ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ ~ 4| ಭರತ ಖಂಡಕ್ಕೆ ಪರಮಹಂಸರು ಮತ್ತು ಸ್ವಾಮೀಜಿಯ ಕೊಡುಗೆ ಏನು?

ಸ್ವಾಮಿ ಶಿವಾನಂದರ ಬಳಿ ಬಂದ ಭಕ್ತರೊಬ್ಬರು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ಉಲ್ಲೇಖಿಸಿ ರಾಮಕೃಷ್ಣ ಮಹಾಸಂಘ ಈ ನಿಟ್ಟಿನಲ್ಲಿ ತಟಸ್ಥವಾಗಿದೆ ಎಂದು ಆಕ್ಷೇಪಿಸುತ್ತಾರೆ. ಭಕ್ತರ ಎರಡು ಪ್ರಶ್ನೆಗಳಿಗೆ ಶಿವಾನಂದರು ಉತ್ತರಿಸುತ್ತಾರೆ. ನಂತರ ಭಕ್ತರು ಮತ್ತೂ ಒಂದು ಪ್ರಶ್ನೆ ಕೇಳಲು ಮುಂದಾಗುತ್ತಾರೆ. ಈ ಪ್ರಶ್ನೋತ್ತರ ಹೀಗಿದೆ… | ಕನ್ನಡಕ್ಕೆ : ಕುವೆಂಪು

ಹಿಂದಿನ ಲೇಖನವನ್ನು ಇಲ್ಲಿ ಓದಿ : https://aralimara.com/2019/01/03/kuvempu-4/

ಭಕ್ತ : ಮಹಾರಾಜ್, ಮಹಾತ್ಮಾಜಿಯ ಅಸಹಕಾರ ಚಳವಳಿಯಿಂದ ಉಂಟಾದ ರಾಷ್ಟ್ರೀಯ ಜಾಗೃತಿಗೆ ಮತ್ತಷ್ಟು ಪ್ರಚೋದನೆ ದೊರೆಯುತ್ತಿತ್ತಲ್ಲವೆ ಶ್ರೀ ರಾಮಕೃಷ್ಣ ಮಠ ಮತ್ತು ಸಂಘವೂ ಅದರೊಡನೆ ಸಹಕರಿಸಿದ್ದರೆ? ಈ ಅಭಿಪ್ರಾಯ ನನ್ನದು ಮಾತ್ರವಲ್ಲ, ತಿಳಿದವರು ಅನೇಕರು ಹೀಗೆ ಹೇಳುತ್ತಿದ್ದಾರೆ. ಮಹಾತ್ಮಾಜಿಯ ರಾಷ್ಟ್ರೀಯ ಚಳವಳಿಯಲ್ಲಿ ನೀವೇಕೆ ಸಹಕರಿಸಬಾರದು?

ಸ್ವಾಮೀಜಿ : ನೋಡು, ನಾನು ನಿನಗೆ ಮೊದಲೇ ಹೇಳಿಲ್ಲವೆ? ನಾವು ನಮ್ಮ ರೀತಿಯಿಂದ ನಮ್ಮ ಆದರ್ಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಆ ಆದರ್ಶವು ಋಷಿಯೂ ದ್ರಷ್ಟಾರರೂ ಆದ ಸ್ವಾಮಿ ವಿವೇಕಾನಂದರಿಂದ ರೂಪಿತವಾಗಿ ನಮಗೆ ಬಂದದ್ದು. ಅವರ ದಿವ್ಯದೃಷ್ಟಿಗೆ ಭರತ ಖಂಡದ್ದು ಮಾತ್ರವಲ್ಲದೆ, ಸಮಗ್ರ ಜಗತ್ತಿನ ಒಂದು ಸಾವಿರ ವರ್ಷಗಳ ಭವಿಷ್ಯದರ್ಶನ ಪ್ರಕಾಶಿತವಾಗಿತ್ತು. ಸರ್ವವನ್ನೂ ಸ್ಪಷ್ಟವಾಗಿ ಸಮೀಕ್ಷಿಸಿ, ನಾವು ನಡೆಯಬೇಕಾದ ದಾರಿಯನ್ನು ಸ್ವಾಮೀಜಿ ಗೆರೆ ಹಾಕಿ ಗುರುತಿಸಿದ್ದಾರೆ. ಅವರೇನೂ ಕತ್ತಲಲ್ಲಿ ತಡವುತ್ತಿರಲಿಲ್ಲ. ಭವಿಷ್ಟಯತ್ತನ್ನು ಸ್ಪಷ್ಟವಾಗಿ ಕಾಣಬಲ್ಲ ಶಕ್ತಿ ಅವರಿಗಿತ್ತು.

