ವಾಚಸ್ಪತಿ ಮತ್ತು ಭಾಮತಿ ~ ಒಂದು ಪ್ರಾಚೀನ ಪ್ರೇಮ ಕಥೆ

ವಾಚಸ್ಪತಿಯ ಕಣ್ಣಲ್ಲಿ ನೀರಾಡಿದವು. ಅವನೊಮ್ಮೆ ಹೆಂಡತಿಯನ್ನು ಗಟ್ಟಿಯಾಗಿ ತಬ್ಬಿ ಎದೆಗೆ ಅವುಚಿಕೊಂಡ. ತಲೆ ನೇವರಿಸಿದ. ಮತ್ತೆ ಕಣ್ಣೀರಿನ ಖೋಡಿ ಹರಿಯಿತು ~ ಚೇತನಾ ತೀರ್ಥಹಳ್ಳಿ

bhamatiವಾಚಸ್ಪತಿ ಮಿಶ್ರ ಪ್ರಕಾಂಡ ಪಂಡಿತ. ಅದ್ವೈತ ವೇದಾಂತಿ. ಅಧ್ಯಯನ, ಬರಹ ಮತ್ತು ಸಾಧನೆಗಳೇ ಅವನ ಪ್ರಪಂಚ.

ಒಮ್ಮೆ ಈತ ಆದಿ ಶಂಕರರ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆಯಬೇಕೆಂದು ನಿರ್ಧರಿಸಿ ಕುಳಿತ. ಹೀಗೆ ಕುಳಿತನೆಂದರೆ ಅದೊಂದು ಬಗೆಯ ತಪಸ್ಸು. ಅದು ಬರೆದು ಮುಗಿಯುವವರೆಗೂ ಆತನಿಗೆ ಬೇರಾವ ಯೋಚನೆ ಬರಲು ಸಾಧ್ಯವೇ ಇಲ್ಲ. ಅಷ್ಟು ತನ್ಮಯತೆ.

ಮಗ ಭಾಷ್ಯ ಬರೆಯಲು ಕುಳಿತ, ಇನ್ನಿವನು ಅದನ್ನು ಮುಗಿಸುವ ವೇಳೆಗೆ ವಯಸ್ಸಾಗಿಬಿಡುತ್ತದೆ ಎಂದು ಯೋಚಿಸಿದ ವಾಚಸ್ಪತಿಯ ತಂದೆ ಅವನಿಗೊಂದು ಮದುವೆ ಮಾಡಿಬಿಡೋಣ ಎಂದು ಯೋಚಿಸದ. ಮಗನೆದುರು ಹೋಗಿ ನಿಂತು, “ಮಗನೇ, ಯೋಗ್ಯಳಾದ ಹುಡುಗಿಯೊಬ್ಬಳಿದ್ದಾಳೆ. ಮದುವೆ ಆಗುತ್ತೀಯಾ?” ಎಂದು ಕೇಳಿದ. ಓದಿನಲ್ಲಿ ತಲ್ಲೀನನಾಗಿದ್ದ ವಾಚಸ್ಪತಿ ಆಗಲಿ ಎಂದ.

ವಾರಗಳು ಕಳೆದು ಮದುವೆಯ ಏರ್ಪಾಟಾಯಿತು. ವಾಚಸ್ಪತಿಗೆ ಹೊಸ ಬಟ್ಟೆ ತೊಡಿಸಿ ಕರೆದುಕೊಂಡು ಹೊರಟರು. ಆತ ತನ್ನ ತಂದೆಯನ್ನು ಕುರಿತು “ನಾವು ಎಲ್ಲಿಗೆ ಹೋಗ್ತಿದ್ದೀವಿ? ಏನು ವಿಶೇಷ?” ಎಂದು ಕೇಳಿದ. ತಂದೆಗೆ ಗಾಬರಿ. “ಮದುವೆಯಾಗುತ್ತೀಯಾ ಅಂತ ಕೇಳಿದಾಗ ಒಪ್ಪಿಕೊಂಡಿದ್ದೆಯಲ್ಲ ಮಗನೇ!” ಎಂದು ಆತಂಕಪಟ್ಟ. ವಾಚಸ್ಪತಿಗೆ ಈ ಘಳಿಗೆಯಲ್ಲಿ ಯಾರನ್ನೂ ನಿರಾಶೆಗೊಳಿಸುವ ಮನಸಾಗದೆ ಸುಮ್ಮನಾದ.

