ಮಹಾಯೋಗಿ ವೇಮನ

ಇಂದು 15ನೇ ಶತಮಾನದಲ್ಲಿ ಜೀವಿಸಿದ್ದ (ಜ.19) ಮಹಾಯೋಗಿ ವೇಮನ ಜಯಂತಿ. ಯೌವನದ ಆರಂಭದ ದಿನಗಳಲ್ಲಿ ಸ್ವೇಚ್ಛಾಜೀವನ ನಡೆಸುತ್ತಿದ್ದ ವೇಮನ, ಜ್ಞಾನೋದಯ ಪಡೆದು ದಾರ್ಶನಿಕ ಕವಿಯೂ ಅನುಭಾವಿಯೂ ಆಗಿ ರೂಪುಗೊಂಡರೆಂದು ಐತಿಹ್ಯವಿದೆ. ಯೋಗಿ ವೇಮನ, ವಚನಗಳ ಮೂಲಕ ತನ್ನ ಕಾಣ್ಕೆಗಳನ್ನು ಲೋಕಕ್ಕೆ ಹಂಚಿದ್ದು, ಈ ವಚನಗಳು ಇಂದಿಗೂ ಪ್ರಸ್ತುತವಾಗಿವೆ. 

vemana 2

ವೇಮನನ ಜನಿಸಿದ್ದು ೧೬೫೨ ರಲ್ಲಿ. ಶ್ರೀಮಂತ ಕುಟುಂಬದಲ್ಲಿ ಈತನ ಜನನವಾಯಿತು. ಅವನ ಹುಟ್ಟೂರು ಮೂಗಚಿಂತ ಪಲ್ಲೆಯಾದರೂ ಬೆಳೆದಿದ್ದು ಕೊಂಡವೀಡುವಿನಲ್ಲಿ. ಬಾಲ್ಯದಿಂದಲೂ ಸುಖದಲ್ಲಿ ಬೆಳೆದ ವೇಮನ ಕೊನೆಗಾಲದಲ್ಲಿ ಬೈರಾಗಿಯಾಗಿ ಅಲೆದಾಡುವವರೆಗಿನ ಪ್ರಯಾಣ ಒಂದು ಪ್ರೇರಣಾದಾಯಿ ಇತಿಹಾಸ.

ರಸವಿದ್ಯೆಯ ಹುಡುಕಾಟ 
ಬಾಲ್ಯದಲ್ಲಿ ಸಾಕಷ್ಟು ವಿದ್ಯಾಭ್ಯಾಸ ಪಡೆದ ವೇಮನ, ಯೌವನಕ್ಕೆ ಬರುವ ವೇಳೆಗೆ ಸೋಮಾರಿಯೂ ಸ್ವೇಚ್ಛಾಚಾರಿಯೂ ಆಗಿದ್ದ. ಆದರೆ ಅವನಲ್ಲಿ ಯಾರು ಏನು ಕೇಳಿದರೂ ಕೊಟ್ಟುಬಿಡುವ ಗುಣವಿತ್ತು. ಮತ್ತೊಬ್ಬರಿಗೆ ಕೊಡಲೆಂದೇ ತನಗೆ ಸಂಪತ್ತು ಇರಬೇಕೆಂದು ಬಯಸುತ್ತಿದ್ದ. ಈ ಕಾರಣದಿಂದಲೇ ಅವನಿಗೆ ಹೆಚ್ಚು ಹಣ ಸಂಪಾದಿಸಬೇಕೆಂಬ ಬಯಕೆಯಾಯಿತು. ಅದಕ್ಕೆ ಸುಲಭವಾದ ಉಪಾಯವೆಂದರೆ ಬಂಗಾರವನ್ನು ತಯಾರಿಸುವ ವಿದ್ಯೆ. ಈ ವಿದ್ಯೆಯ ರಹಸ್ಯ ತಿಳಿಯಲು ಅಲೆದಾಟ ಪ್ರಾರಂಭಿಸಿದ. ಎಲ್ಲರೂ ತಂತ್ರವಾದಿಗಳೇ. ಮಂತ್ರವಾದಿಗಳು ಸಿಗಲಿಲ್ಲ. ಗರಡಿಯವರಂತೆ ವಿನೋದ ಮಾಡುವ ಕರಕುಶಲತೆ ಸಾಧಿಸಿರುವವರೇ. ದಿಟವಾದ ವಿದ್ಯೆ ಯೋಗಿಗಳು ಮಾತ್ರ ಕಲಿಸಬಲ್ಲರು. ಗುರುವನ್ನು ಹುಡುಕುತ್ತ ಸಂಚಾರ ಪ್ರಾರಂಭಿಸಿದ.

