ಹಿಂಸೆ ಮತ್ತು ಆತ್ಮರಕ್ಷಣೆ : ಒಂದು ದೃಷ್ಟಾಂತ ಕಥೆ

sarpada-padu

ಒಂದು ಊರಿನಲ್ಲಿ ನಾಗರಹಾವೊಂದು ದೊಡ್ಡ ಹುತ್ತದಲ್ಲಿ ವಾಸವಿತ್ತು.  ಅದು, ಒಮ್ಮೆ ನಾರದ ಮಹರ್ಷಿಗಳ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯನಾಯಿತು. ಹೀಗೆ ನಾರದರ ಶಿಷ್ಯತ್ವ ವಹಿಸಿದ ಕ್ಷಣದಿಂದಲೇ ಅದು ತನ್ನತನವನ್ನು ಬಿಟ್ಟುಕೊಟ್ಟು ಸಾಧುವಾಗಿಹೋಯಿತು.  

ಸರ್ಪ ಸಂನ್ಯಾಸ ತೆಗೆದುಕೊಂಡ ಸುದ್ದಿ ಆ ಊರಿನ ಹುಡುಗರಿಗೆ ಗೊತ್ತಾಯಿತು. ಸದಾ ನಾಲಿಗೆ ಹೊರಹಾಕುತ್ತ ಹೊಂಚು ಹಾಕುತ್ತಿದ್ದ ಸರ್ಪ, ಈಗ ಯಾವಾಗ ನೋಡಿದರೂ ತೆಪ್ಪಗೆ ಬಿದ್ದಿರುತ್ತಿತ್ತು. ಇದು ಹುಡುಗರ ಪಾಲಿಗೊಂದು ಮೋಜಿನಂತಾಯ್ತು. ಅವರು ಹೋಗುತ್ತ-ಬರುತ್ತ ಸರ್ಪದ ಬಾಲ ಹಿಡಿದೆಳೆಯುವುದು, ಕಾಲಿನಿಂದ ಝಾಡಿಸುವುದು, ಕಲ್ಲು ಬೀರುವುದು ಮೊದಲಾದ ಉಪಟಳ ನೀಡತೊಡಗಿದರು. ಇದು ಎಷ್ಟು ಹೆಚ್ಚಾಯ್ತೆಂದರೆ, ಸರ್ಪ ಸದಾ ಹುತ್ತದೊಳಗೆ ಅಡಗಿ  ಕೂರುವ ಸ್ಥಿತಿ ಬಂತು. ಇದರಿಂದಾಗಿ ಅದಕ್ಕೆ ಆಹಾರ ಒದಗುವುದು ದುಸ್ತರವಾಗತೊಡಗಿತು. ಬಲಹೀನನಾದ ಸರ್ಪ ಹುತ್ತದೊಳಗೆ ಕುಳಿತಿದ್ದರೆ, ಹುಡುಗರು ಹುತ್ತದ ಬಾಯಿಗೆ ಮರಳು ಸುರಿದು, ಮತ್ತಷ್ಟು ಹಿಂಸೆ ಕೊಟ್ಟರು. ಇವೆಲ್ಲವನ್ನೂ ಸಹಿಸಿಕೊಳ್ಳುತ್ತ ಅದು ದಿನೇ ದಿನೇ ಸೊರಗತೊಡಗಿತು.

ಭೂಲೋಕ ಸಂಚಾರ ಮಾಡುತ್ತಿದ್ದ ನಾರದರು, ತಮ್ಮ ಸರ್ಪಶಿಷ್ಯನನ್ನು ಹುಡುಕಿಕೊಂಡು ಬಂದರು. ಹುತ್ತದಲ್ಲಿ ಎರೆಹುಳುವಿನಂತೆ ವಿಲಿಗುಟ್ಟುತ್ತ ಬಿದ್ದಿದ್ದ ಅದನ್ನು ಕಂಡು ಕನಿಕರಪಟ್ಟರು. ಅದರ ದುರವಸ್ಥೆಗೆ ಕಾರಣ ವಿಚಾರಿಸಿದರು. ಆಗ ಸರ್ಪ, ತನ್ನ ಸಾಧುತ್ತ್ವವೇ ಇಂಥಹ ಪರಿಸ್ಥಿತಿ ಒದಗಿಸಿತು ಎಂದು ಹೇಳಿತು.

 ಅದಕ್ಕುತ್ತರವಾಗಿ ನಾರದರು, “ಹಿಂಸೆಯನ್ನು ಬಿಡುವುದೆಂದರೆ ಆತ್ಮರಕ್ಷಣೆಯನ್ನು ಕೈ ಬಿಡುವುದಲ್ಲ. ನೀನು ಕಚ್ಚುವುದನ್ನು ಬಿಡುವುದು ಸರಿಯೇ, ಆದರೆ ಹೆಡೆಬಿಚ್ಚಿ ಭುಸುಗುಟ್ಟುವುದನ್ನು ಬಿಡಬೇಡ. ಆಗ ಈ ಹುಡುಗರು ನಿನ್ನನ್ನು ನೋಡಿ ಭಯಪಡುತ್ತಾರೆ. ನಿನಗೆ ತೊಂದರೆ ಕೊಡುವುದಿಲ್ಲ” ಎಂದು ಉಪದೇಶಿಸಿ, ಹರಸಿ ಹೊರಟುಹೋದರು.

Leave a Reply