ಮದುವೆ ಮುಗಿಯಿತು. ವಾಚಸ್ಪತಿ ಮನೆಗೆ ಮರಳಿದ. ಕೂಡಿಬಂದ ಕಾಲದಲ್ಲಿ ಆತನ ಹೆಂಡತಿಯೂ ಬಂದಳು.

ವಾಚಸ್ಪತಿ ಸದಾ ಅಧ್ಯಯನದಲ್ಲಿ ಮಗ್ನ. ಅವನೀಗ ಭಾಷ್ಯ ಬರೆಯಲು ಆರಂಭಿಸಬೇಕಿದೆ… ಅವನು ಯಾವಾಗಲೂ ತನ್ನ ಕೋಣೆಯಲ್ಲೇ ಕುಳಿತಿರುತ್ತಾನೆ.

ಪ್ರತಿನಿತ್ಯ ಆತನ ಹೆಂಡತಿ ಬಂದು ಆತನ ಕೋಣೆ ಶುಚಿಗೊಳಿಸಿ, ಆತನಿಗೆ ಆಹಾರವನ್ನು ಇಟ್ಟುಹೋಗುವಳು. ಎಷ್ಟೋ ವೇಳೆ ಅದನ್ನವನು ಮುಟ್ಟಿರುವುದೂ ಇಲ್ಲ. ಸಂಜೆ ಕೋಣೆಯಲ್ಲಿ ದೀಪ ಹೊತ್ತಿಸುವಳು. ಮುಂಜಾನೆ ಆತನ ಪಾದದ ಬಳಿ ಕಮಲವೊಂದನ್ನು ಇಡುವಳು.

ಹೀಗೆ ಕಳೆದಿದ್ದು ಪೂರಾ 12 ವರ್ಷಗಳು!

ಅದೊಂದು ಸಂಜೆ ವಾಚಸ್ಪತಿಯ ಹೆಂಡತಿ ಹಣತೆಗಳನ್ನು ಹೊತ್ತಿಸಿ ಹರಿವಾಣದಲ್ಲಿಟ್ಟುಕೊಂಡು ಬಂದಳು. ವಾಚಸ್ಪತಿ ಆಗ ತಾನೆ ತನ್ನ ತಾಳಪತ್ರದ ಹೊತ್ತಿಗೆಯನ್ನು ಮುಚ್ಚಿ ಕಟ್ಟುತ್ತಿದ್ದ. ಅವನ ಬರಹ ಕಾರ್ಯ ಅಂದಿಗೆ ಮುಗಿದಿತ್ತು. ತನ್ನ ಕೋಣೆಯೊಳಗೆ ಈ ಸುಂದರಿಯಾದ ಹೆಣ್ಣು ಏನು ಮಾಡುತ್ತಿದ್ದಾಳೆ!? ಹೆಂಡತಿಯನ್ನು ನೋಡಿ ಅಚ್ಚರಿಪಟ್ಟ. ಅವನಿಗೆ ಮದುವೆಯ ನೆನಪೇ ಇಲ್ಲ. ದಿನವೂ ಅವಳು ಕೋಣೆಯೊಳಗೆ ಬಂದು ಓಡಾಡಿ, ದೀಪವಿಟ್ಟು ಹೋಗುತ್ತಿದ್ದರೂ ಅದರತ್ತ ಅವನ ಗಮನವಿಲ್ಲ. ಅಷ್ಟು ಏಕಾಗ್ರ ಮನಸ್ಸು ವಾಚಸ್ಪತಿಯದು.

“ನೀವು ಯಾರು? ದಾರಿ ತಪ್ಪಿ ಬಂದಿರಾ? ನಿಮಗೆ ಮನೆಗೆ ಮರಳಲು ನನ್ನ ಸಹಾಯ ಬೇಕೆ?” ಎಂದು ಕೇಳಿದ.

ಹೆಂಡತಿಗೆ ಅಚ್ಚರಿಯೇನೂ ಆಗಲಿಲ್ಲ.

“ಹನ್ನೆರಡು ವರ್ಷಗಳ ಕೆಳಗೆ ನೀವು ನನ್ನನ್ನು ಮದುವೆಯಾಗಿದ್ದಿರಿ. ಬಹುಶಃ ಮರೆತಿರಬೇಕು. ನೀವು ಮದುವೆ ಆದ ನಂತರದಲ್ಲಿ ಭಾಷ್ಯ ಬರೆಯಲು ಕುಳಿತಿರಿ. ಅಂದಿನಿಂದಲೂ ನಾನು ಪ್ರತಿ ದಿನ ಈ ಕೋಣೆಯ ದೇಖರೇಖಿ ಮಾಡುತ್ತಿದ್ದೇನೆ. ನಿಮ್ಮ ಬರಹ ಮುಗಿಯುವುದನ್ನೆ ತಪಸ್ಸಿನಂತೆ ಕಾಯುತ್ತಿದ್ದೆ” ಅಂದಳು.