ನಾನಾ ಅನುಭವಗಳನ್ನು ಪಡೆದ ವೇಮನ ಮನೆಯವರ ಪಾಲಿಗೆ ನಿರುಪಯೋಗಿಯಾಗಿದ್ದವ ಮಹಾ ಯೋಗಿ ಆದದ್ದು ಒಂದು ಕಥೆ. ಅಣ್ಣ ಪಾಳ್ಳೇಪಟ್ಟಿನ ಆಡಳಿತ ನೋಡಿಕೊಳ್ಳುತ್ತಿದ್ದ. ಅರಮನೆಯ ಆಭರಣ, ಶಿಲ್ಪ ಕೆಲಸಗಳನ್ನು ನಡೆಸಿಕೊಡಲು ಒಂದು ಕಾರ್ಯಾಗಾರ. ಅದರಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಅಭಿರಾಮಾಚಾರ್ಯನೂ ಒಬ್ಬ. ಚಿನ್ನದ ಕೆಲಸ ಮಾಡುವ ವಿಶ್ವಕರ್ಮ. ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ. ತುಂಬಾ ಸಾತ್ವಿಕ. ನಯವಾದ ಮಾತು. ಆದರೆ ನಿತ್ಯವೂ ಕಾರ್ಯಾಗಾರಕ್ಕೆ ತಡವಾಗಿ ಬರುತ್ತಿದ್ದ.

ವೇಮನ ಮನೆಗೆ ಹಿಂತಿರುಗಿದ ಮೇಲೆ ಅವನಿಗೆ ಒಂದು ಕೆಲಸ ಇರಬೇಕೆಂದು ಈ ಕಾರ್ಯಾಗಾರದ ಉಸ್ತುವಾರಿಗೆ ನಿಯಮಿಸಲ್ಪಟ್ಟ.
ಅಭಿರಾಮಾಚಾರ್ಯ ನಿತ್ಯವೂ ತಡವಾಗಿ ಬರುವುದನ್ನು ವೇಮನ ಗಮನಿಸಿದ. ಹತ್ತಾರು ಬಾರಿ ಎಚ್ಚರಿಸಿದ. ಕೊನೆಗೊಮ್ಮೆ ಕೆಲಸದಿಂದ ತೆಗೆದುಹಾಕುವುದಾಗಿಯೂ ಬೆದರಿಸಿದ. ಅಭಿರಾಮಾಚಾರ್ಯ ಇನ್ನೂ ಬೇಗ ಕಾರ್ಯಾಗಾರಕ್ಕೆ ಬರಲು ಸಾಧ್ಯವಿಲ್ಲವೆಂದು ನಮ್ರನಾಗಿಯೇ ಬಿನ್ನವಿಸಿಕೊಂಡು ತಾನು ಸಂಜೆ ತಡವಾಗಿ ಹೋಗುತ್ತಿರುವುದನ್ನು ಹೇಳಿದ. ಈ ಒಂದು ಕೊರತೆ ಬಿಟ್ಟು ಆತನಲ್ಲಿ ಮತ್ತಾವ ತಪ್ಪೂ ಇರಲಿಲ್ಲ. ಜೀವನಾಧಾರವಾಗಿರುವ ಕೆಲಸಕ್ಕಿಂತಲೂ ಆತ ತಡವಾಗಿ ಬರುವ ಕಾರಣವೇ ಮುಖ್ಯವೇ! ವೇಮನನಿಗೆ ಇದು ಆಶ್ಚರ್ಯವಾಗಿ ತೋರಿತು.
ಈ ಒಗಟು ಎಷ್ಟು ಯೋಚಿಸಿದರೂ ಬಗೆಹರಿಯಲಿಲ್ಲ. ಅದಕ್ಕೆಂದೇ ಮರುದಿನ ಮುಂಜಾನೆಯ ವೇಳೆಗೆ ಅಭಿರಾಮಾಚಾರ್ಯನ ಮನೆಯ ಬಳಿಗೆ ಬಂದು ಅಡಗಿ ಕುಳಿತ.