ಈ ಯುಗದಲ್ಲಿ ಶ್ರೀ ರಾಮಕೃಷ್ಣರಲ್ಲಿ ಪ್ರಕಟಿತವಾಗಿರುವ ಭಗವದ್ ವಿಭೂತಿ ಅಸಾಧಾರಣವಾದದ್ದು. ಭಾರತೀಯ ದಿಗಂತದಿಂದ ಉದ್ಭವಿಸಿರುವ ಈ ಆತ್ಮಸೂರ್ಯನ ನಿರಂತರ ಪ್ರಕಾಶಮಾನವಾದ ದಿವ್ಯಜ್ಯೋತಿಯ ಕಿರಣಕೋಟಿ ಅಖಂಡ ಜಗತ್ತನ್ನೇ ದೀಪ್ಯಮಾನವನ್ನಾಗಿ ಮಾಡುವುದು. ಅದನ್ನು ಕಂಡೇ ಸ್ವಾಮೀಜಿ ಹೇಳಿದ್ದು, “ಈ ಸಾರಿಯ ಕೇಂದ್ರ ಭರತ ಖಂಡ” ಎಂದು. ಭರತ ಖಂಡವೇ ಕೇಂದ್ರವಾಗಿ ಧರ್ಮಚಕ್ರದ ಆಧ್ಯಾತ್ಮಿಕ ಶಕ್ತಿ ಹಬ್ಬುವುದು. ಈ ದಿವ್ಯಶಕ್ತಿಯ ಪ್ರಚಂಡ ಪ್ರವಾಹವನ್ನು ತಡೆಗಟ್ಟುವರಾರು? ಭರತ ಖಂಡದ ಪುನರುಜ್ಜೀವನ ಸುನಿಶ್ಚಿತ, ಸ್ವತಃಸಿದ್ಧ. ಕಲೆಗಳಲ್ಲಿ, ವಿಜ್ಞಾನ ಶಾಸ್ತ್ರದಲ್ಲಿ, ತತ್ತ್ವಶಾಸ್ತ್ರದಲ್ಲಿ, ವಿದ್ಯಾಭ್ಯಾಸದಲ್ಲಿ, ಲೌಕಿಕ ಮತ್ತು ಧಾರ್ಮಿಕವಾದ ಸಕಲ ಕ್ಷೇತ್ರಗಳಲ್ಲೂ ಭರತ ಖಂಡ ಸಾಧಿಸುವ ಅದ್ಭುತ ಉತ್ಕರ್ಷವನ್ನು  ಕಂಡು ಜಗತ್ತು ಆಶ್ಚರ್ಯಚಕಿತವಾಗದೆ ಇರುವುದಿಲ್ಲ. ಆಗ ನಿಮಗೆ ಗೊತ್ತಾಗುತ್ತದೆ, ಗುರುಮಹಾರಾಜರೂ ಸ್ವಾಮೀಜಿಯೂ ಏಕೆ ಬಂದರೆಂದು, ಭರತ ಖಂಡದ ಶ್ರೇಯಸ್ಸಿಗೆ ಏನು ಕೆಲಸ ಮಾಡಿದ್ದಾರೆ ಎಂದು. ಆ ದಿವ್ಯಪುರುಷರ ಕೆಲಸ ಕಾರ್ಯಗಳ ರೀತಿನೀತಿ ಮಾನವನ ಅಲ್ಪಮತಿಗೆ ಗೋಚರವಾಗುವುದಾದರೂ ಹೇಗೆ? ಇಡೀ ಭರತಖಂಡದ ರಾಷ್ಟ್ರೀಯ ಕುಂಡಲಿನಿಯೇ ಅವರ ಶಕ್ತಿಸ್ಪರ್ಶದಿಂದ ಹೇಗೆ? ಇಡೀ ಭರತಖಂಡದ ರಾಷ್ಟ್ರೀಯ ಕುಂಡಲಿನಿಯೇ ಅವರ ಶಕ್ತಿಸ್ಪರ್ಶದಿಂದ ಹೇಗೆ ಸುರುಳಿ ಬಿಚ್ಚಿ ಎಚ್ಚರಗೊಂಡಿದೆ? ಅದೂ ನಿನಗೆ ಕಾಣುವುದಿಲ್ಲವೆ? ಹೇಗೆ ದಲದಲದಲ ವಿಕಸಿಸುತ್ತಿದೆ…. ಅದನ್ನಾದರೂ ಅರಿಯಲಾರೆಯಾ?

ಆಕರ : ಗುರುವಿನೊಡನೆ ದೇವರಡಿಗೆ  | ಕನ್ನಡಕ್ಕೆ : ಕುವೆಂಪು (ಮೂಲ ಬಂಗಾಳಿ : ಅಪೂರ್ವಾನಂದರು ಸಂಕಲಿಸಿದ ‘ಶಿವಾನಂದ ವಾಣಿ’. ಇಂಗ್ಲಿಶ್’ನಲ್ಲಿ : For Seekers of God. ಈ ಕೃತಿಯನ್ನು ರಾಮಕೃಷ್ಣ ಆಶ್ರಮದ ಪುಸ್ತಕ ಮಳಿಗೆಯಲ್ಲಿ ಕೊಳ್ಳಬಹುದು. ಪ್ರಕಾಶಕರು : ಅಧ್ಯಕ್ಷರು. ರಾಮಕೃಷ್ಣ ಆಶ್ರಮ, ಮೈಸೂರು. ಬೆಲೆ : ಕೇವಲ 110 ರೂ. 

Leave a Reply