ವಾಚಸ್ಪತಿ ತನ್ನ ಮಲಗುವ ಚಾಪೆಯತ್ತನ ನೋಡಿ. ಕಾಲಿಡುವ ಜಾಗದಲ್ಲಿ ಕಮಲ ಹೂವುಗಳಿದ್ದವು.

“ನೀನು ನನ್ನ ಗಮನವನ್ನಾದರೂ ಸೆಳೆಯಬಾರದಿತ್ತೆ?”  ಕೇಳಿದ ವಾಚಸ್ಪತಿ.

“ಎಲ್ಲಾದರೂ ಉಂಟೇ? ನಿಮಗೆ ಭಂಗ ಉಂಟಾಗಬಾರದೆಂದು ನಾನು ಎಚ್ಚರವಹಿಸಿದ್ದೆ. ಅದು ಫಲ ನೀಡಿದೆ” ಅಂದಳು ಹೆಂಡತಿ.

ವಾಚಸ್ಪತಿಯ ಕಣ್ಣಲ್ಲಿ ನೀರಾಡಿದವು. ಅವನೊಮ್ಮೆ ಹೆಂಡತಿಯನ್ನು ಗಟ್ಟಿಯಾಗಿ ತಬ್ಬಿ ಎದೆಗೆ ಅವುಚಿಕೊಂಡ. ತಲೆ ನೇವರಿಸಿದ. ಮತ್ತೆ ಕಣ್ಣೀರಿನ ಖೋಡಿ ಹರಿಯಿತು.

ಅವಳು ಏನೊಂದೂ ಅರ್ಥವಾಗದೆ ಗಂಡನನ್ನೇ ನೋಡಿದಳು.

“ನಾನು ಭಾಷ್ಯ ಬರೆದು ಮುಗಿಯುತ್ತದ್ದಂತೆಯೇ ಸಂಸಾರ ತೊರೆಯುವ ಪ್ರತಿಜ್ಞೆ ಮಾಡಿಕೊಂಡಿದ್ದೆ” ಅಂದ ವಾಚಸ್ಪತಿ. “ನಿನ್ನ ತ್ಯಾಗವೇ ನನ್ನಿಂದ ಈ ಭಾಷ್ಯ ಬರೆಸಿದೆ. ನಿನಗೇನು ಬೇಕು ಹೇಳು. ಹೊರಡುವ ಮುನ್ನ ಕರ್ತವ್ಯವಾಗಿ ಮಾಡುತ್ತೇನೆ” ಅಂತಲೂ ಹೇಳಿದ.

ಆಕೆ ಅವನನ್ನೇ ಎವೆಯಿಕ್ಕದೆ ನೋಡಿ ಕಣ್ತುಂಬಿಕೊಂಡಳು. “ನೀವು ಹರಿಸಿದ ಕಣ್ಣೀರು ನನಗೆ ಜನ್ಮಾಂತರದ ವರೆಗೂ ತೋಯಿಸುವ ಪ್ರೇಮದ ಉಡುಗೊರೆಯಾಗಿದೆ. ಇನ್ನೇನು ತಾನೆ ಬೇಡಬಲ್ಲೆ?” ಅಂದಳು.

“ನಿನ್ನ ಹೆಸರೇನು?” ಕೇಳಿದ ವಾಚಸ್ಪತಿ.

“ಭಾಮತೀ” ಅಂದಳು ಅವನ ಹೆಂಡತಿ.

ಮನೆ ಬಿಟ್ಟು ಹೊರಟ ವಾಚಸ್ಪತಿ ತಾನು ಬರೆದ ಬ್ರಹ್ಮಸೂತ್ರ ಭಾಷ್ಯಕ್ಕೆ ‘ಭಾಮತೀ’ ಎಂದು ಹೆಸರಿಟ್ಟ. ವಾಚಸ್ಪತಿ ಅಳಿದ ಮೇಲೂ ಭಾಮತಿಯ ಹೆಸರು ಚಿರಂಜೀವಿಯಾಗಿ ಉಳಿಯಿತು.

Leave a Reply