ಅಭಿರಾಮಾಚಾರ್ಯ ನಸುಗತ್ತಲಲ್ಲೇ ಸ್ನಾನ-ಪೂಜೆ ಮುಗಿಸಿಕೊಂಡು ಮಡಿಯಲ್ಲೇ ಪೂಜಾ ಸಾಮ್ರಗ್ರಿ, ಹಣ್ಣು – ಹಂಪಲುಗಳನ್ನು ಎತ್ತಿಕೊಂಡು ಹೊರಟ. ಊರಿನ ಹೊರ ಭಾಗದಲ್ಲಿದ್ದ ಬೆಟ್ಟದ ಗುಹೆಯೊಂದರ ಒಳಕ್ಕೆ ಹೋದ. ಕುತೂಹಲದಿಂದ ಆತನ ಹಿಂದೆಯೇ ಹೋದ ವೇಮನ. ಗುಹೆಯಲ್ಲಿ ಒಬ್ಬ ಯತಿವರ್ಯ ತಪಸ್ಸು ಮಾಡುತ್ತಿದ್ದ. ಅವರ ಮುಂದೆ ಪೂಜಾ ದ್ರವ್ಯಗಳನ್ನು ಇರಿಸಿ ಕೈಮುಗಿದು ನಿಂತ. ಕಣ್ತೆರೆದ ಯತೀಂದ್ರ ಆಚಾರ್ಯನನ್ನು ಆಶೀರ್ವದಿಸಿ, “ಮಗು, ಇಷ್ಟು ದಿನಗಳ ಸೇವೆಯಿಂದ ಸಂಪ್ರೀತರಾಗಿದ್ದೇವೆ. ನಾಳೆ ಸಮಾಧಿಯನ್ನು ಪ್ರವೇಶಿಸಲಿದ್ದೇವೆ. ಆದ್ದರಿಂದ ನಾಳೆ ಬೆಳಗಿನ ಜಾವ ಬಾ” ಎಂದು ಹೇಳಿದರು.

ಇಷ್ಟು ವರ್ಷಗಳ ಸೇವೆ ಫಲ ಕೊಟ್ಟಿತೆಂದು ಹರ್ಷಿತನಾದ ಅಭಿರಾಮಾಚಾರ್ಯ ಅಲ್ಲಿಂದ ಹಿಂತಿರುಗಿದ. ವೇಮನನಿಗೆ ಇದೆಲ್ಲಾ ವಿಚಿತ್ರವೆನಿಸಿತು. ಕೇವಲ ಈ ಯತಿಯ ಉಪದೇಶಕ್ಕಾಗಿ ಅಭಿರಾಮಾಚಾರ್ಯ ತನ್ನ ಕುಟುಂಬ ನಿರ್ವಹಣೆ ನಡೆಸಲು ನೆರವಾಗುತ್ತಿದ್ದ ಅರಮನೆಯ ಕೆಲಸವನ್ನು ಕ್ಷುಲ್ಲಕ ಎಂದು ಭಾವಿಸಿದನೇ? ಅದೇನು ಉಪದೇಶವೋ ಕೇಳಲೇಬೇಕೆಂದು ವೇಮನ ತೀರ್ಮಾನಿಸಿದ. ಮರುದಿನ ಮಧ್ಯಾಹ್ನದವರೆಗೆ ಅಭಿರಾಮಾಚಾರ್ಯನನ್ನು ಕಾರ್ಯಾಗಾರದಲ್ಲಿಯೇ ಇರಿಸಿಕೊಳ್ಳಬೇಕೆಂದು ತೀರ್ಮಾನಿಸಿದ. ಆದರೆ ವೇಮನನ ಮಾತನ್ನು ಅಭಿರಾಮಾಚಾರ್ಯ ಕೇಳುತ್ತಾನೆ ಎಂಬ ನಂಬಿಕೆ ಇರಲಿಲ್ಲ. ಅದಕ್ಕೆಂದೇ ಅತ್ತಿಗೆಯ ಒಪ್ಪಿಗೆಯನ್ನು ಗಳಿಸಲು ಹಟಮಾಡಿ, ಮರುದಿನ ಮಧ್ಯಾಹ್ನದ ನಂತರ ಈ ಕೋರಿಕೆಯ ಕಾರಣ ತಿಳಿಸುವುದಾಗಿ ಮಾತುಕೊಟ್ಟ.

