: ಯಾದಿರಾ
ಮರುಭೂಮಿಯ ಮಹಾ ಯೋಗಿನಿ ರಾ-ಉಮ್ ಸೌಂದರ್ಯವತಿಯೂ ಹೌದು. ಅವಳ ಅರಿವಿನ ಸೌಂದರ್ಯದ ಬಗ್ಗೆ ಸಾಕಷ್ಟು ವಿವರಗಳು ಶಿಷ್ಯರ ಮಾತುಗಳಲ್ಲಿ ಸಿಗುತ್ತವೆ. ಆದರೆ ಅವಳ ದೇಹ ಸೌಂದರ್ಯದ ಬಗ್ಗೆ ಅಷ್ಟೊಂದು ಉಲ್ಲೇಖಗಳು ಸಿಗುವುದಿಲ್ಲ. ಈ ಬಗ್ಗೆ ವಾ-ಐನ್ ಸಾಇಲ್ ಹೇಳಿದ ಕುತೂಹಲಕಾರಿ ಕಥೆಯೊಂದಿದೆ.
ರಾ-ಉಮ್ ಗಂಟೆಗಟ್ಟಲೆ ಕನ್ನಡಿಯ ಎದುರು ನಿಂತಿರುತ್ತಿದ್ದ ಕಾಲವೊಂದಿತ್ತಂತೆ. ಕನ್ನಡಿಯ ಎದುರು ನಿಂತು ತನ್ನನ್ನು ತಾನೇ ನೋಡಿಕೊಳ್ಳುತ್ತಿದ್ದ ಅವಳ ಬಳಿ ಪ್ರಸಾದನ ಸಾಧನಗಳೇನೂ ಇರುತ್ತಿರಲಿಲ್ಲ. ಆದರೂ ಅವಳು ಕನ್ನಡಿಯೆದುರು ನಿಂತು ಏನು ಮಾಡುತ್ತಿದ್ದಳು ಎಂಬುದು ಎಲ್ಲರಿಗೂ ಚೋದ್ಯವಾಗಿತ್ತು.
ರಾ-ಉಮ್‌ಳ ಗುರುವಾಗಿದ್ದ ಮಹಾಯೋಗಿನಿಯೂ ಕನ್ನಡಿಯೆದುರು ಗಂಟೆ ಗಟ್ಟಲೆ ಕುಳಿತೋ ನಿಂತೋ ಇರುತ್ತಿದ್ದಳಂತೆ. ಗುರು ಮುಖೇನ ಕಲಿತ ಈ ಕನ್ನಡಿ ಧ್ಯಾನದ ರಹಸ್ಯವನ್ನು ರಾ-ಉಮ್ ಯಾರಿಗೂ ಬೋಧಿಸಿಲ್ಲ ಎಂದು ಕೆಲವು ಶಿಷ್ಯೆಯರಿಗೆ ಅಸೂಯೆಯೂ ಇತ್ತಂತೆ. ಹೀಗೆ ಅಂತೆ-ಕಂತೆಗಳಲ್ಲಷ್ಟೇ ಇದ್ದ ರಾ-ಉಮ್‌ಳ ಕನ್ನಡಿ ಧ್ಯಾನದ ರಹಸ್ಯ ಭೇದಿಸಬೇಕೆಂದು ತೀರ್ಮಾನ ಮಾಡಿದ ವಾ-ಐನ್ ಸಂಜೆಯ ಪಾನೀಯ ಧ್ಯಾನದ ಹೊತ್ತಿನಲ್ಲಿ ಕೇಳಿಯೇ ಬಿಟ್ಟನಂತೆ.
‘ತಾವು ಕನ್ನಡಿಯೆದುರು ಅಷ್ಟು ಹೊತ್ತು ಇರುವುದೇಕೆ?’
ರಾ-ಉಮ್ ತನ್ನ ಪಾನೀಯದ ಕೊನೆಯ ಗುಟುಕನ್ನು ಮುಗಿಸುವ ತನಕ ಮೌನವಾಗಿದ್ದು ಮತ್ತೆ ಹೇಳಿದ್ದು ಹೀಗೆ:
‘ಕನ್ನಡಿ ಸುಳ್ಳನ್ನೆಂದು ತೋರಿಸುವುದಿಲ್ಲ, ಕಾಣಿಸುವುದಿಲ್ಲ. ನಾನು ಹೇಗಿರುವನೆಂಬ ಸತ್ಯವನ್ನು ತೋರಿಸಿದ ಮೇಲೆ ಅದಕ್ಕೆ ನನ್ನನ್ನು ಹಾಸ್ಯ ಮಾಡಿ ನಗುವ ಶಕ್ತಿ ಇಲ್ಲ’
ಅಂದು ವಾ-ಐನ್‌ನ ಪಾನೀಯ ಧ್ಯಾನ ಮರುದಿನ ಸೂರ್ಯ ಮೂಡುವ ತನಕ ಮುಂದುವರಿಯಿತು!