಲೇ ಮಂತ್ರ ದೀಕ್ಷೆ ಪಡೆದಿದ್ದ ರಾಷ್ಟ್ರಕವಿ ಕುವೆಂಪು, ತಮ್ಮ ಗುರುಕಾಣಿಕೆಯಾಗಿ ಮೂಲ ಬಂಗಾಳಿ ಮತ್ತು ಇಂಗ್ಲಿಶ್ ಅನುವಾದಗಳನ್ನು ಆಧರಿಸಿ ‘ಗುರುವಿನೊಡನೆ ದೇವರಡಿಗೆ’ ಎಂಬ ಹೆಸರಿನಿಂದ ಕನ್ನಡಕ್ಕೆ ತಂದರು.
ಇದು ಅಧ್ಯಾತ್ಮದ ಆಸಕ್ತರು ಮಾತ್ರವಲ್ಲ, ಎಲ್ಲ ಸಹೃದರೂ ಓದಲೇಬೇಕಾದ ಕೃತಿಗಳಲ್ಲೊಂದು. ಈ ಕೃತಿಯ ಆಯ್ದ ಭಾಗಗಳನ್ನು ‘ಅರಳಿಮರ’ ಪ್ರಕಟಿಸುವ ಇಚ್ಛೆ ಹೊಂದಿದೆ. ಈ ಕೃತಿಯನ್ನು ರಾಮಕೃಷ್ಣ ಆಶ್ರಮದ ಪುಸ್ತಕ ಮಳಿಗೆಯಲ್ಲಿ ಕೊಳ್ಳಬಹುದು.
ಪ್ರಕಾಶಕರು : ಅಧ್ಯಕ್ಷರು. ರಾಮಕೃಷ್ಣ ಆಶ್ರಮ, ಮೈಸೂರು. ಬೆಲೆ : ಕೇವಲ 110 ರೂ. (ಕೆಲವೆಡೆ ರಿಯಾಯಿತಿ ಇದೆ) Online ಖರೀದಿಗೂ ಲಭ್ಯವಿದೆ.
1 Comment