ಯೋಗಿಯಾಗಿ ಬದಲಾದ…
ಅಭಿರಾಮಾಚಾರ್ಯ ಎಷ್ಟು ಕಾಡಿ ಬೇಡಿದರೂ ಫಲವಿಲ್ಲದಾಯಿತು. ಹತಾಶನಾಗಿ ಆಚಾರ್ಯ ಕಾರ್ಯಾಗಾರದಲ್ಲಿಯೇ ಉಳಿದುಕೊಂಡ. ಮರುದಿನ ಬೆಳಗಿನ ಜಾವಕ್ಕೇ ವೇಮನ ಫಲ-ಪುಷ್ಟ-ಪೂಜಾಸಾಮಗ್ರಿಗಳೊಂದಿಗೆ ಗುಹೆಗೆ ಹೊರಟ. ಯತೀಂದ್ರ ಕಣ್ತೆರೆದ. ಹೊಸ ವ್ಯಕ್ತಿಯನ್ನು ಗಮನಿಸಿ ಅಭಿರಾಮಾಚಾರ್ಯನಿಗಾಗಿ ಕೇಳಿದ. ಅರಮನೆಯಲ್ಲಿ ತುಂಬಾ ಜರೂರಾದ ಕೆಲಸವಿದ್ದುದರಿಂದ ಶಿಷ್ಯನಾದ ತನ್ನನ್ನು ಕಳುಹಿಸಿರುವುದಾಗಿ ಮನವಿ ಮಾಡಿಕೊಂಡ.

ಯತೀಂದ್ರನಿಗೆ ಆಶ್ಚರ್ಯವಾಯಿತು. ತ್ರಿಕಾಲ ಜ್ಞಾನಿಯಾದ ಆತ ನಿಜಸಂಗತಿ ಗ್ರಹಿಸಿದ. ವೇಮನನೂ ಅವತಾರ ಪುರುಷನೆಂಬುದನ್ನು ಗುರುತಿಸಿದ. ಉಪದೇಶ ನೀಡಿದನಾದರೂ ಕೊನೆಗೆ ಒಂದು ಕಟ್ಟಳೆ ಹಾಕಿದ. ಈ ಉಪದೇಶ ಸಿದ್ಧಿಸಬೇಕಾದರೆ ಇದನ್ನೆಲ್ಲಾ ಅಭಿರಾಮಾಚಾರ್ಯನಿಗೆ ಹೇಳಿ ಆತನಿಂದ ಮತ್ತೆ ಉಪದೇಶ ಪಡೆಯಬೇಕು!
ಯತೀಂದ್ರನ ಸಂಪರ್ಕದಿಂದಲೇ ವೇಮನನಲ್ಲಿ ಮನಜಾಗೃತವಾಗಿತ್ತು. ಮುಕ್ತಿಮಂತ್ರವನ್ನು ಮೋಸ ಮಾಡಿ ಗಳಿಸುವುದೇ? ತನ್ನ ಅಪಚಾರಕ್ಕಾಗಿ ತುಂಬಾ ಬೇಸರಗೊಂಡ. ನೇರವಾಗಿ ಅಭಿರಾಮಾಚಾರ್ಯನ ಬಳಿಗೆ ಬಂದು ಆತನ ಪಾದಗಳನ್ನು ಹಿಡಿದ.
ಅಭಿರಾಮಾಚಾರ್ಯನಿಗೆ ಆಶ್ಚರ್ಯವಾಯಿತು. ತಾನು ಕಾರ್ಯಾಗಾರದಲ್ಲಿ ಕೆಲಸಗಾರ. ವೇಮನ ಮೇಲ್ವಿಚಾರಕ. ಅವನು ಬಂದು ಹೀಗೆ ಕಾಲು ಹಿಡಿಯುವುದೆಂದರೆ!

