ಒಂದು ಝೆನ್ ಕಥೆಯ ಹುಡುಕಾಟ : ಕೆ.ಸಚ್ಚಿದಾನಂದನ್

ಕೆ. ಸಚ್ಚಿದಾನಂದನ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಒಂದು ಸಂಜೆ, ಝೆನ್ ಕಥೆ ಗುರುವನ್ನು ಹುಡುಕುತ್ತಾ ದಾರಿಗಿಳಿಯಿತು.
ಹಾದಿಯಲ್ಲಿ ಗುಡುಗು, ಮಿಂಚು, ಭರ್ಜರಿ ಮಳೆ.

ತೊಯ್ಸಿಕೊಂಡು ಒದ್ದೆಯಾದ ಕಥೆಗೆ
ಚಳಿಯಿಂದಾಗಿ ಮೈಯೆಲ್ಲಾ ನಡುಕ.
ಕಾಡಿನ ಕಗ್ಗತ್ತಲು ಮತ್ತು ಕ್ರೂರ ಪ್ರಾಣಿಗಳ ಸದ್ದಿಗೆ
ಬೆದರಿದ ಕಥೆಯ ಅವಸರ, ಮರದಿಂದ ಮರಕ್ಕೆ.
ಕಥೆ ಬೇಟೆಗೆ ಬಂದ ಬೇಟೆಗಾರರು
ಬರೀ ಮೂಳೆ ಚರ್ಮಗಳ ಬಡಕಲು ಕಥೆ
ಕಾಸಿಗೂ ಪ್ರಯೋಜನವಿಲ್ಲವೆಂದು
ಬಲೆ ಎತ್ತಿ ಕಥೆಯನ್ನು ಹೊರ ನೂಕಿದರು.
ಮುಂದೆ ದಾರಿಯಲ್ಲಿ

ಒಬ್ಬ ಸನ್ಯಾಸಿ ಎದುರಾದ,
ಕಥೆ ಆಶ್ರಯ ಬೇಡಿತು.
“ಮನುಷ್ಯ ವಾಸನೆ ಇರುವ ಯಾರಿಗೂ
ಆಶ್ರಮದಲ್ಲಿ ಪ್ರವೇಶ ಇಲ್ಲ”
ಸನ್ಯಾಸಿ ಭಿಡೆ ಇಲ್ಲದೆ ನಿರಾಕರಿಸಿದ.

ಎಷ್ಟೋ ಮೈಲಿ ಪ್ರಯಾಣದ ನಂತರ
ಕಥೆ, ಬೇರೊಂದು ಯುಗದ ಯುದ್ಧ ಭೂಮಿಗೆ ಕಾಲಿಟ್ಟಿತು.
ಎಲ್ಲೆಂದರಲ್ಲಿ ಗಾಯಗೊಂಡು ರಕ್ತ ಸುರಿಸುತ್ತ ಬಿದ್ದಿದ್ದ
ಅರೆಜೀವಿ ಸೈನಿಕರನ್ನು ಕಂಡು ಕಥೆಗೆ, ಅಪಾರ ಸಂಕಟ.
ಯಾಕೊ ಕಥೆಗೆ, ತನ್ನ ಹಸಿವು, ಬಾಯಾರಿಕೆ ಈ ಸಂಕಟಕ್ಕಿಂತಲೂ ದೊಡ್ಡದು ಅನಿಸತೊಡಗಿತು.

ಕಥೆ, ತಾನು ಕಥೆ ಎಂಬುದನ್ನೂ ಮರೆತು
ಒಬ್ಬ ಸತ್ತ ಸೈನಿಕನ ಮಾಂಸ ಬಾಯಿಗೆ ಹಾಕಿಕೊಂಡು
ಅವನ ಬೆನ್ನ ಮೇಲಿದ್ದ ಬಾಟಲಿಯಲ್ಲಿ
ಯುದ್ಧದ ನೆನಪುಗಳ ರುಚಿ ತುಂಬಿಕೊಂಡ ನೀರು ಕುಡಿಯಿತು.
ಅದೇ ಘಳಿಗೆಯಲ್ಲಿ ಕಥೆಯ ಹುಡುಕಾಟ ಕೊನೆಯಾಯಿತು,
ಅದು ಕಥೆಗೂ ಅರಿವಾಯಿತು.

Leave a Reply