ವೇಮನ ನಡೆದುದೆಲ್ಲವನ್ನೂ ಹೇಳಿದ. ಯೋಗೀಂದ್ರರ ಆಜ್ಞೆಯನ್ನು ತಿಳಿಸಿದ. “ನಾನು ಮಾಡಿದುದು ತಪ್ಪಾಯಿತು. ನೀನು ಯೋಗಿಗಳ ಬಳಿ ಹೋಗದಂತೆ ನಾನೇ ಅಡ್ಡನಾದೆ. ಕ್ಷಮಿಸು” ಎಂದು ಬೇಡಿದ.
ಅಭಿರಾಮಾಚಾರ್ಯನ ಕಣ್ಣಲ್ಲಿ ನೀರು ಉಕ್ಕಿತು. ಕಂಠ ಕಟ್ಟಿತು, ಈ ರೀತಿಯಲ್ಲಾದರೂ ತನ್ನ ಬಾಳಿನ ಬಯಕೆ ಸಂದಿತಲ್ಲಾ ಎಂದು. ವೇಮನನಿಗೆ ಗುರೂಪದೇಶವೂ ನಡೆಯಿತು. ಹೀಗೆ ಇಬ್ಬರೂ ಪುನೀತರಾದರು.

ಸುಖದಲ್ಲಿಯೇ ಆಸಕ್ತನಾಗಿ ಲೌಕಿಕ ಜೀವನದಲ್ಲಿ ಕೆಟ್ಟವನು ಎನಿಸಿಕೊಂಡಿದ್ದವನು ಗುರುವಿನ ಕಟಾಕ್ಷದಿಂದ ಜ್ಞಾನಿಯಾದ; ಯೋಗಿಯಾದ; ಸಿದ್ಧನಾದ, ಜನರ ಕಣ್ಣಿಗೆ ಮಾತ್ರ ಹುಚ್ಚ ಎನಿಸಿಕೊಂಡ.
ಮೊದಲಿನಿಂದಲೂ ಸತ್ಯಪ್ರಿಯ. ನೇರವಾಗಿ ನಿರ್ಭಯವಾಗಿ ತೋಚಿದ್ದನ್ನು ಆಡುವ ಸ್ವಭಾವ. ಇದು ಯೋಗಿಯಾದನಂತರ ಮತ್ತಷ್ಟು ಮೊನಚಾಯಿತು. ‘’ಸೃಷ್ಟಿಯಲ್ಲಿ ಎಲ್ಲರೂ ಸಮಾನರು, ಮೇಲು-ಕೀಳೆಂಬುದೇ ಇಲ್ಲ’’ ಎಂಬುದನ್ನು ಹೇಳುತ್ತಾ ಎಲ್ಲಾ ಜಾತಿಗಳ ಹಿರಿತನವನ್ನೂ ಪೊಳ್ಳು ಎಂದು ಸಾರಿದ. ಜಾತಿ ಪದ್ಧತಿಯನ್ನು ಖಂಡಿಸಿದ.

ಸಮಾಜಕ್ಕಿರಲಿ, ಸ್ವತಃ ಮನೆಯವರಿಗೂ ವೇಮನನ ಮಾತುಗಳು ಸಹ್ಯವೆನಿಸಲಿಲ್ಲ. ಅದಕ್ಕೆಂದು ಅವನನ್ನು ಬೇರೆಯಾಗಿಸಿದರು. ಸ್ವಂತ ಬೇಸಾಯ ನಡೆಸಬೇಕಾಯಿತು. ಎಲ್ಲರಂತೆ ಉಳುಮೆ ಮಾಡಿ ಬಿತ್ತನೆ ಮಾಡಿದ. ಹೊಲದ ತುಂಬಾ ದತ್ತೂರಿ ಗಿಡಗಳು. ವೇಮನ ಬೇಸಾಯ ಮಾಡಿದ ಸಂಗತಿಯನ್ನು ಕುರಿತು ಒಂದು ಕಥೆ ಇದೆ. ಅವನು ಬಿತ್ತಿದ್ದೇ ದತ್ತೂರಿ ಬೀಜ. ಬೆಳೆ ಕೊಯ್ಲಿಗೆ ಬಂತು. ದತ್ತೂರಿ ಕಾಯಿಗಳನ್ನು ಬಿಡಿಸಲು ಕೂಲಿಗಳನ್ನೂ ಇಟ್ಟ, ಸಂಜೆಗೆ ಅವರು ಕೂಲಿ ಕೇಳಿದರೆ ಒಂದೊಂದು ದತ್ತೂರಿ ಕಾಯನ್ನು ಕೊಟ್ಟು ಅದನ್ನು ಮಾರಿಕೊಳ್ಳಲು ಹೇಳಿದ. ಮೊದಲೇ ಹುಚ್ಚ ಎಂದು ಜನ ಹೇಳುತ್ತಿದ್ದರು. ಇದರಿಂದ ಅದು ಖಾತ್ರಿಯಾಯಿತು ಎಂದು ಕೊಂಡರು ಕೂಲಿಗಳು. ಒಬ್ಬ ಕೋಪದಿಂದ ಇದನ್ನೇನು ಮಾಡುವುದು ಎಂದು ಆತನ ಮುಂದೆಯೇ ಒಗೆದ. ಕಾಯಿಯೊಡೆದು ಹೊಳೆಯುತ್ತಿರುವ ಚಿನ್ನದ ಬೀಜಗಳು ಚೆಲ್ಲಿದವು! ಇದರಿಂದ ಕೂಲಿಗಳು ಅವರಿಗೆ ಸಿಕ್ಕಷ್ಟು ಕಾಯಿಗಳನ್ನು ಕಳ್ಳತನ ಮಾಡಿಕೊಂಡು ಮನೆಗೆ ಹೋದರು. ಆದರೇನು? ವೇಮನ ಕೊಟ್ಟ ಒಂದು ಕಾಯಿ ವಿನಾ ಉಳಿದೆಲ್ಲವೂ ಸಾಮಾನ್ಯ ದತ್ತೂರಿ ಕಾಯಿಗಳು.

ಈ ಪವಾಡ ಕೇಳಿದ ಅಣ್ಣನಿಗೆ ವೇಮನನಿಂದ ಚಿನ್ನ ಮಾಡುವ ವಿದ್ಯೆ ಕಲಯಬೇಕೆಂಬ ಬಯಕೆ. ಅಣ್ಣನಿಗೆ ವೇಮನ ಒಂದು ಪಾಠ ಕಲಿಸಿದ : “ತಾನು ಬಂಗಾರವಾಗದೆ ಬಂಗಾರ ಮಾಡಲು ಸಾಧ್ಯವಿಲ್ಲ” ಎಂದ. ತಾನು ಬಂಗಾರವಾಗುವುದು ಎಂದರೆ ಆತ್ಮವಿದ್ಯೆಯನ್ನು ಅರಿಯುವುದು. ಅನಂತರ ಅವನಿಗೆ ಬಂಗಾರವೂ ಮಣ್ಣಿನಂತೆಯೇ. ಬೇಕೆಂದು ಅಲೆದಾಗ ಸಿಕ್ಕದ ಲಕ್ಷ್ಮಿ ಬೇಡವೆನಿಸಿದಾಗ ಒಲಿದು ಬಂದೂ ಪ್ರಯೋಜನವೇನು?

ಕವಿ –  ಬೈರಾಗಿ 
ಯೋಗಿಯಾದನಂತರ ವೇಮನ ಮನೆ ಬಿಟ್ಟ. ಬೈರಾಗಿಯಾಗಿ ಸುತ್ತಾಡಿದ. ಎಲ್ಲರಿಗೂ ತಾನು ಒಳ್ಳೆಯದೆಂದು ಕಂಡುಕೊಂಡದ್ದನ್ನೇ ಹೇಳಲು ಪ್ರಯತ್ನಿಸಿದ. ಜನಸಾಮಾನ್ಯರ ಬಾಯಲ್ಲಿ ಸುಲಭವಾನಿ ನಿಲ್ಲಬಲ್ಲ ಪದ್ಯಗಳನ್ನು ರಚಿಸಿ ಅನೇಕ ಸತ್ಯಗಳನ್ನು ಅದರಲ್ಲಿ ಅಡಗಿಸಿದ. ಅನೇಕ ರೀತಿಯ ಛಂದಸ್ಸುಗಳನ್ನು ವೇಮನ ಬಳಸಿರುವ ಪದ್ಯಗಳ ಕೊನೆಯಲ್ಲಿ ‘ವೆರ‍್ರಿ ವೇಮ’ (ಹುಚ್ಚ ವೇಮ) ಎಂದು ಹೇಳಿರುವವೂ ಇವೆ. ಆದರೆ ಆಟವೆಲದಿ ಛಂದಸ್ಸಿನಲ್ಲಿ ಹೇಳಿರುವ ಪದ್ಯಗಳೇ ತುಂಬ ಜನಪ್ರಿಯವಾದವು. ತೆಲುಗು ಸಾಹಿತ್ಯದಲ್ಲಿ ಆಟವೆಲದಿ ಛಂದಸ್ಸಿಗೆ ಒಂದು ರೂಪ ಕೊಟ್ಟು ಅದಕ್ಕೆ ಸ್ಥಾಯಿಯಾದ ಸ್ಥಾನ ಕಲ್ಪಿಸಿದ್ದು ವೇಮನನ ರಚನೆ.

ಹಾಗೇ, ವೇಮನನ ಬಹುಪಾಲು ಪದ್ಯಗಳು ‘ವಿಶ್ವದಾಭಿರಾಮ ಕೇಳು ವೇಮ’ ಎಂದು ಕೊನೆಯಾಗುತ್ತವೆ.  ತನ್ನ ಗುರು ಅಭಿರಾಮಾಚಾರ್ಯರ ಗೌರವಾರ್ಥ ವೇಮನ ಇದನ್ನು ಬಳಸಿದ್ದಾನೆ.  ವಿಶ್ವಬೋಧೆ ಮಾಡಿಸಿದ ಗುರು ಅಭಿರಾಮ ಆಚಾರ್ಯ)ರು ನಿನಗೆ (ವೇಮನನಿಗೆ) ಹೇಳುತ್ತಿದ್ದಾರೆ, ಕೇಳು ಎಂದು ಇದರ ಅರ್ಥ. 

ವಾಮನನ ಮೂರು ಪಾದಗಳಂತೆ ಮೂರೇ ಸಾಲುಗಳಿಂದ ಬಾಳಿನ ಸಾರ ಸರ್ವವನ್ನೆಲ್ಲಾ ಭಟ್ಟಿ ಇಳಿಸಿ, ಅದನ್ನು ಜನರ ಆಡುಮಾತಿನಲ್ಲಿಯೇ ಅವರಿಗೆ ಉಣ ಬಡಿಸಿ, ಅವರ ನಾಲಿಗೆಯ ಮೇಲೆ ಜೀವಂತವಾಗಿರುವಂತೆ ಪದ ರಚನೆ ಮಾಡಿದ. ಅವನು ಜನರ ಬಾಳನ್ನು ಚಿರಂತನವಾದ ಸ್ಥಾಯೀ ಮೌಲ್ಯದತ್ತ ತಿರುಗಿಸಲು ಪ್ರಯತ್ನಿಸಿದ ಸಿದ್ಧ, ಈ ಮಹಾಯೋಗಿ ವೇಮನ.

(ಆಕರ ಮತ್ತು ಹೆಚ್ಚಿನ ಓದಿಗೆ : http://kanaja.in/?p=29928)

 

1 Comment

Leave a Reply